D. R. bendre birthday ಹತ್ತರೀ ಸಾಧನಕೇರಿ ಬಸ್: ದತ್ತಾತ್ರೇಯನೆಂಬ ಖಾಸಾದೋಸ್ತನಿಗೀಗ 125ರ ಹರೆಯ

‘ಶರ್ಮಾ ಈ ನಾಟಕವನ್ನು ‘ಎಚ್ಚರ’ ಅಂತ ಕರದಾನ. ಆದರ ಎಲ್ಲಾ ಪ್ರೇಕ್ಷಕರೂ ನಿದ್ದಿ ಮಾಡಲಿಕ್ಕೆ ಹತ್ಯಾರ. ಯಾರೂ ಎಚ್ಚರಿಲ್ಲ. ನಾನೂ ಸಹ ಎಚ್ಚರಿಲ್ಲ. ಆದರ ನನ್ನ ಅಂತರಾತ್ಮ ಎಚ್ಚರ ಇದ್ದಾನ. ಪ್ರೇಕ್ಷಕರ ಅಂತರಾತ್ಮ ಸಹ ಎಚ್ಚರ ಅವ. ಈ ನಾಟಕದ ಉದ್ದೇಶನ ಅಂತರಾತ್ಮವನ್ನು ಎಚ್ಚರಿಸೋದು ಆಗೇದ, ನಾಟಕ ನಡೆದಾಗ ನಿದ್ದಿ ಮಾಡೋರನ್ನ ಎಚ್ಚರಿಸೋದಲ್ಲ! ಹಿಂಗಂದ್ರು ಬೇಂದ್ರೆ’ ಸುಧೀಂದ್ರ ದೇಶಪಾಂಡೆ (ಸುನಾಥ)

D. R. bendre birthday ಹತ್ತರೀ ಸಾಧನಕೇರಿ ಬಸ್: ದತ್ತಾತ್ರೇಯನೆಂಬ ಖಾಸಾದೋಸ್ತನಿಗೀಗ 125ರ ಹರೆಯ
ಕವಿ ದ.ರಾ. ಬೇಂದ್ರೆ
Follow us
ಶ್ರೀದೇವಿ ಕಳಸದ
| Updated By: ಆಯೇಷಾ ಬಾನು

Updated on:Jan 31, 2022 | 11:33 AM

ಯಾರರೀ ಜುಬಿಲಿ ಸರ್ಕಲ್, ಯಾರರೀ ಕೆಸಿಡಿ, ಯಾರರೀ ದಾಸನಕೊಪ್ಪಾ, ನಾರಾಯಣಪುರ, ಕೆನರಾ ಬ್ಯಾಂಕ್, ಜರ್ಮನ್ ಹಾಸ್ಪಿಟಲ್, ಯಾರರೀ ಸಾಧನಕೇರಿ? ಹಿಂಗಂತ ಧಾರವಾಡ ಸಿಟಿ ಬಸ್ಸಿನ ಕಂಡಕ್ಟರ್ ಕರದಾಗೆಲ್ಲಾ ನಾವು ಉತ್ರಾ ಕೊಡ್ತೀವೇನು, ಸುಮ್ಮನ ಇಳದ ಹೋಗ್ತೀವಿಲ್ಲೋ? ಕಾವ್ಯ ಅಂದ್ರನೂ ಹಂಗ. ಸುಮ್ಮನ ಸುಮ್​ಸುಮ್ಮನ ಓದ್ಕೋತ ಓದ್ಕೋತ ಅದರೊಳಗ ಇಳಕೋತ ಕಳಕೋತ ಹೋಗೂದು. ಕಳದು ಕೂಡಿ, ಕೂಡಿ ಕಳದು ಕತ್ತಲದಾಗನ ಸಣ್ಣ ಸಣ್ಣ ಬೆಳಕಿನ ಮಿಣುಕಾ ಹಿಡಕೋತ ಉಸರ ತಂದ್ಕೋತ ಶಕ್ತಿ ತಂದ್ಕೋತ ಹೋಗುದು ಅಲ್ಲೇನು ಅಂತ, ಬರಹಾನ ಬದುಕು ಅನ್ಕೊಂಡಿರೂ ಮನಸಗೋಳಿಗೆ ಟಿವಿ9 ಕನ್ನಡ ಡಿಜಿಟಲ್ ಕೇಳಿದ್ದ ತಡಾ, 126ರ ವಯಸಿನ ಸಾಧನಕೇರಿಯ ಬೆಂದ ಹುಡುಗನ್ನ ಬಗಲಾಗ ಕೈಹಾಕಿ ಜೀವಾಮಾಡಿ ದರಾದರಾ ಅಂತ ಒಳಗೆಳ್ಕೊಂಡಬಿಟ್ರು. ಆಮ್ಯಾಲ ಖಾಲೀ ಹಾಳಿ ಮುಂದ  ಕುಂತಮ್ಯಾಲ ರಾಮಚಂದ್ರ ಮತ್ತ ಅಂಬಿಕಾ ಅವ್ರ ಮಗ ದತ್ತೂಬಾಳಾ ಏನಿದ್ದಾನಲ್ಲಾ… ಅವ ಅವರೊಳಗ ಇಳಕೋತ ಏನೇನ ನೆನಪ ಕೆದಕಿದ, ಅವು ಏನೇನು ವಿಚಾರಗೋಳ್ನ ಹುರಿಗೊಳಸ್ತಾ ಹೋದ್ವು ಅನ್ನೂದನ್ನ ನೀವ ಓದ್ರಿ, ಹಂಗಿದ್ರ ಹತ್ತರೀ ಸಾಧನಕೇರಿ ಬಸ್.

