ವಿಶ್ವ ದಾಖಲೆ: ಭಾರತದಲ್ಲಿ ದಿನಕ್ಕೆ 4 ಲಕ್ಷದ ಗಡಿ ದಾಟಿದ ಕೊರೊನಾ ಹೊಸ ಪ್ರಕರಣಗಳ ಸಂಖ್ಯೆ, ಪ್ರತಿ ನಿಮಿಷಕ್ಕೆ ಸರಾಸರಿ 2 ಸಾವು

ಆರೋಗ್ಯ ಇಲಾಖೆಯ ಅಂಕಿಅಂಶಗಳ ಪ್ರಕಾರ ಭಾರತ ತೀರಾ ಅಪಾಯಕಾರಿ ಸನ್ನಿವೇಶವನ್ನು ಎದುರಿಸುತ್ತಿದ್ದು ಪ್ರತಿ ನಿಮಿಷಕ್ಕೆ ಸರಾಸರಿ 2 ಸಾವು ಹಾಗೂ 270 ಹೊಸ ಪ್ರಕರಣಗಳಿಗೆ ಸಾಕ್ಷಿಯಾಗುತ್ತಿದೆ. ಅಂದರೆ ಪ್ರತಿ ಸೆಕೆಂಡಿಗೆ 4ಕ್ಕಿಂತ ಹೆಚ್ಚು ಕೊರೊನಾ ಪ್ರಕರಣಗಳು ಭಾರತದಲ್ಲಿ ದಾಖಲಾಗುತ್ತಿವೆ.

  • TV9 Web Team
  • Published On - 11:38 AM, 1 May 2021
ವಿಶ್ವ ದಾಖಲೆ: ಭಾರತದಲ್ಲಿ ದಿನಕ್ಕೆ 4 ಲಕ್ಷದ ಗಡಿ ದಾಟಿದ ಕೊರೊನಾ ಹೊಸ ಪ್ರಕರಣಗಳ ಸಂಖ್ಯೆ, ಪ್ರತಿ ನಿಮಿಷಕ್ಕೆ ಸರಾಸರಿ 2 ಸಾವು
ಪ್ರಾತಿನಿಧಿಕ ಚಿತ್ರ

ದೆಹಲಿ: ಭಾರತದಲ್ಲಿ ಕೊರೊನಾ ಎರಡನೇ ಅಲೆ ತೀವ್ರ ಸ್ವರೂಪಕ್ಕೆ ತಿರುಗಿದ್ದು ಪರಿಸ್ಥಿತಿ ಬಿಗಡಾಯಿಸಿದೆ. ಮೊದಲ ಅಲೆಯ ವೇಳೆಯಲ್ಲಿ ಉಳಿದ ದೇಶಗಳು ಹುಬ್ಬೇರಿಸುವಂತೆ ಪರಿಸ್ಥಿತಿಯನ್ನು ಎದುರಿಸಿದ್ದ ಭಾರತವೀಗ ದಿನವೊಂದರಲ್ಲಿ ಅತಿ ಹೆಚ್ಚು ಕೊರೊನಾ ಪ್ರಕರಣಗಳನ್ನು ದಾಖಲಿಸಿದ ದೇಶ ಎಂದು ಗುರುತಿಸಿಕೊಂಡಿದೆ. ನಿನ್ನೆ (ಏಪ್ರಿಲ್ 30) ರಾತ್ರಿ 11 ಗಂಟೆಯ ಅಂಕಿ ಅಂಶಗಳ ಪ್ರಕಾರ ಕಳೆದ 24 ತಾಸಿನಲ್ಲಿ ಭಾರತದಲ್ಲಿ 4,08,323 ಕೊರೊನಾ ಪಾಸಿಟಿವ್ ಪ್ರಕರಣಗಳು ಹೊಸದಾಗಿ ಕಾಣಿಸಿಕೊಂಡಿದ್ದು, ಇದುವರೆಗೆ ಒಂದೇ ದಿನದಲ್ಲಿ 4 ಲಕ್ಷಕ್ಕೂ ಅಧಿಕ ಪ್ರಕರಣಗಳಿಗೆ ಸಾಕ್ಷಿಯಾದ ಏಕೈಕ ದೇಶವಾಗಿದೆ.

