ಧಾರವಾಡದಲ್ಲಿ ಸಚಿವ ಕೆ.ಎಸ್. ಈಶ್ವರಪ್ಪ ಸಭೆ: ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ

ತಾಲೂಕು ಪಂಚಾಯತಿಯ ಕಾರ್ಯನಿರ್ವಾಹಕ ಅಧಿಕಾರಿಗಳು ಗಮನಹರಿಸಿ ಬದುಗಳ ಉದ್ದಕ್ಕೂ ತೋಟಗಾರಿಕೆ ಮತ್ತು ಸಾಮಾಜಿಕ ಅರಣ್ಯ ವಿಭಾಗದಿಂದ ಸಸಿಗಳನ್ನು ನೆಡುವ ಕಾರ್ಯವನ್ನು ಅನುಷ್ಠಾನಗೊಳಿಸಬೇಕು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಸಚಿವರಾದ ಕೆ.ಎಸ್ ಈಶ್ವರಪ್ಪ ಮಾತನಾಡಿದರು.

ಧಾರವಾಡದಲ್ಲಿ ಸಚಿವ ಕೆ.ಎಸ್. ಈಶ್ವರಪ್ಪ ಸಭೆ: ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ
ಸಚಿವ ಕೆ.ಎಸ್. ಈಶ್ವರಪ್ಪ
Updated By: ಸಾಧು ಶ್ರೀನಾಥ್​

Updated on: Jan 11, 2021 | 11:36 AM

ಧಾರವಾಡ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಇಂಗು ಗುಂಡಿಗಳು ಹಾಗೂ ಸಾಮೂಹಿಕ ಶೌಚಾಲಯಗಳನ್ನು ನಿರ್ಮಿಸಲು ಅವಕಾಶವಿದೆ. ರೈತರ ಬೇಡಿಕೆ ಆಧರಿಸಿ ಕೃಷಿ ಹೊಂಡಗಳು ಹಾಗೂ ಬದು ನಿರ್ಮಾಣ ಕೈಗೊಳ್ಳಬೇಕು.

ಜಿಲ್ಲೆಯ ಅಂಗನವಾಡಿ ಮತ್ತು ಶಾಲಾ ಕಟ್ಟಡಗಳ ದುರಸ್ತಿ, ಶೌಚಾಲಯ ನಿರ್ಮಾಣ ಹಾಗೂ ಪೀಠೋಪಕರಣಗಳಿಗೆ ಬೇಕಾಗುವ ಅಂದಾಜು ವೆಚ್ಚ ಸಿದ್ಧಪಡಿಸಿ ಸ್ಥಳೀಯ ಸಂಸದರು ಹಾಗೂ ಶಾಸಕರನ್ನು ಸಂಪರ್ಕಿಸಿ ಅವರ ಪ್ರದೇಶಾಭಿವೃದ್ಧಿ ನಿಧಿ ಮತ್ತು ಉದ್ಯಮಗಳ ಸಿ.ಎಸ್.ಆರ್ ಚಟುವಟಿಕೆಗಳ ಅಡಿಯಲ್ಲಿ ಅನುದಾನ ಕ್ರೋಢೀಕರಣ ಮಾಡಲು ತುರ್ತು ಕ್ರಮಕೈಗೊಳ್ಳಬೇಕು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಸಚಿವರಾದ ಕೆ.ಎಸ್ ಈಶ್ವರಪ್ಪ ಮಾತನಾಡಿದರು.

ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಇಲಾಖೆಯ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಉದ್ಯೋಗ ಕಾರ್ಡ್​ಗಳ ವಿತರಣೆ ಕಾರ್ಯ ಇನ್ನಷ್ಟು ಚುರುಕುಗೊಳ್ಳಬೇಕು.

