ಬಾಗಲಕೋಟೆ: ಕಾಂಗ್ರೆಸ್ ಪಕ್ಷದಲ್ಲಿ ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ ಮುಖ್ಯಮಂತ್ರಿ ಗಾದಿಯ ಆಕಾಂಕ್ಷಿಗಳಾಗಿದ್ದಾರೆ. ರೇಸ್ನಲ್ಲಿ ಇಬ್ಬರೂ ಇದ್ದಾರೆ. ಮುಖ್ಯಮಂತ್ರಿ ಅಭ್ಯರ್ಥಿ ಯಾರು ಎಂಬ ಬಗ್ಗೆ ಹೈಕಮಾಂಡ್ ಸೂಕ್ತ ಕಾಲದಲ್ಲಿ ನಿರ್ಧಾರ ತೆಗೆದುಕೊಳ್ಳುತ್ತದೆ. ಈ ಕುರಿತು ಬಹಿರಂಗವಾಗಿ ಮಾತನಾಡದಂತೆ ಎಲ್ಲ ನಾಯಕರಿಗೂ ಹೈಕಮಾಂಡ್ ಸೂಚಿಸಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಹೇಳಿದರು.
ನಗರದಲ್ಲಿ ಕಾಮಗ್ರೆಸ್ ಕಚೇರಿ ವೀಕ್ಷಿಸಿದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಜಾರಿ ಮಾಡಿದ್ದ ಹಲವು ಜನಪರ ಯೋಜನೆಗಳನ್ನು ನೆನಪಿಸಿಕೊಂಡರು. ಕೊಟ್ಟ ಮಾತಿನಂತೆ ಎಲ್ಲ ಭರವಸೆಗಳನ್ನು ಈಡೇರಿಸಿದ ವ್ಯಕ್ತಿ ಸಿದ್ದರಾಮಯ್ಯ. ಇದು ಕಾಂಗ್ರೆಸ್ ಸರ್ಕಾರದ ಸಾಧನೆಯಾಗಿತ್ತು ಎಂದು ನುಡಿದರು.
ಮಾರ್ಚ್ 3ರಿಂದ ಕಾಂಗ್ರೆಸ್ ರಾಜ್ಯ ಪ್ರವಾಸ
ಕಾಂಗ್ರೆಸ್ ಪಕ್ಷದಿಂದ ರಾಜ್ಯ ಪ್ರವಾಸ ಹಮ್ಮಿಕೊಳ್ಳಲಾಗಿದೆ. ಮಾರ್ಚ್ 3ರಿಂದ ಈ ಕಾರ್ಯಕ್ರಮ ಆರಂಭವಾಗಲಿದೆ. ನಾವು ಸೋತಿರುವ, ಕಡಿಮೆ ಮತ ಗಳಿಸಿರುವ 100 ಕ್ಷೇತ್ರಗಳನ್ನು ಗುರುತಿಸಿಕೊಂಡಿದ್ದೇವೆ. ನಾವು ಎಲ್ಲಿ ಸೋತಿದ್ದೆವೋ ಆ ಕ್ಷೇತ್ರಗಳನ್ನು ಮುಖ್ಯವಾಗಿ ಆಯ್ಕೆ ಮಾಡಿಕೊಂಡಿದ್ದೇವೆ ಎಂದು ಹೇಳಿದರು.
ನೂತನ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಿದ ನಂತರ ಮಾತನಾಡಿದ ಅವರು, ಮನೆ ಅಂದ ಮೇಲೆ ಸಣ್ಣಪುಟ್ಟ ಸಮಸ್ಯೆಗಳು ಇದ್ದೇ ಇರುತ್ತವೆ. ಬಿಜೆಪಿಯಲ್ಲಿ ನಮಗಿಂತ 10 ಪಟ್ಟು ಹೆಚ್ಚು ಕಿತ್ತಾಟ ನಡೆಯುತ್ತಿಲ್ಲವೇ? ಜೆಡಿಎಸ್ ಪಕ್ಷದಲ್ಲಿ ಕಿತ್ತಾಟಗಳು ಇಲ್ಲವೇ ಎಂದು ಹೇಳಿದರು. ನಮ್ಮಲ್ಲಿನ ಸಣ್ಣಪುಟ್ಟ ತಪ್ಪುಗಳನ್ನು ಮುಂದಿನ ದಿನಗಳಲ್ಲಿ ಸರಿಪಡಿಸಿಕೊಳ್ಳುತ್ತೇವೆ ಎಂದು ನುಡಿದರು.
