ತುಮಕೂರು, (ಫೆಬ್ರವರಿ, 21): ತುಮಕೂರು (Tumkur) ಜಿಲ್ಲೆಯ ಹಿಂದುಳಿದ ವರ್ಗಗಳ ಹಾಸ್ಟೆಲ್ಗೆ (BCM Hostel) ಸಿದ್ದಂಗಾ ಮಠದಿಂದ(Siddaganga Matt) ಅಕ್ಕಿ ಎರವಲು ಪಡೆದು ವಿತರಿಸಿದ್ದ ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿ ಗೀತಮ್ಮ ಅವರನ್ನು ಅಮಾನತು ಮಾಡಿ ಸರ್ಕಾರ (Karnataka Government) ಆದೇಶ ಹೊರಡಿಸಿತ್ತು. ಇದೀಗ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ತುಮಕೂರು ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿ ಗಂಗಪ್ಪ ಅವರನ್ನು ಎತ್ತಂಗಡಿ ಮಾಡಿದೆ. ಈ ಮೂಲಕ ಕರ್ತವ್ಯ ನಿರ್ಲಕ್ಷ್ಯ ಆರೋಪದಡಿ ಜಿಲ್ಲಾ ಮತ್ತು ತಾಲೂಕು ಮಟ್ಟದ ಇಬ್ಬರೂ ಅಧಿಕಾರಿಗಳ ಮೇಲೆ ಸರ್ಕಾರ ಕ್ರಮ ಕೈಗೊಂಡಂತಾಗಿದೆ.
ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿ ಗಂಗಪ್ಪ ಅವರನ್ನು ವರ್ಗಾವಣೆ ಮಾಡಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಹೇಮಲತಾ ಎಂ. ಅವರು ಆದೇಶ ಹೊರಡಿಸಿದ್ದಾರೆ. ಗಂಗಪ್ಪ ಅ ಮಾತೃ ಇಲಾಖೆಯಾದ ಸಮಾಜ ಕಲ್ಯಾಣ ಇಲಾಖೆಯಲ್ಲಿ ವರದಿ ಮಾಡಿಕೊಳ್ಳುವಂತೆ ಆದೇಶಿಸಲಾಗಿದೆ.ಇನ್ನು ಗಂಗಪ್ಪ ಅವರ ಸ್ಥಾನಕ್ಕೆ ಕೋಲಾರ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿಯಾಗಿದ್ದ ಸೋನಿಯಾ ವರ್ಣಿಕರ್ ಅವರನ್ನು ನೇಮಕ ಮಾಡಲಾಗಿದೆ.
ಬೆಂಗಳೂರು: ತುಮಕೂರು ಜಿಲ್ಲೆಯಲ್ಲಿರುವ ಹಿಂದುಳಿದ ವರ್ಗಗಳ ಇಲಾಖೆ ವ್ಯಾಪ್ತಿಯ ವಿದ್ಯಾರ್ಥಿ ನಿಲಯಗಳಲ್ಲಿ ಅಕ್ಕಿ ದಾಸ್ತಾನಿದ್ದು, ಯಾವುದೇ ಕೊರತೆ ಇಲ್ಲ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ್ ತಂಗಡಗಿ ಸ್ಪಷ್ಟಪಡಿಸಿದ್ದರು.
ಹಿಂದುಳಿದ ವರ್ಗಗಳ ಹಾಸ್ಟೆಲ್‌ಗಳಿಗೆ ಸಿದ್ದಗಂಗಾ ಮಠದಿಂದ ಅಕ್ಕಿ ಸಾಲ ಪಡೆದ ಆರೋಪದ ಬಗ್ಗೆ ಪ್ರತಿಕ್ರಿಯಿಸಿ, ತುಮಕೂರು ಜಿಲ್ಲೆಯಲ್ಲಿ 111 ಹಾಸ್ಟೆಲ್‌ಗಳು ಕಾರ್ಯ ನಿರ್ವಹಿಸುತ್ತಿವೆ. ಜಿಲ್ಲೆಯಲ್ಲಿನ ಎಲ್ಲಾ ತಾಲೂಕುಗಳಲ್ಲಿ ವಿದ್ಯಾರ್ಥಿಗಳ ಮಾಸಿಕ ಬೇಡಿಕೆಗಳಿಗೆ ಅನುಗುಣವಾಗಿ ಅಕ್ಕಿ ಮತ್ತು ಗೋಧಿ ಹಂಚಿಕೆಯಾಗಿರುತ್ತದೆ. ಜಿಲ್ಲೆಯ ಹಾಸ್ಟೆಲ್‌ಗಳಲ್ಲಿ ಅಕ್ಕಿ ಕೊರತೆ ಇಲ್ಲ. ಅಕ್ಕಿ ಇಲ್ಲ ಎಂಬ ವದಂತಿ ಬೆನ್ನಲ್ಲೇ ತುಮಕೂರಿನ ಹಿಂದುಳಿದ ವರ್ಗದ ಜಿಲ್ಲಾ ಕಲ್ಯಾಣ ಅಧಿಕಾರಿಯಿಂದ ಕೂಡ ಮಾಹಿತಿ ಪಡೆದಿದ್ದೇನೆ. ಅಕ್ಕಿ ಸಮಸ್ಯೆ ಇಲ್ಲ ಎಂದು ಮಾಹಿತಿ ನೀಡಿದ್ದಾರೆ ಎಂದು ತಿಳಿಸಿದ್ದರು.
ಹಿಂದುಳಿದ ವರ್ಗಗಳ ಹಾಸ್ಟೆಲ್‌ಗಳಿಗೆ ಸಿದ್ದಗಂಗಾ ಮಠದಿಂದ ಅಕ್ಕಿಯನ್ನು ಸಾಲ ಪಡೆಯಲಾಗಿತ್ತು. ತುಮಕೂರು ಜಿಲ್ಲೆಯ ಬಿಸಿಎಂ ಹಾಸ್ಟೆಲ್‌ಗಳಿಗೆ ಸರ್ಕಾರದಿಂದ ಸಕಾಲಕ್ಕೆ ರೇಷನ್ ಪೂರೈಕೆಯಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಬಿಸಿಎಂ ಇಲಾಖೆ ಅಧಿಕಾರಿಗಳು ಸಿದ್ದಗಂಗಾ ಮಠದಿಂದ ಅಕ್ಕಿ ದಾಸ್ತಾನು ಸಾಲ ಪಡೆದಿದ್ದಾರೆ ಎಂದು ಆರೋಪಿಸಲಾಗಿತ್ತು. ಸುಮಾರು 500 ಚೀಲ ಅಕ್ಕಿಯನ್ನು ಸಾಲವಾಗಿ ಪಡೆದಿದ್ದಾರೆ ಎಂಬ ಮಾಹಿತಿ ಬಹಿರಂಗಗೊಂಡಿತ್ತು. ಇದರಿಂದ ರಾಜ್ಯ ಸರ್ಕಾರ ಮುಜುಗರ ಉಂಟಾಗಿತ್ತು. ಇನ್ನು ಅಕ್ಕಿ ಪೂರೈಕೆಯಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ದಾಸ್ತಾನು ಇದ್ದರೂ ಸರಿಯಾಗಿ ಬಳಕೆ ಮಾಡಿಕೊಂಡಿಲ್ಲ ಎನ್ನುವುದು ರಾಜ್ಯ ಸರ್ಕಾರದ ಆರೋಪವಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.