ರಾಯಚೂರು: ಕೊರೊನಾ ಎರಡನೇ ಅಲೆಯನ್ನು ನಿಯಂತ್ರಿಸಲು ಸರ್ಕಾರ ಲಾಕ್ಡೌನ್ ವಿಧಿಸಿದ್ದರು ಸಹ ಕೊವಿಡ್ಗೆ ಸಂಬಂಧಪಟ್ಟ ಸೇವಾ ಚಟುವಟಿಕೆಗಳಿಗೆ ಮತ್ತು ಕೊವಿಡ್ ವಾರಿಯರ್ಸ್ಗಳ ಸೇವೆಗೆ ಅಗತ್ಯವಾದಲ್ಲಿ ಬಸ್ಸುಗಳನ್ನು ಒದಗಿಸಲು ನಾಲ್ಕೂ ನಿಗಮಗಳಲ್ಲಿ ವ್ಯವಸ್ಥೆಯನ್ನು ಮಾಡಿಕೊಳ್ಳಲಾಗಿದೆ ಎಂದು ಉಪ ಮುಖ್ಯಮಂತ್ರಿಗಳು ಮತ್ತು ಸಾರಿಗೆ ಸಚಿವರಾದ ಲಕ್ಷ್ಮಣ ಸವದಿಯವರು ತಿಳಿಸಿದ್ದಾರೆ.ಈ ಬಗ್ಗೆ ಮಾಧ್ಯಮ ಪ್ರಕಟಣೆ ನೀಡಿರುವ ಅವರು, ಪ್ರಸ್ತುತ ಇಡೀ ರಾಜ್ಯವೇ ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಅತ್ಯಂತ ತುರ್ತು ಸನ್ನಿವೇಶವನ್ನು ಎದುರಿಸುತ್ತಿದೆ. ಆದ್ದರಿಂದ ಸಾರಿಗೆ ನಿಗಮಗಳಿಂದಲೂ ಸಹ ಈ ಸೂಕ್ಷ್ಮ ಪರಿಸ್ಥಿತಿಯನ್ನು ನಿಭಾಯಿಸಲು ಸರ್ಕಾರದ ಪ್ರಯತ್ನಗಳಿಗೆ ಕೈಜೋಡಿಸಿ ಕೆಲಸ ಮಾಡುವಂತೆ ಸೂಚಿಸಲಾಗಿದೆ ಎಂದು ವಿವರಿಸಿದ್ದಾರೆ.
ಈಗಾಗಲೇ ರಾಜ್ಯದಲ್ಲಿ ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆಗಳಿಗೆ ಮತ್ತು ಕೊವಿಡ್ ನಿಯಂತ್ರಣ ಕೆಲಸ ಕಾರ್ಯಗಳಲ್ಲಿ ಸೇವೆ ಸಲ್ಲಿಸುತ್ತಿರುವವರಿಗಾಗಿ ನಾಲ್ಕೂ ಸಾರಿಗೆ ನಿಗಮಗಳಿಂದ ಅಗತ್ಯಕ್ಕನುಗುಣವಾಗಿ ಬಸ್ಸುಗಳ ಸೇವೆಯನ್ನು ಒದಗಿಸಲಾಗುತ್ತಿದೆ. ಬೆಂಗಳೂರು ನಗರದಲ್ಲಿ ಈಗಾಗಲೇ ಆರೋಗ್ಯ ಮತ್ತು ತುರ್ತು ಸೇವೆಗಳಿಗಾಗಿ ಪ್ರತಿನಿತ್ಯ 156 ಬಿಎಂಟಿಸಿ ಬಸ್ಸುಗಳನ್ನು ಒದಗಿಸಲಾಗಿದೆ. ಇದರಿಂದಾಗಿ ವಿವಿಧ ಆಸ್ಪತ್ರೆಗಳ ನಡುವೆ ಸಂಪರ್ಕಕ್ಕೆ ಅನುಕೂಲವಾಗಿದೆ. ಅಲ್ಲದೇ ವೈದ್ಯರಿಗೆ, ದಾದಿಯರಿಗೆ, ಪೊಲೀಸರಿಗೆ, ಅಗ್ನಿಶಾಮಕ ದಳದವರಿಗೆ, ನೀರು-ವಿದ್ಯುತ್ ಪೂರೈಕೆಯಲ್ಲಿ ಕೆಲಸ ಮಾಡುತ್ತಿರುವವರಿಗೆ ಸಂಚಾರ ಸೌಲಭ್ಯಕ್ಕೆ ಸಹಾಯಕವಾಗಿದೆ. ಕೆಎಸ್ಆರ್ಟಿಸಿಯಿಂದ ಇದೇ ರೀತಿ ಸುಮಾರು 50 ಬಸ್ಸುಗಳು ಸಂಚರಿಸುತ್ತಿವೆ.
