ತುಮಕೂರು: ಉರಿಗೌಡ, ನಂಜೇಗೌಡ (Urigowda and Nanjegowda) ವಿಚಾರದಲ್ಲಿ ಸುಮ್ಮನಿರುವಂತೆ ನಿರ್ಮಲಾನಂದನಾಥ ಶ್ರೀಗಳು ಸೂಚಿಸಿದ್ದರೂ ಬಿಜೆಪಿ ನಾಯಕರು ಆ ಬಗ್ಗೆ ತಣ್ಣಗಾಗುವ ಲಕ್ಷಣ ಕಾಣಿಸುತ್ತಿಲ್ಲ. ಈ ವಿಚಾರಕ್ಕೆ ಸಂಬಂಧಿಸಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ (CT Ravi) ಮಂಗಳವಾರ ಮತ್ತೆ ಕ್ಯಾತೆ ತೆಗೆದಿದ್ದು, ಉರಿಗೌಡ, ನಂಜೇಗೌಡ ಕಾಲ್ಪನಿಕ ಪಾತ್ರಗಳಲ್ಲ. ಅವರ ಬಗ್ಗೆ ಜವರೇಗೌಡರು ‘ಸುವರ್ಣ ಮಂಡ್ಯ’ ಪುಸ್ತಕದಲ್ಲಿ ದಾಖಲಿಸಿದ್ದಾರೆ. ನಿರ್ಮಲಾನಂದನಾಥ ಶ್ರೀಗಳಿಗೆ ವಾಸ್ತವವನ್ನು ಮನವರಿಕೆ ಮಾಡಿಕೊಡುತ್ತೇವೆ ಎಂದು ಹೇಳಿದರು. ತುಮಕೂರು ಜಿಲ್ಲೆಯ ತುರುವೇಕೆರೆಯಲ್ಲಿ ಮಾತನಾಡಿದ ಅವರು, ನಿರ್ಮಲಾನಂದನಾಥ ಶ್ರೀಗಳ ಬಳಿಗೆ ದಾಖಲೆಗಳನ್ನು ತೆಗೆದುಕೊಂಡು ಹೋಗುತ್ತೇವೆ. ಉರಿಗೌಡ, ನಂಜೇಗೌಡ ಬಗ್ಗೆ ದಾಖಲೆ ಸಂಗ್ರಹಿಸುವ ಕೆಲಸ ಮಾಡುತ್ತೇವೆ. ಉರಿಗೌಡ, ನಂಜೇಗೌಡ ಹೆಸರು ಇವತ್ತು ನಿನ್ನೆಯಿಂದ ಪ್ರಾಮುಖ್ಯತೆಗೆ ಬಂದಿರುವುದಲ್ಲ. ಆದರೆ, ನಿರ್ಮಲಾನಂದನಾಥ ಸ್ವಾಮೀಜಿ ಮಾತನ್ನು ಗೌರವಿಸುತ್ತೇವೆ ಎಂದು ಸಿಟಿ ರವಿ ಹೇಳಿದ್ದಾರೆ.
ಉರಿಗೌಡ, ನಂಜೇಗೌಡ ಬಗ್ಗೆ ‘ಸುವರ್ಣ ಮಂಡ್ಯ’ ಪುಸ್ತಕದಲ್ಲಿ ಉಲ್ಲೇಖವಿದೆ. ಅವರಿಬ್ಬರನ್ನು ಸುಳ್ಳು ಎಂದು ಹೇಳಿದವರು, ಕಾಲ್ಪನಿಕ ಎಂದವರು ಕ್ಷಮೆ ಯಾಚಿಸಬೇಕು ಎಂದು ರವಿ ಆಗ್ರಹಿಸಿದ್ದಾರೆ. ಟಿಪ್ಪು ಸುಲ್ತಾನ್ನನ್ನು ವೈಭವೀಕರಿಸಲಾಗಿದೆ, ಇತಿಹಾಸದಲ್ಲಿ ತಿಳಿಸಬೇಕಾದ್ದನ್ನು ತಿಳಿಸಿಲ್ಲ. ಅಗೌರವವಾಗಿ ನಡೆದುಕೊಂಡಿದ್ದ ಜೆಡಿಎಸ್ ನಾಯಕ ಹೆಚ್ಡಿ ಕುಮಾರಸ್ವಾಮಿ ನಿರ್ಮಲಾನಂದಶ್ರೀಗಳ ಬಳಿ ಕ್ಷಮೆ ಕೇಳಬೇಕು ಎಂದು ಅವರು ಒತ್ತಾಯಿಸಿದ್ದಾರೆ. ವಾಸ್ತವವಾಗಿ ಟಿಪ್ಪು ಸುಲ್ತಾನ್ ಸ್ವಾತಂತ್ರ್ಯ ಹೋರಾಟಗಾರ ಅಲ್ಲ. ಮೈಸೂರು ಸಂಸ್ಥಾನಕ್ಕೆ ಮೋಸ ಮಾಡಿದವನು ಎಂಬುದಾಗಿ ಬಿಂಬಿಸಬೇಕಿತ್ತು ಎಂದೂ ಅವರು ಹೇಳಿದ್ದಾರೆ.
