ಕುಂಬಳಕಾಯಿ ಕಳ್ಳ ಅಂದರೆ ಹೆಗಲು ಯಾಕೆ ಮುಟ್ಟಿ ನೋಡಿಕೊಳ್ಳಬೇಕು: ಕಾಂಗ್ರೆಸ್ಗೆ ತಿರುಗೇಟು ಕೊಟ್ಟ ಸಿಎಂ ಬೊಮ್ಮಾಯಿ
ಕಾಂಗ್ರೆಸ್ ನಿಂದ ಐಟಿ ದಾಳಿ ಆರೋಪ ವಿಚಾರವಾಗಿ ನಗರದಲ್ಲಿ ಸಿಎಂ ಬೊಮ್ಮಾಯಿ ಮಾತನಾಡಿದ್ದು, ಕಳ್ಳನ ಜೀವ ಉಳ್ಳುಳ್ಳಗೆ ಅಂತಾರಲ್ಲ ಹಾಗೆ. ಕಾಂಗ್ರೆಸ್ ಅವರು ಕಳ್ಳತನ ಮಾಡಿದ್ದಾರೆ ಅದಕ್ಕೆ ಈ ರೀತಿ ಭಯ ಬೀಳುತ್ತಿದ್ದಾರೆ ಎಂದು ಹೇಳಿದ್ದಾರೆ.
ಬೆಂಗಳೂರು: ಕಳ್ಳನ ಜೀವ ಉಳ್ಳುಳ್ಳಗೆ ಅಂತಾರಲ್ಲ ಹಾಗೆ. ಕಾಂಗ್ರೆಸ್ ಅವರು ಕಳ್ಳತನ ಮಾಡಿದ್ದಾರೆ ಅದಕ್ಕೆ ಈ ರೀತಿ ಭಯ ಬೀಳುತ್ತಿದ್ದಾರೆ ಎಂದು ಸಿಎಂ ಬಸವರಾಜ ಬೊಮ್ಮಾಯಿ (CM Basavaraj Bommai) ಹೇಳಿದರು. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕುಂಬಳಕಾಯಿ ಕಳ್ಳ ಅಂದರೆ ಹೆಗಲು ಯಾಕೆ ಮುಟ್ಟಿ ನೋಡಿಕೊಳ್ಳಬೇಕು. ಚುನಾವಣೆ ಆಯೋಗದ ಅಧೀನದಲ್ಲಿ ಎಲ್ಲವೂ ನಡೆಯುತ್ತವೆ. ಅವರೇ ಎಲ್ಲವೂ ನಿಯಂತ್ರಣ ಮಾಡುತ್ತಿದ್ದಾರೆ. ಅಧಿಕೃತವಾಗಿ ಐಟಿ ಅಧಿಕಾರಿಗಳು ಪ್ರತಿ ಜಿಲ್ಲೆಯಲ್ಲಿ ಈಗಾಗಲೇ ಇದ್ದಾರೆ. ಚುನಾವಣೆ ಆಯೋಗ ಕೂಡಾ ರೇಡ್ ಮಾಡುತ್ತಿದೆ. ಎಲ್ಲಾ ಪಕ್ಷಗಳ ವಸ್ತುಗಳನ್ನು ಸೀಜ್ ಮಾಡಲಾಗುತ್ತಿದೆ. ಚುನಾವಣೆ ಆಯೋಗ ಒಂದು ಸ್ವಾಯತ್ತತೆ ಸಂಸ್ಥೆ. ಅದರ ಕೆಲಸ ಅದು ಮಾಡುತ್ತೆ. ಐಟಿ ರೇಡ್ ಆಗುತ್ತಿರುವುದಕ್ಕೆ ಕಾಂಗ್ರೆಸ್ಗೆ ಭಯ ಶುರುವಾಗಿದೆ ಎಂದು ವಾಗ್ದಾಳಿ ಮಾಡಿದರು.
ಇಷ್ಟು ವರ್ಷ ಕಾಂಗ್ರೆಸ್ ಸಾಕಷ್ಟು ಹಣ ಮಾಡಿದೆ. ಕಾಂಗ್ರೆಸ್ ಅವರಿಗೆ ನಂಬರ್ 2 ಬ್ಲ್ಯಾಕ್ ಮನಿ ಹೊರ ಬರುತ್ತೆ ಎನ್ನುವ ಭಯವಿದೆ. ಕಾಂಗ್ರೆಸ್ ಅವರು ದಾಳಿ ಮಾಡುತ್ತಾರೆ ಅಂತ ಮುಂಚಿತವಾಗಿ ಹೇಳಿ, ದಾಳಿಯ ತೀವ್ರತೆ ಕಡಿಮೆ ಮಾಡುವ ಪ್ಲ್ಯಾನ್ ಮಾಡುತ್ತಿದ್ದಾರೆ. ಅಧಿಕಾರಿಗಳ ಮೇಲೆ ಒತ್ತಡ ಹಾಕಲು ಹೀಗೆ ಮಾಡಲಾಗುತ್ತಿದೆ ಎಂದು ಕಿಡಿಕಾರಿದರು.