ಜಿಲ್ಲೆಯಲ್ಲಿ ಇದುವರೆಗೆ 999 ಬದುಗಳ ನಿರ್ಮಾಣವಾಗಿರುವುದು ಉತ್ತಮ ಸಾಧನೆಯಾಗಿದೆ. ತಾಲೂಕು ಪಂಚಾಯತಿಯ ಕಾರ್ಯನಿರ್ವಾಹಕ ಅಧಿಕಾರಿಗಳು ಗಮನಹರಿಸಿ ಬದುಗಳ ಉದ್ದಕ್ಕೂ ತೋಟಗಾರಿಕೆ ಮತ್ತು ಸಾಮಾಜಿಕ ಅರಣ್ಯ ವಿಭಾಗದಿಂದ ಸಸಿಗಳನ್ನು ನೆಡುವ ಕಾರ್ಯವನ್ನು ಅನುಷ್ಠಾನಗೊಳಿಸಬೇಕು ಎಂದು ಮಾತನಾಡಿದರು.

ಕೃಷಿಹೊಂಡಗಳ ನಿರ್ಮಾಣಕ್ಕೆ ರೈತರಿಂದ ಬೇಡಿಕೆ ಬಂದರೆ ಕೆಲವು ಮಾರ್ಪಾಡುಗಳೊಂದಿಗೆ ಕೃಷಿ ಹೊಂಡಗಳನ್ನು ನಿರ್ಮಿಸಲು ನರೇಗಾದಲ್ಲಿ ಅವಕಾಶ ಕಲ್ಪಿಸಬಹುದು. ಜಿಲ್ಲೆಯ 39 ಅಂಗನವಾಡಿಗಳು ಹಾಗೂ ಸುಮಾರು 900 ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಕಟ್ಟಡ ದುರಸ್ತಿ ಸೇರಿದಂತೆ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಸಮಗ್ರವಾಗಿ ಅಂದಾಜು ವೆಚ್ಚ ತಯಾರಿಸಿ ಸ್ಥಳೀಯ ಸಂಸದರು, ಶಾಸಕರನ್ನು ಸಂಪರ್ಕಿಸಿ ಅವರ ಪ್ರದೇಶಾಭಿವೃದ್ಧಿ ನಿಧಿ ಹಾಗೂ ಕೈಗಾರಿಕೆಗಳ ಸಿ.ಎಸ್.ಆರ್ ನೆರವು ಪಡೆಯಲು ಪ್ರಯತ್ನಿಸಬೇಕು. ದೇವಸ್ಥಾನ, ಧಾರ್ಮಿಕ ಕಟ್ಟಡಗಳಿಗೆ ಅನುದಾನ ನೀಡುವುದಕ್ಕಿಂತಲೂ ಅಂಗನವಾಡಿ ಮತ್ತು ಶಾಲೆಗಳ ನಿರ್ಮಾಣಕ್ಕೆ ಹಣಕಾಸು ನೆರವು ನೀಡುವುದು ಅತ್ಯಗತ್ಯವಾಗಿದೆ ಎಂದು ಸಚಿವರು ಹೇಳಿದರು.

ಇಂಗು ಬಚ್ಚಲು ಗುಂಡಿಗಳ ನಿರ್ಮಾಣ, ನವಲಗುಂದ ತಾಲೂಕಿನ ಸಾಧನೆಗೆ ಮೆಚ್ಚುಗೆ:

ಇಂಗು ಬಚ್ಚಲು ಗುಂಡಿಗಳ ನಿರ್ಮಾಣ ಅಭಿಯಾನದಲ್ಲಿ ನವಲಗುಂದ ತಾಲೂಕಿನಲ್ಲಿ ನಿಗದಿಪಡಿಸಿದ 800 ಗುರಿಗಿಂತಲೂ ಅಧಿಕವಾಗಿ 987 ಇಂಗು ಬಚ್ಚಲು ಗುಂಡಿಗಳನ್ನು ನಿರ್ಮಿಸುವ ಮೂಲಕ ಶೇ123.4 ರಷ್ಟು ಪ್ರಗತಿ ಸಾಧಿಸಿರುವ ಕಾರ್ಯವನ್ನು ಸಚಿವ ಕೆ.ಎಸ್.ಈಶ್ವರಪ್ಪ ಹಾಗೂ ಗ್ರಾಮೀಣಾಭಿವೃದ್ಧಿ ಆಯುಕ್ತ ಅನಿರುದ್ಧ ಶ್ರವಣ ಅವರು ಮುಕ್ತ ಕಂಠದಿಂದ ಸಭೆಯಲ್ಲಿ ಶ್ಲಾಘಿಸಿದರು.