ಪರಿಕಲ್ಪನೆ : ಶ್ರೀದೇವಿ ಕಳಸದ

ಧಾರವಾಡದಲ್ಲಿ ವಾಸವಾಗಿರುವ ಹಿರಿಯ ಲೇಖಕ ಸುಧೀಂದ್ರ ದೇಶಪಾಂಡೆ (ಸುನಾಥ) ಅವರ ಬರಹ ನಿಮ್ಮ ಓದಿಗೆ.

1956ರಲ್ಲಿ ದ.ರಾ.ಬೇಂದ್ರೆಯವರಿಗೆ 60 ವರ್ಷಗಳು ತುಂಬಿದವು. 1959ರಲ್ಲಿ ‘ಅರಳು ಮರಳು’ ಕವನಸಂಕಲನಕ್ಕೆ ಸಾಹಿತ್ಯ ಅಕಾಡೆಮಿಯ ಬಹುಮಾನ ದೊರೆಯಿತು. ಆ ಸಂದರ್ಭದಲ್ಲಿ ಅವರನ್ನು ಸವದತ್ತಿಯಲ್ಲಿರುವ ಸರಕಾರಿ ಮಾಧ್ಯಮಿಕ ಶಾಲೆಗೆ ಆಮಂತ್ರಿಸಿ, ಗೌರವಿಸಲಾಗಿತ್ತು. ನಾನು ಆವಾಗ ಆ ಶಾಲೆಯಲ್ಲಿ ವಿದ್ಯಾರ್ಥಿಯಾಗಿದ್ದೆ. ಬೇಂದ್ರೆಯವರು ಶಾಲಾಮಕ್ಕಳನ್ನು ಉದ್ದೇಶಿಸಿ, ಮೊದಲು ಒಂದು ಪ್ರಶ್ನೆಯನ್ನು ಕೇಳಿದರು:

‘ಕರ್ನಾಟಕವು ಎಲ್ಲಿಂದ ಎಲ್ಲಿಯವರೆಗೆ ಇದೆ?’ ವಿದ್ಯಾರ್ಥಿಗಳೆಲ್ಲರೂ ಒಕ್ಕೊರಲಿನಿಂದ ಉತ್ತರಿಸಿದರು: ‘ಕಾವೇರಿಯಿಂದ ಗೋದಾವರಿಯವರೆಗೆ !’ ಬೇಂದ್ರೆಯವರು ನಕ್ಕು, ವಿದ್ಯಾರ್ಥಿಗಳಿಗೆ ಚೇಷ್ಟೆಯ ಧ್ವನಿಯಲ್ಲಿ ಹೇಳಿದರು: ‘ನಿಮಗ ಇತಿಹಾಸ ಗೊತ್ತದ, ಭೂಗೋಲ ಗೊತ್ತಿಲ್ಲ!’

