ಹಾವೇರಿ: ನಾಯಕತ್ವದ ಚರ್ಚೆಯನ್ನ ಹಾದಿ ಬೀದಿಯಲ್ಲಿ ಮಾಡುವಂಥದ್ದಲ್ಲ. ಶಾಸಕಾಂಗ ಸಭೆಗಳನ್ನ ಕರೆಯುತ್ತದೆ. ಅಲ್ಲಿ ಚರ್ಚೆ ನಡೆಸಬೇಕು. ಅದನ್ನು ಬಿಟ್ಟು ದಾರಿಯಲ್ಲಿ ಮಾತನಾಡಿದರೆ ನಾಯಕತ್ವ ಬದಲಾವಣೆ ಆಗೋದಿಲ್ಲ ಎಂದು ಹಾವೇರಿ ಜಿಲ್ಲೆಯ ಹಿರೇಕೆರೂರು ಪಟ್ಟಣದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಹೇಳಿಕೆ ನೀಡಿದರು. ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಅವರ ಆಗಸ್ಟ್ನಲ್ಲಿ ನಾಯಕತ್ವ ಬದಲಾವಣೆಯಾಗಲಿದೆ ಎಂಬ ಹೇಳಿಕೆಯ ಕುರಿತಂತೆ ಪ್ರತಿಕ್ರಿಯಿಸಿದ ಅವರು, ನಾಯಕತ್ವ ಬದಲಾವಣೆಯ ಕುರಿತಂತೆ ಯಾವುದೇ ಗೊಂದಲಗಳು ಬೇಡ, ನಾಯಕತ್ವ ಬದಲಾವಣೆ ಅಥವಾ ಮುಖ್ಯಮಂತ್ರಿ ಬದಲಾವಣೆ ಚರ್ಚೆ ಬಿಜೆಪಿಯಲ್ಲಿ ಇಲ್ಲ ಎಂದು ಸ್ಪಷ್ಟನೆ ನೀಡಿದರು. ಸಿಎಂ ನಿವಾಸದ ಹಿಂದೆ ನೂರಾರು ಕೋಟಿ ರೂಪಾಯಿ ಅವ್ಯವಹಾರ ನಡೆಯುತ್ತದೆ ಎಂಬ ಯತ್ನಾಳ್ ಅವರ ಆರೋಪಕ್ಕೆ ಪ್ರತಿಯಾಗಿ, ಯತ್ನಾಳ್ ಅವರ ಹೇಳಿಕೆಗಳಿಗೆ ನಾನು ಹೆಚ್ಚು ಗೌರವಗಳನ್ನು ಕೊಡುವುದಿಲ್ಲ ಎಂದು ಕಟೀಲ್ ಹೇಳಿದರು.
ಸಚಿವ ಸಿ.ಪಿ.ಯೋಗೇಶ್ವರ್ ಅವರು ಅಂಬಾರಿ ಹೊರುವ ಹೇಳಿಕೆಯ ವಿಚಾರದ ಕುರಿತಂತೆ ಪ್ರತಿಕ್ರಿಯಿಸಿದ ಅವರು, ಯೋಗೇಶ್ವರ್ ಅವರು ಯಾವ ರೀತಿಯ ಭಾವನೆಯಲ್ಲಿ ಮಾತನಾಡಿದ್ದಾರೆ ಗೊತ್ತಿಲ್ಲ. ಅದರ ವಿವರಣೆಯನ್ನು ಕೇಳಿ ಪಡೆಯುತ್ತೇನೆ. ನಮ್ಮ ಸರಕಾರ, ನಮ್ಮ ಮಂತ್ರಿಗಳು ಹಾಗೂ ಶಾಸಕರು ಮಾಧ್ಯಮಗಳ ಮುಂದೆ ಅನಗತ್ಯ ವಿಚಾರಗಳನ್ನು ಮಾತನಾಡಬಾರದು ಎಂದು ಹೇಳಿದರು.
