ತುಮಕೂರು, ಮಾ.18: ಹಾಸನ (Hassan) ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ಅವರನ್ನು ಗೆಲ್ಲಿಸದಿದ್ದರೆ ನಾನು ಯಾರಿಗೂ ಮುಖ ತೋರಿಸುವುದಿಲ್ಲ ಎಂದು ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಸಹಕಾರ ಇಲಾಖೆ ಸಚಿವ ಕೆಎನ್ ರಾಜಣ್ಣ (KN Rajanna) ಅವರು ತುಮಕೂರಿನಲ್ಲಿ ಮಾಜಿ ಪ್ರಧಾನಿಯೂ ಆಗಿರುವ ಜೆಡಿಎಸ್ ವರಿಷ್ಠ ಹೆಚ್ಡಿ ದೇವೇಗೌಡ (HD Deve Gowda) ಕುಟುಂಬಕ್ಕೆ ಓಪನ್ ಚಾಲೆಂಜ್ ಹಾಕಿದ್ದಾರೆ.
ತುಮಕೂರಿನಲ್ಲಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ದೇವೇಗೌಡರು ಯಾವತ್ತೂ ಕೂಡ ಜಾತ್ಯತೀತರಲ್ಲ. ಮೋದಿ ಗೆದ್ದರೆ ನಾನು ದೇಶ ಬಿಡುತ್ತೇನೆ ಅಂತಾ ಹೇಳಿದ್ದರು, ಈಗ ಏನ್ ಮಾಡಿದರು? ಈಗ ಎಲ್ಲಾ ಕಡೆ ವೈರಲ್ ಆಗುತ್ತಿದೆ. ಎರಡು ಕಡೆ ಮೊಮ್ಮಕ್ಕಳು, ಒಂದು ಕಡೆ ಅಳಿಯ ನಿಲ್ಲುತ್ತಿದ್ದಾರೆ. ಹಾಗಿದ್ದರೆ ಜೆಡಿಎಸ್ನಲ್ಲಿ ಬೇರೆ ಯಾರು ಅಭ್ಯರ್ಥಿಗಳು ಇಲ್ಲವೇ ಎಂದು ಪ್ರಶ್ನಿಸಿದರು.
ಹಾಸನ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲ್ಲಿಸದಿದ್ದರೆ ನಾನು ಯಾರಿಗೂ ಮುಖವನ್ನೇ ತೋರಿಸಲ್ಲ ಅಂತಾ ದೇವೇಗೌಡ ಕುಟುಂಬಕ್ಕೆ ರಾಜಣ್ಣ ಓಪನ್ ಚಾಲೆಂಜ್ ಹಾಕಿದ್ದಾರೆ. ಪುಟ್ಟಸ್ವಾಮಿಗೌಡರು ದೇವೇಗೌಡರನ್ನ ಸೋಲಿಸಿದರು. ಈಗ ದೇವೇಗೌಡರ ಮೊಮ್ಮಗ ಹಾಸನದಲ್ಲಿ ನಿಲ್ಲುತ್ತಿದ್ದಾರೆ. ಪುಟ್ಟಸ್ವಾಮಿಗೌಡರ ಮೊಮ್ಮಗ ನಮ್ಮ ಪಕ್ಷದಿಂದ ನಿಲ್ಲುತ್ತಿದ್ದಾರೆ ಎಂದರು.
ಯಾರನ್ನೇ ಕೇಳಿದರೂ ಕಾಂಗ್ರೆಸ್ ಅಭ್ಯರ್ಥಿ ತುಂಬಾ ಒಳ್ಳೆಯವರು ಅಂತಾ ಹೇಳುತ್ತಿದ್ದಾರೆ. ಎರಡು ದಶಕಗಳಿಂದ ಕಾಂಗ್ರೆಸ್ ಹಾಸನದಲ್ಲಿ ಅಧಿಕಾರದಲ್ಲಿಲ್ಲ. ಹೀಗಾಗಿ ಕಾರ್ಯಕರ್ತರನ್ನ ದುರ್ಬಿನ್ ತಗೆದುಕೊಂಡು ಹುಡುಕುವ ಸ್ಥಿತಿ ಇರಬೇಕಿತ್ತು. ಆದರೆ ಹಾಸನದಲ್ಲಿ ಆ ಸ್ಥಿತಿ ಇಲ್ಲ, ಅಲ್ಲಿನ ಕಾರ್ಯಕರ್ತರ ಹುಮ್ಮಸ್ಸು ನೋಡಿದರೆ ಆಶ್ಚರ್ಯವಾಗುತ್ತದೆ ಎಂದರು.
