ವೇಶ್ಯಾವಾಟಿಕೆ ಜಾಲದಲ್ಲಿ ಸಿಲುಕಿದ್ದ ಯುವತಿಯ ರಕ್ಷಣೆ: ಪೊಲೀಸ್ ಕಾರ್ಯಾಚರಣೆಯಿಂದ ಬಯಲಾಯ್ತು ಸತ್ಯ

ವೇಶ್ಯಾವಾಟಿಕೆ ಜಾಲದಲ್ಲಿ ಸಿಲುಕಿದ್ದ ಯುವತಿಯ ರಕ್ಷಣೆ: ಪೊಲೀಸ್ ಕಾರ್ಯಾಚರಣೆಯಿಂದ ಬಯಲಾಯ್ತು ಸತ್ಯ
ಅಪ್ಪನನ್ನು ಬಿಗಿದಪ್ಪಿಕೊಂಡು ಭಾವುಕವಾಗಿರುವ ಯುವತಿ

ಪುಣೆಯಲ್ಲಿ ಯುವಕನೊಬ್ಬನಿಂದ ಮೋಸಹೋಗಿದ್ದ ಯುವತಿ ಮನೆಗೆ ಹೇಗೆ ಹೋಗುವುದು ಎಂದು ಯೋಚಿಸಿ, ವೇಶ್ಯಾವಾಟಿಕೆಯಲ್ಲಿಯೇ ಮುಂದುವರಿದಳು. ಇದೀಗ ಈಕೆಯನ್ನು ಪೊಲೀಸರು ರಕ್ಷಿಸಿ, ಪೋಷಕರಿಗೆ ಒಪ್ಪಿಸಿದ್ದಾರೆ.

preethi shettigar

| Edited By: Ghanashyam D M | ಡಿ.ಎಂ.ಘನಶ್ಯಾಮ

Feb 28, 2021 | 7:07 PM


ಬೆಳಗಾವಿ: ಪ್ರಿಯಕರನಿಂದ ಮೋಸ ಹೋದ ಯುವತಿಯೊಬ್ಬಳು ಉತ್ತರ ಪ್ರದೇಶದಿಂದ ಮುಂಬೈಗೆ ತಲುಪಿ ವೇಶ್ಯಾವಾಟಿಕೆ ಜಾಲದಲ್ಲಿ ಸಿಲುಕಿ ನರಳಾಡುತ್ತಿದ್ದಳು. ಪಾಲಕರಿಂದ ದೂರವಾಗಿ ಕತ್ತಲಲ್ಲಿ ಬದುಕುತ್ತಿದ್ದ ಯುವತಿಯನ್ನು ಸದ್ಯ ಕರ್ನಾಟಕ ಪೊಲೀಸರು ರಕ್ಷಿಸಿದ್ದು, ಆಕೆಯನ್ನು ಪಾಲಕರ ಮಡಿಲಿಗೆ ಸೇರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಫೆಬ್ರುವರಿ 7ರ ಮಧ್ಯರಾತ್ರಿ, ಬೆಳಗಾವಿ ಸದಾಶಿವ ನಗರದ ಲಾಸ್ಟ್ ಬಸ್​ಸ್ಟಾಪ್ ಬಳಿಯ ಮನೆ ಮೇಲೆ ಎಪಿಎಂಸಿ ಠಾಣೆ ಪೊಲೀಸರು ದಾಳಿ ಮಾಡಿದ್ದರು. ಈ ಮನೆಯಲ್ಲಿ ಅನ್ಯ ರಾಜ್ಯದ ಯುವತಿಯರನ್ನು ಬಳಸಿ ಹೈಟೆಕ್ ವೇಶ್ಯಾವಾಟಿಕೆ ನಡೆಸಲಾಗುತ್ತಿದೆ ಎಂಬ ಮಾಹಿತಿ ಬಂದ ಹಿನ್ನಲೆಯಲ್ಲಿ ದಾಳಿ ನಡೆಸಿದ್ದ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ, ಇಬ್ಬರು ಯುವತಿಯರನ್ನು ರಕ್ಷಿಸಿದ್ದರು.

