ತುಮಕೂರು: ಕ್ರೂಸರ್ ಓವರ್ ಟೇಕ್ ಮಾಡಲು ಹೋಗಿ ಲಾರಿ ಡಿಕ್ಕಿಯಾಗಿ ಒಟ್ಟು 9 ಜನರು ಸಾವನ್ನಪ್ಪಿರುವಂತಹ ಘಟನೆ ಶಿರಾ ತಾಲೂಕಿನ ಕಳ್ಳಂಬೆಳ್ಳ ಬಳಿ ಬೆಳಗಿನ ಜಾವ 4ಗಂಟೆ ಸುಮಾರಿಗೆ ನಡೆದಿದೆ. ಕ್ರೂಸರ್ನಲ್ಲಿ 20 ಜನರಿದ್ದು, ರಾಯಚೂರು ಜಿಲ್ಲೆಯರು ಎನ್ನಲಾಗುತ್ತಿದೆ. ಮೃತರಲ್ಲಿ ಮೂವರು ಮಹಿಳೆಯರು, ನಾಲ್ವರು ಪುರುಷರು, ಇಬ್ಬರು ಮಕ್ಕಳು ಸೇರಿ ಒಟ್ಟು 9 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. 11 ಜನ ಗಾಯಾಳುಗಳನ್ನ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕಳ್ಳಂಬೆಳ್ಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಮೃತರ ಹೆಸರು ಊರಿನ ವಿವರಗಳು ಇನ್ನಷ್ಟೇ ತಿಳಿದುಬರಬೇಕಿದೆ. ಉತ್ತರ ಕರ್ನಾಟಕದಿಂದ ಬೆಂಗಳೂರಿಗೆ ಕೂಲಿ ಕೆಲಸಕ್ಕೆ ಬರುವ ಬಡ ಕಾರ್ಮಿಕರು ಕ್ರೂಸರ್ಗಳನ್ನೇ ಹೆಚ್ಚಾಗಿ ಅವಲಂಬಿಸಿದ್ದಾರೆ. ಕಳ್ಳಂಬೆಳ್ಳ ಚೆಕ್ಪೋಸ್ಟ್ ಹಾಗೂ ಟೋಲ್ ಬಳಿ ಪದೇಪದೆ ಇಂಥ ಅಪಘಾತಗಳು ಸಂಭವಿಸಿವೆ.
Karnataka | Nine people, including three children, died and 11 injured after a jeep collided with a truck on National Highway near Sira, Tumakuru district. All of them were daily wage workers, labourers coming towards Bengaluru. SP Rahul Kumar Shahpurwad visited the spot: Police
— ANI (@ANI) August 25, 2022
ಕೃಷಿ ಕೆಲಸಗಳಿದ್ದಾಗ ಹಳ್ಳಿಗಳಿಗೆ ಹಿಂದಿರುಗುವ ರೈತರು, ನಂತರ ಕ್ರೂಸರ್ಗಳ ಮೂಲಕ ಬೆಂಗಳೂರಿನ ಗುಡಿಸಲು, ಬಾಡಿಗೆ ಶೆಡ್, ಮನೆಗಳಿಗೆ ಹಿಂದಿರುಗುವುದು ವಾಡಿಕೆ. ಹಿಂದೊಮ್ಮೆ ಇಂಥ ಅಪಘಾತ ಸಂಭವಿಸಿದ್ದಾಗ ಜೋಳದ ಕಾಳುಗಳು ಶವದ ಮೇಲೆಲ್ಲಾ ಚೆಲ್ಲಾಡಿದ್ದನ್ನು ಕಂಡಿದ್ದ ದಾರಿಹೋಕರು ಕಣ್ಣೀರು ಮಿಡಿದಿದ್ದರು. ಈ ಮಾರ್ಗದಲ್ಲಿ ಬಸ್ಗಳು ಸಾಕಷ್ಟು ಪ್ರಮಾಣದಲ್ಲಿ ಇದ್ದರೂ, ತಮ್ಮ ಸಾಮಾನು ಹಾಗೂ ಬೇಕಿರುವ ಸ್ಥಳಕ್ಕೆ ತಲುಪುವುದು ಸುಲಭ ಎನ್ನುವ ಕಾರಣಕ್ಕೆ ಕ್ರೂಸರ್ಗಳನ್ನೇ ಬಡ ಕಾರ್ಮಿಕರು ಅವಲಂಬಿಸಿದ್ದಾರೆ.
