ಬಿಜೆಪಿ ಆಕಾಂಕ್ಷಿ ಅನಿಲ್ ಕುಮಾರ್ ವಿರುದ್ದ 1300 ಕೋಟಿ ರೂ. ಹಗರಣ ಆರೋಪ: ಲೋಕಾಯುಕ್ತಕ್ಕೆ ದೂರು ನೀಡಿದ ಎಎಪಿ

|

Updated on: Apr 05, 2023 | 1:21 PM

ನಿವೃತ್ತ ಐಎಎಸ್ ಅಧಿಕಾರಿ, ಕೊರಟಗೆರೆ ಬಿಜೆಪಿ ಆಕಾಂಕ್ಷಿ ಅನಿಲ್ ಕುಮಾರ್ ವಿರುದ್ದ 1300 ಕೋಟಿ ಹಗರಣ ಆರೋಪ ಕೇಳಿಬಂದಿದ್ದು, ಲೋಕಾಯುಕ್ತಕ್ಕೆ ಎಎಪಿ ಪಕ್ಷದಿಂದ ದೂರು ನೀಡಲಾಗಿದೆ.

ಬಿಜೆಪಿ ಆಕಾಂಕ್ಷಿ ಅನಿಲ್ ಕುಮಾರ್ ವಿರುದ್ದ 1300 ಕೋಟಿ ರೂ. ಹಗರಣ ಆರೋಪ: ಲೋಕಾಯುಕ್ತಕ್ಕೆ ದೂರು ನೀಡಿದ ಎಎಪಿ
ಬಿಜೆಪಿ ಆಕಾಂಕ್ಷಿ ಅನಿಲ್ ಕುಮಾರ್, ಎಎಪಿ ಪಕ್ಷದ ರಾಜ್ಯ ಉಪಾಧ್ಯಕ್ಷ ಡಾ.ವಿಶ್ವನಾಥ್
Follow us on

ತುಮಕೂರು: ನಿವೃತ್ತ ಐಎಎಸ್ ಅಧಿಕಾರಿ, ಕೊರಟಗೆರೆ ಬಿಜೆಪಿ ಆಕಾಂಕ್ಷಿ ಅನಿಲ್ ಕುಮಾರ್ (Anil Kumar) ವಿರುದ್ದ 1300 ಕೋಟಿ ಹಗರಣ ಆರೋಪ ಕೇಳಿಬಂದಿದ್ದು, ಲೋಕಾಯುಕ್ತಕ್ಕೆ ಎಎಪಿ ದೂರು ನೀಡಿದೆ. ಈ ಕುರಿತಾಗಿ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಎಪಿ ಪಕ್ಷದ ರಾಜ್ಯ ಉಪಾಧ್ಯಕ್ಷ ಡಾ.ವಿಶ್ವನಾಥ್​, ಬಿಬಿಎಂಪಿಯಲ್ಲಿ 2019-20ರಲ್ಲಿ ಅನಿಲ್‌ ಕುಮಾರ್​ ಹಿರಿಯ ಐಎಎಸ್‌ ಅಧಿಕಾರಿಯಾಗಿದ್ದ ವೇಳೆ ಮೂರು ಪ್ರಮುಖ ಅಕ್ರಮಗಳ ಮಾಡಿದ್ದು, ಒಟ್ಟು 1300 ಕೋಟಿ ರೂ. ಹೊಡೆದಿದ್ದಾರೆ ಎಂದು ಆರೋಪಿಸಲಾಗಿದೆ.  ಸ್ಮಾರ್ಟ್‌ ಪಾರ್ಕಿಂಗ್‌ಗೆ 31.6 ಕೋಟಿ ರೂ. ಮಂಜೂರು ಮಾಡಲಾಗಿತ್ತು. ಅಷ್ಟು ಹಣ ಖರ್ಚಾಗದಿದ್ದರೂ ಹೆಚ್ಚುವರಿಯಾಗಿ 2 ಕೋಟಿ ರೂ. ಬಿಡುಗಡೆ ಮಾಡಿದ್ದಾರೆ. ಅನಿಲ್‌ ಕುಮಾರ್‌ ಗುತ್ತಿಗೆ ಸಂಸ್ಥೆಯಾದ ಬಿಲ್ಡಿಂಗ್ಸ್ ಕಂಟ್ರೋಲ್‌ ಸಲ್ಯೂಷನ್‌ ಇಂಡಿಯಾ ಪ್ರೈವೇಟ್‌ ಲಿಮಿಟೆಡ್‌ ಕಂಪನಿಗೆ ಇದನ್ನು ಬಿಡುಗಡೆ ಮಾಡಿಸಿದ್ದಾರೆ. ಕಮಿಷನರ್‌ ಆಗಿದ್ದ ವೇಳೆ ಮಳೆ ನೀರಿನ ಹೂಳು ತೆಗೆಯುವ ಕಾಮಗಾರಿಯಲ್ಲಿ ಅವ್ಯವಹಾರವಾಗಿದೆ ಎಂದು ಆರೋಪಿಸಿದರು.

