ಧಾರವಾಡ: ಚುನಾವಣೆಯಲ್ಲಿ 5 ಗ್ಯಾರಂಟಿಗಳ ಘೋಷಿಸಿ (Guarantee Scheme) ಜನರಿಂದ ಮತ ಪಡೆದಿದ್ದ ಕಾಂಗ್ರೆಸ್, ಈಗ ರಾಜ್ಯದ ಜನರಿಗೆ ಮೋಸ ಮಾಡಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಹೇಳಿದ್ದಾರೆ. ಧಾರವಾಡದಲ್ಲಿಂದು (Dharwad) ಮಾತನಾಡಿದ ಅವರು, ಕಾಂಗ್ರೆಸ್ ಹೇಳಿದ್ದೊಂದು, ಈಗ ಮಾಡ್ತಿರುವುದು ಇನ್ನೊಂದು. ಕಾಂಗ್ರೆಸ್ ಈ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತರಲು ಹಾಕುತ್ತಿರುವ ಷರತ್ತುಗಳನ್ನು ನೋಡಿದರೆ ಈ ಐದು ಗ್ಯಾರಂಟಿಗಳಿಗೆ ಯಾವ ವಾರಂಟಿಯೂ ಇಲ್ಲ ಎಂದರು.
ಕಾಂಗ್ರೆಸ್ ನಾಯಕರು ಚುನಾವಣೆ ವೇಳೆ ಹೇಳಿದಂತೆ 200 ಯುನಿಟ್ ವಿದ್ಯುತ್ ಅನ್ನು ಏಕೆ ಫ್ರೀ ಕೊಡ್ತಿಲ್ಲ..? ಎಂದು ಪ್ರಶ್ನಿಸಿದ ಪ್ರಲ್ಹಾದ್ ಜೋಶಿ, ಮುಖ್ಯಮಂತ್ರಿಗಳು ರಾಜ್ಯದ ಜನರಿಗೆ ಈ ಬಗ್ಗೆ ಸ್ಪಷ್ಟ ಉತ್ತರ ಕೊಡಬೇಕು ಎಂದರು.
ಅಧಿಕಾರದ ಮದದಲ್ಲಿ ಕಾಂಗ್ರೆಸ್ ನಾಯಕರು ಅಹಂಕಾರ, ಉಡಾಫೆ ಮಾತುಗಳನ್ನಾಡಿದ್ರೆ ಜನರು ತಕ್ಕ ಪಾಠ ಕಲಿಸ್ತಾರೆ. ದೇಶದಲ್ಲಿ ಇವತ್ತು ಕಾಂಗ್ರೆಸ್ ಪರಿಸ್ಥಿತಿ ಏನಾಗಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಈಗ ಕರ್ನಾಟಕದಲ್ಲಿ ಗ್ಯಾರಂಟಿಗಳ ಆಮಿಷ ಒಡ್ಡಿ ಅಧಿಕಾರಕ್ಕೆ ಬಂದಿರಬಹುದು. ಅಂದಮಾತ್ರಕ್ಕೆ ಬೊಮ್ಮಾಯಿ ಅವರೇ ನಿಮಗೂ ಫ್ರೀ ಕೊಡ್ತೇವೆ ಎಂಬ ಅಹಂಕಾರದ ಮಾತುಗಳನ್ನಾಡಿದ್ದಾರೆ. ಮಹಾರಾಷ್ಟ್ರದಂತಹ ರಾಜ್ಯದಿಂದ ಕಾಂಗ್ರೆಸ್ ಒಂದೇ ಒಂದು ಸಂಸದ ಸ್ಥಾನವನ್ನೂ ಪ್ರತಿನಿಧಿಸಿಲ್ಲ. ಇಂತಹ ಪರಿಸ್ಥಿತಿಯಲ್ಲಿರುವ ಕಾಂಗ್ರೆಸ್ ದುರಹಂಕಾರದ ಮಾತುಗಳನ್ನಾಡೋದನ್ನ ಬಿಡಲಿ, ಜನರಿಗೆ ಹೇಳಿದ್ದನ್ನ ಕೊಡಲಿ ಎಂದು ಆಗ್ರಹಿಸಿದ್ದಾರೆ.
