ಮೈಸೂರಿನಲ್ಲಿ ಗೃಹಿಣಿ ಮೇಲೆ ಅತ್ಯಾಚಾರವೆಸಗಿ ಕೊಲೆ? ಬಾಗಲಕೋಟೆಯಲ್ಲಿ ತಹಶೀಲ್ದಾರ್ ಮೇಲೆ ಸೀಮೆ ಎಣ್ಣೆ ಸುರಿದ ತಂದೆ-ಮಗ
ಬಾಗಲಕೋಟೆ ಜಿಲ್ಲೆ ಜಮಖಂಡಿಯಲ್ಲಿ ಆಸ್ತಿಗಾಗಿ ಸಹೋದರರ ನಡುವೆ ಕಿತ್ತಾಟ ಶುರುವಾಗಿ ಕೊಲೆಗೆ ಯತ್ನಿಸಿದ ಘಟನೆ ನಡೆದಿದೆ. ತಮ್ಮ ಹೆಸರಿಗೆ ಆಸ್ತಿ ಪತ್ರ ಮಾಡದ ಹಿನ್ನೆಲೆಯಲ್ಲಿ ಗ್ರೇಡ್ 2 ತಹಶೀಲ್ದಾರನ ಮೇಲೆ ಸೀಮೆ ಎಣ್ಣೆ ಸುರಿದು ಕೊಲೆಗೆ ಯತ್ನಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಮೈಸೂರು: ಕಲ್ಲಿನಿಂದ ಜಜ್ಜಿ ಗೃಹಿಣಿಯೊಬ್ಬರ ಹತ್ಯೆ ಮಾಡಿರುವ ಘಟನೆ ಜಿಲ್ಲೆಯ ನಂಜನಗೂಡು ತಾಲೂಕಿನ ಅಡಕನಹುಂಡಿ ಬಳಿ ನಡೆದಿದೆ. ಇದೇ ಗ್ರಾಮದ ಕೈಗಾರಿಕಾ ಪ್ರದೇಶದಲ್ಲಿ ಗೃಹಿಣಿಯ ಶವ ಪತ್ತೆಯಾಗಿದೆ. ಹದಿನಾರು ಮೋಳೆ ಗ್ರಾಮದ ಪಲ್ಲವಿ (26) ಮೃತ ದುರ್ದೈವಿ. ಗೃಹಿಣಿ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಸ್ಥಳದಲ್ಲಿ 5ಕ್ಕೂ ಹೆಚ್ಚು ಬಿಯರ್ ಬಾಟಲ್‌ಗಳು ಪತ್ತೆಯಾಗಿವೆ. ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಪಲ್ಲವಿ ಕೆಲಸ ಮುಗಿಸಿ ವಾಪಸಾಗುವಾಗ ಗೃಹಿಣಿಯನ್ನು ದುಷ್ಕರ್ಮಿಗಳು ಹತ್ಯೆಗೈದಿದ್ದಾರೆ ಎನ್ನಲಾಗುತ್ತಿದೆ. ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಪತಿ ಬುದ್ಧಿವಾದ ಹೇಳಿದ್ದಕ್ಕೆ ಪತ್ನಿ ಆತ್ಮಹತ್ಯೆ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಗೃಹಿಣಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಮತ್ತೊಂದು ಘಟನೆ ಮೈಸೂರಿನ ವಿಜಯನಗರ ಬಡಾವಣೆಯ 4ನೇ ಹಂತದಲ್ಲಿ ನಡೆದಿದೆ. ನಂದಿನಿ (28) ಆತ್ಮಹತ್ಯೆಗೆ ಶರಣಾದ ಗೃಹಿಣಿ. ಮಕ್ಕಳು ಗಲಾಟೆ ಮಾಡುತ್ತಿದ್ದ ವಿಚಾರವಾಗಿ ದಂಪತಿ ನಡುವೆ ಜಗಳವಾಗಿತ್ತು. ಈ ವೇಳೆ ಗಂಡ ಬುದ್ಧಿವಾದ ಹೇಳಿದ್ದರಿಂದ ಬೇಸತ್ತು ನಂದಿನಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಮೂಲತಃ ಚಿಕ್ಕಮಂಗಳೂರಿನ ನಿವಾಸಿಯಾಗಿದ್ದ ನಂದಿನಿ. 5 ವರ್ಷಗಳ ಹಿಂದೆ ಮೈಸೂರಿನ ಅಭಿಲಾಷ್ ಎಂಬುವವರನ್ನು ವಿವಾಹವಾಗಿದ್ದರು. ಮೃತ ನಂದಿನಿಯವರಿಗೆ ಇಬ್ಬರು ಮಕ್ಕಳಿದ್ದಾರೆ. ಮಕ್ಕಳು ಗಲಾಟೆ ಮಾಡುತ್ತಿದ್ದಾಗ ಅವರನ್ನು ಸಮಾಧಾನಪಡಿಸುವಂತೆ ಗಂಡ ಬುದ್ಧಿವಾದ ಹೇಳಿದ್ದಕ್ಕೆ ಇಂತಹ ಅನಾಹುತ ಮಾಡಿಕೊಂಡಿದ್ದಾರೆ. ಘಟನೆ ಸಂಬಂಧ ವಿಜಯನಗರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ಆಸ್ತಿಗಾಗಿ ಸಹೋದರರ ನಡುವೆ ವಿವಾದ ಇನ್ನು ಬಾಗಲಕೋಟೆ ಜಿಲ್ಲೆ ಜಮಖಂಡಿಯಲ್ಲಿ ಆಸ್ತಿಗಾಗಿ ಸಹೋದರರ ನಡುವೆ ಕಿತ್ತಾಟ ಶುರುವಾಗಿ ಕೊಲೆಗೆ ಯತ್ನಿಸಿದ ಘಟನೆ ನಡೆದಿದೆ. ತಮ್ಮ ಹೆಸರಿಗೆ ಆಸ್ತಿ ಪತ್ರ ಮಾಡದ ಹಿನ್ನೆಲೆಯಲ್ಲಿ ಗ್ರೇಡ್ 2 ತಹಶೀಲ್ದಾರನ ಮೇಲೆ ಸೀಮೆ ಎಣ್ಣೆ ಸುರಿದು ಕೊಲೆಗೆ ಯತ್ನಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಜಮಖಂಡಿ ನಗರದ ತಹಶೀಲ್ದಾರ್ ಕಚೇರಿಯಲ್ಲಿ ಇಂತಹದೊಂದು ಘಟನೆ ನಡೆದಿದೆ. ಫೆಬ್ರವರಿ 20 ರಂದು ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ರೈತ ಲಕ್ಷ್ಮಣ ಕಿತ್ತೂರು(70) ಹಾಗೂ ಮಗ ಬಸವರಾಜ ಕಿತ್ತೂರು(48) ಎಂಬುವವರಿಂದ ಈ ಕೃತ್ಯ ನಡೆದಿದೆ. ಇವರಿಬ್ಬರು ಗ್ರೇಡ್ 2 ತಹಶೀಲ್ದಾರ್ ನಾಗಪ್ಪ ಬಿರಡಿ ಮೇಲೆ ಸೀಮೆ ಎಣ್ಣೆ ಸುರಿದು ಕೊಲೆಗೆ ಯತ್ನಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಈ ವೇಳೆ ತಹಶೀಲ್ದಾರ್ ಹೊರಗಡೆ ಓಡಿ ತಮ್ಮ ಪ್ರಾಣ ಉಳಿಸಿಕೊಂಡಿದ್ದಾರಂತೆ. ಈ ಸಂಬಂಧ ತಹಶೀಲ್ದಾರ್ ಅವರಿಂದ ಜಮಖಂಡಿ ನಗರ ಪೊಲೀಸ್ ಠಾಣೆಯಲ್ಲಿ ಫೆಬ್ರವರಿ 22 ರಂದು ದೂರು ದಾಖಲಾಗಿದೆ. ಸದ್ಯ ಪೊಲೀಸರು ತಂದೆ ಮಗನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಸೆಕ್ಷನ್ 353, 307, 504, 506, 34 ಅಡಿಯಲ್ಲಿ ಕೇಸ್ ದಾಖಲಾಗಿದೆ.
ಜಮಖಂಡಿ ತಾಲ್ಲೂಕಿನ ಮೈಗೂರು ಗ್ರಾಮದ ಸರ್ವೆ ನಂ:190/2 ರಲ್ಲಿನ 4 ಎಕರೆ 16 ಗುಂಟೆ ಜಾಗವನ್ನು ತಮ್ಮ ಹೆಸರಿಗೆ ನೊಂದಾಯಿಸುವಂತೆ ಲಕ್ಷ್ಮಣ2016 ರಿಂದಲೂ ಅರ್ಜಿ ಸಲ್ಲಿಸಿ ಪ್ರಯತ್ನ ನಡೆಸಿದ್ದರು. ಜಮೀನು ನಮಗೆ ಸೇರಬೇಕು ಅಂತ ಲಕ್ಷ್ಮಣ ಅರ್ಜಿ ಕೊಟ್ಟಿದ್ದರು. ದಾಖಲೆ ಪರಿಶೀಲಿಸಿ ಇದು ತಮಗೆ ಬರೋದಿಲ್ಲ ಎಂದು ಅಧಿಕಾರಿ ನಾಗಪ್ಪ ಬಿರಡಿ ವಜಾ ಮಾಡಿದ್ದರು. 2016 ರಲ್ಲಿ ಅವಧಿಯಲ್ಲಿ ಕಂದಾಯ ನಿರೀಕ್ಷಕರು, ಶಿರಸ್ತೆದಾರನಾಗಿ ನಾಗಪ್ಪ ಬಿರಡಿ ಕರ್ತವ್ಯ ಸಲ್ಲಿಸಿದ್ದರು. ಇದರಿಂದ ಸೇಡು ಇಟ್ಟುಕೊಂಡಿದ್ದ ಲಕ್ಷ್ಮಣ ಕಿತ್ತೂರು ಫೆಬ್ರವರಿ 20ರಂದು ಮಗನ ಸಮೇತ ಚೀಲದಲ್ಲಿ ಸೀಮೆ ಎಣ್ಣೆ ಇಟ್ಟುಕೊಂಡು ಬಂದಿದ್ದ. ಬಳಿಕ ಸೀಮೆ ಎಣ್ಣೆ ಎಸೆದು ಕಡ್ಡಿ ಗೀರಲು ತಂದೆ ಮಗ ಮುಂದಾಗಿದ್ದು ಕೊಲೆ ಮಾಡಲು ಯತ್ನಿಸಿದ್ದರು ಎಂದು ನಾಗಪ್ಪ ಬಿರಡಿ ತಿಳಿಸಿದ್ದಾರೆ.
ಇದನ್ನೂ ಓದಿ: ಬಂಗಾರಪೇಟೆಯಲ್ಲಿ ತಹಶೀಲ್ದಾರ್ಗೆ ಚಾಕು ಇರಿದ ನಿವೃತ್ತ ಶಿಕ್ಷಕ, ತಹಶೀಲ್ದಾರ್ ಸಾವು