ಬೆಳಗಾವಿ, (ಅಕ್ಟೋಬರ್ 03): ಹಳೆ ಹುಬ್ಬಳ್ಳಿ ಗಲಭೆ (Hubballi Riots) ಪ್ರಕರಣವನ್ನೇ ಕೈಬಿಡಲು ರಾಜ್ಯ ಸರ್ಕಾರ ಸಿದ್ಧತೆ ನಡೆಸಿದೆಯಾ ಎಂಬ ಪ್ರಶ್ನೆ ಎದುರಾಗಿದೆ. 2022ರ ಏಪ್ರಿಲ್ 16ರಂದು ನಡೆದ ಹುಬ್ಬಳ್ಳಿ ಗಲಭೆ ಪ್ರಕರಣದಲ್ಲಿ ಸುಮಾರು 40 ಮಂದಿಯನ್ನು ಬಂಧಿಸಲಾಗಿತ್ತು. ಇದೀಗ ಈ ಪ್ರಕರಣವನ್ನು ಕೈಬಿಡುವ ಬಗ್ಗೆ ಪ್ರಕ್ರಿಯೆಗಳು ನಡೆಯತ್ತಿವೆ. ಇದಕ್ಕೆ ಇಂಬು ನೀಡುವಂತೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಹುಬ್ಬಳ್ಳಿ ಗಲಭೆಗೆ ಸಂಬಂಧಿಸಿ ಗೃಹ ಇಲಾಖೆಗೆ ಪತ್ರ ಬರೆದು, ಅಮಾಯಕರನ್ನು ಬಿಡುವ ವಿಚಾರದ ಮನವಿಯನ್ನು ಮಾಡಿದ್ದಾರೆ ಎಂದು ತಿಳಿದುಬಂದಿದೆ. ಇದರ ಬೆನ್ನಲ್ಲೇ ಇದಕ್ಕೆ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದು, ಪ್ರಕರಣಗಳನ್ನ ಹಿಂಪಡೆಯುವ ಯಾವುದೇ ಪ್ರಸ್ತಾವನೆ ನಮ್ಮ ಮುಂದೆ ಇಲ್ಲ ಎಂದು ಸ್ಪಷ್ಟಪಡಿಸಿದರು.
ಡಿಸಿಎಂ ಡಿ.ಕೆ. ಶಿವಕುಮಾರ್ ಗೃಹ ಇಲಾಖೆಗೆ ಪತ್ರ ಬರೆದಿರುವ ವಿಚಾರವಾಗಿ ಇಂದು (ಅಕ್ಟೋಬರ್ 03) ಸಿಎಂ ಸಿದ್ದರಾಮಯ್ಯ, ಬೆಳಗಾವಿಯ ಸಾಂಬ್ರಾ ವಿಮಾನದ ನಿಲ್ದಾಣದಲ್ಲಿ ಪ್ರತಿಕ್ರಿಯಿಸಿದ್ದು, ವಕೀಲರು, ಹೋರಾಟಗಾರರು ಒಂದು ಪತ್ರ ಬರೆದಿದ್ದಾರೆ. ಅದರ ಮೇಲೆ ಡಿಕೆ ಶಿವಕುಮಾರ್ ಪತ್ರ ಬರೆದಿದ್ದಾರೆ. ಆ ಪತ್ರವನ್ನ ನಾನು ಇವತ್ತೇ ನೋಡಿದ್ದು. ಆದ್ರೆ, ಪ್ರಕರಣವನ್ನು ಹಿಂಪಡೆಯುವ ಯಾವುದೇ ಪ್ರಸ್ತಾವನೆ ಸರ್ಕಾರದ ಮುಂದೆ ಇಲ್ಲ ಎಂದು ಹೇಳಿದರು. ಈ ಮೂಲಕ ಹುಬ್ಬಳ್ಳಿ ಗಲಭೆ ಪ್ರಕರಣದ ಅಂತೆ ಕಂತೆಗಳಿಗೆ ತೆರೆ ಎಳೆದರು.
ಇದನ್ನು ಓದಿ: ಕೆಜಿಹಳ್ಳಿ, ಡಿಜೆಹಳ್ಳಿ ಗಲಭೆ ಪ್ರಕರಣ; ಮ್ಯಾಜಿಸ್ಟ್ರೇಟ್ ತನಿಖಾ ವರದಿ ಅಂಗೀಕರಿಸಿದ ರಾಜ್ಯ ಸರ್ಕಾರ
ಇದೇ ವೇಳೆ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ಗಲಭೆ ಹೆಚ್ಚಾಗುತ್ತೆ ಎಂಬ ಆರೋಪ ವಿಪಕ್ಷಗಳ ಆರೋಪಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಬಿಜೆಪಿಯವರಿಗೆ ಆರೋಪ ಮಾಡುವುದು ಬಿಟ್ಟು ಬೇರೆ ಏನು ಕೆಲಸ ಇದೆ? ಆರೋಪ ಮಾಡುವುದೇ ಅವರ ಕೆಲಸ, ಎಲ್ಲವೂ ಸುಳ್ಳು ಆರೋಪಗಳು. ಕೋಮು ಗಲಭೆ ಎಲ್ಲಿ ಆಗಿದೆ. ಶಿವಮೊಗ್ಗ ನಗರದಲ್ಲಿ ಯಾರೋ ದುಷ್ಕರ್ಮಿಗಳು ಕಲ್ಲು ಎಸೆದಿದ್ದಾರೆ. ಆರೋಪಿಗಳನ್ನು ಬಂಧಿಸಿ ಕಾನೂನಿನಡಿ ಪೊಲೀಸರು ಕ್ರಮ ಕೈಗೊಳ್ಳುತ್ತಿದ್ದಾರೆ ಎಂದು ಬಿಜೆಪಿ ನಾಯಕರ ಆರೋಪಕ್ಕೆ ತಿರುಗೇಟು ನೀಡಿದರು.
ನಾವು ಕೋಮುಗಲಭೆಯನ್ನು ತಕ್ಷಣ ಹತ್ತಿಕ್ಕುವ ಕೆಲಸ ಮಾಡುತ್ತೇವೆ. ಯಾರೇ ಕೋಮುಗಲಭೆ ಮಾಡಿದರೂ ಅವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ. ಬಿಜೆಪಿಯವರು ಪ್ರತಿಭಟನೆ ಮಾಡಲಿ, ಅವರ ಪ್ರತಿಭಟನೆಗೆ ಅಡ್ಡಿ ಮಾಡುವುದಿಲ್ಲ. ಆದ್ರೆ, ಯಾವುದೇ ಪ್ರತಿಭಟನೆ ಶಾಂತಿಯುತವಾಗಿ ಆಗಬೇಕು ಎಂದರು.
ಮತ್ತಷ್ಟು ಕರ್ನಾಟಕದ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:50 pm, Tue, 3 October 23