ಕಳ್ಳಂಬೆಳ್ಳ ಅಪಘಾತದಲ್ಲಿ ಮೃತಪಟ್ಟ 9 ಜನರ ಪೈಕಿ 6 ಮಂದಿ ಕಣ್ಣು ದಾನ: ಸಾವಿನಲ್ಲೂ ಸಾರ್ಥಕತೆ
ಭೀಕರ ಅಪಘಾತದಲ್ಲಿ(Accident) ಮೃತಪಟ್ಟ 9 ಜನರ ಪೈಕಿ, 6 ಜನರ ಕಣ್ಣು ದಾನ ಮಾಡಲಾಗಿದೆ. ಈ ಮೂಲಕ ಕುಟುಂಬ ಸದಸ್ಯರು ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. 6 ಜನರ ನೇತ್ರದಾನಕ್ಕೆ ಕುಟುಂಬಸ್ಥರು ಒಪ್ಪಿದ್ದಾರೆ ಎಂದು ತಹಶೀಲ್ದಾರ್ ಮಮತಾ ಹೇಳಿದ್ದಾರೆ.
ತುಮಕೂರು: ಕಳ್ಳಂಬೆಳ್ಳ ಭೀಕರ ಅಪಘಾತದಲ್ಲಿ(Accident) ಮೃತಪಟ್ಟ 9 ಜನರ ಪೈಕಿ, 6 ಜನರ ಕಣ್ಣು ದಾನ ಮಾಡಲಾಗಿದೆ. ಈ ಮೂಲಕ ಕುಟುಂಬ ಸದಸ್ಯರು ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. 6 ಜನರ ನೇತ್ರದಾನಕ್ಕೆ ಕುಟುಂಬಸ್ಥರು ಒಪ್ಪಿದ್ದಾರೆ ಎಂದು ತಹಶೀಲ್ದಾರ್ ಮಮತಾ ಹೇಳಿದ್ದಾರೆ. ಕ್ರೂಸರ್ ಚಾಲಕ ಕೃಷ್ಣ, ಸುಜಾತಾ, ಪ್ರಭುಸ್ವಾಮಿ, ಸಿದ್ದಯ್ಯ ಸ್ವಾಮಿ, ನಿಂಗಣ್ಣ, ಮೀನಾಕ್ಷಿಯ ನೇತ್ರದಾನ ಮಾಡಲಾಗಿದೆ. ಶಿರಾ ತಾಲೂಕು ಆಡಳಿತದಿಂದಲೇ ಮೃತದೇಹಗಳ ಸ್ಥಳಾಂತರ ಕಾರ್ಯ ನಡೆದಿದೆ.
ಈಗ, ಕಣ್ಣು ದಾನ ಮಾಡಿರುವ ವಿಚಾರ ಗೊತ್ತಾಯ್ತು
ಇನ್ನು ಅಪಘಾತದಲ್ಲಿ ಮೃತಪಟ್ಟ ಕ್ರೂಸರ್ ಚಾಲಕ ಕೃಷ್ಣಪ್ಪ ಕಣ್ಣು ದಾನ ಮಾಡಿರುವ ವಿಚಾರಕ್ಕೆ ಸಂಬಂಧಿಸಿ ಆತನ ಸಂಬಂಧಿ ಸತ್ಯಪ್ಪ ಪ್ರತಿಕ್ರಿಯೆ ನೀಡಿದ್ದಾರೆ. ನಮಗೆ ಇಷ್ಟು ದಿನ ಗೊತ್ತಿರ್ಲಿಲ್ಲ. ನಾವೂ ಈಗಷ್ಟೆ ಸಂಬಂಧಿಕರಿಗೆ ಕರೆ ಮಾಡಿದ್ವಿ. ಈಗ, ಕಣ್ಣು ದಾನ ಮಾಡಿರುವ ವಿಚಾರ ಗೊತ್ತಾಯ್ತು. ಈ ವರೆಗೆ ಆತ ಕಣ್ಣು ದಾನ ಮಾಡಲು ಬರೆದು ಕೊಟ್ಟಿದ್ದು ಗೊತ್ತಿಲ್ಲ. ಕೃಷ್ಣ, ಆತನ ಸಹೋದರಿ ಹಾಗೂ ಆತನ ಸೊಸೆ ಮೃತಪಟ್ಟಿದ್ದಾರೆ ಎಂದರು.