ಏಪ್ರಿಲ್ 28ರ ತನಕ ದಿನಕ್ಕೆ ಸರಾಸರಿ 3.49 ಲಕ್ಷ ಪ್ರಕರಣಗಳು ಭಾರತದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಇದೀಗ 4 ಲಕ್ಷದ ಗಡಿ ದಾಟುವ ಮೂಲಕ ಅಪಾಯಕಾರಿ ಬೆಳವಣಿಗೆ ತೋರಿಸಿದೆ. ಪ್ರತಿನಿತ್ಯ 52,579 ಹೊಸ ಪ್ರಕರಣಗಳೊಂದಿಗೆ ಅಮೆರಿಕಾ ಎರಡನೇ ಸ್ಥಾನ, 27,250 ಪ್ರಕರಣಗಳೊಂದಿಗೆ ಫ್ರಾನ್ಸ್ ಮೂರನೇ ಸ್ಥಾನ, 20,788 ಪ್ರಕರಣಗಳೊಂದಿಗೆ ಜರ್ಮನಿ ನಾಲ್ಕನೇ ಸ್ಥಾನ, 7,980 ಪ್ರಕರಣಗಳೊಂದಿಗೆ ಕೆನಡಾ ಐದನೇ ಸ್ಥಾನದಲ್ಲಿದೆ.

ಆರೋಗ್ಯ ಇಲಾಖೆಯ ಅಂಕಿಅಂಶಗಳ ಪ್ರಕಾರ ಭಾರತ ತೀರಾ ಅಪಾಯಕಾರಿ ಸನ್ನಿವೇಶವನ್ನು ಎದುರಿಸುತ್ತಿದ್ದು ಪ್ರತಿ ನಿಮಿಷಕ್ಕೆ ಸರಾಸರಿ 2 ಸಾವು ಹಾಗೂ 270 ಹೊಸ ಪ್ರಕರಣಗಳಿಗೆ ಸಾಕ್ಷಿಯಾಗುತ್ತಿದೆ. ಅಂದರೆ ಪ್ರತಿ ಸೆಕೆಂಡಿಗೆ 4ಕ್ಕಿಂತ ಹೆಚ್ಚು ಕೊರೊನಾ ಪ್ರಕರಣಗಳು ಭಾರತದಲ್ಲಿ ದಾಖಲಾಗುತ್ತಿವೆ. ಪ್ರಸ್ತುತ ಭಾರತದಲ್ಲಿ 31 ಲಕ್ಷದ 70 ಸಾವಿರಕ್ಕೂ ಅಧಿಕ ಸಕ್ರಿಯ ಪ್ರಕರಣಗಳಿದ್ದು, ಒಟ್ಟಾರೆ ಪ್ರಕರಣಗಳ ಸಂಖ್ಯೆ 1.87 ಕೋಟಿಯ ಗಡಿ ದಾಟುವ ಮೂಲಕ 2 ಕೋಟಿಗೆ ಸನ್ನಿಹಿತವಾಗುತ್ತಿದೆ.

ಏಪ್ರಿಲ್ 1 ರಿಂದ ಏಪ್ರಿಲ್ 30ರ ಒಳಗೆ ಭಾರತದಲ್ಲಿ ಸುಮಾರು 65.41 ಲಕ್ಷ ಕೊರೊನಾ ಪ್ರಕರಣಗಳು ಹೊಸದಾಗಿ ದಾಖಲಾಗಿದ್ದು, ಅದರಲ್ಲಿ ಬಹುಪಾಲು ಅರ್ಧಭಾಗ ಅಂದರೆ 31.46 ಲಕ್ಷದಷ್ಟು ಪ್ರಕರಣಗಳು ಕಳೆದ 10 ದಿನಗಳ ಅವಧಿಯಲ್ಲಿ ದಾಖಲಾಗಿವೆ. ಈ ಪ್ರಕರಣಗಳ ಶೇ.73.05ರಷ್ಟು ಭಾಗವನ್ನು ಮಹಾರಾಷ್ಟ್ರ, ಉತ್ತರಪ್ರದೇಶ, ದೆಹಲಿ, ಕರ್ನಾಟಕ, ಕೇರಳ, ಚತ್ತೀಸಗಡ, ಪಶ್ಚಿಮ ಬಂಗಾಳ, ತಮಿಳುನಾಡು, ಆಂಧ್ರಪ್ರದೇಶ ಹಾಗೂ ರಾಜಸ್ಥಾನ ಹೊಂದಿವೆ.

ಇದನ್ನೂ ಓದಿ:
ಲಸಿಕೆ ಪಡೆದವರಲ್ಲೂ ಕೊರೊನಾ ಸೋಂಕು ದೃಢಪಡಲು ಕಾರಣವೇನು? ಇಲ್ಲಿದೆ ಸಂಪೂರ್ಣ ಮಾಹಿತಿ 

ಕೊರೊನಾ ಸೋಂಕು ಹಿಮ್ಮೆಟ್ಟಿಸಲು ಭಾರತಕ್ಕೆ ನೆರವಾಗುತ್ತೇವೆ: ಚೀನಾ