ಚಾಮರಾಜನಗರ: ಓದುವಾಗ ಸಹಪಾಠಿಗಳು ಮಾಡಿದ ಅವಮಾನದಿಂದಾಗಿ ಅರ್ಧದಲ್ಲಿಯೇ ಶಾಲೆ, ಕಾಲೇಜು ಬಿಟ್ಟು ಹೋಗಬೇಕು ಎಂದು ಅದೆಷ್ಟೋ ಬಾರಿ ಆಕೆಗೆ ಅನಿಸಿತ್ತು. ಏನೇ ಆದರೂ ಹೀಯಾಳಿಸಿದವರ ಮುಂದೆಯೇ, ನಿಂದಿಸಿದವರ ಎದುರಲ್ಲಿಯೇ ತಲೆ ಎತ್ತಿ ನಿಲ್ಲಬೇಕು ಎಂದು ಧೃಡ ನಿರ್ಧಾರ ಮಾಡಿದ್ದರು. ಕೊನೆಗೂ ಅಂದುಕೊಂಡಿದ್ದನ್ನ ಸಾಧಿಸಿದ ದೀಪು ಬುದ್ದೆ ಎಂಬಾಕೆ ಇಡೀ ಸಮುದಾಯದಲ್ಲಿಯೇ ಮೊದಲ ಬಾರಿಗೆ ಡಬಲ್ ಗ್ರಾಜುಯೇಟ್ ಪಡೆದುಕೊಂಡು ಇಡೀ ಸಮೂದಾಯವೇ ಹೆಮ್ಮೆ ಪಡುವಂತೆ ಮಾಡಿದ್ದಾರೆ.
ಸಾಧಿಸುವ ಛಲವೊಂದಿದ್ದರೆ ವಯಸ್ಸು, ಜಾತಿ, ಲಿಂಗ ಯಾವುದು ಕೂಡ ಲೆಕ್ಕಕ್ಕೆ ಇಲ್ಲ ಎಂಬುದಕ್ಕೆ ಚಾಮರಾಜನಗರ ತಾಲೂಕಿನ ಹೆಗ್ಗವಾಡಿಯ ದೀಪು ಬುದ್ದೆ ಸಾಕ್ಷಿ. ಈಕೆ ತನ್ನ ತಂದೆಯ ನಾಲ್ಕು ಮಕ್ಕಳ ಪೈಕಿ ಮೂರನೇಯವನಾಗಿ ಗಂಡು ಮಗುವಾಗಿ ಜನಿಸಿದರು. 10ನೇ ತರಗತಿಯವರೆಗೆ ಗಂಡಾಗಿಯೇ ಪ್ರವೇಶ ಪಡೆದು ವಿದ್ಯಾಭ್ಯಾಸ ಮಾಡಿದ್ದರು. ಪಿಯುಸಿಗೆ ಹೋದಂತೆ ಇವರಲ್ಲಿ ಒಂದಿಷ್ಟು ಬದಲಾವಣೆಗಳಾಗಲು ತೊಡಗಿದ್ದವು. ಹೆಣ್ಣು ಮಕ್ಕಳೊಂದಿಗೆ ಒಡನಾಟ ಇಟ್ಟು ಕೊಳ್ಳಲಾರಂಭಿಸಿದರು. ಒಂದಿಷ್ಟು ಮಂದಿ ಸೇರಿಸಿಕೊಂಡರೆ, ಇನ್ನೊಂದಿಷ್ಟು ಮಂದಿ ದೂರನೇ ಸರಿದು ಹೀಯಾಳಿಸುತ್ತಿದ್ದರು. ಹೆಣ್ಣು ಮಕ್ಕಳ ಬಟ್ಟೆ ಧರಿಸಿ ಗಂಡು ಮಕ್ಕಳ ಜೊತೆ ಆಡಲು ಗಂಡು ಮಕ್ಕಳು ಒಪ್ಪದೆ ನಿಂದನೆ ಮಾಡುತ್ತಿದ್ದರು. ಆದರೆ ಅದ್ಯಾವುದಕ್ಕೂ ಅಂಜದ ದೀಪು ಬುದ್ದೆ ಕುದೇರಿನ ಪದವಿ ಕಾಲೇಜಿನಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದರು.