ಜನರ ತೆರಿಗೆ ಹಣವನ್ನು ಲೂಟಿ

ಎಂಟು ವಲಯಗಳ ಗುತ್ತಿಗೆಯನ್ನು ಮೆಸರ್ಸ್‌ಯೋಗ ಅಂಡ್‌ ಕಂಪನಿ ಎಂಬ ಒಂದೇ ಸಂಸ್ಥೆಗೆ 36 ಕೋಟಿ ರೂ. ಮೊತ್ತಕ್ಕೆ ನೀಡಲಾಗಿದೆ. ಈ ಕಾಮಗಾರಿ ಸರಿಯಾಗಿ ನಡೆಯದಿರುವುದರಿಂದ ಬೆಂಗಳೂರಿನಲ್ಲಿ ಪ್ರವಾಹ ನೋಡಬೇಕಾಯಿತು. ಅಗತ್ಯಕ್ಕಿಂತ ಹೆಚ್ಚು ಹಣ ಬಿಡುಗಡೆ ಮಾಡಿ ಜನರ ತೆರಿಗೆ ಹಣವನ್ನು ಲೂಟಿ ಮಾಡಲಾಗಿದೆ. ಅಲ್ಲದೇ ಕೊಳವೆ ಬಾವಿಗಳ ಕಾಮಗಾರಿಗೆ ಬಿಬಿಎಂಪಿಯು 969 ಕೋಟಿ ರೂ. ಬಿಡುಗಡೆ ಮಾಡಿದೆ. ಇಷ್ಟು ದೊಡ್ಡ ಪ್ರಮಾಣದ ಹಣವು ಹೇಗೆ ಬಳಕೆಯಾಗಬೇಕು ಎಂಬ ಬಗ್ಗೆ ಸೂಕ್ತ ತನಿಖೆಯಾಗಬೇಕು ಎಂದು ಆಗ್ರಹಿಸಿದರು.

ಇದನ್ನೂ ಓದಿ: ಚೆಕ್​ಬೌನ್ಸ್ ಪ್ರಕರಣದಲ್ಲಿ ಬಂಧನ ಭೀತಿ: ಬಿಜೆಪಿ ಶಾಸಕ ಎಂಪಿ ಕುಮಾರಸ್ವಾಮಿಗೆ ಷರತ್ತುಬದ್ಧ ರಿಲೀಫ್

ಇದರಲ್ಲಿ ಒಂದೇ ಕಡೆ 49 ಕೋಟಿ ರೂ. ಖರ್ಚು ಮಾಡಿರುವುದೂ ಇದೆ. ಇದಲ್ಲದೇ, ಕೋವಿಡ್‌ ಚಿಕಿತ್ಸೆಗಾಗಿ ಅಂತಾರಾಷ್ಟ್ರೀಯ ವಸ್ತು ಸಂಗ್ರಹಾಯಲಯದಲ್ಲಿ ಚಿಕಿತ್ಸಾ ಕೇಂದ್ರ ತೆರೆಯಲಾಗಿತ್ತು. ಅಲ್ಲಿಗೆ ಹಾಸಿಗೆ ಮುಂತಾದವುಗಳಿಗೆ ಕೋಟ್ಯಂತರ ಹಣ ಖರ್ಚು ಮಾಡಿರುವುದರಲ್ಲಿಯೂ ಭಾರೀ ಪ್ರಮಾಣದ ಅಕ್ರಮ ನಡೆದಿದೆ. ಎಲ್ಲಾ ಸೇರಿ ಸುಮಾರು 1300 ಕೋಟಿ ರೂ. ಮೊತ್ತದ ಅಕ್ರಮಗಳು ನಡೆದಿವೆ. ಇವೆಲ್ಲವುಗಳ ತನಿಖೆಗಾಗಿ ಲೋಕಾಯುಕ್ತಕ್ಕೆ ದೂರು ನೀಡುತ್ತೇವೆ ಎಂದು ಡಾ. ವಿಶ್ವನಾಥ್​ ಹೇಳಿದರು.

