Covid Vaccine: ‘ಕೊವಿಡ್ 19 ಲಸಿಕೆ ಪಡೆದು ಜೀವ ರಕ್ಷಿಸಿಕೊಳ್ಳಿ’-ಗೂಗಲ್ ಡೂಡಲ್ನಿಂದ ವಿಶ್ವಕ್ಕೆ ಸಂದೇಶ
Google Doodle: ವಿಶ್ವದಾದ್ಯಂತ ಅನೇಕ ರಾಷ್ಟ್ರಗಳಲ್ಲಿ ಕೊವಿಡ್ 19 ಲಸಿಕೆ ಅಭಿಯಾನ ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿದ್ದು, ಇದು ಇನ್ನಷ್ಟು ವೇಗವಾಗಿ ನಡೆದರೆ ಇನ್ನೂ ಒಳಿತು ಎಂಬುದು ತಜ್ಞರ ಅನಿಸಿಕೆ.
ಇಡೀ ವಿಶ್ವ ಕೊರೊನಾ ಎರಡನೇ ಅಲೆ ವಿರುದ್ಧ ಹೋರಾಡುತ್ತಿದೆ. ಅದರಲ್ಲೂ ಈ ಬಾರಿ ಕೊರೊನಾಕ್ಕೆ ಅತ್ಯಂತ ಹೆಚ್ಚು ತತ್ತರಿಸಿರುವ ರಾಷ್ಟ್ರ ಭಾರತ. ಬರೀ ಕೊರೊನಾ ಸೋಂಕು ಉಲ್ಬಣಗೊಂಡಿರುವುದಷ್ಟೇ ಅಲ್ಲ, ಅದರೊಂದಿಗೆ ಆಕ್ಸಿಜನ್ ಅಭಾವ, ಬೆಡ್ಗಳ ಕೊರತೆಯಂಥ ಸಮಸ್ಯೆಗಳೂ ತಲೆದೋರಿವೆ. ಅದರ ಮಧ್ಯೆ ಇಂದು ಮೂರನೇ ಹಂತದ ಲಸಿಕೆ ವಿತರಣೆ ಶುರುವಾಗಬೇಕಿತ್ತು. ಆದರೆ ಕೊವಿಡ್ 19 ವ್ಯಾಕ್ಸಿನ್ಗಳ ಅಭಾವ ಉಂಟಾಗಿರುವ ಕಾರಣಕ್ಕೆ ಇಂದು ಎಲ್ಲ ರಾಜ್ಯಗಳಲ್ಲೂ ಲಸಿಕೆ ನೀಡಲು ಸಾಧ್ಯವಾಗುತ್ತಿಲ್ಲ.
ಆದರೆ ಮಾರಣಾಂತಿಕವಾದ ಈ ವೈರಸ್ನಿಂದ ಪಾರಾಗಲು ಲಸಿಕೆ ಪಡೆಯುವುದೊಂದೇ ಮಾರ್ಗ ಎಂದು ವಿಶ್ವ ಆರೋಗ್ಯ ಸಂಸ್ಥೆ ಸೇರಿ, ಹಲವು ಪ್ರಮುಖ ತಜ್ಞರು, ಸಂಶೋಧಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಜನರು ಸ್ವಯಂ ಪ್ರೇರಿತರಾಗಿ ಬಂದು ಲಸಿಕೆ ಪಡೆಯಬೇಕು ಎಂದು ಅರಿವು ಮೂಡಿಸುತ್ತಿದ್ದಾರೆ. ಇದೀಗ ಗೂಗಲ್ ಕೂಡ ತನ್ನ ಡೂಡಲ್ ಮೂಲಕ ಲಸಿಕೆ ಪಡೆಯುವಂತೆ ಜನರನ್ನು ಪ್ರೇರೇಪಿಸುತ್ತಿದೆ.
ವಿಶ್ವದಾದ್ಯಂತ ಅನೇಕ ರಾಷ್ಟ್ರಗಳಲ್ಲಿ ಕೊವಿಡ್ 19 ಲಸಿಕೆ ಅಭಿಯಾನ ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿದ್ದು, ಇದು ಇನ್ನಷ್ಟು ವೇಗವಾಗಿ ನಡೆದರೆ ಇನ್ನೂ ಒಳಿತು ಎಂಬುದು ತಜ್ಞರ ಅನಿಸಿಕೆ. ಕಳೆದವರ್ಷ ಕೊರೊನಾ ಸೋಂಕು ಶುರುವಾದಾಗಿನಿಂದಲೂ ಗೂಗಲ್ ತನ್ನ ಡೂಡಲ್ ಮೂಲಕ ಅರಿವು ಮೂಡಿಸುವ ಕೆಲಸ ಮಾಡುತ್ತಿದೆ. ಜನರನ್ನು ಎಚ್ಚರಿಸುತ್ತಿದೆ. ಇದೀಗ ಲಸಿಕೆಯನ್ನು ಪಡೆಯಲು ಪ್ರೇರೇಪಿಸಿದೆ. GOOGLE ಎಂಬ ಶಬ್ದದ ಎಲ್ಲ ಅಕ್ಷರಗಳಿಗೂ ಫೇಸ್ ಮಾಸ್ಕ್ ಹಾಕಿ, ಲಸಿಕೆ ಪಡೆದ ಸಂಕೇತವಾದ ಬ್ಯಾಂಡ್ ತೊಟ್ಟಿರುವಂತೆ ಚಿತ್ರಿಸಲಾಗಿದೆ. ಅಷ್ಟೇ ಅಲ್ಲ ಎಲ್ಲ ಅಕ್ಷರಗಳೂ ಲಸಿಕೆ ಪಡೆದು ತುಂಬ ಖುಷಿಯಾಗಿರುವಂತೆ ರಚಿಸಲಾಗಿದೆ.
ಹಾಗೇ, ಈ ಡೂಡಲ್ ಮೇಲೆ ಕ್ಲಿಕ್ ಮಾಡಿದರೆ ಲಸಿಕೆ ಪಡೆಯಿರಿ, ಮಾಸ್ಕ್ ಧರಿಸಿ, ಜೀವ ರಕ್ಷಿಸಿಕೊಳ್ಳಿ ಎಂಬ ಸಂದೇಶವನ್ನು ನೋಡಬಹುದು.
ಇದನ್ನೂ ಓದಿ: ಆರೋಗ್ಯ ಸೇವಾ ಚಟುವಟಿಕೆಗಳಿಗೆ ಸಾರಿಗೆ ಸೌಲಭ್ಯ: ಡಿಸಿಎಂ ಲಕ್ಷ್ಮಣ ಸವದಿ
Published On - 12:33 pm, Sat, 1 May 21