ಲಿಂಗಾಯತರ ಬಗ್ಗೆ ಸಿಟಿ ರವಿ ಹೇಳಿಕೆ ವೈರಲ್: ಮೂವರು ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ ಎಫ್ಐಆರ್
ಲಿಂಗಾಯಿತರಿಗೆ ಪ್ರಾಮುಖ್ಯತೆ ನೀಡಬೇಕಿಲ್ಲ ಎಂದು ಬಿಜೆಪಿಯ ಸಿಟಿ ರವಿ ಹೇಳಿಕೆ ನೀಡಿದ್ದಾರೆ ಎಂದು ಸುದ್ದಿ ಹಬ್ಬಿಸಿದ್ದ ಮೂವರ ವಿರುದ್ಧ ದೂರು ದಾಖಲಾಗಿದೆ. ಚಿಕ್ಕಮಗಳೂರಿನ ಬಸವನಹಳ್ಳಿ ಪೋಲಿಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಚಿಕ್ಕಮಗಳೂರು: ವೀರಶೈವ ಲಿಂಗಾಯತರಿಗೆ (veerashaiva lingayat) ಪ್ರಾಮುಖ್ಯತೆ ನೀಡಬೇಕಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ (CT Ravi)ಹೇಳಿದ್ದಾರೆ ಎಂದು ಸುದ್ದಿ ಹಬ್ಬಿಸಿದ್ದವರ ವಿರುದ್ಧ ದೂರು ದಾಖಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಹಬ್ಬಿಸಿದ್ದ ಮೂವರು ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಲಿಂಗಾಯತರಿಗೆ ಪ್ರಾಮುಖ್ಯತೆ ನೀಡಬೇಕಿಲ್ಲ ಎಂದಿದ್ದಾರೆ ಎಂದು ನಕಲಿ ಹೇಳಿಕೆಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ ಎಂದು ಚಿಕ್ಕಮಗಳೂರು ಬಿಜೆಪಿ ಜಿಲ್ಲಾಧ್ಯಕ್ಷ ಕಲ್ಮರುಡಪ್ಪ ದೂರು ನೀಡಿದ್ದಾರೆ. ಈ ಸಂಬಂಧ ದಾವಣಗೆರೆ ಮೂಲದ ಹರೀಶ್, ಗುರುಪಾಟೀಲ್ ಹಾಗೂ ತುಮಕೂರು ಮೂಲದ ಸುವರ್ಣಗಿರಿ ವಿರುದ್ಧ ಚಿಕ್ಕಮಗಳೂರು ನಗರದ ಬಸವನಹಳ್ಳಿ ಪೋಲಿಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಈ ಮೂವರು ಕಾಂಗ್ರೆಸ್ನ ಐಟಿ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: CT Ravi: ಲಿಂಗಾಯತ ಕುರಿತ ಹೇಳಿಕೆ ಕಾಂಗ್ರೆಸ್ ಸುಳ್ಳಿನ ಫ್ಯಾಕ್ಟರಿಯ ಸೃಷ್ಟಿ; ಸಿಟಿ ರವಿ ಸ್ಪಷ್ಟನೆ
ವೀರಶೈವ ಲಿಂಗಾಯತರಿಗೆ ಪ್ರಾಮುಖ್ಯತೆ ನೀಡಬೇಕಿಲ್ಲ ಅಂತ ಸಿಟಿ ರವಿ ಹೇಳಿಕೆ ನೀಡಿದ್ದಾರೆ ಎನ್ನುವ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗಿತ್ತು. ಅಲ್ಲದೇ ಆ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ಪರ-ವಿರೋಧದ ಚರ್ಚೆಯಾಗಿತ್ತು. ಇದು ಬಿಜೆಪಿ ಆಂತರಿಕ ವಲಯದಲ್ಲಿ ರಾಜಕೀಯ ಕೋಲಾಹಲಕ್ಕೂ ಕಾರಣವಾಗಿತ್ತು. ಅಲ್ಲದೇ ವೀರಶೈವ ಲಿಂಗಾಯತ ಸಮುದಾಯ ಸಿಟಿ ರವಿ ವಿರುದ್ಧ ಸಿಡಿದೆದ್ದಿತ್ತು.