ಪಕ್ಷ ಬಿಟ್ಟು ಹೋದವರಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಆಹ್ವಾನ ವಿಚಾರವನ್ನು ಛೇಡಿಸಿದ ಅವರು, ಕಾಂಗ್ರೆಸ್ ಉಳಿಸಿಕೊಳ್ಳಲು ಎಲ್ಲಾ ರೀತಿಯ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಕಾಂಗ್ರೆಸ್ ಮುಳುಗುವ ಹಡಗು. ಅದರಲ್ಲಿ ತೂತು ಬಿದ್ದಿದೆ, ನೀರು ಒಳಗಡೆ ಸೇರ್ತಾ ಇದೆ. ಯಾವಾಗ ಮುಳುಗತ್ತದೆಂದು ಗೊತ್ತಿಲ್ಲ. ಹಾಗಾಗಿ ಯಾರಾದ್ರೂ ರಕ್ಷಿಸಿ ಅಂತ ಕೈಚಾಚಿ ಕೇಳ್ತಾ ಇದ್ದಾರೆ. ಇವತ್ತು ಮುಳುಗುವ ಹಡಗನ್ನು ಹತ್ತುವ ಜನರಿಲ್ಲ. ಹಾಗಾಗಿ ಯಾವ ಪಾರ್ಟಿಯಲ್ಲಿದ್ದರೂ ಒಂದು ಸಾರಿ ಬಂದು ನಮ್ಮನ್ನು ರಕ್ಷಣೆ ಮಾಡಿ ಅಂತಾ ಬೇಡುತ್ತಾ ಇದ್ದಾರೆ ಎಂದು ಕುಟುಕಿದರು.
ಪ್ರಧಾನಿ ದುರಂಹಕಾರಿ ಎಂಬ ಕಾಂಗ್ರೆಸ್ನವರ ಹೇಳಿಕೆ ವಿಚಾರವನ್ನು ತಿರಸ್ಕರಿಸಿದ ಅವರು ಪ್ರಧಾನ ಮಂತ್ರಿಗಳ ಬಗ್ಗೆ ಮಾತನಾಡುವಾಗ ಎಚ್ಚರಿಕೆ ತೆಗೆದುಕೊಳ್ಳಬೇಕು. ಅವರದ್ದೇ ಪಾರ್ಟಿಯ ಸಿದ್ದರಾಮಯ್ಯನವರು ಏನು ಅನ್ನೋದನ್ನ ಅವರೇ ಹೇಳಬೇಕು. ಕಾಂಗ್ರೆಸ್ನವರ ದುರಹಂಕಾರದಿಂದ ಲೋಕಸಭೆಯಲ್ಲಿ ವಿರೋಧ ಪಕ್ಷದ ಯೋಗ್ಯತೆಯನ್ನೂ ಜನರು ಅವರಿಗೆ ಕೊಟ್ಟಿಲ್ಲ ಎಂದು ಹೇಳಿದರು.
ಮೇಕೆ ದಾಟು ವಿಚಾರದಲ್ಲಿ ರಾಜ್ಯ ಸರ್ಕಾರದ ನಡೆಯನ್ನು ಸಮರ್ಥಿಸಿಕೊಂಡ ನಳಿನ್ ಕುಮಾರ್, ಈಗಾಗಲೆ ಸರಕಾರ ಮತ್ತು ಮುಖ್ಯಮಂತ್ರಿಗಳು ಅದರ ವಿಚಾರದಲ್ಲಿ ಏನು ಬೇಕೋ ಅದನ್ನ ಮಾಡಿದ್ದಾರೆ. ಕರ್ನಾಟಕ ಸರಕಾರ ಮೇಕೆದಾಟು ವಿಚಾರದಲ್ಲಿ ಸ್ಪಷ್ಟವಾದ ಧೋರಣೆ ತೋರಿದೆ ಎಂದು ಹೇಳಿದರು.
ಇದನ್ನೂ ಓದಿ:ದುಷ್ಟರ ಸಂಹಾರವಾಗಬೇಕು, ಭ್ರಷ್ಟರ ಅಂತ್ಯವಾಗಬೇಕು, ನಾನು ಸಿಎಂ ಆಗಬೇಕು: ಶಾಸಕ ಯತ್ನಾಳ್
(There is no change in Karnataka BJP leadership says Nalin Kumar Kateel)