ಡಿ.ಕೆ ಶಿವಕುಮಾರ್ ಸಿಡಿ ಪ್ರಕರಣದಲ್ಲಿ ದುಡುಕಿ ತಮ್ಮ ಹೆಸರನ್ನು ತಾವೇ ಏಕೆ ಸಿಲುಕಿಸಿಕೊಂಡರು ಗೊತ್ತಿಲ್ಲ: ಹೆಚ್.ಡಿ. ಕುಮಾರಸ್ವಾಮಿ
ಸರ್ಕಾರಕ್ಕೆ ಸಿಡಿಯಲ್ಲಿರುವ ಯುವತಿ ಟ್ರೇಸ್ ಆಗದೇ ಇದ್ದರೂ, ಯುವತಿಗೆ ಯಾರಿಂದ ರಕ್ಷಣೆ ಸಿಗಬೇಕೋ ಅವರಿಂದ ಸಿಕ್ಕಿದೆ. ಸರ್ಕಾರದ ಒಳಗಿನವರೋ, ಸರ್ಕಾರದ ವಿರುದ್ಧ ಇರುವವರೋ ಒಟ್ಟಿನಲ್ಲಿ ಯಾರೋ ಆ ಯುವತಿಗೆ ಈಗಾಗಲೇ ರಕ್ಷಣೆ ನೀಡಿದ್ದಾರೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ.
ಮೈಸೂರು: ರಮೇಶ್ ಜಾರಕಿಹೊಳಿ ಸಿಡಿ ಸುದ್ದಿ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರಿನಲ್ಲಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಸಿಡಿ ಪ್ರಕರಣವನ್ನು ಹುಡುಗಾಟಿಕೆಯಾಗಿ ತೆಗೆದುಕೊಂಡಿದ್ದಾರೆ. ರಮೇಶ್ ಸಿಡಿ ಪ್ರಕರಣದಲ್ಲಿ ಯಾರಿಗೂ ಗಂಭೀರತೆಯೇ ಇಲ್ಲ. ಇದರಿಂದ ಕರ್ನಾಟಕ ರಾಜ್ಯದ ಗೌರವ ಹಾಳಾಗುತ್ತಿದೆ. ಎಸ್ಐಟಿ ಅಧಿಕಾರಿಗಳು ಯಾವುದೇ ಪ್ರಭಾವಕ್ಕೆ ಒಳಗಾಗಬಾರದು. ರಾಜ್ಯದ ಗೌರವ ಉಳಿಸಲು ನಿಷ್ಪಕ್ಷಪಾತ ತನಿಖೆ ಮಾಡಬೇಕು ಎಂದು ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ಸರ್ಕಾರಕ್ಕೆ ಸಿಡಿಯಲ್ಲಿರುವ ಯುವತಿ ಟ್ರೇಸ್ ಆಗದೇ ಇದ್ದರೂ, ಯುವತಿಗೆ ಯಾರಿಂದ ರಕ್ಷಣೆ ಸಿಗಬೇಕೋ ಅವರಿಂದ ಸಿಕ್ಕಿದೆ. ಸರ್ಕಾರದ ಒಳಗಿನವರೋ, ಸರ್ಕಾರದ ವಿರುದ್ಧ ಇರುವವರೋ ಒಟ್ಟಿನಲ್ಲಿ ಯಾರೋ ಆ ಯುವತಿಗೆ ಈಗಾಗಲೇ ರಕ್ಷಣೆ ನೀಡಿದ್ದಾರೆ. ಈ ಮನುಷ್ಯನ ಸ್ಪೀಡ್‌ಗೆ ಬ್ರೇಕ್ ಹಾಕಲು ಸರ್ಕಾರದ ಒಳಗೆ ಇದ್ದವರೇ ರಕ್ಷಣೆ ಕೊಡುತ್ತಿದ್ದಾರಾ ಗೊತ್ತಿಲ್ಲ ಎಂದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ.