ಮಾನಸ ಗಂಗೋತ್ರಿಗೆ ಪ್ರವೇಶಾತಿ ಪಡೆದ ದೀಪು ಬುದ್ದೆ
ಇದಾದ ಬಳಿಕ ಮುಂದೆ ಏನು ಮಾಡಬೇಕು ಎಂಬುದು ಈಕೆಗೆ ತೋಚಲೇ ಇಲ್ಲ. ಹೀಗಾಗಿ ಚಾಮರಾಜನಗರ ಪಟ್ಟಣದ ಸಾಧನ ಸಂಸ್ಥೆಯಲ್ಲಿ ಕೆಲಸಕ್ಕೆ ಸೇರಿಕೊಂಡರು. ಕೆಲಸಕ್ಕೆ ಸೇರಿಕೊಂಡರೂ ಓದುವ ಹಂಬಲ ಮಾತ್ರ ಈಕೆಯಿಂದ ತೊಲಗಲೇ ಇಲ್ಲ. ಕೊನೆಗೊಂದು ದಿನ ಮೈಸೂರು ವಿಶ್ವವಿದ್ಯಾನಿಲಯಕ್ಕೆ ಹೋಗಿ ಪ್ರವೇಶ ನೀಡುವಂತೆ ಮನವಿ ಮಾಡಿದರು. ಆದರೆ ಮೈಸೂರಿನ ಮಾನಸ ಗಂಗೋತ್ರಿಯಲ್ಲಿ ಗಂಡು ಮತ್ತು ಹೆಣ್ಣು ಎಂಬ ಕಾಲಂ ಬಿಟ್ಟು ತೃತೀಯ ಲಿಂಗದ ಕಾಲಂ ಇರಲಿಲ್ಲ. ಹೀಗಾಗಿ ಆರಂಭದ ಒಂದು ವರ್ಷ ಪ್ರವೇಶ ನಿರಾಕರಣೆ ಮಾಡಲಾಗಿತ್ತು. ಸತತ ಪ್ರಯತ್ನದ ನಂತರ ತೃತೀಯ ಲಿಂಗಿಯಾಗಿ ಮಾನಸ ಗಂಗೋತ್ರಿಗೆ ಪ್ರಥಮ ಬಾರಿಗೆ ಪ್ರವೇಶಾತಿ ಪಡೆದುಕೊಂಡರು.
ಕರ್ನಾಟಕದಲ್ಲಿಯೇ ಮೊದಲು
ಅಂಬೇಡ್ಕರ್ ಅಧ್ಯಯನ ಕೇಂದ್ರದಲ್ಲಿ ಎರಡು ವರ್ಷಗಳ ಕಾಲ ವಿದ್ಯಾಭ್ಯಾಸ ಮಾಡಿ ತರಗತಿಗೆ ಪ್ರಥಮ ಸ್ಥಾನ ಗಳಿಸಿದ್ದಾರೆ. ಶೇ 82.89ರಷ್ಟು ಅಂಕ ಪಡೆಯುವ ಮೂಲಕ ಡಿಸ್ಟಿಂಕ್ಷನ್ನಲ್ಲಿ ತೇರ್ಗಡೆಯಾಗಿದ್ದಾರೆ. ಲೈಂಗಿಕ ಅಲ್ಪಸಂಖ್ಯಾತೆಯೊಬ್ಬರು ಸರ್ಕಾರದ ದಾಖಲಾತಿಗಳಲ್ಲಿ ಪ್ರವೇಶ ಪಡೆದು ಡಬಲ್ ಗ್ರಾಜುಯೇಟ್ ಆಗಿರುವುದು ಕರ್ನಾಟಕದಲ್ಲಿಯೇ ಮೊದಲನೆಯವರು ಎಂಬ ಹೆಮ್ಮೆಗೆ ದೀಪು ಅಲಿಯಾಸ್ ಗುರುಸ್ವಾಮಿ ಪಾತ್ರರಾಗಿದ್ದಾರೆ. ಆದರೆ ಇಲ್ಲಿಯವರೆಗೆ ಸರ್ಕಾರಿ ನೇಮಕಾತಿಯಲ್ಲಿ ತೃತೀಯ ಲಿಂಗಿಗಳಿಗೆ ಅವಕಾಶ ಇಲ್ಲದೇ ಇರುವುದು ಸಹಜವಾಗಿಯೇ ಈಕೆಗೆ ಬೇಸರ ತರಿಸಿದೆ. ನೆರೆಯ ಕೇರಳ, ತಮಿಳುನಾಡು, ಆಂಧ್ರ ಮತ್ತು ತೆಲಂಗಾಣಗಳಲ್ಲಿ ಲೈಂಗಿಕ ಅಲ್ಪ ಸಂಖ್ಯಾತರಿಗೆ ಪ್ರತ್ಯೇಕವಾದ ಮೀಸಲು ನಿಗದಿ ಮಾಡಿದ್ದಾರೆ. ಆದೇ ರೀತಿ ರಾಜ್ಯದಲ್ಲೂ ತೃತೀಯ ಲಿಂಗಿಗಳ ವಿದ್ಯಾಭ್ಯಾಸಕ್ಕೆ ಅನುಗುಣವಾಗಿ ಸರ್ಕಾರಿ ಕೆಲಸದಲ್ಲಿ ಮೀಸಲು ನೀಡಬೇಕು ಎಂದು ದೀಪು ಬುದ್ದೆ ಒತ್ತಾಯ ಮಾಡಿದ್ದಾರೆ.