ರಕ್ಷಣೆ ಮಾಡಿದ ಇಬ್ಬರು ಯುವತಿಯರನ್ನು ಬೆಳಗಾವಿಯ ಮಹಿಳಾ ಸಾಂತ್ವನ ಕೇಂದ್ರಕ್ಕೆ ಕಳುಹಿಸಿಕೊಡಲಾಗಿತ್ತು. ಮಹಿಳಾ ಸಾಂತ್ವನ ಕೇಂದ್ರದಲ್ಲಿ ರಕ್ಷಣೆ ಮಾಡಿದ ಇಬ್ಬರು ಯುವತಿಯರ ಸಮಾಲೋಚನೆ ವೇಳೆ ಯುವತಿಯರ ಮೂಲ ವಿಳಾಸ ಪಡೆಯಲಾಗಿದೆ. ಈ ಪೈಕಿ ಓರ್ವ ಯುವತಿ ಉತ್ತರ ಪ್ರದೇಶದ ಗಾಜಿಯಾಬಾದ್‌‌ ಠಾಣಾ ವ್ಯಾಪ್ತಿಯ ಗ್ರಾಮದವಳಾಗಿದ್ದು, 20 ವರ್ಷದ ಈ ಯುವತಿ 2017ರಲ್ಲಿ ಕಿಡ್ನಾಪ್ ಆಗಿದ್ದಾಳೆ ಎಂದು ಗಾಜಿಯಾಬಾದ್ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು.

ಈ ಕುರಿತು ಸಂತ್ರಸ್ತ ಯುವತಿಯ ಜೊತೆ ಸಮಾಲೋಚನೆ ಮುಂದುವರಿಸಿದಾಗ ಆಕೆಯು ಪ್ರಿಯಕರನ ಮೋಹದ ಬಲೆಗೆ ಬಿದ್ದು, ಮೋಸಹೊಗಿದ್ದ ಬಗ್ಗೆ ತಿಳಿದಿದೆ. ಪ್ರಿಯಕರನ ಸಲುವಾಗಿ ಪೋಷಕರ ಜೊತೆ ಜಗಳವಾಡಿ ಮನೆ ಬಿಟ್ಟು ಬಂದಿದ್ದ ಯುವತಿಗೆ ಯುವಕ ರೈಲು ನಿಲ್ದಾಣವರೆಗೆ ಬಂದು ಕೈ ಕೊಟ್ಟು ಹೋಗಿದ್ದ. ಬಳಿಕ ಆ ಯುವತಿ ಹತ್ತಿದ್ದ ರೈಲು ತಲುಪಿದ್ದು ಮುಂಬೈಗೆ. ಮುಂಬೈನಲ್ಲಿ ಓರ್ವ ಮಹಿಳೆ ಯುವತಿಗೆ ಸಹಾಯ ಮಾಡುತ್ತೇನೆ ಎಂದು ಹೇಳಿ ಆಕೆಯನ್ನು ಡ್ಯಾನ್ಸ್ ಬಾರ್​ಗೆ‌ ಸೇರಿಸಿ, ಬಳಿಕ ಆಕೆಯನ್ನು ವೇಶ್ಯಾವಾಟಿಕೆ ದಂಧೆಗಾಗಿ ಮುಂಬೈಯಿಂದ ಪುಣೆಗೆ ಕಳಿಸಿದ್ದಳು.

prostitution

ಹೈಟೆಕ್ ವೇಶ್ಯಾವಾಟಿಕೆ ಜಾಲದ ಮೇಲೆ ದಾಳಿ ಮಾಡಿ ಯುವತಿಯನ್ನು ರಕ್ಷಿಸಿದ ಪೊಲೀಸರು

ಪುಣೆಯಲ್ಲಿ ಮತ್ತೊಬ್ಬ ಯುವಕ ಪ್ರೀತಿಸುವುದಾಗಿ ಹೇಳಿ ಮೋಸ ಮಾಡಿದ್ದ. ಮದುವೆಯಾದ ಕೆಲ ದಿನಗಳಲ್ಲಿಯೇ ಆತ ಆಕೆಗೆ ಕೈ ಕೊಟ್ಟು ಹೋಗಿದ್ದ. ಇಷ್ಟೆಲ್ಲಾ ಆದ ಮೇಲೆ ಮನೆಗೆ ಹೇಗೆ ಹೋಗುವುದು ಎಂದು ಯೋಚಿಸುತ್ತಿದ್ದ ಯುವತಿ ವೇಶ್ಯಾವಾಟಿಕೆ ದಂಧೆಯಲ್ಲೇ ಮುಂದುವರಿದು, ಬೆಳಗಾವಿಗೆ ಬಂದಳು. ಇದೀಗ ಈಕೆಯನ್ನು ಬೆಳಗಾವಿಯ ಎಪಿಎಂಸಿ ಪೊಲೀಸರು ರಕ್ಷಿಸಿದ್ದಾರೆ.