ಘಟನೆ ವಿವರ
ಕೊನೆ ಶ್ರಾವಣ ಶನಿವಾರದ ಪೂಜೆಗಾಗಿ ತಮ್ಮ ತಮ್ಮ ಊರಿಗೆ ಹೋಗಿದ್ದ ರಾಯಚೂರು ಜಿಲ್ಲೆಯ ಶಿರವಾರ ಮೂಲದ ಕೂಲಿ ಕೆಲಸಗಾರರು ಕೆಲಸಕ್ಕಾಗಿ ಬೆಂಗಳೂರಿಗೆ ಬರುತ್ತಿದ್ದರು. ಆದ್ರೆ, ಬೆಳಗಿನ ಜಾವ 4.30ರ ಸುಮಾರಿಗೆ ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಕಳ್ಳಂಬೆಳ್ಳದ ಬಳಿ ಭೀಕರ ಅಪಘಾತವಾಗಿ 9 ಜನರು ಮೃತಪಟ್ಟಿದ್ದಾರೆ.
ಲಾರಿ ಓವರ್‌ಟೇಕ್ ಮಾಡೋ ವೇಳೆ ಟೈರ್ ಸ್ಫೋಟಗೊಂಡಿದೆ. ಈ ಪರಿಣಾಮ ಕ್ರೂಸರ್ ಡಿವೈಡರ್‌ಗೆ ಡಿಕ್ಕಿಯಾಗಿದೆ. ಇದೇ ವೇಳೆ ವೇಗದಲ್ಲಿ ಬರ್ತಿದ್ದ ಲಾರಿ, ಕ್ರೂಸ್‌ಗೆ ಡಿಕ್ಕಿಹೊಡೆದು ಭೀಕರ ಅಪಘಾತವಾಗಿದೆ. ಘಟನೆಯಲ್ಲಿ ಸ್ಥಳದಲ್ಲೇ 9 ಜನ ಮೃತಪಟ್ಟರೇ, 14 ಜನ ಗಂಭೀರವಾಗಿ ಗಾಯಗೊಂಡಿದ್ದಾರೆ. ಮೃತರಲ್ಲಿ ಮೂವರು ಮಹಿಳೆಯರು, ನಾಲ್ವರು ಪುರುಷರು ಮತ್ತು ಇಬ್ಬರು ಮಕ್ಕಳ ದಾರುಣ ಅಂತ್ಯವಾಗಿದೆ. ಗಾಯಾಳುಗಳಲ್ಲಿ ಮೂವರ ಸ್ಥಿತಿ ಚಿಂತಾನಜನವಾಗಿದ್ದು, ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಉಳಿದ ಗಾಯಾಳುಗಳಿಗೆ ತುಮಕೂರು ಮತ್ತು ಶಿರಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಮದ್ಯಪಾನ ಮಾಡಿ ಕ್ರೂಸರ್ ಚಲಾಯಿಸಿದ್ನಾ ಡ್ರೈವರ್?