ಸವದಿಯ ಮನವಿ
ಸಾರಿಗೆ ನಿಗಮಗಳಿಂದಲೂ ಆಯಾ ಜಿಲ್ಲಾಡಳಿತವು ಮನವಿ ಮಾಡಿಕೊಂಡ ಪ್ರಕಾರ ತುರ್ತು ಸೇವೆಗಾಗಿ ಬಸ್ಸುಗಳನ್ನು ಒದಗಿಸಲು ಕ್ರಮ ಕೈಗೊಳ್ಳಲಾಗಿದೆ. ಜಿಲ್ಲಾಡಳಿತದಿಂದ ಒಂದು ವೇಳೆ ಮುಂದಿನ ದಿನಗಳಲ್ಲಿ ಮತ್ತಷ್ಟು ಬಸ್ಸುಗಳಿಗೆ ಬೇಡಿಕೆ ಬಂದರೆ ಸ್ಥಳೀಯ ಅಗತ್ಯಕ್ಕೆ ತಕ್ಕಂತೆ ಹೆಚ್ಚಿನ ಬಸ್ಸುಗಳನ್ನು ಒದಗಿಸುವುದಕ್ಕೂ ಸಿದ್ಧತೆ ಮಾಡಿಕೊಳ್ಳಲಾಗಿದೆ. ಲಾಕ್ಡೌನ್ ಅವಧಿಯಲ್ಲಿ ಸಾರ್ವಜನಿಕರ ಸಾರಿಗೆ ಸಂಚಾರವನ್ನು ನಿಷೇಧಿಸಿರುವುದರಿಂದ ಈ ವಿಶೇಷ ಬಸ್ಸುಗಳ ಸೌಕರ್ಯವೂ ಕೇವಲ ಆರೋಗ್ಯ ಮತ್ತು ತುರ್ತು ಸಂದರ್ಭಗಳನ್ನು ನಿಭಾಯಿಸಲು ಸೇವೆ ಸಲ್ಲಿಸುತ್ತಿರುವವರಿಗೆ ಮಾತ್ರ ಸೀಮಿತವಾಗಿದೆ. ಇತರ ಪ್ರಯಾಣಿಕರಿಗೆ ಈ ಬಸ್ ಸೌಲಭ್ಯಗಳು ಇರುವುದಿಲ್ಲ. ಸಾರ್ವಜನಿಕರು ಈ ಸೂಕ್ಷ್ಮ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು ಸೂಕ್ತ ಸಹಕಾರ ನೀಡಬೇಕೆಂದು ಸವದಿಯವರು ಮನವಿ ಮಾಡಿಕೊಂಡಿದ್ದಾರೆ.
ಕಳೆದ ವರ್ಷ ಕೊರೊನಾ ನಿಯಂತ್ರಣ ಕಾರ್ಯಕ್ರಮದ ಅಂಗವಾಗಿ ಸಾರಿಗೆ ನಿಗಮಗಳ ಬಸ್ಸುಗಳನ್ನೇ ಮೊಬೈಲ್ ಕ್ಲಿನಿಕ್ಗಳನ್ನಾಗಿ ಮತ್ತು ಕೊವಿಡ್ ಟೆಸ್ಟಿಂಗ್ ವಾಹನಗಳನ್ನಾಗಿ ಮಾರ್ಪಡಿಸಲಾಗಿತ್ತು. ಸುಮಾರು 20 ಮೊಬೈಲ್ ಬಸ್ಸುಗಳೂ ಸಹ ಈಗಾಗಲೇ ವಿವಿಧ ಜಿಲ್ಲೆಗಳಲ್ಲಿ ಆಯಾ ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆಗಳ ಸಹಯೋಗದೊಂದಿಗೆ ಸೇವೆ ಸಲ್ಲಿಸುತ್ತಿವೆ ಎಂದು ಸವದಿಯವರು ಸ್ಪಷ್ಟಪಡಿಸಿ, ಕೊವಿಡ್ ವಾರಿಯರ್ಸ್ಗಳಂತೆಯೇ ಸಾರಿಗೆ ನಿಗಮಗಳ ಸಿಬ್ಬಂದಿಗಳು ಸಹ ಇಂದಿನ ಸಂಕಷ್ಟದ ಕಾಲದಲ್ಲಿ ಸೇವೆ ಸಲ್ಲಿಸುತ್ತಿರುವುದಕ್ಕೆ ಸವದಿ ತಮ್ಮ ಕೃತಜ್ಞತೆಗಳನ್ನು ತಿಳಿಸಿದ್ದಾರೆ.
ಇದನ್ನೂ ಓದಿ
ಲಂಡನ್ ಉಚ್ಛ ನ್ಯಾಯಾಲಯಕ್ಕೆ ನೀರವ್ ಮೋದಿ; ಭಾರತ ಹಸ್ತಾಂತರಕ್ಕೆ ತಡೆ ಕೋರಿ ಅರ್ಜಿ
(Transport for health service activities will be provided says Savadi said at raichur)