ಕನ್ನಡಿಗರ ವಿರುದ್ಧ ಹೇಳಿಕೆ, ಶಾಸಕ ಮುನಿರತ್ನರನ್ನು ಕರ್ನಾಟಕದಿಂದ ಬಹಿಷ್ಕರಿಸುವಂತೆ ನಮ್ಮ ಕರ್ನಾಟಕ ಸೇನೆ ಆಗ್ರಹ
ಕನ್ನಡಿಗರ ಮೇಲೆ ಹಲ್ಲೆ ನಡೆಸುವಂತೆ ಶಾಸಕ ಮುನಿರತ್ನ ವಿರುದ್ಧ ಪ್ರಚೋದನಕಾರಿ ಹೇಳಿಕೆ ಆರೋಪಿಸಲಾಗಿತ್ತು. ಸದ್ಯ ಈ ಕುರಿತಾಗಿ ಕರ್ನಾಟಕ ಸೇನೆಯ ರಾಜ್ಯಧ್ಯಕ್ಷ ಎಂ. ಬಸವರಾಜ್ ಪಡ್ಕೋಟೆ ಅಣ್ಣನವರ ನೇತೃತ್ವದಲ್ಲಿ ಬಿಜೆಪಿ ಕಚೇರಿಗೆ ಭೇಟಿ ನೀಡಿ ಮನವಿ ಪತ್ರ ಸಲ್ಲಿಸಲಾಗಿದೆ.
ಬೆಂಗಳೂರು: ಇತ್ತೀಚೆಗೆ ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಜಾಲಹಳ್ಳಿ ವಾರ್ಡಿನ ಖಾತಾನಗರಕ್ಕೆ ಯಾರಾದರೂ ಬಂದರೆ ಹೊಡೆದು ಕಳುಹಿಸಿರಿ ಎಂದು ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನ (Minister Munirathna) ಅವರು ಬಹಿರಂಗ ಹೇಳಿಕೆ ನೀಡಿದ್ದರು. ಕನ್ನಡಿಗರ ಮೇಲೆ ಹಲ್ಲೆ ನಡೆಸುವಂತೆ ಮುನಿರತ್ನ ಚುನಾವಣಾ ಪ್ರಚಾರದ ಸಮಯದಲ್ಲಿ ಕರೆ ನೀಡಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಹನುಮಂತರಾಯಪ್ಪ ಅವರು ಕೂಡ ದೂರು ನೀಡಿದ್ದರು. ಸದ್ಯ ಈ ಕುರಿತಾಗಿ ಇಂದು ಕರ್ನಾಟಕ ಸೇನೆಯ ರಾಜ್ಯಧ್ಯಕ್ಷ ಎಂ. ಬಸವರಾಜ್ ಪಡ್ಕೋಟೆ ಅಣ್ಣನವರ ನೇತೃತ್ವದಲ್ಲಿ ಬಿಜೆಪಿ ಕಚೇರಿಗೆ ಭೇಟಿ ನೀಡಿ ಮನವಿ ಪತ್ರ ಸಲ್ಲಿಸಲಾಗಿದೆ. ಜೊತೆಗೆ ಅವರನ್ನು ಕರ್ನಾಟಕದಿಂದ ಬಹಿಷ್ಕಾರ ಮಾಡಬೇಕು ಹಾಗೂ ಪಕ್ಷದಿಂದ ಉಚ್ಚಾಟನೆ ಮಾಡಬೇಕೆಂದು ನಮ್ಮ ಕರ್ನಾಟಕ ಸೇನೆ ವತಿಯಿಂದ ಒತ್ತಾಯಿಸಲಾಗಿದೆ.
ಸಚಿವ ಮುನಿರತ್ನ ಅವರು ಸಾರ್ವಜನಿಕ ಸಭೆಯಲ್ಲಿ ತಮಿಳಿನಲ್ಲಿ ಮಾತನಾಡುತ್ತ ತಮಿಳು ಭಾಷಿಕರು ಕನ್ನಡ ಭಾಷಿಕರ ಮೇಲೆ ಹಲ್ಲೆ ಮಾಡುವಂತೆ ಸೂಚನೆ ನೀಡಿರುವ ಹೇಳಿಕೆ ಸಮೇತ ಕುಸುಮಾ ಅವರು ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದರು. ಈ ಮೂಲಕ ತಮಿಳು ಮತ್ತು ಕನ್ನಡಿಗರ ನಡುವೆ ಸಂಘರ್ಷಕ್ಕೆ ಎಡೆಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು.
