ಬೆಂಗಳೂರಿನ ಈ ಕೆರೆಗಳಲ್ಲಿ ಇನ್ನು ಬೋಟಿಂಗ್ ಮಾಡಬಹುದು! ಕೆರೆಗಳ ನಿರ್ವಹಣೆಗೆ ಜಿಬಿಎ ಹೊಸ ಪ್ಲ್ಯಾನ್
ಬೆಂಗಳೂರಿನ ಕೆರೆಗಳ ನಿರ್ವಹಣೆಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಹೊಸ ಯೋಜನೆಯನ್ನು ಪ್ರಸ್ತಾಪಿಸಿದೆ. ನಗರದ 183 ಕೆರೆಗಳ ಪೈಕಿ 10 ಕೆರೆಗಳಲ್ಲಿ ಬೋಟಿಂಗ್ ವ್ಯವಸ್ಥೆ ಜಾರಿಗೆ ತರಲು ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರ ಹಾಗೂ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದೊಂದಿಗೆ ಜಿಬಿಎ ಜಿಬಿಎ ಕೈಜೋಡಿಸಿದೆ.

ಬೆಂಗಳೂರು, ಫೆಬ್ರವರಿ 13: ಬೆಂಗಳೂರು (Bangalore) ಒಂದು ಕಾಲದಲ್ಲಿ ಕೆರೆಗಳಿಂದಲೇ ಹೆಸರುವಾಸಿಯಾಗಿತ್ತು. ಆದರೆ, ಇತ್ತೀಚಿನ ವರ್ಷಗಳಲ್ಲಿ ಹೆಚ್ಚಿನ ಕೆರೆಗಳು ನಿರ್ವಹಣೆಯ ಕೊರತೆಯಿಂದ ಕಲುಷಿತಗೊಂಡು, ಡ್ರೈನೇಜ್ ನೀರು ಸೇರಿ ಅವನತಿಯ ಹಾದಿ ಹಿಡಿದಿವೆ. ಈ ಹಿನ್ನೆಲೆಯಲ್ಲಿ, ಜಿಬಿಎ (GBA) ಬೆಂಗಳೂರಿನ ಕೆರೆಗಳ ನಿರ್ವಹಣೆಗೆ ಹೊಸ ಯೋಜನೆಯನ್ನು ಪ್ರಸ್ತಾಪಿಸಿದೆ. ಈ ಯೋಜನೆಯು ನಗರದ ಪ್ರಮುಖ 10 ಕೆರೆಗಳಲ್ಲಿ ಬೋಟಿಂಗ್ ವ್ಯವಸ್ಥೆಯನ್ನು ಜಾರಿಗೆ ತರುವ ಗುರಿ ಹೊಂದಿದೆ.
ಬೆಂಗಳೂರು ನಗರದಲ್ಲಿ ಒಟ್ಟು 183 ಕೆರೆಗಳಿದ್ದು, ಜಿಬಿಎ ಆರಂಭಿಕ ಹಂತದಲ್ಲಿ ಹಲಸೂರು ಲೇಕ್, ಕಗ್ಗದಾಸಪುರ ಕೆರೆ, ನಾಯಂಡಹಳ್ಳಿ, ಸ್ಯಾಂಕಿ, ಯಲಹಂಕ, ರಾಚೇನಹಳ್ಳಿ, ವೆಂಗಯ್ಯನಕೆರೆ, ಬೇಗೂರು, ರಾಮಪುರ ಮತ್ತು ಮಡಿವಾಳ ಕೆರೆಗಳನ್ನು ಬೋಟಿಂಗ್ ಯೋಜನೆಗೆ ಆಯ್ಕೆ ಮಾಡಿದೆ. ಈ ಯೋಜನೆಯ ಅನುಷ್ಠಾನಕ್ಕಾಗಿ ಜಿಬಿಎ, ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರ ಹಾಗೂ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದೊಂದಿಗೆ ಸಹಭಾಗಿತ್ವ ಮಾಡಿಕೊಂಡಿದೆ.
