ಪ್ರವಾಸಿಗರೇ ಎಚ್ಚರ: ಐದು ದಶಕಗಳ ಬಳಿಕ ಹಂಪಿ ಸಮೀಪ ಹುಲಿ ಪ್ರತ್ಯಕ್ಷ! ಸುತ್ತಲಿನ ಪ್ರದೇಶಗಳಲ್ಲಿ ಅಲರ್ಟ್
ಸುಮಾರು ಐದು ದಶಕಗಳ ಬಳಿಕ ಹಂಪಿ ಸಮೀಪದ ಕಿಷ್ಕಿಂಧಾ ಬೆಟ್ಟಗಳ ಬಳಿ ಹುಲಿಯೊಂದು ಕಾಣಿಸಿಕೊಂಡಿದ್ದು, ಕ್ಯಾಮೆರಾದಲ್ಲಿ ಅದರ ಚಲನವಲನ ದಾಖಲಾಗಿದೆ. ಹುಲಿ ಇರುವಿಕೆ ದೃಢಪಟ್ಟ ಹಿನ್ನೆಲೆಯಲ್ಲಿ ಹಂಪಿ ಹಾಗೂ ಕೊಪ್ಪಳ ಜಿಲ್ಲೆಯ ಸುತ್ತಮುತ್ತಲಿನ ಗ್ರಾಮಗಳಲ್ಲಿ ಅರಣ್ಯ ಇಲಾಖೆ ಎಚ್ಚರಿಕೆ ನೀಡಿದ್ದು, ಹೆಚ್ಚುವರಿ ಸಿಬ್ಬಂದಿ ಮತ್ತು ಕ್ಯಾಮೆರಾಗಳನ್ನು ನಿಯೋಜಿಸಲಾಗಿದೆ.

ಮುಖ್ಯಾಂಶಗಳು
- ಐದು ದಶಕಗಳ ಬಳಿಕ ಹಂಪಿ ಬಳಿ ಹುಲಿ ಪತ್ತೆ
- ಕ್ಯಾಮೆರಾದಲ್ಲಿ ಹುಲಿ ಚಲನವಲನ ಸೆರೆ
- ಹಂಪಿ ಸುತ್ತಮುತ್ತ ಅರಣ್ಯ ಇಲಾಖೆ ಅಲರ್ಟ್
ಹೊಸಪೇಟೆ, ಆಗಸ್ಟ್ 24: ಕರ್ನಾಟಕದ ಐತಿಹಾಸಿಕ ಪ್ರವಾಸಿ ತಾಣ ಹಂಪಿ (Hampi) ಸಮೀಪದ ಅರಣ್ಯ ಪ್ರದೇಶದಲ್ಲಿ ಬರೋಬ್ಬರಿ ಐದು ದಶಕಗಳ ಬಳಿಕ ಹುಲಿ (Tiger) ಕಾಣಿಸಿಕೊಂಡಿರುವುದು ಕುತೂಹಲಕ್ಕೆ ಹಾಗೂ ಆತಂಕಕ್ಕೆ ಕಾರಣವಾಗಿದೆ. ಕೊಪ್ಪಳ (Koppal) ಜಿಲ್ಲೆಯ ಕಿಷ್ಕಿಂಧಾ ಬೆಟ್ಟಗಳ ಅರಣ್ಯ ಪ್ರದೇಶದಲ್ಲಿ ಹುಲಿಯ ಚಲನವಲನ ಅರಣ್ಯ ಇಲಾಖೆ ಅಳವಡಿಸಿದ್ದ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಹುಲಿ ಇರುವಿಕೆಯನ್ನು ಅರಣ್ಯ ಇಲಾಖೆ ದೃಢಪಡಿಸಿದೆ. ಯಲಗೂಡ ಪ್ರದೇಶದಲ್ಲಿ ಕಳೆದ ಮೂರು ತಿಂಗಳಿಂದ ಹುಲಿ ಕಾಣಿಸಿಕೊಂಡಿದೆ ಎಂಬ ಮಾಹಿತಿ ಸ್ಥಳೀಯರಿಂದ ಅರಣ್ಯ ಇಲಾಖೆಗೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಬೆಟ್ಟದ ಪ್ರದೇಶದಲ್ಲಿ ಕ್ಯಾಮೆರಾಗಳನ್ನು ಅಳವಡಿಸಿ ನಿಗಾ ಇರಿಸಲಾಗಿತ್ತು. ಭಾನುವಾರ ಟೆಂಬಾ ಪ್ರದೇಶದಲ್ಲಿ ಅಳವಡಿಸಲಾಗಿದ್ದ ಕ್ಯಾಮೆರಾದಲ್ಲಿ ಹುಲಿಯ ಚಿತ್ರ ಸೆರೆಯಾಗಿದ್ದು, ಇದರಿಂದ ಹುಲಿ ಇರುವಿಕೆ ಖಚಿತವಾಗಿದೆ.