ಸಚಿವ ಮುನಿರತ್ನ ಸ್ಪಷ್ಟಣೆ
ಈ ಕುರಿತಾಗಿ ಸ್ಪಷ್ಟಣೆ ನೀಡಿರುವ ಸಚಿವ ಮುನಿರತ್ನ, ನಾನು ಒಕ್ಕಲಿಗರು ಹಾಗೂ ಮಹಿಳೆಯರನ್ನು ತೇಜೋವಧೆ ಮಾಡಿಲ್ಲ. ನಾನೇನಾದರೂ ತೇಜೋವಧೆ ಮಾಡಿದ್ದರೆ ರಾಜಕೀಯ ನಿವೃತ್ತಿ ನೀಡುತ್ತೇನೆ ಎಂದಿದ್ದರು. ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡುವವರನ್ನು ಹೊಡೆದೋಡಿಸಿ ಎಂದು ಹೇಳಿದ್ದೆ ಅಷ್ಟೇ. ಒಕ್ಕಲಿಗ ಪದ ಬಳಸಿದರೆ ನಾನು ನೇಣುಗಂಬಕ್ಕೆ ಹೋಗಲು ಸಿದ್ಧನಿರುವೆ ಎಂದು ಹೇಳಿದ್ದರು.
ಸುನಂದಾ ಬೋರೇಗೌಡ ಕೂಡ ಒಕ್ಕಲಗರೇ. ಅವರ ಮೇಲೆ ಮುಸ್ಲಿಂ ಮಹಿಳೆ ಹಲ್ಲೆ ಮಾಡಿದ್ದಾರೆ. ಅಲ್ಲಿ ಇವರಿಗೆ ಒಕ್ಕಲಿಗ ಹೆಣ್ಣುಮಗಳು ನೆನಪಿಗೆ ಬಂದಿಲ್ವಾ? ಅವರ ಮನೆಗೆ ಹೋಗಿ ಸನ್ಮಾನ ಮಾಡುತ್ತಾರೆ ಅಂದರೆ ಏನ್ ಹೇಳೋದು ಎಂದು ಪ್ರಶ್ನಿಸಿದರು. ನಾನೀಗ ಬಿಜೆಪಿಯ ಒಬ್ಬ ನಿಷ್ಠಾವಂತ ಕಾರ್ಯಕರ್ತ ಅಷ್ಟೇ. ಅವರು ಹೇಳಿದ ಮಾತು ನನ್ನ ಬಾಯಲ್ಲಿ ಬಂದಿದ್ದರೆ ನೇಣು ಹಾಕಿಕೊಳ್ಳಲು ನಾನು ಸಿದ್ದ. ಅದು ಸುಳ್ಳಾದರೆ ಅವರು ನೇಣು ಹಾಕಿಕೊಳ್ಳುತ್ತಾರಾ ಎಂದು ಸವಾಲು ಹಾಕಿದ್ದರು.
ಇದನ್ನೂ ಓದಿ: ಲಿಂಗಾಯತರ ಬಗ್ಗೆ ಸಿಟಿ ರವಿ ಹೇಳಿಕೆ ವೈರಲ್: ಮೂವರು ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ ಎಫ್ಐಆರ್
ಡಿ.ಕೆ.ಸುರೇಶ್ ವಿರುದ್ಧ ಮುನಿರತ್ನ ವಾಗ್ದಾಳಿ
ನಾನು ಯಾವ ಭಾಷೆಯಲ್ಲಿ ಮಾತಾಡಿದರೂ ಮಾತೃ ಭಾಷೆ ಮರೆಯಲ್ಲ. ರಾಜಕೀಯಕ್ಕೋಸ್ಕರ ಕೀಳುಮಟ್ಟದ ಹೇಳಿಕೆ ನೀಡಬಾರದು ಎಂದು ಡಿ.ಕೆ.ಸುರೇಶ್ ವಿರುದ್ಧ ಮುನಿರತ್ನ ವಾಗ್ದಾಳಿ ಮಾಡಿದರು. ಈ ಹಿಂದೆ 5 ಭಾಷೆಗಳಲ್ಲಿ ನನ್ನ ಜೊತೆ ಸುರೇಶ್ ಮಾತನಾಡಿದ್ದಾರೆ. ತೆಲುಗು, ತಮಿಳು, ಮಲಯಾಳಂ ಮಾತಾಡಿ ಮತ ಸಿಗುತ್ತೆ ಎಂದಿದ್ದರು. ಬೇರೆ ಭಾಷೆ ಮಾತಾಡಿದರೆ ನನ್ನ ಗೆಲುವು ಸುಲಭ ಆಗುತ್ತೆ ಎಂದಿದ್ದರು. ನಾನು ಬಿಜೆಪಿಗೆ ಬಂದಾಕ್ಷಣ ಜಾತಿ, ಧರ್ಮ, ಭಾಷೆ ವಿಚಾರ ಬರುತ್ತೆ. ನಾನು ಎಲ್ಲ ಭಾಷೆಯಲ್ಲೂ ಮಾತನಾಡುತ್ತೇನೆ ಎಂದು ಹೇಳಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 5:17 pm, Tue, 4 April 23