ತುಮಕೂರಿನಲ್ಲಿ ಹೊರಗಿನ ಅಭ್ಯರ್ಥಿ ನಿಂತರೆ ಸೋಲಾಗುತ್ತದೆ ಅನ್ನೋ ವಿಚಾರವಾಗಿ ಮಾತನಾಡಿದ ರಾಜಣ್ಣ, 96ರ ಚುನಾವಣೆಯಲ್ಲಿ ಇದೇ ಬಸವರಾಜು ಅವರು ಆರ್.ಮಂಜುನಾಥ್ ಅವರನ್ನ ಹೊರಗಿನಿಂದ ಕರೆದುಕೊಂಡು ನಿಲ್ಲಿಸಿದರು. ನಂತರ ಕೋದಂಡರಾಮಯ್ಯ ಕೂಡ ಹೊರಗಿನಿಂದ ಬಂದು ನಿಂತಿದ್ದರು. ಕಳೆದ ಚುನಾವಣೆಯಲ್ಲಿ ದೇಶ ಕಂಡ ಮಹಾನ್ ನಾಯಕ ದೇವೇಗೌಡರು ಕೂಡ ಇಲ್ಲಿ ಸ್ಪರ್ಧಿಸಿದ್ದರು. ಆದರೆ ಇವರೆಲ್ಲರೂ ಸೋಲು ಕಂಡರು. ತುಮಕೂರಿನ ಜನ ಹೊರಗಿನವರಿಗೆ ಮಣೆ ಹಾಕಲ್ಲ ಎಂದರು.
ಇದನ್ನೂ ಓದಿ: ಹಾಸನದಲ್ಲಿ ಸೋದರಳಿಯ ಶ್ರೇಯಸ್ ಪಟೇಲ್ ವಿರುದ್ಧ ಬಂಡಾಯವೆದ್ದ ರಾಜೇಶ್ವರಿ; ಕಾಂಗ್ರೆಸ್ಗೆ ತಲೆಬಿಸಿ
ಮುದ್ದಹನುಮೇಗೌಡ ಎಲ್ಲಾ ಪಕ್ಷಗಳಿಗೆ ಹೋಗಿಬಂದಿರೋದಕ್ಕೆ ನಮಗೂ ಬೇಜಾರಿದೆ. ಆದರೆ ಇದೀಗ ಅವರನ್ನ ನಾವು ಅಭ್ಯರ್ಥಿಯನ್ನಾಗಿ ಮಾಡಿದ್ದೇವೆ. ಹಾಗಂದ ಮಾತ್ರಕ್ಕೆ ನಮ್ಮ ಬಳಿ ಬೇರೆ ಯಾರೂ ಅಭ್ಯರ್ಥಿ ಇಲ್ಲ ಅಂತೇನಿಲ್ಲ್ಲ. ಆದರೆ ಇದು ಕ್ಲಿಷ್ಟಕರ ಚುನಾವಣೆ, ಗೆಲ್ಲುವ ಅಭ್ಯರ್ಥಿಯನ್ನ ನಿಲ್ಲಿಸಬೇಕು ಅಂತಾ ನಿಲ್ಲಿಸಿದ್ದೇವೆ ಎಂದರು.
28 ಸೀಟ್ನಲ್ಲಿ 20 ಸೀಟ್ ಆದರೂ ಗೆಲ್ಲದೆ ಹೋದರೆ ನಮಗೆ ಸರ್ಕಾರ ನಡೆಸಲು ಯಾವುದೇ ನೈತಿಕತೆ ಇರುವುದಿಲ್ಲ. ಹೀಗಾಗಿ ನಾವೇ ಚುನಾವಣೆಗೆ ನಿಂತಿದ್ದೇವೆ ಅನ್ನೋ ರೀತಿ ಕೆಲಸ ಮಾಡಬೇಕು. ನಮ್ಮ ಸಂವಿಧಾನವನ್ನ ಬಿಜೆಪಿಯವರು ಇವತ್ತೂ ಒಪ್ಪೋದಿಲ್ಲ. ಆದರೆ ವಿಧಿ ಇಲ್ಲ ಅಂತೇಳಿ ಇಟ್ಟುಕೊಂಡಿದ್ದಾರೆ. ಹೀಗಾಗಿ ಅವರ ಸಿದ್ಧಾಂತಗಳಿಗೆ ಸೋಲಾಗಬೇಕು. ನಾವು ಹಿಂದುಗಳೆ, ಆದರೆ ನಾವು ಮಹಾತ್ಮಾ ಗಾಂಧಿ ಹಿಂದುಗಳು, ಬಿಜೆಪಿಯವರು ಗೂಡ್ಸೆ ಹಿಂದುಗಳು ಎಂದರು.