ಕಾಂಗ್ರೆಸ್ ಪಕ್ಷದಿಂದ ರಾಜ್ಯ ಪ್ರವಾಸ ಹಮ್ಮಿಕೊಳ್ಳಲಾಗಿದೆ. ಈ ವರ್ಷ ಹೆಚ್ಚಿನ ಕಾಲಾವಕಾಶ ಇರುವುದರಿಂದ ಅಷ್ಟೂ ಕ್ಷೇತ್ರಗಳನ್ನು ಸುತ್ತುತ್ತೇವೆ. 2022ರ ವೇಳೆಗೆ ಮತ್ತೆ ಪ್ಲಾನ್ ಮಾಡಿಕೊಳ್ಳುತ್ತೇವೆ. ಪಕ್ಷದ ಬಲವರ್ಧನೆಗೆ ಮತ್ತು ಸೋತ ಕ್ಷೇತ್ರಗಳಲ್ಲಿ ಆತ್ಮಾವಲೋಕನಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡಬೇಕು ಎಂದು ಹಿರಿಯರು ತೀರ್ಮಾನಿಸಿದ್ದಾರೆ. ಮಾರ್ಚ್ 3ನೇ ತಾರೀಖಿನಿಂದ ಪ್ರವಾಸ ಆರಂಭಿಸುತ್ತೇವೆ ಎಂದು ಹೇಳಿದ್ದಾರೆ.
ಬಿಜೆಪಿಯವರಿಗೆ ಆಡಳಿತ ಮಾಡೋದು ಗೊತ್ತಿಲ್ಲ. ಆದರೆ ವಿರೋಧ ಮಾತ್ರ ಚೆನ್ನಾಗಿ ಮಾಡುತ್ತಾರೆ. ಹಿಂದೆ ಯುಪಿಎ ಸರ್ಕಾರ ಪೆಟ್ರೋಲ್ ದರವನ್ನು ಒಂದೆರೆಡು ರೂಪಾಯಿ ಹೆಚ್ಚಿಸಿದರೂ ಬಿಜೆಪಿಯವರು ದೇಶಾದ್ಯಂತ ಬೊಬ್ಬೆ ಹೊಡೆಯುತ್ತಿದ್ದರು. ನಾವು ಜಾರಿಗೆ ತಂದಿದ್ದ ಬಹುತೇಕ ಎಲ್ಲ ಯೋಜನೆಗಳನ್ನು ಬಿಜೆಪಿ ರದ್ದುಪಡಿಸಿದೆ. ಮಧ್ಯಮ ವರ್ಗದ ಜನ ದೇಶದಲ್ಲಿ ಬದುಕುವ ಪರಿಸ್ಥಿತಿಯಿಲ್ಲ. ಅಂತಹ ವಾತಾವರಣ ಈಗ ನಿರ್ಮಾಣವಾಗಿದೆ ಎಂದು ತಿಳಿಸಿದರು.
ಇದನ್ನೂ ಓದಿ: ಸಂಘಪರಿವಾರ, ಎಸ್ಡಿಪಿಐ ಒಂದೇ ನಾಣ್ಯದ ಎರಡು ಮುಖಗಳು: ರಾಮಲಿಂಗಾರೆಡ್ಡಿ
ಇದನ್ನೂ ಓದಿ: ಮಾಜಿ ಸಚಿವ ರಾಮಲಿಂಗಾರೆಡ್ಡಿಗೆ ಶುರುವಾಯ್ತು ಕೊರೊನಾ ಆತಂಕ!