ಮೋಸ ಹೋಗುವವರು ಎಲ್ಲಿಯವರೆಗೆ ಇರ್ತಾರೋ ಅಲ್ಲಿಯವರೆಗೆ ಮೋಸ ಮಾಡುವವರು ಇದ್ದೇ ಇರ್ತಾರೆ ಅನ್ನೋ ಮಾತಿದೆ. ಈ ಮಾತು ತುಮಕೂರಿನ ಹೋಟೆಲೋಂದರ ಮಾಲೀಕನ ಪಾಲಿಗೆ ನಿಜವಾಗಿದೆ. ಯಾವುದೋ ಮೆಸೇಜ್ ಬಂತು ಅಂತಾ ಆ ನಂಬರ್ ಗೆ ಕರೆ ಮಾಡಿದ ವ್ಯಕ್ತಿ ಬರೋಬ್ಬರಿ 90 ಸಾವಿರ ರೂಪಾಯಿ ಉಂಡೆನಾಮ ಹಾಕಿಸಿಕೊಂಡಿದ್ದಾನೆ. ಅದು ಹೇಗೆ ಅಂತೀರಾ ಈ ಸ್ಟೋರಿ ನೋಡಿ..ಇತೀಚೆಗೆ ಸೈಬರ್ ಕ್ರೈಂ (Cyber Crime) ಪ್ರಕರಣಗಳು ಜಾಸ್ತಿಯಾಗುತ್ತಿವೆ. ಜನರ ಮುಗ್ಧತೆಯನ್ನೇ ಬಂಡವಾಳ ಮಾಡಿಕೊಳ್ಳುವ ಖದೀಮರು ಎಲ್ಲಿಯೋ ಕುಳಿತು ಜನರನ್ನ ಮೋಸದ ಬಲೆಯಲ್ಲಿ ಸಿಲುಕಿಸಿ ಕ್ಷಣ ಮಾತ್ರದಲ್ಲಿಯೇ ಲಕ್ಷ ಲಕ್ಷ ಹಣವನ್ನ ವಂಚಿಸುತ್ತಿದ್ದಾರೆ. ಹೀಗಾಗಿ ಯಾರಿಗೂ ಓಟಿಪಿ (OTP) ಯನ್ನ ಶೇರ್ ಮಾಡದಂತೆ ಎಲ್ಲಾ ಬ್ಯಾಂಕ್ ಗಳು ಕೂಡ ತಮ್ಮ ಗ್ರಾಹಕರಿಗೆ ಆಗಾಗ ಅರಿವು ಮೂಡಿಸೋ ಕೆಲಸವನ್ನ ಮಾಡುತ್ತಲೇ ಇರುತ್ತವೆ. ಆರ್ ಬಿಐ (KYC) ಅಂತೂ ಈ ಕುರಿತು ಹತ್ತಾರು ಜಾಹೀರಾತುಗಳ ಮೂಲಕ ಜನರಿಗೆ ತಿಳುವಳಿಕೆ ಹೇಳೋ ಕೆಲಸ ಮಾಡುತ್ತಿದೆ. ಆದ್ರೆ ಜನರು ಮಾತ್ರ ಇನ್ನೂ ಪಾಠ ಕಲಿತಿಲ್ಲ ಅನ್ನೋದಕ್ಕೆ ತುಮಕೂರು ಜಿಲ್ಲೆಯ ತಿಪಟೂರಿನಲ್ಲಿ ನಡೆದಿರೋ ಈ ಘಟನೆಯೇ ಸಾಕ್ಷಿ.
ಯೆಸ್.. ಕೆವೈಸಿ ನೆಪದಲ್ಲಿ ಓಟಿಪಿ ಪಡೆದು ಕೆನರಾ ಬ್ಯಾಂಕ್ ಗ್ರಾಹಕನಿಗೆ ಬರೊಬ್ಬರಿ 90 ಸಾವಿರ ರೂ. ವಂಚಿಸಿದ ಘಟನೆ ತುಮಕೂರು ಜಿಲ್ಲೆ ತಿಪಟೂರು ತಾಲೂಕಿನಲ್ಲಿ ನಡೆದಿದೆ. ತಿಪಟೂರು ನಗರದ ಪುಣ್ಯ ಹೊಟೇಲ್ ಮಾಲೀಕ ರೇವಣಸಿದ್ದಪ್ಪ ವಂಚನೆಗೊಳಗಾದ ವ್ಯಕ್ತಿ. ಕೆನರಾ ಬ್ಯಾಂಕ್ ಗ್ರಾಹಕನಾಗಿರುವ ರೇವಣಸಿದ್ದಪ್ಪಗೆ ಅಪರಿಚಿತ ನಂಬರ್ ನಿಂದ ಒಂದು ಸಂದೇಶ ಬಂದಿದೆ. ನಿಮ್ಮ ಕೆವೈಸಿ ಅಪ್ಡೇಟ್ ಆಗಿಲ್ಲ. ಹೀಗಾಗಿ ನಿಮ್ಮ ಕೆವೈಸಿಯನ್ನ ಅಪ್ಡೇಟ್ ಮಾಡಲು ಈ ನಂಬರ್ ಗೆ ಕರೆ ಮಾಡಿ ಎಂದು ಒಂದು ನಂಬರನ್ನು ಆ ಮೆಸೇಜ್ ನಲ್ಲಿ ಹಾಕಲಾಗಿತ್ತು.