ಇದನ್ನು ಓದಿ: ಹಾಸನ ಕ್ಷೇತ್ರದ ಟಿಕೆಟ್ ವಿಚಾರವಾಗಿ ಏನನ್ನೂ ಹೇಳುವುದಿಲ್ಲ, ಪದೇಪದೆ ಪ್ರಶ್ನಿಸಬೇಡಿ ಎಂದ ಹೆಚ್ಡಿ ದೇವೇಗೌಡ
ಇವೆಲ್ಲ ನಡೆಯೊಲ್ಲ. ಯಾರು ಕಳ್ಳರು ಇದ್ದಾರೆ ಅವರು ಸಿಕ್ಕಿ ಹಾಕಿಕೊಳ್ಳುತ್ತಾರೆ. ಬಿಜೆಪಿ ಸೋಲುವ ಭೀತಿಯಿಂದ ದಾಳಿ ಮಾಡಿಸುತ್ತಿದೆ ಎಂಬ ಕಾಂಗ್ರೆಸ್ ಆರೋಪಕ್ಕೂ ಇದಕ್ಕೂ ಯಾವುದೇ ಸಂಬಂಧ ಇಲ್ಲ. ಕಾಂಗ್ರೆಸ್ ಸೋಲುವುದು ನಿಶ್ಚಿತ. ನಮಗೆ ಗೆಲ್ಲುವ ವಿಶ್ವಾಸ ಇದೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.
ಡಿಕೆ ಶಿವಕುಮಾರ್ ವಿರುದ್ಧ ಚುನಾವಣಾಧಿಕಾರಿಗೆ ಬಿಜೆಪಿ ದೂರು
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ವಿರುದ್ಧ ಬಿಜೆಪಿ ನಿನ್ನೆ ರಾಜ್ಯ ಮುಖ್ಯ ಚುನಾವಣಾ ಅಧಿಕಾರಿಗೆ ದೂರು ನೀಡಿದೆ. ಡಿ.ಕೆ.ಶಿವಕುಮಾರ್ ಅವರು ತಮ್ಮ ಅಧಿಕೃತ ಫೇಸ್‍ಬುಕ್ ಪೇಜ್‍ನಲ್ಲಿ ಪೆನ್ ಹಿಡಿದು ದೇಶದ ಭವಿಷ್ಯ ಉಜ್ವಲಗೊಳಿಸಬೇಕಾದ ಯುವಕರಿಗೆ ಆಯುಧಗಳನ್ನು ನೀಡಿ ಅವರ ಭವಿಷ್ಯವನ್ನು ಬಿಜೆಪಿ ಹೇಗೆ ಹಾಳುಗೆಡವಿದೆ ಎನ್ನುವುದಕ್ಕೆ ನಿನ್ನೆ ಸಾತನೂರಿನ ಬಳಿ ನಡೆದ ಘಟನೆಯೇ ಸಾಕ್ಷಿ ಎಂದು ಬಿಜೆಪಿ ವಿರುದ್ಧ ಆಧಾರರಹಿತ ಆರೋಪ ಮಾಡಿದ್ದರು.
ಇದನ್ನೂ ಓದಿ: ಕನ್ನಡಿಗರ ವಿರುದ್ಧ ಹೇಳಿಕೆ, ಶಾಸಕ ಮುನಿರತ್ನರನ್ನು ಕರ್ನಾಟಕದಿಂದ ಬಹಿಷ್ಕರಿಸುವಂತೆ ನಮ್ಮ ಕರ್ನಾಟಕ ಸೇನೆ ಆಗ್ರಹ
ಈ ಕುರಿತಾಗಿ ವಿಧಾನ ಪರಿಷತ್ ಸದಸ್ಯ ಹಾಗೂ ರಾಜ್ಯ ಎಸ್ಸಿ ಮೋರ್ಚಾ ಅಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ಹಾಗೂ ಬಿಜೆಪಿ ರಾಜ್ಯ ವಕೀಲ ಪ್ರಕೋಷ್ಟದ ಸಂಚಾಲಕ ಯೋಗೇಂದ್ರ ಹೊಡಗಟ್ಟ ದೂರು ನೀಡಿದ್ದಾರೆ. ಜೊತೆಗೆ ಸೂಕ್ತ ಕಾನೂನು ಕ್ರಮ ಜರುಗಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ಮನವಿ ಮಾಡಿದ್ದರು.
ಅಲ್ಲದೆ, ಒಂದು ಜನಾಂಗದ ಮತದಾರರನ್ನು ಬಿಜೆಪಿ ವಿರುದ್ಧ ಎತ್ತಿಕಟ್ಟುವ ಕೆಲಸ ಮಾಡಿ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಎಂದು ಆರೋಪಿಸಲಾಗಿದೆ. ಬಿಜೆಪಿ ವಿರುದ್ಧ ಡಿ.ಕೆ.ಶಿವಕುಮಾರ್ ಅವರು ಚುನಾವಣೆ ಸಂದರ್ಭದಲ್ಲಿ ಆಧಾರರಹಿತವಾಗಿ ಗಂಭೀರ ಆರೋಪ ಮಾಡಿದ್ದು, ಇದರ ಹಿಂದೆ ಮತದಾರರ ಮೇಲೆ ಪ್ರಭಾವ ಬೀರುವ ಸಂಚು ಇದೆ ಎಂದು ಗಮನ ಸೆಳೆಯಲಾಗುತ್ತಿದೆ ಎನ್ನಲಾಗುತ್ತಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 11:18 am, Wed, 5 April 23