ತುಮಕೂರು: ಬೆಳಗಾವಿಯ ಮೂಲದ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ (Suicide) ಮಾಡಿಕೊಂಡ ಬೆನ್ನಲ್ಲೇ ಇದೀಗ ತುಮಕೂರಿನಲ್ಲಿ (Tumakuru) ಮತ್ತೋರ್ವ ಕಾಂಟ್ರಾಕ್ಟ್ ನೇಣಿಗೆ ಶರಣಾಗಿದ್ದಾರೆ. ತುಮಕೂರು ತಾಲೂಕಿನ ದೇವರಾಯನದುರ್ಗದ ಪ್ರವಾಸಿ ಮಂದಿರದಲ್ಲಿ (circuit house) ಇಂದು(ಡಿಸೆಂಬರ್ 30) ನೇಣು ಹಾಕಿಕೊಂಡಿರುವ ಸ್ಥಿತಿಯಲ್ಲಿ ಗುತ್ತಿಗೆದಾರ ಟಿ.ಎನ್.ಪ್ರಸಾದ್(50)ಎನ್ನುವರ ಶವ ಪತ್ತೆಯಾಗಿದೆ.
ಸಾಲ ಬಾಧೆ ತಾಳಲಾರದೇ ಗುತ್ತಿಗೆದಾರ ಪ್ರಸಾದ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಸ್ಥಳಕ್ಕೆ ಕ್ಯಾತಸಂದ್ರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹ ಮರಣೋತ್ತರ ಪರೀಕ್ಷೆ ವರದಿಯ ಬಳಿಕ ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದುಬರಲಿದೆ.
ಯಾದಗಿರಿ: ಕಾಲುವೆ ತಡೆಗೋಡೆಗೆ ಕಾರು ಡಿಕ್ಕಿಯಾಗಿ ಇಬ್ಬರು ದುರ್ಮರಣ ಹೊಂದಿರುವ ಘಟನೆ ಇಂದು(ಶುಕ್ರವಾರ) ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ರಾಜನಕೊಳ್ಳುರ ಗ್ರಾಮದ ಬಳಿ ನಡೆದಿದೆ.
ಕಾರಿನಲ್ಲಿದ್ದ ಮಲ್ಲಿಕಾರ್ಜುನ(35), ಪರಶುರಾಮ್(32) ಮೃತ ದುರ್ವೈವಿಗಳು. ಶಾಲೆಯಿಂದ ಮಕ್ಕಳನ್ನು ಕರೆತರಲು ಕಾಮನಟಗಿಯಿಂದ ನಾರಾಯಣಪುರಕ್ಕೆ ತೆರಳುತ್ತಿದ್ದಾಗ ರಾಜನಕೊಳ್ಳುರ ಗ್ರಾಮದ ಬಳಿ ಕಾಲುವೆ ತಡೆಗೋಡೆಗೆ ಕಾರು ಡಿಕ್ಕಿ ಹೊಡೆದಿದೆ. ಈ ಬಗ್ಗೆ ಕೊಡೆಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುಮಟಾ: 60 ವರ್ಷದ ವೃದ್ಧರೊಒಬ್ಬರು ಕುಮಟಾ ತಾಲೂಕಿನ ಗೋಕರ್ಣ ಕುಡ್ಲೆ ಬೀಚ್ ಬಳಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಜಹತ್ಯೆ ಮಾಡಿಕೊಂಡಿದ್ದಾರೆ. ಕೌಟುಂಬಿಕ ಸಮಸ್ಯೆ ಹಿನ್ನೆಲೆಯಲ್ಲಿ ಲಿಂಗರಾಜ ಸ್ವಾಮಿ(60) ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನುವ ಶಂಕೆ ವ್ಯಕ್ತವಾಗಿದೆ.
ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ಲಿಂಗರಾಜ ಸ್ವಾಮಿ(60) ಶಿವಮೊಗ್ಗದವರು ಎಂದು ತಿಳಿದು ಬಂದಿದ್ದು, ಸ್ಥಳಕ್ಕೆ ಗೋಕರ್ಣ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
Published On - 4:29 pm, Fri, 30 December 22