ಚೆಕ್‌ಬೌನ್ಸ್‌ ಪ್ರಕರಣ: ಶಾಸಕ ಎಂ.ಪಿ ಕುಮಾರಸ್ವಾಮಿಗೆ ಸಂಕಷ್ಟ

ಇತ್ತೀಚೆಗೆ ಮೂಡಿಗೆರೆ ಬಿಜೆಪಿ ಶಾಸಕ ಎಂ.ಪಿ ಕುಮಾರಸ್ವಾಮಿಗೆ ಸಂಕಷ್ಟ ಎದುರಾಗಿದ್ದು, ಚೆಕ್‌ಬೌನ್ಸ್‌ ಪ್ರಕರಣದಲ್ಲಿ ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯದಿಂದ ಚಿಕ್ಕಮಗಳೂರು ಎಸ್‌ಪಿ ಮೂಲಕ ಜಾಮೀನು ರಹಿತ ವಾರಂಟ್ ಜಾರಿಗೆ ಸೂಚನೆ ನೀಡಲಾಗಿತ್ತು. ಸದ್ಯ ಬಂಧನ ಭೀತಿ ಹಿನ್ನೆಲೆ ಎಂ.ಪಿ.ಕುಮಾರಸ್ವಾಮಿ ತಡೆಯಾಜ್ಞೆ ಕೋರಿ ಸೆಷನ್ಸ್ ಕೋರ್ಟ್ ಮೊರೆ ಹೋಗಿದ್ದು, ಷರತ್ತುಬದ್ಧ ರಿಲೀಫ್ ನೀಡಿತ್ತು.

ಇದನ್ನೂ ಓದಿ: ಕುಂಬಳಕಾಯಿ ಕಳ್ಳ ಅಂದರೆ ಹೆಗಲು ಯಾಕೆ ಮುಟ್ಟಿ ನೋಡಿಕೊಳ್ಳಬೇಕು: ಕಾಂಗ್ರೆಸ್​ಗೆ ತಿರುಗೇಟು ಕೊಟ್ಟ ಸಿಎಂ ಬೊಮ್ಮಾಯಿ

ಎಂ.ಪಿ.ಕುಮಾರಸ್ವಾಮಿ ಶಿಕ್ಷೆ ಅಮಾನತ್ತಿನಲ್ಲಿಟ್ಟು ಆದೇಶ ಹೊರಡಿಸಿದ್ದು, ಚೆಕ್​ಬೌನ್ಸ್ ಕೇಸ್ ತೀರ್ಪಿನ ಮೊತ್ತದಲ್ಲಿ ಶೇ.20 ರಷ್ಟು ಠೇವಣಿಯನ್ನು 60 ದಿನಗಳಲ್ಲಿ ಇಡಲು ಸೆಷನ್ಸ್ ಕೋರ್ಟ್ ಸೂಚನೆ ನೀಡಿತ್ತು. ವಿಚಾರಣಾ‌ ನ್ಯಾಯಾಲಯದಲ್ಲಿ 50 ಸಾವಿರ ಬಾಂಡ್, ಶ್ಯೂರಿಟಿ ನೀಡಲು ಆದೇಶಿಸಿದೆ. ಹೂವಪ್ಪಗೌಡ ಎಂಬುವರು ಚೆಕ್ ಬೌನ್ಸ್ ಕೇಸ್ ದಾಖಲಿಸಿದ್ದರು. ಒಟ್ಟು 8 ಕೇಸ್​​​ಗಳಲ್ಲಿ 1.38 ಕೋಟಿ ಹಣ ಪಾವತಿಸಬೇಕಿತ್ತು. ಇಲ್ಲವಾದರೆ ತಲಾ 6 ತಿಂಗಳು ಜೈಲು ಶಿಕ್ಷೆ ಅನುಭವಿಸಬೇಕೆಂದು ತೀರ್ಪು ನೀಡಿತ್ತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.