ಈ ಪ್ರಕರಣದಲ್ಲಿ ಡಿಕೆಶಿ ಹೆಸರನ್ನು ಯಾರಾದ್ರು ಹೇಳಿದ್ದಾರಾ? ಇಂತಹದರಲ್ಲಿ ಡಿ.ಕೆ ಶಿವಕುಮಾರ್ ಈ ಪ್ರಕರಣದಲ್ಲಿ ದುಡುಕಿ ತಮ್ಮ ಹೆಸರನ್ನು ತಾವೇ ಏಕೆ ಸಿಲುಕಿಸಿಕೊಂಡರು ಗೊತ್ತಿಲ್ಲ. ಅವರು ನನಗಿಂತಾ ಪ್ರಬುದ್ಧ ರಾಜಕಾರಣಿ. ರಾಜ್ಯದಲ್ಲಿ ಮಹಾನಾಯಕರು ಬಹಳ ಜನ ಇದ್ದಾರೆ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಸರ್ಕಾರದಿಂದ ತನಿಖೆ ನಡೆದಾಗ ತಾರ್ಕಿಕ ಅಂತ್ಯ ಕಾಣಲ್ಲ. ಇಡೀ ದೇಶದ ವ್ಯವಸ್ಥೆ ಅದೇ ರೀತಿ ಇದೆ. ಯಾರನ್ನಾದರೂ ರಾಜಕೀಯವಾಗಿ ಮುಗಿಸುವಾಗ ಸಣ್ಣಪುಟ್ಟ ತಪ್ಪು ಮುಂದಿಟ್ಟುಕೊಂಡು ಅಧಿಕಾರದವರು ತಾತ್ಕಾಲಿಕವಾಗಿ ಬೆಳವಣಿಗೆ ಕುಂಠಿತ ಮಾಡುತ್ತಾರೆ. ಇಂತಹ ವ್ಯವಸ್ಥಿತ ಬೆಳವಣಿಗೆಯನ್ನು ದೇಶದಲ್ಲಿ ಕಂಡಿದ್ದೇವೆ. ಈಗಲೂ ಅದೇ ರೀತಿ ನಡೆಯುತ್ತಿದೆ. ಸಿಡಿ ಕೇಸ್ನಲ್ಲಿ ಯಾರಿಗೆ ನ್ಯಾಯ ಸಿಗುತ್ತದೆ ಎಂದು ಗೊತ್ತಿಲ್ಲ. ಈ ಪ್ರಕರಣದಲ್ಲಿ ಯಾರನ್ನು ಸಂತ್ರಸ್ತ ಎಂದು ಕರೆಯುವುದು? ಎಂದು ಹೆಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ಇನ್ನು ಇದೇ ವೇಳೆ ಮಾತನಾಡಿದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಮೈಸೂರು ಹಾಲು ಒಕ್ಕೂಟದ ಚುನಾವಣೆ ವಿಚಾರವಾಗಿ ಮಾತನಾಡಿದ್ದಾರೆ. ಶಾಸಕ ಜಿ.ಟಿ.ದೇವೇಗೌಡ ವಿರುದ್ಧ ಹೆಚ್.ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದು, ಜಿ.ಟಿ.ದೇವೇಗೌಡ ದುರಹಂಕಾರದಲ್ಲಿ ಮಾತನಾಡುತ್ತಿದ್ದಾರೆ. ಜೆಡಿಎಸ್ನಿಂದ ಬೆಳೆದವರೇ ಜೆಡಿಎಸ್ ಮುಗಿಸಲು ಹೊರಟಿದ್ದಾರೆ. ನನಗೆ ಸಹಕಾರ ಕ್ಷೇತ್ರದ ಎಬಿಸಿಡಿಯೂ ಗೊತ್ತಿಲ್ಲ. ಆದರೂ ಜೆಡಿಎಸ್ ಕಾರ್ಯಕರ್ತರಿಗೆ ಶಕ್ತಿ ತುಂಬಲು ಸ್ಪರ್ಧೆ ಮಾಡುತ್ತಿದ್ದೇನೆ ಎಂದು ತಿಳಿಸಿದ್ದಾರೆ.