ಇಷ್ಟು ಹೇಳಿ, ಬೇಂದ್ರೆಯವರು ತಮ್ಮ ಕೋಟಿನ ಕಿಸೆಯಿಂದ ಒಂದು ಸಣ್ಣ ಗ್ಲೋಬ್ ಅನ್ನು ಹೊರತೆಗೆದರು. ಆ ಗ್ಲೋಬಿನ ಮೇಲೆ ಬೆರಳಿಟ್ಟು ತಮ್ಮ ಕವನದ ಒಂದು ನುಡಿಯನ್ನು ಹಾಡಿದರು:

‘ಕನ್ನಡ ನುಡಿದಿತು ಕನ್ನಡ ಹಕ್ಕಿ, ಕನ್ನಡವೆಂದಿತು ಆ ಗೋದೆ; ಕಾವೇರಿಯು ತಂಪಾಯಿತು, ಕನ್ನಡ ಗಾಳಿಯು ಉಸಿರಿತು ಈ ಬೋಧೆ.’

ಈ ನುಡಿಯ ಅರ್ಥ ನಮಗ ಆಗೂದುಲ್ಲಾ ಅಂತ ಬೇಂದ್ರೆಯವರಿಗೆ ಗೊತ್ತs ಇತ್ತು. ಅದಕ್ಕ ಅವರು ತಾವs ಅದರ ಅರ್ಥ ಬಿಡಿಸಿ ಹೇಳಿದರು:

‘ಗೋದಾವರಿ ನದಿ ಅಂತ ಅಂದಿರಲ್ಲಾ, ಅದರ ದಂಡಿ ಮ್ಯಾಲ, ‘ಕನ್ನಡ’ ಅನ್ನೋ ಹೆಸರಿನ ಹಳ್ಳಿ ಅದ. ಅಲ್ಲೆಲ್ಲಾ ಕನ್ನಡ ಮಾತಾಡೋ ಮಂದೀನ ಇದ್ದಾರ. ಅವರು ತಾವು ಸಾಕಿದ ಗಿಳಿ ಜೋಡಿ ಕನ್ನಡದಾಗ ಮಾತಾಡ್ತಾರ. ಅವೂ ಸಹ ಕನ್ನಡದಾಗ ಮಾತಾಡಲಿಕ್ಕೆ ಕಲೀತಾವ. ಹಿಂಗಾಗಿ ಕನ್ನಡಹಕ್ಕಿ ಅಂದರ ಗಿಳಿ. ಅಲ್ಲದs ಗೋದಾವರಿ ನದಿಯ ಜುಳುಜುಳು ಸಪ್ಪಳ ಸಹ ಕನ್ನಡದಾಗ ಮಾತನಾಡಿದ ಹಂಗ ಅನಸ್ತದ. ಇದು ‘ಕನ್ನಡ ನುಡಿದಿತು ಕನ್ನಡಹಕ್ಕಿ; ಕನ್ನಡವೆಂದಿತು ಆ ಗೋದೆ’ ಎನ್ನುವ ಸಾಲಿನ ಅರ್ಥ.

‘ಕನ್ನಡವೆಂದಿತು ಆ ಗೋದೆ’ ಅನ್ನೋ ಮಾತಿಗೆ ಇನ್ನೂ ಒಂದು ಅರ್ಥ ಅದ. ಗೋದಾವರಿ ದಂಡಿ ಮ್ಯಾಲ ಇರುವ ಆ ಕನ್ನಡ ಅನ್ನೋ ಹಳ್ಳಿ ‘ಆಗೋದೇ’ ಅಂತದ. ಅಂದರ ಇವತ್ತಿಲ್ಲಾ ನಾಳೆ ನಾನು ಕರ್ನಾಟಕದಾಗ ಸೇರ್ಕೋತೇನಿ ಅಂತನs ಅದು ಹೇಳ್ತದ. ಈ ಘೋಷಣಾ ಗೋದಾವರಿಯಿಂದ ಕಾವೇರಿಯ ತನಕಾನೂ ಕೇಳಸ್ತದ. ಆದರ ಕನ್ನಡ ಜನರು ಶಾಂತಸ್ವಭಾವದವರು. ಕಾವು ಏರಿಯೂ ಸಹ ಮತ್ತ ತಂಪಾಗಿ ಬಿಡ್ತಾರ. ಕನ್ನಡ ನಾಡಿನ ವಾತಾವರಣ ಮತ್ತು ಕನ್ನಡ ಜನರ ನೀತಿ ಹಂಗ ಅವ.’