ಬೆಂಗಾವಲಾಗಿ ನಿಂತ ಸಾಧನಾ ಸಂಸ್ಥೆ
ಇಡೀ ಸಮಾಜ ಈಕೆಯನ್ನ ಹೀಯಾಳಿಸಿದರೂ ದೀಪುವಿನ ಬೆನ್ನಿಗೆ ಬೆಂಗಾವಲಾಗಿ ನಿಂತವರು ಮಾತ್ರ ಸಾಧನಾ ಸಂಸ್ಥೆ. ತೃತೀಯ ಲಿಂಗಿಯಾಗಿ ಬದಲಾವಣೆಯಾದ ನಂತರ ದೀಪು ಸೇರಿದ್ದು ಚಾಮರಾಜನಗರ ಪಟ್ಟಣದಲ್ಲಿ ಇರುವ ಸಾಧನ ಸಂಸ್ಥೆಗೆ. ಲೈಂಗಿಕ ಅಲ್ಪಸಂಖ್ಯಾತರ ಕಲ್ಯಾಣದಲ್ಲಿ ತೊಡಗಿಕೊಂಡಿರುವ ಈ ಸಂಸ್ಥೆ ದೀಪುಗೆ ಬೆನ್ನೆಲುಬಾಗಿ ನಿಂತಿದೆ. ಮಾಸ್ಟರ್ ಡಿಗ್ರಿಯವರೆಗೂ ವಿದ್ಯಾಭ್ಯಾಸಕ್ಕೆ ಅನುಕೂಲ ಮಾಡಿ ಕೊಡುವುದರ ಜೊತೆಗೆ ಅರ್ಥಿಕ ಸಹಾಯ ಮಾಡಿದೆ. ತೃತೀಯ ಲಿಂಗಿಗಳಿಗೆ ಸರ್ಕಾರ ನೀಡುತ್ತಿರುವ ಅನುದಾನ ಏನು ಮಾಡಲು ಸಾಧ್ಯವಾಗುತ್ತಿಲ್ಲ. ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ವಾಸ ಮಾಡಲು ಮನೆಗಳು ಸಿಗುತ್ತಿಲ್ಲ. ಸರ್ಕಾರಿ ಕಚೇರಿಗಳಲ್ಲಿ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಸ್ವಯಂ ಉದ್ಯೋಗ ಮಾಡಲು ಆರ್ಥಿಕ ಸಹಾಯ ಮಾಡಬೇಕು ಎಂದು ಸಂಸ್ಥೆ ಸರ್ಕಾರವನ್ನ ಆಗ್ರಹಿಸಿದೆ.
ಇದನ್ನೂ ಓದಿ
‘ಬದುಕಿದ್ದೇವೆಂದು ತೋರಿಸಿಕೊಳ್ಳಲು ಧರಣಿ ಮಾಡ್ತಿದ್ದಾರೆ’ ಸಿಎಂ ಹೇಳಿಕೆಗೆ ಮಂಗಳಮುಖಿಯರ ಆಕ್ರೋಶ