ಸಾರಿಗೆ ನೌಕರರ ಮುಷ್ಕರ; ಸರ್ಕಾರ ಸ್ಪಂದಿಸದಿದ್ದರೆ ಮತ್ತೆ ಧರಣಿ ಮಾಡ್ತೇವೆ: ಕೋಡಿಹಳ್ಳಿ ಚಂದ್ರಶೇಖರ್
ಕರ್ನಾಟಕ ಬಜೆಟ್‌ನಲ್ಲಿ ಪ್ರಸ್ತಾಪವೇ ಆಗದ 6 ನೇ ವೇತನ ಆಯೋಗ ವಿಚಾರಕ್ಕೆ ಸಂಬಂಧಿಸಿದಂತೆ, ಇದೇ ತಿಂಗಳ 16ನೇ ತಾರೀಕಿನಂದು ಮತ್ತೆ ಮುಷ್ಕರ ಕೈಗೊಳ್ಳುವಂತೆ ಸಾರಿಗೆ ನೌಕರರು ಮುಂದಾಗಿದ್ದಾರೆ.
ಬೆಂಗಳೂರು: ಮಾರ್ಚ್ 8ರಂದು ಹಣಕಾಸು ಸಚಿವರೂ ಆದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಂಡಿಸಿದ ಬಜೆಟ್‌ನಲ್ಲಿ ಪ್ರಸ್ತಾಪವೇ ಆಗದ 6 ನೇ ವೇತನ ಆಯೋಗ ವಿಚಾರಕ್ಕೆ ಸಂಬಂಧಿಸಿದಂತೆ, ಇದೇ ತಿಂಗಳ 16ನೇ ತಾರೀಕಿನಂದು ಮತ್ತೆ ಮುಷ್ಕರ ಕೈಗೊಳ್ಳುವಂತೆ ಸಾರಿಗೆ ನೌಕರರು ಮುಂದಾಗಿದ್ದಾರೆ. ಈ ಕುರಿತಂತೆ ಇಂದು ಸಾರಿಗೆ ನೌಕರರ ಕೂಟದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ಮಹತ್ವದ ಸಭೆ ನಡೆದಿದ್ದು, ರಾಜ್ಯ ಸರ್ಕಾರಕ್ಕೆ ಏಪ್ರಿಲ್ 7ರವರೆಗೆ ಗಡುವು ನೀಡಲಾಗುತ್ತದೆ. ಆ ನಂತರವೂ ಸರ್ಕಾರ ಸ್ಪಂದಿಸದಿದ್ದರೆ, ಧರಣಿ ನಡೆಸುತ್ತೇವೆ ಎಂದು ಹೇಳಿದ್ದಾರೆ.
ಈ ಕುರಿತಂತೆ ಮಾತನಾಡಿದ ಅವರು, ಸಾರಿಗೆ ನೌಕರರ ಬೇಡಿಕೆ ಬಗ್ಗೆ ಮಾ.16ಕ್ಕೆ ಸರ್ಕಾರಕ್ಕೆ ಮನವಿ ಸಲ್ಲಿಸುತ್ತೇವೆ. ಮನವಿ ಸಲ್ಲಿಸಿದ ದಿನದಿಂದ 22 ದಿನ ಅಂದರೆ ಏಪ್ರಿಲ್ 7ರವರೆಗೆ ರಾಜ್ಯ ಸರ್ಕಾರಕ್ಕೆ ಗಡುವು ನೀಡಲಾಗುತ್ತದೆ. ಆದರೂ ಸರ್ಕಾರ ಸ್ಪಂದನೆ ನೀಡದಿದ್ದರೆ ಧರಣಿ ನಡೆಸುತ್ತೇವೆ ಎಂದು ಹೇಳಿದ್ದಾರೆ.