ಈ ವಿವರಣೆಯನ್ನು ಕೇಳಿದ ವಿದ್ಯಾರ್ಥಿಗಳು ಬೆರಗಾಗಿ ಕೂತರು. ಯಾರೋ ಒಬ್ಬ ಮಹಾನುಭಾವರು ನಮಗ ಕಲಸ್ತಾ ಇದ್ದಾರ; ನಾವು ಅವರು ಹೇಳಿದ್ದನ್ನು ತಿಳಕೋಬೇಕು ಅನ್ನೋ ರೀತಿಯೊಳಗ ನಿಃಶಬ್ದರಾಗಿ ಕುಳಿತು ಅವರ ಭಾಷಣವನ್ನು ಕೇಳಿದರು. ಬೇಂದ್ರೆಯವರ ಈ ಶ್ಲೇಷೆಯ ಪ್ರತಿಭೆಯನ್ನು ಅವರ ಬಾಯಿಂದಲೇ ಕೇಳಿದ ನಾವೇ ಧನ್ಯರು. ಬೇಂದ್ರೆಯವರ ಬಗೆಗಿನ ಈ ಮೆಚ್ಚುಗೆ, ಈ ಆರಾಧನಾ ಭಾವ ನನ್ನಲ್ಲಿ ದಿನದಿನಕ್ಕೂ ಹೆಚ್ಚಾಗುತ್ತಲೇ ಇದೆ. ಅವರ ಕವನಗಳನ್ನು ಓದಿದಂತೆಲ್ಲ ಹೊಸ ಹೊಸ ಅರ್ಥಗಳು ಹೊಳೆಯುತ್ತಲೇ ಇವೆ. ಅವರ ಕಾವ್ಯದ ಅಧ್ಯಯನಕ್ಕೆ ಒಂದು ಜನ್ಮ ಸಾಲದು!

ಬೇಂದ್ರೆಯವರ ಶ್ಲೇಷೆಯ ಪ್ರತಿಭೆಯನ್ನು ನಾನು ಮೊದಲು ಕಂಡಿದ್ದು ‘ಅರಳು ಮರಳು’ ಕವನಸಂಕಲನಕ್ಕೆ ವಿನಾಯಕ ಗೋಕಾಕರು ಬರೆದ ಮುನ್ನುಡಿಯಲ್ಲಿ. ‘ಗರಿ’ ಎನ್ನುವ ಬೇಂದ್ರೆಯವರ ಕವನಸಂಕಲನದಲ್ಲಿ ‘ಅಂಬಿಕಾತನಯದತ್ತ’ ಎನ್ನುವ ಕವನವಿದೆ. ಇದು ಬೇಂದ್ರೆಯವರು ತಮ್ಮ ತಾಯಿಯನ್ನು ಉದ್ದೇಶಿಸಿ ಬರೆದಿದ್ದು, ಅದರಲ್ಲಿಯ ಒಂದು ನುಡಿ ಹೀಗಿದೆ:

ನಿನ್ನ ಉದರದೊಂದ ಹೂವ ಸರಸ್ವತಿಗೆ ಸಲಿಸಿದೆ ಚುಕ್ಕೆಯಾಗಿ ನೆಲೆಸಿದೆ ಸಾವಿರದ ಮನೆಗಳಲ್ಲಿ ನನಗೆ ಮನೆಯ ಮಾಡಿದೆ ತಾಯಿ ಆಟ ಹೂಡಿದೆ

‘ಸಾವಿರದ ಮನೆಗಳಲ್ಲಿ ನನಗೆ ಮನೆಯ ಮಾಡಿದೆ’ ಎನ್ನುವಾಗ, ‘ಸಾವಿರಾರು ಮನೆಗಳಲ್ಲಿ ಒಂದು’ ಎನ್ನುವ ಅರ್ಥ ಬರುವಂತೆಯೇ, ‘ಸಾವು ಇರದ ಮನೆಗಳಲ್ಲಿ’ ಎನ್ನುವ ಅರ್ಥವೂ ಬರುತ್ತದೆ. ಈ ಅರ್ಥವನ್ನು ನಾನು ತಿಳಿದದ್ದು ಗೋಕಾಕರು ‘ಅರಳು ಮರಳು’ ಸಂಕಲನಕ್ಕೆ ಬರೆದ ಮುನ್ನುಡಿಯನ್ನು ಓದಿದಾಗ.