ಇದನ್ನೂ ಓದಿ: ಉರಿಗೌಡ ನಂಜೇಗೌಡ ಹೆಸರಿನಲ್ಲಿ ಆಧಾರ್ ಕಾರ್ಡ್: ತಂದೆ ಸಿಟಿ ರವಿ, ತಾಯಿ ಅಶ್ವತ್ಥ ನಾರಾಯಣ
ಉರಿಗೌಡ, ನಂಜೇಗೌಡರನ್ನು ಸಿಟಿ ರವಿ ಮತ್ತು ಅಶ್ವಥ್ ನಾರಾಯಣ್ಗೆ ಹೊಲಿಕೆ ಮಾಡಿದ ಬಗ್ಗೆ ಪ್ರತಿಕ್ರಿಯಿಸಿದ ಅವರು ಪ್ರತಿಪಕ್ಷಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜತೆಗೆ, ಟಿಪ್ಪು ಹತ್ಯೆಯಾಗಿರುವುದಕ್ಕೆ ಹಾಗಿದ್ದರೆ ದಾಖಲೆ ಏನಿದೆ ಅಂತ ಪ್ರಶ್ನಿಸಿದ್ದಾರೆ. ಇದು ಸಂಶೋಧನೆ ಆಗಬೇಕಾಗಿರುವ ವಿಷಯ. ಟಿಪ್ಪುವನ್ನು ಕೊಂದವರು ಯಾರು? ಅಪರಿಚಿತರು ಅಂತ ಹೇಳುತ್ತಾರೆ. ಆದರೆ ಅಪರಿಚಿತರಲ್ಲ ಎಂದು ನಾವು ಹೇಳುತ್ತಿದ್ದೇವೆ. ಸ್ವಾಮೀಜಿ ನನ್ನ ಜೊತೆ ಮಾತನಾಡಿದ್ದಾರೆ. ಗುರುಗಳ ಮಾತಿಗೆ ನಾವು ಗೌರವ ಕೊಡುತ್ತೇವೆ. ಟಿಪ್ಪು ಮತಾಂಧ ಅನ್ನೊದು ನಿಜ. ಅವನನ್ನು ವೈಭವಿಕರಿಸಲಾಗಿದೆ. ಇತಿಹಾಸದಲ್ಲಿ ತಿಳಿಸಬೇಕಾದ್ದನ್ನು ತಿಳಿಸಿಲ್ಲ ಎಂದು ರವಿ ಹೇಳಿದ್ದಾರೆ.
ಬ್ರಿಟಿಷರು, ಪರ್ಶಿಯನ್ನರು, ಎಲ್ಲರೂ ಆಕ್ರಮಣಕಾರರೇ. ಬ್ರಿಟಿಷರು ಬಂದ ತಕ್ಷಣ ಪರ್ಶಿಯನ್ನರು ನಮ್ಮ ಸಂಬಂಧಿಕರಾಗುವುದಿಲ್ಲ. ಅವರೂ ಆಕ್ರಮಣ ಮಾಡಿದ್ದರು. ಲೂಟಿ ಮಾಡಿದ್ದರು. ನಾವು ಮಕ್ಕಳಿಗೆ ಅಕ್ಬರ್‌ನ ‘ದಿ ಗ್ರೇಟ್’ ಅಂತ ಪಾಠ ಹೇಳಿ ಕೊಟ್ಟೆವು. ರಾಣಪ್ರತಾಪ್ ನನ್ನ ‘ದಿ ಗ್ರೇಟ್’ ಅಂತ ಹೇಳಿಕೊಡಲಿಲ್ಲ. ಟಿಪ್ಪುವನ್ನು ಮತಾಂಧ ಅಂತ ಹೇಳಬೇಕಿತ್ತು. ಆದರೆ ಮಹಾನ್ ವ್ಯಕ್ತಿ ಅಂತ ಚಿತ್ರಿಕರಿಸಿದರು. ಮಹಾನ್ ವ್ಯಕ್ತಿ ಅನ್ನುವ ಟಿಪ್ಪು ಖಡ್ಗದಲ್ಲಿರುವ ವ್ಯಾಖ್ಯೆ ಏನು? ಕಾಫಿರರ ರಕ್ತಕ್ಕಾಗಿ ನನ್ನ ಖಡ್ಗ ತವಕಿಸುತ್ತದೆ ಅಂತ ಬರೆಯಲಾಗಿತ್ತು ಅಲ್ಲವೇ? ಮುಸ್ಲಿಂ ಧರ್ಮವನ್ನು ಯಾರು ಒಪ್ಪಲ್ಲವೋ ಅವರನ್ನ ಕಾಫಿರರು ಅಂತ ಕರೆಯಲಾಗುತ್ತದೆ. ಈ ದೇಶದಲ್ಲಿರುವ ಜೈನರು, ಬುದ್ದರು, ಪಾರ್ಶ್ವಿಗಳು ಎಲ್ಲರು ಸಹ ಕಾಫಿರರೇ ಅಂತ ಬಾವಿಸುತ್ತಾರೆ. ಮತಾಂಧ ಅಂತ ಹೇಳುವ ಬದಲು ಮತೀಯ ಸಹಿಷ್ಣು ಅಂತ ಹೇಳಲಾಯಿತು ಎಂದು ರವಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜ್ಯದ ಇತರೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