
ತುಮಕೂರು, ಜನವರಿ 16: ಅದೊಂದು ಕೊಲೆಗೆ ಇಡೀ ತುಮಕೂರು (Tumakur) ಜಿಲ್ಲೆ ಬೆಚ್ಚಿ ಬಿದಿತ್ತು. ಮಕ್ಕಳ ಜೊತೆ ಮನೆ ಮುಂದೆ ಕುಳಿತಿದ್ದ ಮಂಜುನಾಥ್ ಎಂಬ ವ್ಯಕ್ತಿ ಅರಿಚಿತ ಮುಸುಕುಧಾರಿಗಳ ದಾಳಿಗೆ ಮೃತಪಟ್ಟಿದ್ದರು. ಸಮಾಜದಲ್ಲಿ ಒಳ್ಳೆಯ ಹೆಸರು ಹೊಂದಿದ್ದ ಮಂಜುನಾಥನ ಕೊಲೆ ತುಮಕೂರು ಪೊಲೀಸರಿಗೆ ಸವಾಲಾಗಿತ್ತು. ಆದರೆ ಸಿಕ್ಕ ಅದೊಂದು ಸುಳಿವು ಆಧರಿಸಿ ಶಿವಮೊಗ್ಗ ಪೊಲೀಸರ ಜೊತೆ ಜಂಟಿ ಕಾರ್ಯಾಚರಣೆ ನಡೆಸಿದ ತುಮಕೂರು ಪೊಲೀಸರು ಕೃತ್ಯ ನಡೆದ 48 ಗಂಟೆಗಳಲ್ಲೇ ಆರೋಪಿಗಳನ್ನು ಖೆಡ್ಡಾಕ್ಕೆ ಕೆಡವಿದ್ದಾರೆ.
ಆರೋಪಿಗಳು ಮೂಲತಃ ತಮಿಳುನಾಡಿನವರಾದ ಸತೀಶ, ಕೇಶವನ್, ಕವಿತೇಶ್ವರನ್ ಹಾಗೂ ಅರುಣ್ ಎಂಬುದು ಗೊತ್ತಾಗಿದೆ. ಇವರು ಬೆಂಗಳೂರಿನ ಆನೆಕಲ್ ಭಾಗದ ಅತ್ತಿಬೆಲೆಯ ನಿವಾಸಿಗಳಾಗಿದ್ದಾರೆ. ವೃತ್ತಿಪರ ಕಳ್ಳರಾಗಿದ್ದು, ರಾಜ್ಯದ ವಿವಿಧೆಡೆ ಕಳ್ಳತನ ಕೃತ್ಯ ಎಸಗಿರುವ ಈ ಆರೋಪಿಗಳು ತುಮಕೂರಿಗೂ ಎಂಟ್ರಿ ಕೊಟ್ಟಿದ್ದರು. ಅದರಂತೆ ಚಿಕ್ಕನಾಯಕನಹಳ್ಳಿಯ ಕೆಂಕೆರೆಗೆ ಬಂದಿದ್ದ ಆರೋಪಿಗಳು, ಇದೇ ಮಂಜುನಾಥ್ ಮನೆಯ ಕಳ್ಳತನಕ್ಕೆ ಹೊಂಚು ಹಾಕಿದ್ದರು. ಹಿಂದಿನ ದಿನವೇ ಸಿದ್ಧತೆ ಮಾಡಿ ಜನವರಿ 11 ರಂದು ರಾತ್ರಿ 9ಗಂಟೆಗೆ ಕಳ್ಳತನಕ್ಕೆ ಬಂದಿದ್ದರು. ಕೈಗೆ ಗ್ಲೌಸ್ ಮುಖಕ್ಕೆ ಮಾಸ್ಕ್ ಧರಿಸಿ ಬಂಧವರೇ ಗೇಟ್ ಬಳಿಯೇ ಮಕ್ಕಳ ಜೊತೆ ನಿಂತಿದ್ದ ಮಂಜುನಾಥ್ ಹಿಡಿದು ಅಂಗಡಿ ಬಾಗಿಲು ತೆರೆಯಲು ಹೇಳಿದ್ದರು. ನಿರಾಕರಿಸಿದ ಮಂಜುನಾಥ್ಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದರು. ಇನ್ನು ಈ ವೇಳೆ ಮಂಜುನಾಥ್ ಅವರ 12 ವರ್ಷದ ಮಗಳು ಈ ಘಟನೆಯನ್ನು ಕಣ್ಣಾರೆ ಕಂಡು ಬೆಚ್ಚಿ ಬಿದಿದ್ದಳು.
ಘಟನೆ ಬಳಿಕ ಪ್ರಕರಣ ದಾಖಲಿಸಿದ್ದ ಹುಳಿಯಾರು ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದರು. ಈ ನಡುವೆ ಶಿವಮೊಗ್ಗದ ವಿನೋಭನಗರ ಪೊಲೀಸರಿಗೆ ಬೇಕಾದ ಕಳ್ಳರ ಗ್ಯಾಂಗ್ನ ಕಾರು ಕೊಲೆ ನಡೆದ ಊರಿನಲ್ಲಿ ಓಡಾಡಿದ್ದ ಮಾಹಿತಿ ಲಭ್ಯವಾಗಿತ್ತು. ಜೊತೆಗೆ ಅದೇ ಕಾರು ತುಮಕೂರಿನ ಶಿರಾ ತಾಲೂಕಿನ ಮನೆಗಳ್ಳತನಕ್ಕೂ ಬಳಕೆಯಾಗಿತ್ತು. ಇದೇ ಅನುಮಾನದಲ್ಲಿ ಕಾರಿನ ಬೆನ್ನು ಬಿದ್ದ ಪೊಲೀಸರಿಗೆ ಬೆಂಗಳೂರಿನ ಅತ್ತಿಬೆಲೆಯಲ್ಲಿ ಆರೋಪಿಗಳು ಪತ್ತೆಯಾಗಿದ್ದು, ನಾಲ್ವರು ಹಂತಕರ ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ.
ಇದನ್ನೂ ಓದಿ: ತುಮಕೂರು: ಮಗಳ ಕಣ್ಣೆದುರೇ ತಂದೆಯನ್ನ ಬರ್ಬರವಾಗಿ ಕೊಂದ ದುಷ್ಕರ್ಮಿಗಳು
ಇನ್ನು ಬಂಧಿತರು ಅಂತರರಾಜ್ಯ ಕಳ್ಳರಾಗಿದ್ದು, ರಾಜ್ಯದ ಹಲವು ಕಡೆ ಕಳ್ಳತನ ಕೃತ್ಯ ಎಸಗಿದ್ದಾರೆ. ಜೊತೆಗೆ 2018ರಲ್ಲಿ ಆನೇಕಲ್ ಬಳಿ ನಡೆದಿದ್ದ ಕೊಲೆ ಪ್ರಕರಣ ಒಂದರಲ್ಲಿ ಶಾಮೀಲಾಗಿದ್ದರು ಎನ್ನಲಾಗಿದೆ.
ಅಸಲಿಗೆ ಕೊಲೆಯಲ್ಲಿ ಐವರು ಶಾಮೀಲಾಗಿದ್ದು, ನಾಲ್ವರ ಬಂಧನವಾಗಿದೆ. ಮತ್ತೊಬ್ಬ ಆರೋಪಿ ನಾಪತ್ತೆಯಾಗಿದ್ದು ಆತನಿಗಾಗಿ ಹುಳಿಯಾರು ಪೊಲೀಸರು ಹುಡುಕಾಟ ನಡೆಸುತಿದ್ದಾರೆ.