ಕೆ.ಎಸ್. ಶರ್ಮಾ ಎನ್ನುವವರು ಧಾರವಾಡದ ಒಂದು ಕಾಲೇಜಿನಲ್ಲಿ ಇಂಗ್ಲಿಷ್ ಪ್ರೊಫೆಸರ್ ಆಗಿದ್ದವರು. ಬೇಂದ್ರೆಯವರಿಗೆ ಆತ್ಮೀಯರಾದವರು. ಇವರು ಎಡಪಂಥೀಯರು. 1977ನೆಯ ಇಸವಿಯಲ್ಲಿ ಬಿಹಾರದ ಬೆಲಚಿ ಎನ್ನುವ ಊರಿನಲ್ಲಿ ಹತ್ಯಾಕಾಂಡ ಜರುಗಿದಾಗ, ಶರ್ಮಾ ‘ಎಚ್ಚರ’ ಎನ್ನುವ ನಾಟಕವನ್ನು ರಚಿಸಿ ಧಾರವಾಡದಲ್ಲಿ ಆಡಿಸಿದ್ದರು. ಶರ್ಮಾರ ಆತ್ಮೀಯರಾದ ಕಾರಣದಿಂದ ಬೇಂದ್ರೆಯವರು ಆ ನಾಟಕಕ್ಕೆ ಅಧ್ಯಕ್ಷರಾಗಿ ಬಂದಿದ್ದರು. ನಾಟಕದ ಕೊನೆಯಲ್ಲಿ ಬೇಂದ್ರೆಯವರು ಹೇಳಿದ್ದು:

‘ಶರ್ಮಾ ಈ ನಾಟಕವನ್ನು ‘ಎಚ್ಚರ’ ಅಂತ ಕರದಾನ. ಆದರ ಎಲ್ಲಾ ಪ್ರೇಕ್ಷಕರೂ ನಿದ್ದಿ ಮಾಡಲಿಕ್ಕೆ ಹತ್ಯಾರ. ಯಾರೂ ಎಚ್ಚರಿಲ್ಲ. ನಾನೂ ಸಹ ಎಚ್ಚರಿಲ್ಲ. ಆದರ ನನ್ನ ಅಂತರಾತ್ಮ ಎಚ್ಚರ ಇದ್ದಾನ. ಪ್ರೇಕ್ಷಕರ ಅಂತರಾತ್ಮ ಸಹ ಎಚ್ಚರ ಅವ. ಈ ನಾಟಕದ ಉದ್ದೇಶನ ಅಂತರಾತ್ಮವನ್ನು ಎಚ್ಚರಿಸೋದು ಆಗೇದ, ನಾಟಕ ನಡೆದಾಗ ನಿದ್ದಿ ಮಾಡೋರನ್ನ ಎಚ್ಚರಿಸೋದಲ್ಲ!’

ಬೇಂದ್ರೆಯವರ ಅಜ್ಜಿ ಗೋದೂಬಾಯಿಯವರು ನರಗುಂದದಲ್ಲಿ ಬ್ರಿಟಿಷರ ವಿರುದ್ಧ ನಡೆದ ಹೋರಾಟದ ಸಮಯದಲ್ಲಿ ಮನೆಮಾರು ಕಳೆದುಕೊಂಡು, ಧಾರವಾಡಕ್ಕೆ ದಿಕ್ಕು ತಪ್ಪಿ ಬಂದವರು. ಬೇಂದ್ರೆಯವರ ಮೇಲೆ ಇವರ ಪ್ರಭಾವ ಬಹಳವಾಗಿದೆ. ಬೇಂದ್ರೆಯವರು ತಮ್ಮ ಅಜ್ಜಿಯನ್ನು ನೆನಪಿಸಿಕೊಳ್ಳುವುದು ಹೀಗೆ:

ಹದಿನೇಳು ಹಡೆದರು, ಹೆಣ್ಣೊಂದೆ ಉಳಿದರು ಜಗ್ಗದ, ಕುಗ್ಗದ ಎದೆಯವಳು; ಹುಲಿಹಾಲ ಕುಡಿಸಿದಳು, ತಂತಿಯಲಿ ನಡೆಸಿದಳು, ಸೂಜಿಯ ಮೊನೆಯಲ್ಲಿ ನಿಲಿಸಿದಳು.

