Kenda Seve: ಚುನಾವಣೆ ಸಮಯ -ಕೆಂಡ ತುಳಿದರೆ ಸಾಕು ಗೆಲುವಾಗುತ್ತದೆ ಎಂದು ಪುತ್ರನ ಜೊತೆ ಕೆಂಡ ತುಳಿದ ಎಸ್.ಎಸ್. ಮಲ್ಲಿಕಾರ್ಜುನ!
ರಾಜಕಾಣಿಯೊಬ್ಬರು ತಮ್ಮ ಇಷ್ಟಾರ್ಥ ಸಿದ್ದಿಗಾಗಿ ಬೆಂಕಿ ಕೆಂಡ ತುಳಿದು ಗಮನ ಸೆಳೆದ ಪ್ರಸಂಗ. ಪತ್ನಿ ಪುತ್ರನ ಜೊತೆಗೆ ವೀರಭದ್ರೇಶ್ವರ ಸನ್ನಿಧಿಗೆ ಬಂದ ಆ ನಾಯಕ, ಕಾಂಗ್ರೆಸ್ ಅಭ್ಯರ್ಥಿ ಎಸ್.ಎಸ್. ಮಲ್ಲಿಕಾರ್ಜುನ ತಮ್ಮ ಪುತ್ರ ಮತ್ತು ಪುತ್ರಿಯ ಜೊತೆಗೆ ಕೆಂಡ ತುಳಿದು ಹರಕೆ ತೀರಿಸಿದ್ದಾರೆ.
ಇಷ್ಟಾರ್ಥ ಸಿದ್ಧಿ ಎಂಬ ಮಾತು ಕೇಳಿದ ತಕ್ಷಣವೇ ಅದರೊಟ್ಟಿಗೆ ಬರುವ ಮತ್ತೊಂದು ಶಬ್ದ ರಾಜಕಾರಣ. ಕಾರಣ ಈ ವಿಚಾರದಲ್ಲಿ ರಾಜಕಾಣಿಗಳು ಮುಂದೆ. ಈಗ ಹೇಳಿ ಕೇಳಿ ಚುನಾವಣೆ. ಇಂತಹ ಸಂದರ್ಭದಲ್ಲಿ ಕೇಳಬೇಕೆ? ಇಲ್ಲಿದೆ ನೋಡಿ ರಾಜಕಾಣಿಯೊಬ್ಬರು ತಮ್ಮ ಇಷ್ಟಾರ್ಥ ಸಿದ್ದಿಗಾಗಿ ಬೆಂಕಿ ಕೆಂಡ ತುಳಿದು ಗಮನ ಸೆಳೆದ ಪ್ರಸಂಗ. ಪತ್ನಿ ಪುತ್ರನ ಜೊತೆಗೆ ವೀರಭದ್ರೇಶ್ವರ ಸನ್ನಿಧಿಗೆ ಬಂದ ಆ ನಾಯಕ ತನ್ನ ಪುತ್ರನ ಜೊತೆಗೆ ಕೆಂಡ ತುಳಿದು (Kenda Seve) ಹರಕೆ ತೀರಿಸಿದ್ದಾರೆ. ಇಲ್ಲಿದೆ ನೋಡಿ ಕೆಂಡ ರಾಜಕೀಯ ಸ್ಟೋರಿ. ಅದು ದಾವಣಗೆರೆ ನಗರದ ಹಳೇ ಪೇಟೆಯಲ್ಲಿ (Davanagere North Assembly constituency) ಬರುವ ವೀರಭದ್ರೇಶ್ವರ ದೇವಸ್ಥಾನ. ಇಲ್ಲಿ ಪ್ರತಿ ವರ್ಷ ಕೆಂಡೋತ್ಸವ ನಡೆಯುತ್ತದೆ. ಯಾರಿಗಾದರೂ ತಮ್ಮ ಇಷ್ಟಾರ್ಥಗಳ ಪೂರೈಕೆ ಆಗಬೇಕೆಂದರೆ ಇಲ್ಲಿ ಕೆಂಡತುಳಿಯಬೇಕು. ಇದು ಚುನಾವಣೆಯ ಸಮಯ. ಎಲ್ಲರಗಿಂತ ಹೆಚ್ಚು ಇಷ್ಟಾರ್ಥಗಳು ರಾಜಕಾರಣಿಗಳದ್ದೇ ಇರುತ್ತವೆ. ಮೇಲಾಗಿ ಸಾವಿರಾರು ಭಕ್ತರಿಗಿಂತ ಈ ರಾಜಕಾರಣಿಗಳ ಬೇಡಿಕೆಗಳು ಮಹತ್ವ ಪಡೆದುಕೊಳ್ಳುತ್ತವೆ. ಇದೇ ರೀತಿ ಇಂದು ಬುಧವಾರ ಬೆಳಿಗ್ಗೆಯೇ ಪತ್ನಿ ಪ್ರಭಾ ಮಲ್ಲಿಕಾರ್ಜುನ, ಮಕ್ಕಳ ಸಹಿತರಾಗಿ ಬಂದ ಮಾಜಿ ಸಚಿವ ಹಾಗೂ ದಾವಣಗೆರೆ ಉತ್ತರ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ (Congress) ಅಭ್ಯರ್ಥಿ ಎಸ್.ಎಸ್. ಮಲ್ಲಿಕಾರ್ಜುನ (SS Mallikarjun) ಅವರು ವೀರಭದ್ರನ ಸನ್ನಿಧಿಗೆ ಬಂದಿದ್ದಾರೆ.
ಅಲ್ಲಿ ತಮ್ಮ ಪುತ್ರ ಸಮರ್ಥ ಶಾಮನೂರು ಜೊತೆಗೆ ಕೆಂಡ ತುಳಿದಿದ್ದಾರೆ. ಇಲ್ಲಿ ಕೆಂಡ ತುಳಿದರೆ ಸಾಕು ಒಳ್ಳೆಯದಾಗುತ್ತದೆ. ವಿಶೇಷ ಅಂದ್ರೆ ಈಗ ವಿಧಾನ ಸಭೆ ಚುನಾವಣೆ. ಕೆಂಡ ತುಳಿಯುವ ಮೊದಲು ವೀರಭದ್ರೇಶ್ವರನಿಗೆ ಸುಮಾರು ಅರ್ಧ ಗಂಟೆ ಕಾಲ ವಿಶೇಷ ಪೂಜೆ ಸಲ್ಲಿಸಿದರು. ಜೊತೆಗೆ ಕೊರಳಲ್ಲಿನ ವಜ್ರದ ಹರಳು ಇರುವ ಚಿನ್ನದ ಚೈನ್ ಹಾಗೂ ಉಂಗುರಕ್ಕೂ ಪೂಜೆ ಮಾಡಿಸಿದ್ದು ವಿಶೇಷವಾಗಿತ್ತು.
ಮೊನ್ನೆ ತಾನೆ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿದ್ದಾರೆ ಮಲ್ಲಿಕಾರ್ಜುನ. ಇನ್ನೂ ಗ್ರಾಮಾಂತರ ಭಾಗದಲ್ಲಿ ಚುನಾವಣೆ ಆರಂಭಿಸಬೇಕು. ಇದಕ್ಕೆ ಪೂರ್ವಕವಾಗಿ ವೀರಭದ್ರೇಶ್ವರನ ಕೆಂಡದ ಹರಕೆ ತಿರಿಸಿ ಪ್ರಚಾರಕ್ಕೆ ಧುಮುಕುವ ಪ್ಲಾನ್ ಮಾಡಿಕೊಂಡಿದ್ದಾರೆ. ನಿಗಿ ನಿಗಿ ಸುಡುತ್ತಿರುವ ಕೆಂಡದ ಮೇಲೆ ನಡೆದಾಡಿ ಭಕ್ತಿ ಮೆರೆದರು. ಅವರ ಅಪಾರ ಬೆಂಬಲಿಗರು ಸಹ ಇಲ್ಲಿ ಸೇರಿದ್ದರು. ಈ ಬಗ್ಗೆ ಮಾತಾಡಿದ ಮಲ್ಲಿಕಾರ್ಜುನ ಪ್ರತಿವರ್ಷದಂತೆ ಈ ವರ್ಷವೂ ಕೆಂಡ ತುಳಿದ್ದೇನೆ ಎಂದು ತಮ್ಮ ರಾಜಕೀಯ ಎದುರಾಳಿಗಳ ವಿರುದ್ಧ ವಾಗ್ದಾಳಿ ನಡೆಸಿದರು.