ಸಾರಿಗೆ ನೌಕರರ ಭವಿಷ್ಯಕ್ಕೆ ಬಜೆಟ್‌ನಲ್ಲಿ ಯಾವುದೇ ಅವಕಾಶ ನೀಡಿಲ್ಲ. 1.30 ಲಕ್ಷ ನೌಕರರು ಇದ್ದಾರೆ. ಡಿಸೆಂಬರ್ 14ರಲ್ಲಿ ನೀಡಿದ್ದ ಭರವಸೆ ಈಡೇರಿಲ್ಲ. 3 ತಿಂಗಳ ಕಾಲಾವಕಾಶ ಮುಗಿಯುತ್ತಿದೆ. ಇದು ನಿರಾಶಾದಾಯಕ. ಮಾರ್ಚ್ 16ಕ್ಕೆ ಕಾರ್ಮಿಕ ಇಲಾಖೆಗೆ ನೋಟಿಸ್ ಕೊಡುತ್ತೇವೆ. ಏಪ್ರಿಲ್ 7ರ ಮುಷ್ಕರಕ್ಕೆ ಮತ್ತೆ ಸಭೆ ಕರೆದು ರೂಪು ರೇಷೆಗಳ ಬಗ್ಗೆ ಚರ್ಚಿಸಲಾಗುತ್ತದೆ ಎಂದಿದ್ದಾರೆ.
ಡಿಸೆಂಬರ್ ತಿಂಗಳಿನಲ್ಲಿ ನಾಲ್ಕು ದಿನಗಳ ಕಾಲ ಸಾರಿಗೆ ನೌಕರರ ಮುಷ್ಕರ ನಡೆಸಲಾಗಿತ್ತು. ಸಾರಿಗೆ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಮಾಡಬೇಕೆಂಬ ಬೇಡಿಕೆಯ ಜೊತೆಗೆ, ಒಟ್ಟು 10 ಬೇಡಿಕೆಗಳನ್ನು ಈಡೇರಿಸುವಂತೆ ಮುಷ್ಕರಕ್ಕೆ ಮುಂದಾಗಿದ್ದರು. ಈ ವೇಳೆ ರಾಜ್ಯ ಸರ್ಕಾರ ಸರ್ಕಾರಿ ನೌಕರರನ್ನಾಗಿ ಮಾಡುವ ಬೇಡಿಕೆ ಬಿಟ್ಟು, ಉಳಿದ ಒಂಬತ್ತು ಬೇಡಿಕೆಗಳನ್ನ ಈಡೇರಿಸುವ ಭರವಸೆ ನೀಡಿತ್ತು. ಜೊತೆಗೆ 6ನೇ ವೇತನ ಆಯೋಗ ಜಾರಿಯ ಕುರಿತಾಗಿ ಭರವಸೆ ನೀಡಿತ್ತು. ಆದರೆ ನಿನ್ನೆಯ ಬಜೆಟ್ನಲ್ಲೂ ಬೇಡಿಕೆ ಈಡೇರಿಸಿಲ್ಲ ಎಂಬ ಕಾರಣಕ್ಕೆ ಮತ್ತೆ ಮುಷ್ಕರಕ್ಕೆ ಸಾರಿಗೆ ನೌಕರರು ಮುಂದಾಗಿದ್ದಾರೆ.
ಇದನ್ನೂ ಓದಿ: ಬಜೆಟ್‌ನಲ್ಲಿ ಸಾರಿಗೆ ನೌಕರರ ಬೇಡಿಕೆಗಳಿಗೆ ಎಳ್ಳು ನೀರು ಹಿನ್ನೆಲೆ; ಮತ್ತೆ ಮುಷ್ಕರಕ್ಕೆ ಮುಂದಾಗ್ತಾರಾ ಸಾರಿಗೆ ನೌಕರರು?
ಇದನ್ನೂ ಓದಿ: ಇಂದು ಬೆಂಗಳೂರಿಗೆ ತಟ್ಟಲಿದೆ ಪ್ರತಿಭಟನೆ ಬಿಸಿ.. ಸಾರಿಗೆ ನೌಕರರು, ಅಂಗನವಾಡಿ ಕಾರ್ಯಕರ್ತೆಯರ ಪ್ರೊಟೆಸ್ಟ್