ತಂತಿಯ ಮೇಲೆ ನಡೆಯುವುದು ಎಂದರೆ ಲೌಕಿಕ ವ್ಯವಹಾರದಲ್ಲಿ ಯಾರಿಗೂ ಅಪಚಾರವಾಗದಂತೆ ನಡೆದುಕೊಳ್ಳುವುದು; ಸೂಜಿಮೊನೆಯಲಿ ನಿಲ್ಲುವುದು ಎಂದರೆ ನೈತಿಕಪ್ರಜ್ಞೆಯಲ್ಲಿ ತಪ್ಪದೆ ಇರುವುದು. ಬೇಂದ್ರೆಯವರು ‘ಗೋದಲೆ’ ಎನ್ನುವ ತಮ್ಮ ಕವನದಲ್ಲಿ ತಮ್ಮ ಅಜ್ಜಿಯನ್ನು ಪ್ರೀತಿಯಿಂದ ನೆನಸಿಕೊಂಡಿದ್ದಾರೆ. ಜೊತೆಗೇ ‘ಗೋಂದಾವಲಿಯ ಬ್ರಹ್ಮಚೈತನ್ಯ ಮಹಾರಾಜರು’ ಎಂದು ಪ್ರಖ್ಯಾತರಾದ ಸಂತರನ್ನು ಸಹ ನೆನಸಿಕೊಂಡಿದ್ದಾರೆ.

ಗೋದಲೆಗೆ ಬಾ ಗೋದು ಹೇ ಗೋಂದಾವಲಿಗೆ ಹಂಬಾ ತಂದಿಹೇ ದಿನಾದಿನಾ ಮುಂದಿನಾ ನಾಮಾ ರೂಪಾ ಹೊಂದಿ ನಾ ತಂದಿ ನಾ ತಂದಿಹೇ .

1918ರಲ್ಲಿ ಬೇಂದ್ರೆಯವರು ವ್ಹಿಕ್ಟೋರಿಯಾ ಹೈಸ್ಕೂಲಿನಲ್ಲಿ (ಈಗಿದು ವಿದ್ಯಾರಣ್ಯ ಹೈಸ್ಕೂಲು) ಶಿಕ್ಷಕರಾದರು. 1932ರಲ್ಲಿ ‘ಗರಿ’ ಕವನಸಂಕಲನ ಪ್ರಕಟವಾಯಿತು. ಅದರಲ್ಲಿ ಇರುವ ‘ನರಬಲಿ’ ಎನ್ನುವ ಕವನದಲ್ಲಿ ಬೇಂದ್ರೆಯವರು ಸ್ವಾತಂತ್ರ್ಯಹೋರಾಟದ ಪರವಾಗಿ ಬರೆದರು.

ಬಲಗಾಲ್ ಬುಡದಿಂ ಬಿಡುಗಡೆ ಬಿಡಿಸಲು ನರಬಲಿಯೇ ಬೇಕು ಇದುವೆ ಕಾಳಿಯ ಪೂಜೆಯು ಶುದ್ಧ ಇದಕ್ಕೆ ಹುಂಬರು ಎಂಬರು ಯುದ್ಧ.

ಈ ‘ನರಬಲಿ’ ಕವನದಿಂದಾಗಿ ಬೇಂದ್ರೆಯವರು ತಮ್ಮ ಕೆಲಸ ಕಳೆದುಕೊಂಡರು. ಆರು ವರುಷಗಳವರೆಗೆ ಯಾರೂ ಅವರಿಗೆ ನೌಕರಿ ಕೊಡಕೊಡದೆಂದು ಸರಕಾರವು ಆಜ್ಞೆ ಹೊರಡಿಸಿತು. ಬೇಂದ್ರೆಯವರನ್ನು ಮೊದಲು ಹಿಂಡಲಗಿಯ ಸೆರೆಮನೆಗೆ ಅಟ್ಟಿತು. ಬಳಿಕ ಅವರನ್ನು ಧಾರವಾಡದ ಹತ್ತಿರದಲ್ಲಿಯ ಮುಗದ ಎನ್ನುವ ಹಳ್ಳಿಯಲ್ಲಿ ನಜರಬಂದಿಯಲ್ಲಿ ಇಟ್ಟಿತು.