ಅನ್ನಭಾಗ್ಯ ಯೋಜನೆಯಲ್ಲಿ 10 ಕೆ.ಜಿ. ಅಕ್ಕಿ ಕೊಡ್ತೇವೆ ಎಂದು ಹೇಳಿದ್ದರು. ಈಗಾಗಲೇ ಕೇಂದ್ರ ಸರ್ಕಾರ 5 ಕೆ.ಜಿ ಅಕ್ಕಿಯನ್ನ ಬಿಪಿಎಲ್ ಕಾರ್ಡುದಾರರಿಗೆ ಕೊಡುತ್ತಿದೆ. ಕೇಂದ್ರ ಸರ್ಕಾರ ನೀಡುತ್ತಿರುವುದನ್ನ ಹೊರತುಪಡಿಸಿ ರಾಜ್ಯ ಸರ್ಕಾರ 10 ಕೆ.ಜಿ ಅಕ್ಕಿ ನೀಡುತ್ತಾ? ಸಿಎಂ ಇದಕ್ಕೆ ಉತ್ತರ ಕೊಡಬೇಕು. ಅಥವಾ ಕೇಂದ್ರ ಸರ್ಕಾರ ನೀಡುವ 5 ಕೆ.ಜಿ. ಸೇರಿ 10 ಕೆ.ಜಿ ಅಕ್ಕಿ ವಿತರಿಸುವುದಾದರೆ, ಕಾಂಗ್ರೆಸ್ ಸರ್ಕಾರ 10 ಕೆ.ಜಿ ಅಕ್ಕಿ ಕೊಟ್ಟಂತೆ ಹೇಗಾಗುತ್ತೆ ಎಂದು ಪ್ರಲ್ಹಾದ್ ಜೋಶಿ ಪ್ರಶ್ನಿಸಿದ್ದಾರೆ.
Also read: ಹುಬ್ಬಳ್ಳಿ-ಧಾರವಾಡ ಬೈಪಾಸ್ 6 ಲೈನ್ ರಸ್ತೆ ಮೊದಲ ಹಂತ ಡಿಸೆಂಬರ್ ಒಳಗೆ ಪೂರ್ಣಗೊಳ್ಳಲಿದೆ
ಗೃಹ ಲಕ್ಷ್ಮೀ ಯೋಜನೆಯಲ್ಲಿ 2,000 ರೂಪಾಯಿ ವಿತರಿಸುವುದಕ್ಕೆ ಅರ್ಜಿ ಹಾಕಿ ಅಂತಾ ಕಾಂಗ್ರೆಸ್ ಈಗ ಹೇಳುತ್ತೆ. ಮೊದಲೇ ಏಕೆ ಹೇಳಲಿಲ್ಲ. ಮೊದಲ ಕ್ಯಾಬಿನೆಟ್ ನಲ್ಲೇ ಜಾರಿ ಮಾಡ್ತೇವೆ ಎಂದವರು ಈಗ ಅಗಸ್ಟ್ ನಿಂದ ಅಂತಿದ್ದಾರೆ. ಮೊದಲ ಕ್ಯಾಬಿನೆಟ್ ನಲ್ಲಿ ತಾತ್ವಿಕ ಒಪ್ಪಿಗೆ ಕೊಟ್ಟಿದ್ದೇವೆ ಎಂದು ನೆಪ ಹೇಳಿ ಸಮಯ ತಳ್ಳುವುದು ಕಾಂಗ್ರೆಸ್ ನ ಪ್ಲಾನ್. ಕಾಂಗ್ರೆಸ್ ತನ್ನ ಪ್ರಣಾಳಿಕೆ ವೇಳೆಯೇ ಘೋಷಿಸಿದ್ದು ತಾತ್ವಿಕ ಒಪ್ಪಿಗೆಯಂತೆಯೇ ಸರಿ. ಅಧಿಕಾರಕ್ಕೆ ಬಂದ ಮೇಲೆ ಅದನ್ನ ಜನರಿಗೆ ತಲುಪಿಸುವತ್ತ ಕಾಂಗ್ರೆಸ್ ಕಾರ್ಯನಿರತವಾಗಬೇಕು.
ಯುವನಿಧಿ ಯೋಜನೆಯು 2022-23 ನೇ ಸಾಲಿನ ಪದವೀಧರರಿಗೆ ಮಾತ್ರ ಎಂದು ಹೇಳಿದ್ದಾರೆ. ಹಿಂದೆ ಪದವಿ ಪಡೆದವರೆಲ್ಲ ನಿರುದ್ಯೋಗಿಗಳಿಲ್ಲವೇನು..? ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಪ್ರಶ್ನಿಸಿದ್ದಾರೆ. ಅದರಲ್ಲೂ 6 ತಿಂಗಳ ವರೆಗೆ ಯಾವುದೇ ಉದ್ಯೋಗ ಸಿಗದಿದ್ದವರಿಗೆ ಮಾತ್ರ ಯುವನಿಧಿ ಕೊಡಲಾಗುವುದು ಎಂದಿದ್ದಾರೆ. ಅಂದರೆ ಡಿಗ್ರಿ ಮುಗಿಸಿದ ಬಳಿಕ ಯುವಕರು ಯುವನಿಧಿಗಾಗಿ 6 ತಿಂಗಳು ಕಾಯಬೇಕು. ಈ ವರ್ಷ ಈ ಯುವನಿಧಿ ಯೋಜನೆ ಜಾರಿಗೆ ಬರಲ್ಲ ಅನ್ನೋ ರೀತಿಯಲ್ಲಿ ಇವರ ಕಂಡಿಷನ್ ಗಳಿವೆ. ಈ ಎಲ್ಲ ಗೊಂದಲಗಳಿಗೆ ಸಿಎಂ ಸಿದ್ದರಾಮಯ್ಯ ಉತ್ತರಿಸಬೇಕು ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿಯವರು ಆಗ್ರಹಿಸಿದ್ದಾರೆ.