ಕೈಗೆ ಬಿಜೆಪಿ ರಿವರ್ಸ್ ಆಪರೇಷನ್, ಹಲವು ಕ್ಷೇತ್ರಗಳ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳು ಬಿಜೆಪಿ ಸೇರ್ಪಡೆ: ಇಲ್ಲಿದೆ ಪಟ್ಟಿ
ಈ ಬಾರಿ ವಿಧಾನಸಭೆ ಚುನಾವಣೆಯ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳಾಗಿದ್ದ ಹಲವು ನಾಯಕರುಗಳು ಬಿಜೆಪಿ ಸೇರಿದ್ದಾರೆ. ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದವರ ಪಟ್ಟಿ ಇಂತಿದೆ.
ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆ(Karnataka Assembly Elections 2023) ಸಮೀಪಿಸುತ್ತಿದ್ದಂತೆಯೇ ಪಕ್ಷಾಂತರ ಪರ್ವ ಶುರುವಾಗಿದ್ದು, ರಾಜಕೀಯ ನಾಯಕರು ಒಂದು ಪಕ್ಷದಿಂದ ಮತ್ತೊಂದು ಪಕ್ಷದತ್ತ ಮುಖ ಮಾಡುತ್ತಿದ್ದಾರೆ. ಹಲವು ಕ್ಷೇತ್ರಗಳ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳು ಇದೀಗ ಬಿಜೆಪಿ ಸೇರ್ಪಡೆಯಾಗಿದ್ದಾರೆ. ಇಂದು(ಏಪ್ರಿಲ್ 05) ಬೆಂಗಳೂರಿನ ಮಲ್ಲೇಶರಂನಲ್ಲಿರುವ ರಾಜ್ಯ ಕೇಂದ್ರ ಕಚೇರಿಯಲ್ಲಿ ಕೂಡ್ಲಿಗಿ, ಗುರುಮಿಠಕಲ್ ಹಾಗೂ ರಾಮದುರ್ಗ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳು ಬಿಜೆಪಿ ಸೇರಿದರು. ಕಾಂಗ್ರೆಸ್ ಆಪರೇಷನ್ ಹಸ್ತಕ್ಕೆ ಇದೀಗ ಬಿಜೆಪಿ ರಿವರ್ಸ್ ಆಪರೇಷನ್ ಮಾಡಿದೆ. ಕೂಡ್ಲಿಗಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯನ್ನೇ ಶ್ರೀರಾಮುಲು ಬಿಜೆಪಿಗೆ ಕರೆತರುವಲ್ಲಿ ಯಶಸ್ವಿಯಾಗಿದ್ದಾರೆ.
ಹೌದು…ಕೂಡ್ಲಿಗಿಯ ಲೋಕೇಶ್ ನಾಯ್ಕ್ ಅವರು ಇಂದು(ಏಪ್ರಿಲ್ 05) ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದರು. ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಸಚಿವ ಶ್ರೀರಾಮುಲು ಸಮ್ಮುಖದಲ್ಲಿ ಸೇರ್ಪಡೆಯಾದರು. ಈ ಬಾರಿ ಅವರು ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದ್ರೆ, ಎನ್.ವೈ.ಗೋಪಾಲಕೃಷ್ಣ ಅವರು ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿದ್ದು, ಅವರಿಗೆ ಈ ಬಾರಿ ಕೂಡ್ಲಿಗಿ ಟಿಕಟ್ ಖಚಿತ ಎನ್ನಲಾಗಿದೆ. ಇದರಿಂದ ಅಸಮಾಧಾನಗೊಂಡಿದ್ದ ಲೋಕೇಶ್ ನಾಯ್ಕ್ ಅವರಿಗೆ ಶ್ರೀರಾಮುಲು ಗಾಳ ಹಾಕಿ ಬಿಜೆಪಿಗೆ ಕರೆತಂದಿದ್ದಾರೆ. ಕೂಡ್ಲಿಗಿ ಕ್ಷೇತ್ರದ ಟಿಕೆಟ್ಗೆ ಬೇಡಿಕೆಯೊಂದಿಗೆ ಲೋಕೇಶ್ ನಾಯ್ಕ್ ಬಿಜೆಪಿ ಸೇರ್ಪಡೆಯಾಗಿದ್ದಾರೆ ಎಂದು ತಿಳಿದುಬಂದಿದೆ.
ಬಿಜೆಪಿಯೇ ಭರವಸೆ !