ಇದು ಕವಿಗೆ ಶಿಕ್ಷೆ; ಅದರೆ ಇದೇ ಕನ್ನಡಿಗರಿಗೆ ಪಂಚಾಮೃತ ಕಾವ್ಯಭಿಕ್ಷೆಯಾಯಿತು! ಕವನ ಹುಟ್ಟುವ ಪರಿಯನ್ನು ವರ್ಣಿಸುವ ಬೇಂದ್ರೆಯವರ ಒಂದು ಉತ್ಕೃಷ್ಟ ಕವನ : ‘ಭಾವಗೀತ’ ಹುಟ್ಟಿದ್ದು ಈ ನಜರಬಂದಿಯಲ್ಲಿಯೇ! ಈ ಕವನದ ಮೊದಲ ಹಾಗು ಕೊನೆಯ ನುಡಿ ಹೀಗಿದೆ:

ಭೃಂಗದ ಬೆನ್ನೇರಿ ಬಂತು ಕಲ್ಪನಾವಿಲಾಸ ಮಸೆದ ಗಾಳಿ ಪಕ್ಕ ಪಡೆಯುತಿತ್ತು ಸಹಜ ಪ್ರಾಸಾ ಮಿಂಚಿ ಮಾಯವಾಗುತಿತ್ತು ಒಂದು ಮಂದಹಾಸಾ ಭೃಂಗದ ಬೆನ್ನೇರಿ ಬಂತು ಕಲ್ಪನಾವಿಲಾಸ.

‘ಭೃಂಗದ ಬೆನ್ನೇರಿ ಬಂತು ಕಲ್ಪನಾವಿಲಾಸ’ ಎಂದು ಬೇಂದ್ರೆಯವರು ಹಾಡಲಿಕ್ಕೆ ಎರಡು ಕಾರಣಗಳಿವೆ. ಮೊದಲನೆಯ ಕಾರಣ ಹೀಗಿದೆ: ಬೇಂದ್ರೆಯವರು ಅಲ್ಲಿಯ ಒಂದು ಗುಡಿಯ ಬದಿಯಲ್ಲಿ ಕುಳಿತುಕೊಂಡಾಗ, ಒಂದು ಗುಂಗೀ ಹುಳವು ‘ಗುಂಯ್, ಗುಂಯ್’ ಎಂದು ಸಪ್ಪಳ ಮಾಡುತ್ತ ಬಿದಿರ ಮೆಳೆಯಲ್ಲಿ ಸುತ್ತುತ್ತಲಿತ್ತು. ಇದು ಬೇಂದ್ರೆಯವರ ‘ಭಾವಗೀತ’ಕ್ಕೆ ಪ್ರೇರಣೆ. ಎರಡನೆಯದಾಗಿ ಕವಿಗುರು ಕಾಳೀದಾಸನ ‘ಶಾಕುಂತಲಮ್’ ನಾಟಕದಲ್ಲಿಯೂ ಸಹ ಒಂದು ದುಂಬಿಯು ದುಷ್ಯಂತ-ಶಕುಂತಲೆಯರ ಪ್ರಣಯಕ್ಕೆ ಕಾರಣವಾಗುತ್ತದೆಯಲ್ಲವೆ! ಬೇಂದ್ರೆಯವರು ಕಾಳೀದಾಸನನ್ನು ನೆನೆಯುವ ರೀತಿ ಇದು!