ಕ್ರೂಸರ್ನವರದೇ ತಪ್ಪು: ಪ್ರತ್ಯಕ್ಷದರ್ಶಿ ಸರಿತಾ
ಅಪಘಾತವಾದ ಬಳಿಕ ಕಾಪಾಡಿ ಕಾಪಾಡಿ ಅಂತಾ ಕೂಗೋ ಶಬ್ದ ಕೇಳಿಸಿತು. ನಾವು ಬಂದು ನೋಡಿದ್ವಿ. ಕ್ರೂಸರ್ ಲಾರಿ ನಡುವೆ ಅಪಘಾತವಾಗಿತ್ತು. ಮಕ್ಕಳು ಮಹಿಳೆಯರು ಸೇರಿದಂತೆ ಒಟ್ಟು 20 ಕ್ಕೂ ಹೆಚ್ಚು ಜನರು ಇದ್ದರು. ಕಾರಿನಲ್ಲಿ ಸಿಲುಕಿ ಒದ್ದಾಡುತ್ತಿದ್ದರು. ಸ್ಥಳದಲ್ಲೇ ಒಟ್ಟು 9 ಜನರು ಸಾವನ್ನಪ್ಪಿದ್ದಾರೆ. ಇನ್ನುಳಿದವರು ಆಸ್ಪತ್ರೆ ಗೆ ಕಳಿಸಲಾಯಿತು. ನಾವು ಜೊತೆಗೆ ಬರುವ ವಾಹನಗಳು ನಿಲ್ಲಿಸಿ ಗಾಯಾಳುಗಳನ್ನ ಆಸ್ಪತ್ರೆ ಕಳಿಸಲಾಯಿತು. ಅಂಬುಲೇನ್ಸ್ ಕರೆ ಮಾಡಿದ್ವಿ ಅಷ್ಟರಲ್ಲಿ ಪೊಲೀಸರು ಕೂಡ ಸ್ಥಳಕ್ಕೆ ಬಂದರು. ಕ್ರೂಸರ್ನವರದ್ದು ತಪ್ಪಿದ್ದು, ಓವರ್ ಟೇಕ್ ಮಾಡಲು ಹೋಗಿ ಘಟನೆ ನಡೆದಿದೆ ಎಂದು ಟಿವಿ9 ಗೆ ಪ್ರತ್ಯಕ್ಷದರ್ಶಿ ಸರಿತಾ ಹೇಳಿಕೆ ನೀಡಿದರು.
ತುಮಕೂರು ಜಿಲ್ಲಾಸ್ಪತ್ರೆಗೆ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್ ಭೇಟಿ
ತುಮಕೂರು ಜಿಲ್ಲಾಸ್ಪತ್ರೆಗೆ ಜಿಲ್ಲಾಧಿಕಾರಿ ಡಿಸಿ ವೈ.ಎಸ್.ಪಾಟೀಲ್ ಭೇಟಿ ನೀಡಿ, ಪರಿಶೀಲಿಸಿದ್ದು, ಬಳಿಕ ಮಾತನಾಡಿದ ಅವರು ರಾಯಚೂರು ಜಿಲ್ಲೆಯಿಂದ ನಿನ್ನೆ 24 ಜನರು ಹೊರಟಿದ್ದರು. ಲಾರಿ ಓವರ್ ಟೇಕ್ ಮಾಡಿ ಮುಂದೆ ಹೋಗುವಾಗ ಡಿಕ್ಕಿಯಾಗಿದೆ. ಕ್ರೂಸರ್ಗೆ ಹಿಂದಿನಿಂದ ಲಾರಿ ಡಿಕ್ಕಿಯಾಗಿ ಭೀಕರ ಅಪಘಾತ ಸಂಭವಿಸಿದೆ. 9 ಜನ ಸ್ಥಳದಲ್ಲೇ ಮೃತಪಟ್ಟಿದ್ದಾರೆ, ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಇಬ್ಬರನ್ನು ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಕ್ರೂಸರ್ನಲ್ಲಿದ್ದ ಇನ್ನುಳಿದ ನಾಲ್ವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಹೇಳಿದರು.
ಮುಗಿಲು ಮುಟ್ಟಿದ ಆಕ್ರಂದನ
ಶಿರಾ ಆಸ್ಪತ್ರೆಯ ಶವಾಗಾರದಲ್ಲಿ 9 ಮಂದಿಯ ಮೃತದೇಹಗಳನ್ನು ಇರಿಸಲಾಗಿದೆ. ಬೆಂಗಳೂರನಿಂದ ಕ್ರೂಷರ್ ಚಾಲಕ ಕೃಷ್ಣ ಪತ್ನಿ ಶವಾಗಾರಕ್ಕೆ ಆಗಮಿಸಿದ್ದು, ಶವಾಗಾರದಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ. ಪತಿ ಕೃಷ್ಣನ ಮೃತದೇಹ ಕಂಡು ಪತ್ನಿ ಕಣ್ಣೀರು ಹಾಕಿದ್ದಾಳೆ.
ರಾಯಚೂರು ಜಿಲ್ಲೆ ದೇವದುರ್ಗ ತಾಲ್ಲೂಕಿನ ಒಡವಟ್ಟಿ ಮೂಲದ ಕೃಷ್ಣ, ಕೂಲಿ ಕಾರ್ಮಿಕರನ್ನ ಕರೆದುಕೊಂಡು ರಾಯಚೂರಿನಿಂದ ಹೊರಟ್ಟಿದ್ದ. ನಿನ್ನೆ ಸ್ನೇಹಿತ ಜೊತೆ ಮಾತನಾಡಿದ್ದೆ ಇಂದು ಹೀಗೆ ಆಗಿದೆ ಎಂದ ಚಾಲಕನ ಸ್ನೇಹಿತ ಬಸವರಾಜ್ ಹೇಳಿಕೆ ನೀಡಿದ್ದಾರೆ.
Published On - 7:02 am, Thu, 25 August 22