ನವಲಗುಂದ ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಎಮ್ ಕಾಂಬಳೆ ಅವರಿಂದ ಈ ಸಾಧನೆಗೆ ಕಾರಣವಾದ ಅಂಶಗಳನ್ನು ವಿವರಿಸುತ್ತಾ, ಗ್ರಾಮೀಣ ಭಾಗಗಳಲ್ಲಿ ಬಚ್ಚಲ ನೀರು ನಿರ್ವಹಣೆ ವಿಷಯದಲ್ಲಿ ಸ್ಥಳೀಯವಾಗಿ ಅನೇಕ ಸಮಸ್ಯೆಗಳು ಇರುತ್ತವೆ. ಇಂಗು ಬಚ್ಚಲು ಗುಂಡಿಗಳ ನಿರ್ಮಾಣದಿಂದ ಇದಕ್ಕೆ ಪರಿಹಾರ ದೊರೆಯುತ್ತಿರುವುದರಿಂದ ಜನರಿಂದ ಬೇಡಿಕೆ ಬರುತ್ತಿದೆ ಎಂದರು. ಜಿಲ್ಲೆಯ ಉಳಿದ ತಾಲೂಕುಗಳಲ್ಲಿಯೂ ಈ ಸಾಧನೆ ಮಾಡಲು ಸಚಿವರು ಸೂಚಿಸಿದರು.

ಜಲಧಾರೆ ಯೋಜನೆಯಡಿ ಸುಮಾರು 1,500 ಕೋಟಿ ರೂ. ವೆಚ್ಚದಲ್ಲಿ ಜಿಲ್ಲೆಯ ಗ್ರಾಮೀಣ ಪ್ರದೇಶಗಳಿಗೆ ಕುಡಿಯುವ ನೀರು:

ಜನ ಜೀವನ ಮಿಷನ್ ಯೋಜನೆಯ ಆಯುಕ್ತ ಡಾ. ಆರ್. ವಿಶಾಲ ಮಾತನಾಡಿ, ಕೇಂದ್ರ ಸರ್ಕಾರವು 2024ರ ವೇಳೆಗೆ ಗ್ರಾಮೀಣ ಭಾಗದ ಪ್ರತಿಯೊಂದು ಮನೆಗೂ ನಳದ ಮೂಲಕ ಶುದ್ಧ ಮತ್ತು ಸುರಕ್ಷಿತ ಕುಡಿಯುವ ನೀರು ಒದಗಿಸಲು ‘ಹರ್​ ಘರ್​ ನಲ್ ಸೇ ಜಲ್​’ ಎಂಬ ಕಾರ್ಯಕ್ರಮ ಜಾರಿಗೊಳಿಸಿದೆ. ಈ ಗುರಿಯನ್ನು ಕರ್ನಾಟಕ ರಾಜ್ಯ ಸರ್ಕಾರವು 202ರ ಒಳಗಾಗಿ ರಾಜ್ಯದ ಎಲ್ಲಾ ಗ್ರಾಮೀಣ ಕುಟುಂಬಗಳಿಗೆ ಕಾರ್ಯಾತ್ಮಕ ನಳ ಸಂಪರ್ಕ ಕಲ್ಪಿಸಲು ಮನೆ ಮನೆಗೆ ಗಂಗೆ ಎಂಬ ಯೋಜನೆ ರೂಪಿಸಿದೆ.