ತಮ್ಮ ಬಿಡುಗಡೆಯ ಬಳಿಕ ಬೇಂದ್ರೆಯವರು ಪುಣೆಗೆ ಹೋದರು. ಅಲ್ಲಿ ಅವರ ಕಾಕಾನ ಮನೆಯಲ್ಲಿ ಬೇಂದ್ರೆಯವರ ವಾಸ. ಇಲ್ಲಿ ಇವರ ಪತ್ನಿಗೆ ಪರಾಶ್ರಯ. 1941, ೪೨ ಹಾಗು 43ರಲ್ಲಿ ಗದಗ, ಹುಬ್ಬಳ್ಳಿ ಹಾಗು ಪುಣೆಗಳಲ್ಲಿ ಅಲ್ಪಾವಧಿ ನೌಕರಿ ಮಾಡಿದ ನಂತರ ಬೇಂದ್ರೆಯವರು ೧೯೪೪ರಲ್ಲಿ ಸೊಲ್ಲಾಪುರದ ಡಿ.ಏ.ವ್ಹಿ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗುತ್ತಾರೆ. ಧಾರವಾಡವನ್ನು ಬಿಟ್ಟುಹೋಗುವುದು ಬೇಂದ್ರೆಯವರಿಗೆ ಸಂಕಟದ ಸಂಗತಿ. ‘ನಾವು ಬರ್ತೀವಿನ್ನ ತಾಯಿ, ನಂ ನಮಸ್ಕಾರ ನಿಮಗ’ ಎಂದು ಗಳಗಳಿಸುತ್ತ ಹೊರಟ ಬೇಂದ್ರೆಯವರು, ಧಾರವಾಡಕ್ಕೆ ಮರಳುವ ಸಂದರ್ಭದಲ್ಲಿ ‘ಬಾರೊ ಸಾಧನಕೇರಿಗೆ, ಮರಳಿ ನಿನ್ನೀ ಊರಿಗೆ’ ಎಂದು ಹಾಡಿದ್ದಾರೆ. ಈ ಕವನದಲ್ಲಿ ಬೇಂದ್ರೆಯವರು ‘ಬೇಲಿಗೂ ಹೂಬೆರಳಿದೆ’ ಎನ್ನುತ್ತಾರೆ.

ಮಲೆಯ ಮೊಗವೇ ಹೊರಳಿದೆ ಕೋಕಿಲಕೆ ಸವಿ ಕೊರಳಿದೆ ಬೇಲಿಗೂ ಹೂಬೆರಳಿದೆ ನೆಲಕೆ ಹರೆಯವು ಮರಳಿದೆ ಭೂಮಿತಾಯ್ ಒಡಮುರಿದು ಎದ್ದಳೊ ಶ್ರಾವಣದ ಸಿರಿ ಬರಲಿದೆ || ಬಾರೊ…

ಬೇಲಿಯು ಮನೆಯ ಕಾವಲುಗಾರ. The job of the fence is defense, sometimes with thorny offense; ಆದರೆ ಇಲ್ಲಿ ನಾವು ನೋಡುತ್ತಿರುವುದು reception with flowery fingers! ಅಂದರೆ, ಧಾರವಾಡದಲ್ಲಿಯ ಬೇಲಿಗಳು ತಮ್ಮ ಹೂಬೆರಳುಗಳಿಂದ ನಿಮ್ಮನ್ನು ಸ್ವಾಗತಿಸುತ್ತಿವೆ, ಸ್ವಾಗತಕಾರಿಣಿಯಂತೆ! ಅರ್ಥಾತ್, ಇಲ್ಲಿಯ ನಿವಾಸಿಗಳು ಸಹೃದಯರು, ಅತಿಥಿಸತ್ಕಾರಪ್ರಿಯರು ಎಂದು ಬೇಂದ್ರೆ ಹೇಳುತ್ತಿದ್ದಾರೆ. ಅರ್ಥಾಂತರ ಅಲಂಕಾರಕ್ಕೆ ಇದೊಂದು ಸುಂದರ ಉದಾಹರಣೆಯಾಗಿದೆ.

ಬೇಂದ್ರೆಯವರನ್ನು ದಿನದಿನವೂ ಪಾರಾಯಣ ಮಾಡುತ್ತಲೇ ಇರುವುದು ನನ್ನ ಅಭ್ಯಾಸವಾಗಿ ಬಿಟ್ಟಿದೆ. ಏಕೆಂದರೆ ಈ ಕಾವ್ಯಸಮುದ್ರದಲ್ಲಿ ಮುಳುಗಿದಷ್ಟೂ ಮುತ್ತುಗಳು ಸಿಗುತ್ತಲೇ ಇರುತ್ತವೆ!

ಅವಿತಕವಿತೆ: ಇಡೀ ಜೀವಯಾನವೇ ಒಂದು ಬೊಗಸೆ ನೀರಾದದ್ದು

Published On - 2:06 pm, Sun, 31 January 21

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