ಇನ್ನೊಂದು ಗಂಟೆ ಕಳೆದಿದ್ರೆ ಎಲ್ಲರೂ ಬೆಂಗಳೂರು ಸೇರಿಕೊಳ್ಳಬೇಕಿತ್ತು. ಆದ್ರೆ ನಸುಕಿನಲ್ಲಿ ಒಂದು ಟೀ ಕುಡಿಯೋಣ ಅಂತ, ಚಳ್ಳಕೆರೆ ದಾಟಿದ ಮೇಲೆ ಕ್ರೂಸರ್ ನಿಲ್ಲಿಸಲಾಗಿದೆ. ಆದ್ರೆ ಇದೇ ವೇಳೆ ಚಾಲಕ ಟೀ ಬದಲು ಮದ್ಯಪಾನ ಮಾಡಿದ್ದಾನಂತೆ. ಇದೇ ಅಪಘಾತಕ್ಕೆ ಕಾರಣ ಎಂದು ಗಾಯಾಳೂ ವಿರುಪಾಕ್ಷಪ್ಪ ಆರೋಪಿಸಿದ್ದಾರೆ. ಇನ್ನೂ ಕ್ರೂಸರ್ ಕಂಡೀಷನ್ ಕೂಡ ಸಂಪೂರ್ಣವಾಗಿ ಹಾಳಾಗಿತ್ತು ಎನ್ನಲಾಗಿದೆ. ಕ್ರೂಸರ್‌ನ ನಾಲ್ಕು ಟೈರ್‌ಗಳು ಸಂಪೂರ್ಣವಾಗಿ ಸವೆದುಹೋಗಿವೆ. ಇದ್ರಿಂದಾಗಿಯೇ ಟೈರ್ ಬ್ಲಾಸ್ಟ್ ಆಗಿದೆ. ಅಲ್ಲದೇ 12 ಜನ ಸಾಮರ್ಥ್ಯದ ವಾಹನದಲ್ಲಿ 24 ಜನರನ್ನ ಕೂರಿಸಿದ್ದಾನೆ. ಓವರ್‌ಲೋಡ್‌ನಿಂದ ಕೂಡ ಕ್ರೂಸರ್ ಕಂಟ್ರೋಲ್ ತಪ್ಪಿದೆ.
ಆಸ್ಪತ್ರೆ ಬಳಿ ಮುಗಿಲುಮುಟ್ಟಿದ ಆಕ್ರಂದನ
ತುಮಕೂರು ಮತ್ತು ಶಿರಾ ಆಸ್ಪತ್ರೆಯಲ್ಲಿ ಗಾಯಾಳುಗಳ ಚಿಕಿತ್ಸೆ ನೀಡಲಾಗುತ್ತಿದೆ. ಶಿರಾ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಆಸ್ಪತ್ರೆ ಬಳಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಇನ್ನೂ ತುಮಕೂರು ಜಿಲ್ಲಾಸ್ಪತ್ರೆಗೆ ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ್ ಮತ್ತು ಎಸ್‌ಪಿ ರಾಹುಲ್ ಕುಮಾರ್ ಭೇಟಿ ಕೊಟ್ಟು ಗಾಯಾಳುಗಳನ್ನ ವಿಚಾರಿಸಿದ್ದಾರೆ.
ಪ್ರಧಾನಿ ಮೋದಿ ಸಂತಾಪ.. ರಾಜ್ಯ ಸರ್ಕಾರದಿಂದ ಪರಿಹಾರ
ಭೀಕರ ರಸ್ತೆ ಅಪಘಾತಕ್ಕೆ ಪ್ರಧಾನಿ ಮೋದಿ ಸಹ ಸಂತಾಪ ಸೂಚಿಸಿದ್ದಾರೆ. ಮೃತರ ಕುಟುಂಬ ಮತ್ತು ಗಾಯಾಳುಗಳಿಗೆ ಪರಿಹಾರ ಘೋಷಿಸಿದ್ದಾರೆ. ಮೃತಪಟ್ಟವರ ಕುಟುಂಬಕ್ಕೆ ಪ್ರಧಾನಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಯಿಂದ ತಲಾ 2 ಲಕ್ಷ ಮತ್ತು ಗಾಯಾಳುಗಳಿಗೆ ತಲಾ 50 ಸಾವಿರ ರೂಪಾಯಿ ಪರಿಹಾರ ಘೋಷಿಸಲಾಗಿದೆ. ಮತ್ತೊಂದೆಡೆ ಸಿಎಂ ಬೊಮ್ಮಾಯಿ ಕೂಡ ಅಪಘಾತಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ. ಮೃತ ಕುಟುಂಬಗಳಿಗೆ ರಾಜ್ಯ ಸರ್ಕಾರದಿಂದ ತಲಾ 5 ಲಕ್ಷ ರೂಪಾಯಿ ಪರಿಹಾರ ಘೋಷಿಸಲಾಗಿದೆ. ಅಲ್ಲದೇ ಗಾಯಾಳುಗಳಿಗೆ ಸರ್ಕಾರವೇ ಚಿಕಿತ್ಸಾ ವೆಚ್ಚ ಭರಿಸಲಿದೆ ಎಂದು ತಿಳಿಸಿದ್ದಾರೆ.
Published On - 4:08 pm, Thu, 25 August 22