ಚುನಾವಣೆ ಪ್ರಚಾರದಲ್ಲಿ ಕಂಡು ಬಂದರೆ ಮುತ್ತಿಗೆ ಹಾಕಬೇಕು. ‘ಕಿತ್ತೋದ ಸಿಟಿ ರವಿ’ ಎಂದು ಘೋಷಣೆ ಕೂಗಬೇಕು ಎಂದು ವೀರಶೈವ ಲಿಂಗಾಯತ ಸಮುದಾಯ ಪತ್ರಿಕಾ ಪ್ರಕಟಣೆ ಮೂಲಕ ಕರೆ ಕೊಟ್ಟಿತ್ತು. ರವಿ ಅವರು ಲಿಂಗಾಯತ ಸಮಾಜದ ಕ್ಷಮೆ ಕೇಳಬೇಕು. ಇಲ್ಲದಿದ್ದರೆ ಒಂದು ವಾರದಲ್ಲಿ ಅವರ ಮನೆಗೆ ಮುತ್ತಿಗೆ ಹಾಕಿ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿತ್ತು. ಈ ಸುದ್ದಿ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆಯೇ ಎಚ್ಚೆತ್ತುಕೊಂಡ ಸಿಟಿ ರವಿ ದಿಢೀರ್ ಸುದ್ದಿಗೋಷ್ಠಿ ನಡೆಸಿ ಸ್ಪಷ್ಟನೆ ನೀಡಿದ್ದರು.
ಇದನ್ನೂ ಓದಿ: ಸಿಟಿ ರವಿ ವಿರುದ್ಧ ಸಿಡಿದೆದ್ದ ವೀರಶೈವ ಲಿಂಗಾಯತ ಸಂಘಟನಾ ವೇದಿಕೆ, ಕಂಡಲ್ಲಿ ಮುತ್ತಿಗೆ ಹಾಕಲು ಕರೆ
ಅದು ಕಾಂಗ್ರೆಸ್ನ ಸುಳ್ಳಿನ ಕಾರ್ಖಾನೆಯ ಸೃಷ್ಟಿ ಎಂದು ಆರೋಪಿಸಿದ್ದಾರೆ. ಇವುಗಳೆಲ್ಲ ಸುಳ್ಳು ಸುದ್ದಿಗಳು. ನಾನು ಕನಸಿನಲ್ಲೂ ಜಾತಿ ರಾಜಕಾರಣ ಮಾಡಿದವನಲ್ಲ. ಜಾತಿಯ ಬಗ್ಗೆ ಯೋಚನೆಯನ್ನೂ ಮಾಡುವುದಿಲ್ಲ. ಸುಳ್ಳು ಸುದ್ದಿ ಹಬ್ಬಿಸುವ ಮೂಲಕ ಲಿಂಗಾಯತ ವಿರೋಧಿ ಭಾವನೆ ಹುಟ್ಟು ಹಾಕುವ ಕೆಲಸವನ್ನು ಕಾಂಗ್ರೆಸ್ನವರು ಮಾಡುತ್ತಿದ್ದಾರೆ. ಇದು ಸಂಪೂರ್ಣ ಕಾಂಗ್ರೆಸ್ ಕೈವಾಡ. ಆದರೆ, ನಾನು ಏನು ಅನ್ನುವುದು ಜನರಿಗೆ ಗೊತ್ತಿದೆ. ಇಂತಹ ಸುಳ್ಳು ಸುದ್ದಿಯಿಂದ ಹೊರಗಿನವರಿಗೆ ಗೊಂದಲ ಸೃಷ್ಟಿ ಮಾಡಬಹುದಷ್ಟೇ ವಿನಃ ಒಳಗಿನವರನ್ನು ಏನೂ ಮಾಡಲಾಗದು. ನಮ್ಮವರಿಗೆ ಎಲ್ಲವೂ ಸ್ಪಷ್ಟವಾಗಿದೆ ಎಂದು ಸ್ಪಷ್ಟನೆ ನೀಡಿದ್ದರು. ಈ ಮೂಲಕ ಎಲ್ಲಾ ಗೊಂದಲಗಳೀಗೆ ತೆರೆ ಎಳೆದಿದ್ದರು.
ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