ತುಮಕೂರು, ಫೆ.22: ಲೋಕಸಭೆ ಚುನಾವಣೆ (Lok Sabha Elections) ಸಮೀಪಿಸುತ್ತಿದ್ದಂತೆ ತುಮಕೂರು (Tumkur) ಕ್ಷೇತ್ರದ ಬಿಜೆಪಿ ಟಿಕೆಟ್ ಫೈಟ್ ಜೋರಾಗಿಯೇ ನಡೆಯುತ್ತಿದೆ. ವಿಧಾನಸಭೆ ಚುನಾವಣೆಯಲ್ಲಿ ಸೋಲನುಭವಿಸಿರುವ ಬಿಜೆಪಿ ಹಿರಿಯ ನಾಯಕ ವಿ.ಸೋಮಣ್ಣ ಮಾತ್ರವಲ್ಲದೆ ಜೆಸಿ ಮಾಧ್ಯಸ್ವಾಮಿ (JC Madhuswamy) ಕೂಡ ತುಮಕೂರು ಟಿಕೆಟ್ ಮೇಲೆ ಕಣ್ಣಿಟ್ಟಿದ್ದಾರೆ. ಇದೀಗ, ಇಂದು ಜಿಲ್ಲಾ ಬಿಜೆಪಿ ನೂತನ ಕಚೇರಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿ, ಕಳೆದುಕೊಂಡಿದ್ದನ್ನು ಈ ಚುನಾವಣೆಯಲ್ಲಿ ಪಡೆದುಕೊಳ್ಳಬೇಕಿದೆ ಎಂದು ಹೇಳುವ ಮೂಲಕ ಪರೋಕ್ಷವಾಗಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಹೇಳಿಕೆ ನೀಡಿದ್ದಾರೆ.
ತುಮಕೂರು ನಗರದ ಭದ್ರಮ್ಮ ವೃತ್ತದಲ್ಲಿರುವ ನೂತನ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ಕಳೆದುಕೊಂಡಿರೋದನ್ನು ಈ ಚುನಾವಣೆಯಲ್ಲಿ ಪಡೆದುಕೊಳ್ಳಬೇಕಾಗಿದೆ. ಚುನಾವಣೆಯಲ್ಲಿ 5-6 ಸಾವಿರ ವೋಟ್ನಿಂದ ಸೋತಿದ್ದು ಮಹತ್ವವಲ್ಲ. ಮೋದಿ ಶಕ್ತಿ ಬಳಸಿಕೊಂಡು ಮುನ್ನಡೆಯಬೇಕು. ಇಂದು ಮತದಾರರ ನನಗೇನಾಯ್ತು ಅಂತ ಯೋಚನೆ ಮಾಡುತ್ತಿದ್ದಾರೆ. ಆದರೆ ನಾವು ರಾಷ್ಟ್ರಕ್ಕೆ ಏನಾಗಬೇಕು ಅಂತ ಚರ್ಚೆ ಮಾಡುತ್ತಿದ್ದೇವೆ. ಈ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕು ಎಂದರು.
ಇದನ್ನೂ ಓದಿ: ತುಮಕೂರು ಬಿಜೆಪಿ ಟಿಕೆಟ್ ಫೈಟ್: ಟಿಕೆಟ್ ಸಿಗುವ ವಿಶ್ವಾಸದಲ್ಲಿ ಮಾಧುಸ್ವಾಮಿ; ಮತ್ತೊಬ್ಬ ಆಕಾಂಕ್ಷಿ ವಿ ಸೋಮಣ್ಣ ಹೇಳುವುದೇನು?
ಕಾರ್ಯಕ್ರಮದಲ್ಲಿ ಮಾತನಾಡಿದ ಸಂಸದ ಜಿ.ಎಸ್.ಬಸವರಾಜ್, ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಮತ್ತೆ ಬಿಜೆಪಿ ಗೆಲ್ಲಿಸಬೇಕು. ಪ್ರತಿ ಕಾರ್ಯಕರ್ತ ಕನಿಷ್ಠ 500 ಮತ ಹಾಕಿಸುತ್ತೇವೆ ಅಂತಾ ಪ್ರತಿಜ್ಞೆ ಮಾಡಿ ಎಂದು ಬಿಜೆಪಿ ಕಾರ್ಯಕರ್ತರಿಗೆ ಕರೆ ನೀಡಿದರು.
ಮಂಡ್ಯ, ಹಾಸನ ಬಿಟ್ಟರೆ ಅತಿ ಸೂಕ್ಷ್ಮ ಕ್ಷೇತ್ರ ತುಮಕೂರು ಎಂದು ಹೇಳಿದ ಸಂಸದರು, ಮೋದಿ ನೋಡಿ ಮತ ಹಾಕುತ್ತೇವೆಂದು ಮಹಿಳೆ ಒಬ್ಬರು ಹೇಳಿದರು. ಮೋದಿ ಗೆಲ್ಲಿಸುವುದೇ ನಮ್ಮ ಗುರಿ ಎಂದು ಜನ ಹೇಳುತ್ತಿದ್ದಾರೆ. ಸದ್ಯ ದೇಶದ ಜನರಲ್ಲಿ ಇದೇ ಅಭಿಪ್ರಾಯ ಇದೆ. ನಾವೆಲ್ಲರೂ ಒಗ್ಗಟ್ಟಾಗಿದ್ದರೆ ಒಂದೂವರೆ ಲಕ್ಷ ಮತಗಳಿಂದ ಗೆಲ್ಲುತ್ತೇವೆ. ಸುರೇಶ್ ಗೌಡರ ಬಳಿ ಕೆಲವು ಯೋಜನೆಗಳಿವೆ. ನನಗೂ ಕೆಲವು ತಂತ್ರಗಾರಿಕೆ ಗೊತ್ತಿದೆ. ಅದೆಲ್ಲವನ್ನೂ ಒಟ್ಟುಗೂಡಿಸಿ ಹೋರಾಟ ಮಾಡಬೇಕು ಎಂದರು.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