ರಾಜ್ಯಾಧ್ಯಕ್ಷರಾದ ಶ್ರೀ @nalinkateel ಅವರ ಸಮ್ಮುಖದಲ್ಲಿ ಇಂದು ರಾಜ್ಯ ಬಿಜೆಪಿ ಕಾರ್ಯಾಲಯದಲ್ಲಿ ಮಂಡ್ಯದ ಮಾಜಿ ಸಂಸದರಾದ ಶ್ರೀ ಎಲ್. ಆರ್. ಶಿವರಾಮೇ ಗೌಡ, ಪ್ರಮುಖರಾದ ಶ್ರೀ ಯೋಗೇಶ್ ಬೆಸ್ತದ್, ಶ್ರೀ ರಾಮಪ್ಪ, ಶ್ರೀ ಮಂಜು ಹಾಗೂ ಅವರ ಬೆಂಬಲಿಗರು ಬಿಜೆಪಿಗೆ ಸೇರ್ಪಡೆಗೊಂಡರು. #BJPYeBharavase #JoinBJP 1/2 pic.twitter.com/UgdOtox0sk
— BJP Karnataka (@BJP4Karnataka) April 5, 2023
ಮಾಜಿ ಸಂಸದ ಎಲ್ಆರ್ ಶಿವರಾಮೇಗೌಡ ಬಿಜೆಪಿ ಸೇರ್ಪಡೆ
ಇನ್ನು ಮಂಡ್ಯ ಮಾಜಿ ಸಂಸದ ಎಲ್.ಆರ್. ಶಿವರಾಮೇಗೌಡ ಅವರೂ ಸಹ ಅಧಿಕೃತವಾಗಿ ಇಂದು ಬಿಜೆಪಿ ಸೇರ್ಪಡೆಯಾದರು. ಮಲ್ಲೇಶರಂನ ಬಿಜೆಪಿ ಕಚೇರಿಯಲ್ಲಿ ಮಾಜಿ ಸಂಸದ ಎಲ್. ಆರ್. ಶಿವರಾಮೇಗೌಡ ಮತ್ತು ಅವರ ಪುತ್ರ ಚೇತನ್ ಗೌಡ ಬಿಜೆಪಿ ಸೇರ್ಪಡೆಯಾದರು. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ, ಸಚಿವರಾದ ಡಾ. ಸುಧಾಕರ್, ಗೋಪಾಲಯ್ಯ, ಮಂಡ್ಯ ಬಿಜೆಪಿ ಜಿಲ್ಲಾಧ್ಯಕ್ಷ ಉಮೇಶ್ ಸಮ್ಮುಖದಲ್ಲಿ ಸೇರಿದರು.
ಗುರುಮಿಠಕಲ್ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಬಿಜೆಪಿ ಸೇರ್ಪಡೆ
ಗುರುಮಿಠಕಲ್ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ವೈದ್ಯ ಯೋಗೇಶ್ ಬೆಸ್ತರ್ ಸಹ ಬಿಜೆಪಿ ಸೇರಿದರು. ಬಾಬುರಾವ್ ಚಿಂಚನಸೂರು ಅವರು ಇತ್ತೀಚೆಗೆ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿದ್ದರು. ಈ ಹಿನ್ನೆಲೆಯಲ್ಲಿ ಈ ಬಾರಿ ಗುರುಮಿಠಕಲ್ ಕಾಂಗ್ರೆಸ್ ಅವರಿಗೆ ಫಿಕ್ಸ್ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಅಸಮಾಧಾನಗೊಂಡ ವೈದ್ಯ ಯೋಗೇಶ್ ಬಿಜೆಪಿ ಸೇರಿದರು.
ರಾಮದುರ್ಗ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಬಿಜೆಪಿಗೆ
ಇನ್ನು ರಾಮದುರ್ಗ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಚಿಕ್ಕ ರೇವಣ್ಣ ಸಹ ಬಿಜೆಪಿ ಸೇರಿದರು. ಅಶೋಕ್ ಪಟ್ಟಣ್ ಹಾಗೂ ಚಿಕ್ಕ ರೇವಣ್ಣ ಕಾಂಗ್ರೆಸ್ ಟಿಕೆಟ್ಗಾಗಿ ಅರ್ಜಿ ಸಲ್ಲಿಸಿದ್ದರು. ಆದರೆ, ಸಿದ್ದರಾಮಯ್ಯನವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಅಶೋಕ್ ಪಟ್ಟಣ್ ಅವರಿಗೆ ಟಿಕೆಟ್ ಫಿಕ್ಸ್ ಆಗಿದ್ದರಿಂದ ಚಿಕ್ಕ ರೇವಣ್ಣ ಕಾಂಗ್ರೆಸ್ ತೊರೆದಿದ್ದಾರೆ.
ಈ ಹಿಂದೆ ಖುದ್ದು ಸಿದ್ದರಾಮಯ್ಯ ಅವರೇ ಅಶೋಕ್ ಪಟ್ಟಣ್ ಹಾಗೂ ಚಿಕ್ಕ ರೇವಣ್ಣ ನಡುವೆ ಸಂಧಾನ ಮಾಡಿದ್ದರು. ಚಿಕ್ಕ ರೇವಣ್ಣ ಅವರಿಗೆ ಮುಂದೆ ಉತ್ತಮ ಸ್ಥಾನಮಾನ ನೀಡುವಾಗಿ ಸಿದ್ದರಾಮಯ್ಯ ಮನವೊಲಿಸಿದ್ದರು. ಆದ್ರೆ, ಇದೀಗ ಸಿದ್ದರಾಮಯ್ಯನವರ ಮಾತಿಗೂ ಬೆಲೆ ಕೊಡದೇ ಏಕಾಏಕಿ ಕಾಂಗ್ರಸ್ ತೊರೆದು ಬಿಜೆಪಿ ಸೇರಿ ಅಚ್ಚರಿ ಮೂಡಿಸಿದ್ದಾರೆ.
ಕರ್ನಾಟಕ ಅಸೆಂಬ್ಲಿ ಚುನಾವಣೆ ಕುರಿತಾದ ತಾಜಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ರಾಜ್ಯ ರಾಜಕಾರಣದ ಕ್ಷಣ ಕ್ಷಣದ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ
Published On - 11:52 am, Wed, 5 April 23