ಇದರಲ್ಲಿ ನೈಸರ್ಗಿಕ ಸಾಮೂಹಿಕ ಜಲಮೂಲಗಳಿಂದ ಹಾಗೂ ಸ್ಥಳೀಯ ಜಲಮೂಲಗಳಿಂದ ಗ್ರಾಮದ ಮೇಲ್ಮಟ್ಟದ ಟ್ಯಾಂಕುಗಳಿಗೆ ನೀರು ತುಂಬಿಸಿ ಅಲ್ಲಿಂದ ಮನೆ ಮನೆಗೆ ನಳಗಳ ಮೂಲಕ ನೀರು ಪೂರೈಸುವ ಗುರಿ ಹೊಂದಲಾಗಿದೆ. ಮೊದಲ ಹಂತದಲ್ಲಿ ರಾಜ್ಯದ ಮಂಡ್ಯ, ರಾಯಚೂರು, ವಿಜಯಪುರ ಹಾಗೂ ಧಾರವಾಡ ಜಿಲ್ಲೆಗಳಲ್ಲಿ ಜಲಧಾರೆ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ. ಜಲಮೂಲಗಳಿಂದ ಟ್ಯಾಂಕುಗಳಿಗೆ ನೀರು ಪೂರೈಸುವ ಯೋಜನೆಯನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರ ತಲಾ ಶೇ.50-50 ರ ಅನುಪಾತದಲ್ಲಿ ವೆಚ್ಚ ಭರಿಸಲಿವೆ.

ಗ್ರಾಮದಲ್ಲಿ ಮೇಲ್ಮಟ್ಟದ ಟ್ಯಾಂಕಿನಿಂದ ಮನೆ ಮನೆಗೆ ನಳ ಸಂಪರ್ಕ ಕಲ್ಪಿಸುವ ಜಲಧಾರೆ ಕಾರ್ಯಕ್ರಮಕ್ಕೆ ತಗಲುವ ವೆಚ್ಚವನ್ನು ಶೇ.37.5 ರಷ್ಟು ಭಾರತ ಸರ್ಕಾರ, ಶೇ.37.5 ರಷ್ಟು ಕರ್ನಾಟಕ ಸರ್ಕಾರ, ಶೇ.15 ರಷ್ಟು ಹಣಕಾಸು ಆಯೋಗ ಅಥವಾ ಇತರ ಮೂಲಗಳು ಮತ್ತು ಶೇ.10 ರಷ್ಟನ್ನು ಸ್ಥಳೀಯ ಸಾಮಾಜಿಕವಂತಿಗೆ ಮೂಲಕ ಕ್ರೋಢೀಕರಿಸಲಾಗುವುದು.

ಸುಸ್ಥಿರ ಜಲಮೂಲಗಳಿಂದ ಪ್ರತಿ ಮನೆಯ ಪ್ರತಿಯೊಬ್ಬ ವ್ಯಕ್ತಿಗೆ ದಿನವೊಂದಕ್ಕೆ ತಲಾ 55 ಲೀಟರ್ ನೀರು ಪೂರೈಸಲಾಗುವುದು. ಈ ವರ್ಷದಲ್ಲಿ ರಾಜ್ಯದಲ್ಲಿ 5,500 ಕೋಟಿ ರೂ. ವೆಚ್ಚದ ಯೋಜನೆ ಹಮ್ಮಿಕೊಳ್ಳಲಾಗಿದೆ. ಧಾರವಾಡ ಜಿಲ್ಲೆಯಲ್ಲಿ ಸುಮಾರು 1,500 ಕೋಟಿ ರೂ. ವೆಚ್ಚದಲ್ಲಿ ಜಿಲ್ಲೆಯ ಒಟ್ಟು 388 ಜನವಸತಿಗಳಲ್ಲಿ 354 ಜನವಸತಿಗಳಿಗೆ ಈ ಯೋಜನೆಯಡಿ ಸೌಲಭ್ಯ ಸಿಗಲಿದೆ. ಇದುವರೆಗೆ 348 ಜನವಸತಿಗಳ ಅಂದಾಜು ಪತ್ರಿಕೆ ತಯಾರಿಸಲಾಗಿದೆ. 303 ಅಂದಾಜು ಪತ್ರಿಕೆಗಳಿಗೆ ಆಡಳಿತಾತ್ಮಕ ಮತ್ತು ತಾಂತ್ರಿಕ ಮಂಜೂರಾತಿ ದೊರೆತಿದ್ದು ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ಸಭೆಯಲ್ಲಿ ವಿವರಿಸಿದರು.

ಉದ್ಯೋಗವಿಲ್ಲದೆ ತವರು ಸೇರಿದ ಕಾರ್ಮಿಕರಿಗೆ ವರದಾನವಾಯ್ತು ಈ ಯೋಜನೆ