ಮೆಸೇಜ್ ನೋಡಿದ ತಕ್ಷಣ ರೇವಣಸಿದ್ದಪ್ಪ ಆ ನಂಬರ್ ಗೆ ಕರೆ ಮಾಡಿದ್ದಾರೆ. ಆಗ ಇನ್ನೊಂದು ಬದಿಯಿಂದ ಮಾತನಾಡಿದವರು ನಾವು ಕೆನರಾ ಬ್ಯಾಂಕ್ ನಿಂದ ಕರೆ ಮಾಡುತ್ತಿದ್ದೇವೆ. ನಿಮ್ಮ ಬ್ಯಾಂಕ್ ನ ಕೆವೈಸಿ ಅಪ್ಡೇಟ್ ಆಗಿಲ್ಲ. ನಾವು ಆನ್ ಲೈನ್ ಅಪ್ಡೇಟ್ ಮಾಡ್ತಿವಿ ಎಂದು ಮೊದಲು ಆಧಾರ್ ನಂಬರ್ ಪಡೆದಿದ್ದಾರೆ. ಬಳಿಕ ನಿಮಗೊಂದು ಓಟಿಪಿ ಬರುತ್ತೆ ಅದನ್ನ ಹೇಳಿ ಎಂದಿದ್ದಾರೆ. ಅವರು ಓಟಿಪಿ ಕೇಳುತ್ತಿದ್ದಂತೆ ಹಿಂದೆಮುಂದೆ ನೋಡದೇ ರೇವಣಸಿದ್ದಪ್ಪ ಅವರಿಗೆ ಓಟಿಪಿ ಶೇರ್ ಮಾಡಿದ್ದಾರೆ.
Also Read: ಚಿಂತಾಮಣಿ – ಸೈಬರ್ ವಂಚಕರನ್ನು ನಂಬಿ ಸ್ವತಃ 16 ಲಕ್ಷ ರೂಪಾಯಿ ಕಳೆದುಕೊಂಡ ಖಾಸಗಿ ಬ್ಯಾಂಕ್ ಉದ್ಯೋಗಿ
ಓಟಿಪಿ ಶೇರ್ ಮಾಡಿದ ಕ್ಷಣಾರ್ಧದಲ್ಲೇ ರೇವಣ್ಣಸಿದ್ದಪ್ಪರ ಖಾತೆಯಲ್ಲಿ ಇದ್ದ 90 ಸಾವಿರ ರೂ. ಬೇರೆ ಖಾತೆಗೆ ವರ್ಗಾವಣೆ ಆಗಿದೆ. ಹಣ ಕಟ್ ಆಗಿರುವ ಮೆಸೆಜ್ ನೋಡುತ್ತಿದ್ದಂತೆ ರೇವಣಸಿದ್ದಪ್ಪ ಶಾಕ್ ಆಗಿದ್ದಾರೆ. ತಕ್ಷಣವೇ ಹೋಗಿ ಅಕೌಂಟ್ ಸ್ಟೇಟ್ಮೆಂಟ್ ಕೂಡ ಚೆಕ್ ಮಾಡಿಸಿದ್ದಾರೆ. ಈ ವೇಳೆ ಅವರಿಗೆ ತಾನು ಮೋಸ ಹೋಗಿರೋದು ಗೊತ್ತಾಗಿದೆ. ತಕ್ಷಣ ತುಮಕೂರು ಸೈಬರ್ ಪೊಲೀಸ್ ಠಾಣೆಗೆ ರೇವಣಸಿದ್ದಪ್ಪ ದೂರು ನೀಡಿದ್ದಾರೆ.
ಒಟ್ಟಿನಲ್ಲಿ ಯಾರೋ ಅಪರಿಚಿತರಿಗೆ ಹಿಂದೆಮುಂದೆ ನೋಡದೆಯೇ ಓಟಿಪಿ ಶೇರ್ ಮಾಡಿದ ರೇವಣಸಿದ್ದಪ್ಪ ತಾವು ಕಷ್ಟಪಟ್ಟು ದುಡಿದಿದ್ದ ಹಣವನ್ನ ಕಳೆದುಕೊಂಡಿದ್ದಾರೆ. ಇದೀಗ ಈ ಬಗ್ಗೆ ಪ್ರಕರಣವೇನೋ ದಾಖಲಾಗಿದೆ. ಆದ್ರೆ ಕಳೆದುಕೊಂಡ ಹಣ ವಾಪಾಸ್ ಬರುತ್ತಾ ಅನ್ನೋದೇ ಪ್ರಶ್ನೆ.
ಇನ್ನಷ್ಟು ತುಮಕೂರು ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