ತುಮಕೂರು: ಕರಿಬಸವೇಶ್ವರ ಮಠದ ಆನೆಯನ್ನು ಅಪಹರಣ ಮಾಡಲು ಯತ್ನಿಸಿದ ಘಟನೆ ನಡೆದಿದೆ. ಖದೀಮರ ಗುಂಪೊಂದು ಲಕ್ಷ್ಮೀ ಎಂಬ ಹೆಣ್ಣಾನೆಯನ್ನು ಅಪಹರಿಸಿ ಗುಜರಾತ್ಗೆ ಸಾಗಿಸಲು ಯತ್ನಿಸಿದೆ. ಆನೆಗೆ ಚಿಕಿತ್ಸೆ ಕೊಡಿಸಬೇಕು ಎಂದು ಪ್ಲ್ಯಾನ್ ಮಾಡಿ ಅಪಹರಣಕ್ಕೆ ಮುಂದಾಗಿದ್ದಾರೆ. ಅರಣ್ಯ ಇಲಾಖೆ ಸಿಬ್ಬಂದಿ ಸಹಕಾರದೊಂದಿಗೆ ಅಪಹರಣಕ್ಕೆ ಸಂಚು ರೂಪಿಸಿದ್ದರು ಎಂದು ಹೇಳಲಾಗುತ್ತಿದೆ.
ಅರಣ್ಯ ಇಲಾಖೆಯ ಅಧಿಕಾರಿಗಳು ಆನೆಗೆ ಬನ್ನೇರುಘಟ್ಟದಲ್ಲಿ ಚಿಕಿತ್ಸೆ ಕೊಡಿಸಬೇಕು ಎಂದು ಲಾರಿಯಲ್ಲಿ ಹತ್ತಿಸಿಕೊಂಡು ಹೋಗಿದ್ದಾರೆ. ದಾಬಾಸ್ ಪೇಟೆ ಬಳಿ ಮಠದ ಆನೆಯ ಮಾವುತನಿಗೆ ಹಲ್ಲೆ ಮಾಡಿ ಆತನನ್ನು ಕೆಳಗಿಳಿಸಿ ಆನೆಯನ್ನು ಅಪಹರಿಸಲು ಯತ್ನಿಸಿದ್ದಾರೆ. ಬನ್ನೇರುಘಟ್ಟಕ್ಕೆ ಕರೆದುಕೊಂಡು ಹೋಗುವ ಬದಲು ಕುಣಿಗಲ್ ತಾಲೂಕಿನ ನಾರನಹಳ್ಳಿ ಹಳ್ಳಿಯೊಂದರಲ್ಲಿ ಆನೆಯನ್ನು ಬಚ್ಚಿಡಲಾಗಿತ್ತು. ಈ ವೇಳೆ ಆನೆಗೂ ಜೆಸಿಬಿಯಿಂದ ಹಲ್ಲೆ ಮಾಡಲಾಗಿತ್ತು ಅಂತ ಮಠದ ಸಿಬ್ಬಂದಿಗಳು ಆರೋಪಿಸುತ್ತಿದ್ದಾರೆ.
ಆರೋಪಿಗಳು ಗುಜರಾತ್ ಮೂಲದ ಸರ್ಕಸ್ ಕಂಪನಿಗೆ ಆನೆಯನ್ನು ಮಾರಲು ಯತ್ನಿಸಿದ್ದಾರೆ. ಸದ್ಯ ಮಠದ ಆಡಳಿತ ಮಂಡಳಿ ತುಮಕೂರು ನಗರ ಠಾಣೆಗೆ ದೂರು ನೀಡಿದ್ದು, ವಿಚಾರಣೆ ಬಳಿಕ ಇನ್ನಷ್ಟು ಮಾಹಿತಿ ಹೊರ ಬೀಳಲಿದೆ.
ಇದನ್ನೂ ಓದಿ
ಬೆಂಗಳೂರಿಗೆ ಮೇಕಪ್: ಗುಂಡಿಮುಚ್ಚಿ, ಲೈಟ್ ಹಾಕಿ, ಕ್ಯಾಮೆರಾ ಅಳವಡಿಸಲು ರಾಜ್ಯ ಸರ್ಕಾರ ಸೂಚನೆ