ಜಿಟಿಡಿಯನ್ನು ಮತ್ತೆ ಜೆಡಿಎಸ್ಗೆ ಕರೆತರುವ ಪ್ರಶ್ನೆಯೇ ಇಲ್ಲ. ನನ್ನ ರಾಜಕೀಯ ಜೀವನದಲ್ಲಿ ಬಹಳ ಅನುಭವವಾಗಿದೆ. ಜಿ.ಟಿ.ದೇವೇಗೌಡ, ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್ ಶಾಸಕರಾಗಿದ್ದು, ಶಾಸಕ ಜಿ.ಟಿ.ದೇವೇಗೌಡರೇ ನಮ್ಮಿಂದ ದೂರ ಹೋಗಿದ್ದಾರೆ. ಸಾ.ರಾ.ಮಹೇಶ್ ಕಾರಣಕ್ಕೆ ದೂರವಾಗುತ್ತಿದ್ದೇನೆ ಅಂತಿದ್ದರು. ಜಿಟಿಡಿಗೆ ಮಹೇಶ್ ಅಂತಹದ್ದೇನು ಮಾಡಿದ್ದಾರೋ ಗೊತ್ತಿಲ್ಲ. ಜಿಟಿಡಿ ಮತ್ತೆ ಜೆಡಿಎಸ್ಗೆ ಬರುತ್ತೇನೆ ಎಂದರು ನಾವು ಕರೆಸಿಕೊಳ್ಳಲ್ಲ ಎಂದು ಹೆಚ್.ಡಿ ಕುಮಾರಸ್ವಾಮಿ ಜಿ.ಟಿ.ದೇವೇಗೌಡ ವಿರುದ್ಧ ಗುಡುಗಿದ್ರು.
ಜಿಟಿಡಿ ಬಗ್ಗೆ ಹೆಚ್.ಡಿ ದೇವೇಗೌಡರಿಗೆ ಸಾಫ್ಟ್ ಕಾರ್ನರ್ ಇತ್ತು. ಹೆಚ್.ಡಿ ದೇವೇಗೌಡರಿಗೆ ಇರುವ ಸತ್ಯ ಹೇಳಿ ಮನವೊಲಿಸುವೆ. ಇಂತವರ ಸಹವಾಸ ಬಿಡಬೇಕು. ಇಲ್ಲದಿದ್ದರೆ ಪಕ್ಷ ಹಾಳಾಗುತ್ತೆ. ಇಂತಹವರು ಸ್ಲೋ ಪಾಯಿಸನ್ ರೀತಿ ಪಕ್ಷ ಹಾಳುಮಾಡುತ್ತಾರೆ. ಜಿ.ಟಿ.ದೇವೇಗೌಡರ ವಿಚಾರದಲ್ಲಿ ಇದೇ ಅಂತಿಮ ನಿರ್ಧಾರ. ಸಿದ್ದರಾಮಯ್ಯ ಅವರ ಚಾಮುಂಡೇಶ್ವರಿ ಉಪ ಚುನಾವಣೆಯಲ್ಲಿ ಜಿಟಿಡಿಗೆ ಆರ್ಥಿಕ ನಿರ್ವಹಣೆ ಕೊಡಲಿಲ್ಲ ಎಂದು ಅವರು ಚುನಾವಣೆಯಲ್ಲಿ ಆಸಕ್ತಿ ತೋರಲಿಲ್ಲ. ಇಲ್ಲದೆ ಇದ್ದರೆ ಅವತ್ತೆ ಆ ಚುನಾವಣೆಯನ್ನು 10000 ಮತಗಳಿಂದ ಗೆಲ್ಲುತ್ತಿದ್ದೆವು ಎಂದು ಮೈಸೂರಿನಲ್ಲಿ ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ: ನಾನು ಸುಮ್ಮನೆ ಇದ್ದರೂ ಸಿಡಿ ಸಿಡಿ ಅಂತಾರೆ ಹುಡುಗ್ರು -ಡಿ.ಕೆ.ಶಿವಕುಮಾರ್ ಆರೋಪ