ಇದನ್ನೂ ಓದಿ: ಹಾಸನ ಕ್ಷೇತ್ರದ ಗೆಲುವಿಗೆ ನಿರ್ಣಾಯಕವಾಗಿರುವ ಕಡೂರಿನಲ್ಲಿ ದಳಪತಿ ದೇವೇಗೌಡ ರಣತಂತ್ರ
ನಮ್ಮ ರಾಜ್ಯದಲ್ಲಿ ಇವತ್ತು ಕಾಂಗ್ರೆಸ್ ಪಕ್ಷದ 136 ಶಾಸಕರು ಇದ್ದಾರೆ. ರಾಜ್ಯದ ಎಲ್ಲಾ ಕಾರ್ಯಕರ್ತರ ಶ್ರಮದಿಂದ ಇದು ಸಾಧ್ಯವಾಗಿದೆ. ಮುಸ್ಲಿಮರು ಕಾಂಗ್ರೆಸ್ಗೆ ಮತ ಹಾಕಲ್ಲ ಅಂತಾ ನಮ್ಮ ಅಭಿಪ್ರಾಯ ಅಲ್ಲ. ಆದರೆ ಬಿಜೆಪಿಯವರು ಕುತಂತ್ರಗಳನ್ನ ಮಾಡುತ್ತಾರೆ. ಅದಕ್ಕೆ ನಾವು ಎಚ್ಚರಿಕೆಯಿಂದ ಇರಬೇಕು ಅಂತಾ ಚರ್ಚೆ ಮಾಡಿದ್ದಾರೆ. ಅದರ ಅರ್ಥ ಮುಸ್ಲಿಮರು ನಮಗೆ ಬೆಂಬಲಿಸಲ್ಲ ಅಂತಲ್ಲ ಎಂದರು.
ಈ ಚುನಾವಣೆಯಲ್ಲಿ ನಮಗೆ ವೋಟ್ ಕೇಳಲು ಅಧಿಕಾರವಿದೆ. ಕಳೆದ ಚುನಾವಣೆಗೆ ಮೊದಲು ನಾವು ಕೊಟ್ಟಿದ್ದ ಭರವಸೆಗಳನ್ನೆಲ್ಲ ಈಡೇರಿಸಿದ್ದೇವೆ. ನಾವು ನುಡಿದಂತೆ ನಡೆದಿದ್ದೇವೆ, ಬಿಜೆಪಿಯವರು ನುಡಿದಂತೆ ನಡೆದಿಲ್ಲ. ಈಗ ಶ್ರೀರಾಮನ ದೇವಸ್ಥಾನವನ್ನ ತೋರಿಸುತ್ತಿದ್ದಾರೆ. ಶ್ರೀರಾಮ ಮೂರ್ತಿ ಕೆತ್ತಿದವನನ್ನು ಗರ್ಭಗುಡಿಯ ಒಳಗೆ ಬಿಡಿ ನೋಡೋಣ ಎಂದರು.
ದೇವಸ್ಥಾನ ಕಟ್ಟುವವರು ಶೂದ್ರರು, ನಂತರ ಪೂಜೆ ಮಾಡಿ ತಟ್ಟೆಗೆ ಕಾಸು ಹಾಕಿಸಿಕೊಳ್ಳುವವರು ಇವರು. ರಾಮಾಯಣ ಬರೆದವರು ವಾಲ್ಮೀಕಿ, ಮಹಾಭಾರತ ಬರೆದವರು ವ್ಯಾಸ, ಭಗವದ್ಗೀತೆ ಬರೆದವರು ಕೃಷ್ಣ, ಇವರೆಲ್ಲರೂ ಶೂದ್ರರು. ಆದರೆ ಶೂದ್ರರ ದೇವರನ್ನ ಇವರು ಪೂಜೆ ಮಾಡುತ್ತಿದ್ದಾರೆ. ಮನುಸ್ಮೃತಿಯನ್ನ ಬರೆದುಕೊಂಡಿದ್ದಾರೆ. ಅದರಲ್ಲಿ ಬ್ರಾಹ್ಮಣರು ಶ್ರೇಷ್ಠ ಅಂತಾ ಬರೆದುಕೊಂಡಿದ್ದಾರೆ, ಬರೆದುಕೊಳ್ಳಲಿ ಅಭ್ಯಂತರವಿಲ್ಲ ಎಂದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