ದಾವಣಗೆರೆ ಹಳೇ ಪೇಟೆಯ ವೀರಭದ್ರನ ಮಹಿಮೆ ಅಪಾರ. ಬೆಳಿಗ್ಗೆ ಬಂದು ಕೆಂಡ ತುಳಿದ ಭಕ್ತರು ಅಸ್ತ್ರ ಸೇವೆ ಮಾಡುತ್ತಾರೆ. ಅಂದ್ರೆ ಕೈ, ಕಾಲು, ಮುಖ ಹಾಗೂ ತುಟಿಗಳಲ್ಲಿ ಕಬ್ಬಿಣದ ಅಸ್ತ್ರಗಳನ್ನ ಹಾಕಿಸಿಕೊಳ್ಳುತ್ತಾರೆ. ಹೀಗೆ ಹಾಕಿದ ಬಳಿಕ ರಕ್ತ ಬಾರದಂತೆ ಅದಕ್ಕೊಂದಿಷ್ಟು ಪ್ರಸಾದ ಹಚ್ಚುತ್ತಾರೆ. ನಿರಂತರವಾಗಿ ಶತಮಾನಗಳಿಂದ ಇಂತಹ ಸಂಪ್ರದಾಯ ಇಲ್ಲಿ ನಡೆದುಕೊಂಡು ಬಂದಿದೆ. ಮೇಲಾಗಿ ಇಷ್ಟಾರ್ಥಕ್ಕೆ ಹೇಳಿ ಮಾಡಿಸಿದ ದೇವಸ್ಥಾನ. ಬಹುತೇಕರು ಈ ವರ್ಷ ಅಂದು ಕೊಂಡಿದ್ದು ಪೂರೈಕೆ ಆದ್ರೆ ಮುಂದಿನ ವರ್ಷವು ಕೆಂಡ ತುಳಿಯುವುದು, ಅಸ್ತ್ರ ಹಾಕಿಸಿಕೊಳ್ಳುವುದನ್ನ ತಪ್ಪಿಸಲ್ಲ.
ಒಟ್ಟಾರೆ ಬೆಳಿಗ್ಗೆಯಿಂದ ದಾವಣಗೆರೆ ನಗರದಲ್ಲಿ ಕೆಂಡ ರಾಜಕೀಯ ನಡೆಯಿತು. ಇದೇ ವೇಳೆ ಜಾತ್ರೆಯಲ್ಲಿ ಅಸ್ತ್ರ ಪವಾಡ ಸಹ ನಡೆಸಿದ್ದು ಹೆಚ್ಚು ಗಮನ ಸೆಳೆಯಿತು. ಪ್ರತಿ ಚುನಾವಣೆ ವೇಳೆ ಬಿಜೆಪಿ ಮುಖಂಡರು ಸಹ ಇಲ್ಲಿಗೆ ಬಂದು ದರ್ಶನ ಪಡೆಯುತ್ತಿದ್ದರು. ಆದ್ರೆ ಈ ವರ್ಷ ಕಂಡು ಬರಲಿಲ್ಲ. ಹಳೇ ಪೇಟೆ ವೀರಭದ್ರೇಶ್ವರ ಪುಣ್ಯ ಕ್ಷೇತ್ರ ಅಂದ್ರೆ ಪವಿತ್ರ ಕ್ಷೇತ್ರ. ಇಂತಹ ಕ್ಷೇತ್ರದಲ್ಲಿ ಬೆಂಕಿ ಮೇಲೆ ನಡೆದು ಚುನಾವಣೆ ಎಂಬ ಅದೃಷ್ಟದ ಅಖಾಡಕ್ಕೆ ಮುಂದಾಗಿದ್ದಾರೆ ಎಸ್ ಎಸ್ ಮಲ್ಲಿಕಾರ್ಜುನ.
ವರದಿ: ಬಸವರಾಜ್ ದೊಡ್ಮನಿ, ಟಿವಿ 9, ದಾವಣಗೆರೆ
ಕರ್ನಾಟಕ ಅಸೆಂಬ್ಲಿ ಚುನಾವಣೆ ಕುರಿತಾದ ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:03 pm, Wed, 5 April 23