prostitution

ಮಹಿಳಾ ಕಲ್ಯಾಣ ಸಂಸ್ಥೆಯ ಚಿತ್ರಣ

ಯುವತಿ ನೀಡಿದ ಮಾಹಿತಿಯನ್ನು ಮಹಿಳಾ ಕಲ್ಯಾಣ ಸಂಸ್ಥೆಯ ಉಜ್ವಲಾ ಕೇಂದ್ರದ ಸಿಬ್ಬಂದಿ ಎಪಿಎಂಸಿ ಠಾಣೆಯ ಸಿಪಿಐ‌ ಜಾವೇದ್ ಮುಷಾಪುರಿಗೆ ತಿಳಿಸಿದರು. ಇವರು ಉತ್ತರ ಪ್ರದೇಶದ ಗಾಜಿಯಾಬಾದ್ ಪೊಲೀಸರ ಜೊತೆ ಮಾತುಕತೆ ನಡೆಸಿ ಪಾಲಕರ ಬಳಿ ವಿಚಾರಿಸಿದ್ದಾರೆ. ಆಗ ಪಾಲಕರು ಮಗಳು ಮನೆ ಬಿಟ್ಟು ಓಡಿ ಹೋಗಿದ್ದು ನಮ್ಮ ಪಾಲಿಗೆ ಅವಳು ಸತ್ತಿದ್ದಾಳೆ ಎಂದರು. ಪೊಲೀಸರ ಮೂಲಕ ಮಗಳ ಕರುಣಾಜನಕ ಕಥೆಯನ್ನು ಕೇಳಿದ ಯುವತಿಯ ಪೋಷಕರು ಗಾಜಿಯಾಬಾದ್ ಪೊಲೀಸರ ಜೊತೆ ಬೆಳಗಾವಿಯ ಎಪಿಎಂಸಿ ಠಾಣೆಗೆ ಆಗಮಿಸಿದರು. ಎಪಿಎಂಸಿ ಠಾಣೆ ಪೊಲೀಸರು ಉತ್ತರ ಪ್ರದೇಶ ಪೊಲೀಸರ ಸಮ್ಮುಖದಲ್ಲಿ ಯುವತಿಯ ತಂದೆಗೆ ಮಗಳನ್ನು ಹಸ್ತಾಂತರಿಸಿದ್ದಾರೆ. ಸದ್ಯ ನೊಂದ ಯುವತಿ ಪೋಷಕರ ಬಳಿ ಸೇರಿದ್ದು ನೆಮ್ಮದಿಯಿಂದ ಇದ್ದಾಳೆ‌.

prostitution

ಬೆಳಗಾವಿಯ ಎಪಿಎಂಸಿ ಠಾಣೆಯ ದೃಶ್ಯ

ಅಪ್ರಾಪ್ತ ವಯಸ್ಸಿನಲ್ಲಿ ಪ್ರೀತಿ ಪ್ರೇಮ ಪ್ರಣಯ ಅಂತಾ ಮೋಸದ ಬಲೆಗೆ ಸಿಲುಕಿ ವೇಶ್ಯಾವಾಟಿಕೆ ಕೂಪಕ್ಕೆ ತಳ್ಳಲ್ಪಟ್ಟಿದ್ದ ಯುವತಿ ರಕ್ಷಿಸಿ ಪೋಷಕರ ಮಡಿಲಿಗೆ ಸೇರಿಸಿದ ಬೆಳಗಾವಿಯ ಎಪಿಎಂಸಿ ಪೊಲೀಸರು ಹಾಗೂ ಮಹಿಳಾ ಕಲ್ಯಾಣ ಸಂಸ್ಥೆಯ ಸಿಬ್ಬಂದಿ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಮೈಸೂರಿನಲ್ಲಿ ಗೃಹಿಣಿ ಮೇಲೆ ಅತ್ಯಾಚಾರವೆಸಗಿ ಕೊಲೆ? ಬಾಗಲಕೋಟೆಯಲ್ಲಿ ತಹಶೀಲ್ದಾರ್ ಮೇಲೆ ಸೀಮೆ ಎಣ್ಣೆ ಸುರಿದ ತಂದೆ-ಮಗ


Follow us on

Related Stories

Most Read Stories

Click on your DTH Provider to Add TV9 Kannada