ಪರಿಸರಸ್ನೇಹಿ ಬೋಟಿಂಗ್ಗೆ ಆದ್ಯತೆ
ಈ ಬೋಟಿಂಗ್ ವ್ಯವಸ್ಥೆಯನ್ನು ಪರಿಸರ ಸ್ನೇಹಿ ರೀತಿಯಲ್ಲಿ, ಅಂದರೆ ಇಂಧನ ರಹಿತ ಮತ್ತು ಮಾಲಿನ್ಯ ರಹಿತವಾಗಿ ನಡೆಸಲು ಉದ್ದೇಶಿಸಲಾಗಿದೆ. ಇದರಿಂದ ಕೆರೆಗಳಲ್ಲಿರುವ ಜಲಚರಗಳಿಗೆ ಯಾವುದೇ ತೊಂದರೆಯಾಗದಂತೆ ಎಚ್ಚರಿಕೆ ವಹಿಸಲಾಗುವುದು ಎಂದು ಜಿಬಿಎ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರವಾಸಿಗರನ್ನು ಆಕರ್ಷಿಸುವ ಮೂಲಕ ಕೆರೆಗಳಿಗೆ ಹೆಚ್ಚಿನ ಜನರು ಭೇಟಿ ನೀಡುವಂತೆ ಮಾಡಿ ಅವುಗಳ ನಿರ್ವಹಣೆಗೆ ಉತ್ತೇಜನ ನೀಡುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಮಲ್ಲೇಶ್ವರಂನ ಐತಿಹಾಸಿಕ ಸ್ಯಾಂಕಿ ಕೆರೆಯಲ್ಲೂ ಬೋಟಿಂಗ್ ವ್ಯವಸ್ಥೆಗೆ ಜಿಬಿಎ ಸಿದ್ಧತೆ ನಡೆಸುತ್ತಿದೆ.
ಆದರೆ, ಈ ಪ್ರಸ್ತಾಪದ ಕುರಿತು ಸಾರ್ವಜನಿಕ ವಲಯದಲ್ಲಿ ಕೆಲವು ಪ್ರಶ್ನೆಗಳು ಮೂಡಿವೆ. ಬೆಂಗಳೂರಿನ ಕೆರೆಗಳ ನಿರ್ವಹಣೆ ಕಾರ್ಯವನ್ನು ಪಾಲಿಕೆಗಳು ಸರಿಯಾಗಿ ನಿರ್ವಹಿಸುತ್ತಿಲ್ಲ ಎಂಬ ಆರೋಪಗಳು ಮೊದಲಿನಿಂದಲೂ ಇವೆ. ಹಲವು ಕೆರೆಗಳಲ್ಲಿ ಸಾಕಷ್ಟು ನೀರು ಲಭ್ಯವಿಲ್ಲದೆ, ಬೇಸಿಗೆಯಲ್ಲಿ ಬತ್ತಿ ಹೋಗುವ ಸ್ಥಿತಿ ಇದೆ. ಕೆಲವು ಕೆರೆಗಳಲ್ಲಿ ನೀರಿದ್ದರೆ, ಇನ್ನೊಂದೆಡೆ ಸಂಪೂರ್ಣವಾಗಿ ಖಾಲಿಯಾಗಿರುವ ದೃಶ್ಯ ಸಾಮಾನ್ಯವಾಗಿದೆ. ಇಂತಹ ಪರಿಸ್ಥಿತಿಯಲ್ಲಿ, ಬೋಟಿಂಗ್ ವ್ಯವಸ್ಥೆಯನ್ನು ಜಾರಿಗೆ ತರುವ ಮೊದಲು, ಕೆರೆಗಳಲ್ಲಿನ ನೀರಿನ ಗುಣಮಟ್ಟ ಮತ್ತು ಲಭ್ಯತೆ ಸುಧಾರಿಸಬೇಕಾಗಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಇದನ್ನೂ ಓದಿ: ಶಕ್ತಿ ಯೋಜನೆಯಿಂದ ಪರದಾಡುತ್ತಿದ್ದ ಬೆಂಗಳೂರಿಗರಿಗೆ ಗುಡ್ ನ್ಯೂಸ್
ಯಲಹಂಕ ಕೆರೆಯಂತಹ ದೊಡ್ಡ ಕೆರೆಗಳಲ್ಲೂ ಬೋಟಿಂಗ್ ಆರಂಭಿಸಲು ಯೋಜಿಸಲಾಗಿದ್ದರೂ, ಶುದ್ಧ ನೀರಿಲ್ಲದ ಕೆರೆಗಳಲ್ಲಿ ಬೋಟಿಂಗ್ ಎಷ್ಟು ಸೂಕ್ತ ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ. ಒಟ್ಟಾರೆ, ಜಿಬಿಎ ಜನರ ಆಸಕ್ತಿಗಾಗಿ ಈ ಯೋಜನೆಯನ್ನು ತರುತ್ತಿದ್ದರೂ, ಕೆರೆಗಳ ಮೂಲಭೂತ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಅಗತ್ಯವಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:46 pm, Fri, 13 February 26