ಕಿಷ್ಕಿಂಧಾ ಬೆಟ್ಟಗಳ ಅರಣ್ಯ ಪ್ರದೇಶದಲ್ಲಿ ಕೊನೆಯ ಬಾರಿ ಹುಲಿ ಇರುವಿಕೆ 1970ರ ದಶಕದಲ್ಲಿ ದಾಖಲಾಗಿತ್ತು ಎನ್ನಲಾಗಿದೆ. ಹೀಗಾಗಿ ಸುಮಾರು ಐದು ದಶಕಗಳ ನಂತರ ಇದೇ ಪ್ರದೇಶದಲ್ಲಿ ಹುಲಿ ಕಾಣಿಸಿಕೊಂಡಿರುವುದು ಅಪರೂಪದ ಬೆಳವಣಿಗೆಯಾಗಿದೆ.
ಶ್ರೀಶೈಲಂ ಅರಣ್ಯ ಪ್ರದೇಶದಿಂದ ಬಂದಿರುವ ಅನುಮಾನ
ತಜ್ಞರ ಪ್ರಕಾರ, ಹುಲಿ ಕಳೆದ ಹಲವು ತಿಂಗಳುಗಳಿಂದ ಕಿಷ್ಕಿಂಧಾ ಬೆಟ್ಟಗಳಲ್ಲೇ ನೆಲೆಸಿರುವ ಸಾಧ್ಯತೆಯಿದೆ. ಆಂಧ್ರಪ್ರದೇಶದ ಶ್ರೀಶೈಲಂ ವನ್ಯಜೀವಿ ಕಾರಿಡಾರ್ ಮೂಲಕ ಈ ಹುಲಿ ಈ ಭಾಗಕ್ಕೆ ಬಂದಿರಬಹುದು ಎಂಬ ಶಂಕೆಯೂ ವ್ಯಕ್ತವಾಗಿದೆ. ಕಿಷ್ಕಿಂಧಾ ಪ್ರದೇಶವು ಈ ಹಿಂದೆ ಹುಲಿಗಳ ಆವಾಸಸ್ಥಾನವಾಗಿತ್ತು. ಹೀಗಾಗಿ ಬೇರೆ ಅರಣ್ಯ ಪ್ರದೇಶದಿಂದ ಹುಲಿ ಇಲ್ಲಿ ವಲಸೆ ಬಂದಿರುವ ಸಾಧ್ಯತೆಯನ್ನು ತಳ್ಳಿಹಾಕಲು ಸಾಧ್ಯವಿಲ್ಲ ಎಂದು ಅರಣ್ಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಹಂಪಿ ಸೇರಿ ಹಲವು ಗ್ರಾಮಗಳಲ್ಲಿ ಎಚ್ಚರಿಕೆ
ಹುಲಿ ಇರುವಿಕೆ ದೃಢಪಟ್ಟ ಹಿನ್ನೆಲೆಯಲ್ಲಿ ಹಂಪಿಯಲ್ಲಿ ಅರಣ್ಯ ಇಲಾಖೆ ಅಲರ್ಟ್ ಘೋಷಿಸಿದೆ. ಕೊಪ್ಪಳ ಅರಣ್ಯ ಇಲಾಖೆಯೂ ಸಾಣಾಪುರ, ಬಸಾಪುರ, ಜಬ್ಬಲಗುಡ್ಡ, ಬೆಣಕಲ್, ಅಗೋಲಿ, ವೆಂಕಟಗಿ, ಹನುಮನಹಳ್ಳಿ ಹಾಗೂ ಜಂಗ್ಲಿರಂಗಾಪುರ ಸೇರಿದಂತೆ ಹಲವು ಪ್ರದೇಶಗಳಲ್ಲಿ ಸೈರನ್ ಮೂಲಕ ಜನರಿಗೆ ಎಚ್ಚರಿಕೆ ನೀಡಿದೆ.
ರಾತ್ರಿ ವೇಳೆ ಮನೆಯ ಹೊರಗೆ ಮಲಗುವುದನ್ನು ತಪ್ಪಿಸಬೇಕು. ಹುಲಿ ಕಾಣಿಸಿಕೊಂಡರೆ ಅಥವಾ ಅದರ ಚಲನವಲನದ ಕುರಿತು ಮಾಹಿತಿ ಸಿಕ್ಕರೆ ತಕ್ಷಣ ಅರಣ್ಯ ಇಲಾಖೆಗೆ ತಿಳಿಸುವಂತೆ ಗ್ರಾಮಸ್ಥರು, ಕುರಿಗಾಹಿಗಳು ಹಾಗೂ ಜಾನುವಾರು ಸಾಕಣೆದಾರರಿಗೆ ಅಧಿಕಾರಿಗಳು ಮನವಿ ಮಾಡಿದ್ದಾರೆ.
ಹುಲಿಯ ಚಲನವಲನ ಕಾಣಿಸಿದ ಪ್ರದೇಶದಲ್ಲಿ ಕಳೆದ ಮೂರು ದಿನಗಳಿಂದ ಹೆಚ್ಚುವರಿ ಅರಣ್ಯ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಹುಲಿ ಯಾವ ಪ್ರದೇಶದಿಂದ ಬಂದಿದೆ ಮತ್ತು ಅದರ ಚಲನವಲನ ಯಾವ ದಿಕ್ಕಿನಲ್ಲಿದೆ ಎಂಬುದನ್ನು ಪತ್ತೆಹಚ್ಚಲು ಮತ್ತಷ್ಟು ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:59 am, Mon, 24 August 26




