ಇಂಜನಿಯರ್​ ಹುದ್ದೆ ಬಿಟ್ಟು ಸಂಪೂರ್ಣ ಕೃಷಿಯಲ್ಲಿ ತೊಡಗಿಕೊಂಡ ಯುವತಿ; ಬರಪೀಡಿತ ಪ್ರದೇಶದಲ್ಲೇ ‘ಸಾವಯವ‘ ಸಾಧನೆ

ಚಳ್ಳಕೆರೆ ತಾಲೂಕಿನ ದೊಣೆಹಳ್ಳಿ ಗ್ರಾಮದಲ್ಲಿ ಇಂಜಿನಿಯರಿಂಗ್​ ಪದವೀಧರೆ ರೋಜಾ ರೆಡ್ಡಿ ಇಂಜಿನಿಯರಿಂಗ್ ಕೆಲಸ ಬಿಟ್ಟು ಕೃಷಿಯತ್ತ ಚಿತ್ತ ಹರಿಸಿದ್ದಾರೆ.

ಇಂಜನಿಯರ್​ ಹುದ್ದೆ ಬಿಟ್ಟು ಸಂಪೂರ್ಣ ಕೃಷಿಯಲ್ಲಿ ತೊಡಗಿಕೊಂಡ ಯುವತಿ; ಬರಪೀಡಿತ ಪ್ರದೇಶದಲ್ಲೇ ‘ಸಾವಯವ‘ ಸಾಧನೆ
ಇಂಜಿನಿಯರ್ ಪದವೀಧರೆ ರೋಜಾ ರೆಡ್ಡಿ
Updated By: Lakshmi Hegde

Updated on: Jan 31, 2021 | 1:21 PM

ಚಿತ್ರದುರ್ಗ: ಬಹುತೇಕ ಜನರು ತಮ್ಮ ಮಕ್ಕಳು ವೈದ್ಯರಾಗಲಿ,‌ ಇಂಜಿನಿಯರ್ ಆಗಲಿ ಎಂದು ಬಯಸುತ್ತಾರೆ. ಆದರೆ,‌ ಕೋಟೆನಾಡಿನಲ್ಲೊಬ್ಬಳು ಯುವತಿ ಇಂಜಿನಿಯರ್ ಕೆಲಸ ಬಿಟ್ಟು ಬಂದು ಕೃಷಿ ಕಾಯಕದಲ್ಲಿ ತೊಡಗಿದ್ದಾರೆ. ವಿಭಿನ್ನ ಕೃಷಿ ಮೂಲಕ ಅಧಿಕ ಆದಾಯದ ಮಾರ್ಗ ಕಂಡುಕೊಂಡು ಮಾದರಿ ಆಗಿದ್ದಾರೆ. ಅವರೇ ಇಂಜಿನಿಯರಿಂಗ್​ ಪದವೀಧರೆ ರೋಜಾ ರೆಡ್ಡಿ.

ಜಿಲ್ಲೆಯ ಗಡಿ ಭಾಗದ ಚಿತ್ರದುರ್ಗ ನಿರಂತರ ಬರಪೀಡಿತ ಪ್ರದೇಶವೂ ಹೌದು. ಬರದಿಂದಾಗಿ ಅನೇಕರು ಕೃಷಿಯಿಂದ ವಿಮುಖರಾಗುವ ಸಂದರ್ಭದಲ್ಲಿ ರೋಜಾ ರೆಡ್ಡಿ ಇಂಜಿನಿಯರ್​ ಕೆಲಸ ಬಿಟ್ಟು ಕೃಷಿಯತ್ತ ಚಿತ್ತ ನೆಟ್ಟಿದ್ದಾರೆ. ತನ್ನ ಪ್ರತಿಭೆ ಬಳಸಿಕೊಂಡು 6 ಎಕರೆ ಜಮೀನಿನಲ್ಲಿ ಸಾವಯವ ಕೃಷಿಯಲ್ಲಿ ತೊಡಗಿದ್ದಾರೆ. ಇರುವ ಅಲ್ಪ ನೀರನ್ನೇ ಬಳಸಿಕೊಂಡು ವಿವಿಧ ತರಕಾರಿಗಳ ಮಿಶ್ರ ಕೃಷಿ ಮೂಲಕ ವರ್ಷ ಪೂರ್ತಿ ನಿರಂತರ ಬೆಳೆ ಮತ್ತು ಆದಾಯ ಬರುವಂತಾಗಿದೆ. ಅಂತೆಯೇ ಆನ್​ಲೈನ್ ಆ್ಯಪ್ ಬಳಸಿಕೊಂಡು ತರಕಾರಿ ಮಾರುಕಟ್ಟೆ‌ ಸೃಷ್ಟಿಸಿಕೊಂಡಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ರೋಜಾ ರೆಡ್ಡಿ, ಕೃಷಿಯಲ್ಲಿ ತೊಡಗಿರುವ ಇಂಜಿನಿಯರ್
2018 ರಲ್ಲೇ ಇಂಜಿನಿಯರಿಂಗ್ ಪದವಿ ಪಡೆದು ಬೆಂಗಳೂರಿನ ಐಬಿಎಮ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಆದರೆ, ಲಾಕ್​ಡೌನ್ ಸಮಯದಲ್ಲಿ ಗ್ರಾಮಕ್ಕೆ ಬಂದವರು ತಂದೆಗೆ ಸಾಥ್ ಕೊಡಲು ಯೋಚಿಸಿದರು. ಸಾವಯವ ಕೃಷಿಗೆ ಆದ್ಯತೆ ನೀಡಿ ಕೃಷಿಯಲ್ಲಿ‌ ತೊಡಗಿದರು. ಸದ್ಯ ಕಾಲಿಫ್ಲವರ್​, ಕ್ಯಾಬೇಜ್, ಚೈನಿ ಕ್ಯಾಬೇಜ್,‌ ಬದನೆಕಾಯಿ, ಮುಳ್ಳು ಬದನೆ ಸೇರಿ ವಿವಿಧ ತರಕಾರಿ, ಹಣ್ಣುಗಳನ್ನು ಬೆಳೆಯುತ್ತಿದ್ದಾರೆ. ಇಂಜಿನಿಯರ್ ಆಗಿದ್ದಾಗ ಪಡೆಯುತ್ತಿದ್ದ ವೇತನಗಿಂತಲೂ ಹೆಚ್ಚು ಹಣಗಳಿಕೆ ಆಗುತ್ತಿದೆ. ರೋಜಾ ಅವರ ಮಾದರಿ ಕೃಷಿ, ವಿದ್ಯಾವಂತರಿಗೆ ಮತ್ತು ರೈತರಿಗೆ ಮಾದರಿ ಆಗಿದೆ ಎಂದು ಗ್ರಾಮಸ್ಥರು ಅಭಿಪ್ರಾಯ ಹಂಚಿಕೊಂಡಿದ್ದಾರೆ.

ವಿಕಲಚೇತನನಾದ್ರೂ ಕೃಷಿ ಕಾಯಕದಲ್ಲಿ ತೊಡಗಿ ಇತರರಿಗೆ ಮಾದರಿ.. ಇಲ್ಲಿದೆ ನೋಡಿ ವಿಶೇಷ ರೈತನ ಕೃಷಿ ಬದುಕು