ಹಾಸನ ಕ್ಷೇತ್ರದ ಗೆಲುವಿಗೆ ನಿರ್ಣಾಯಕವಾಗಿರುವ ಕಡೂರಿನಲ್ಲಿ ದಳಪತಿ ದೇವೇಗೌಡ ರಣತಂತ್ರ
ಲೋಕಸಭಾ ಚುನಾವಣೆಗೆ ಕರ್ನಾಟಕದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದು, ಹಾಸನ, ಮಂಡ್ಯ ಮತ್ತು ಕೋಲಾರ ಕ್ಷೇತ್ರಗಳು ಜೆಡಿಎಸ್ ತೆಕ್ಕೆಗೆ ಬಿದ್ದಿವೆ. ಈ ಪೈಕಿ ಪ್ರತಿಷ್ಠೆಯ ಕಣವಾಗಿರುವ ಹಾಸನ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಯ ಗೆಲುವಿಗೆ ದಳಪತಿ ಹೆಚ್ಡಿ ದೇವೇಗೌಡ ಅವರು ಕಡೂರಿನಲ್ಲಿ ರಣತಂತ್ರ ರೂಪಿಸುತ್ತಿದ್ದಾರೆ.
ಚಿಕ್ಕಮಗಳೂರು, ಮಾ.15: ಲೋಕಸಭಾ ಚುನಾವಣೆಗೆ (Lok Sabha Elections) ಕರ್ನಾಟಕದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದು, ಹಾಸನ, ಮಂಡ್ಯ ಮತ್ತು ಕೋಲಾರ ಕ್ಷೇತ್ರಗಳು ಜೆಡಿಎಸ್ (JDS) ತೆಕ್ಕೆಗೆ ಬಿದ್ದಿವೆ. ಈ ಪೈಕಿ ಪ್ರತಿಷ್ಠೆಯ ಕಣವಾಗಿರುವ ಹಾಸನ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಯ ಗೆಲುವಿಗೆ ದಳಪತಿ ಹೆಚ್ಡಿ ದೇವೇಗೌಡ (HD Deve Gowda) ಅವರು ಕಡೂರಿನಲ್ಲಿ (Kadur) ರಣತಂತ್ರ ರೂಪಿಸುತ್ತಿದ್ದಾರೆ. ಹಾಸನದ (Hassan) ಗೆಲುವಿಗೆ ಕಡೂರು ಜೆಡಿಎಸ್ ಪಾಲಿಗೆ ನಿರ್ಣಾಯಕವಾಗಿದೆ.
ಕಡೂರಿನಲ್ಲಿ ದೇವೇಗೌಡ ಅವರು ಸಂಧಾನ ಸೂತ್ರ ಅನುರಿಸುತ್ತಿದ್ದಾರೆ. ಕಡೂರು ಬಿಜೆಪಿ ಮಾಜಿ ಶಾಸಕ ಸೇರಿದಂತೆ ಕಾಂಗ್ರೆಸ್ ಮುಖಂಡರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಪ್ತ ಕೆಂಪರಾಜು ಪುತ್ರ, ತರೀಕೆರೆ ಕಾಂಗ್ರೆಸ್ ಶಾಸಕ ಶ್ರೀನಿವಾಸ ಅಳಿಯ ಜೆಡಿಎಸ್ ಸೇರ್ಪಡೆಗೆ ಮುಂದಾಗಿದ್ದಾರೆ.
ಕಾಂಗ್ರೆಸ್ ಮುಖಂಡ ಚೇತನ್ ಕೆಂಪರಾಜು ಅವರು ದೇವೇಗೌಡರ ಸಮ್ಮುಖದಲ್ಲಿ ಜೆಡಿಎಸ್ ಸೇರ್ಪಡೆಯಾಗಲಿದ್ದಾರೆ. ಈ ಸಂಬಂಧ ದೇವೇಗೌಡ ಅವರು ಚೇತನ್ ನಿವಾಸಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ. ಮಾಜಿ ಬಿಜೆಪಿ ಶಾಸಕ ಬೆಳ್ಳಿ ಪ್ರಕಾಶ್ ಮನೆಗೂ ತೆರಳಿ ಸಂಧಾನ ಸಭೆ ನಡೆಸಿದ್ದಾರೆ.
ಹಾಸನದ ಗೆಲುವಿಗೆ ಕಡೂರು ನಿರ್ಣಾಯಕ
ಹಾಸನ ಕ್ಷೇತ್ರ ಗೆಲುವಿಗೆ ಕಡೂರು ನಿರ್ಣಾಯಕವಾಗಿದೆ. ಕುರುಬ, ಅಹಿಂದ ಮತಗಳು ಹೆಚ್ಚಿರುವ ಕಡೂರು ಕ್ಷೇತ್ರದಿಂದ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಬಿಎಸ್ವಿ ದತ್ತಾ ಅವರು 25 ಸಾವಿರ ಮತ ಪಡೆದಿದ್ದರು.
ಇದನ್ನೂ ಓದಿ: ಡಾ ಮಂಜುನಾಥ್ ರಾಜಕೀಯ ಪ್ರವೇಶ ಹಿಂದಿನ ಗುಟ್ಟು ಬಿಚ್ಚಿಟ್ಟ ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ
ರಾಜ್ಯದಲ್ಲಿ ಆಡಳಿತರೂಢ ಕಾಂಗ್ರೆಸ್ ಪಕ್ಷ ಒಂದೇ ಒಂದು ಕ್ಷೇತ್ರವನ್ನು ಗೆದ್ದುಕೊಳ್ಳದಂತೆ ನೋಡಿಕೊಳ್ಳಲು ಬಿಜೆಪಿ-ಜೆಡಿಎಸ್ ಮೈತ್ರಿ ಮಾಡಿಕೊಂಡಿದೆ. ಅದರಂತೆ ಮೈತ್ರಿ ಕ್ಷೇತ್ರದಲ್ಲಿ ಬಿಜೆಪಿ-ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದು ಅನಿವಾರ್ಯವಾಗಿದೆ. ಹೀಗಾಗಿ ಕಡೂರು ಕ್ಷೇತ್ರದ ಕಾಂಗ್ರೆಸ್ ಬಿಜೆಪಿ ಮುಖಂಡರ ಜೊತೆ ಸಂಧಾನದ ಬಳಿಕ ದೇವೇಗೌಡ ಅವರು ಜೆಡಿಎಸ್ ಬಿಜೆಪಿ ಕಾರ್ಯಕರ್ತರ ಸಭೆ ನಡೆಸಲಿದ್ದಾರೆ.
ಮೊಮ್ಮಗನ ಗೆಲುವಿಗೆ ಅಖಾಡಕ್ಕೆ ಇಳಿದ ದೇವೇಗೌಡ
ಹಾಸನ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಯಲಿರುವ ತಮ್ಮ ಮೊಮ್ಮಗ ಪ್ರಜ್ವಲ್ ರೇವಣ್ಣ ಅವರ ಪರ ದೇವೇಗೌಡ ಅವರು ಅಖಾಡಕ್ಕಿಳಿದಿದ್ದಾರೆ. ಬೆಂಗಳೂರಿನಿಂದ ಹೆಲಿಕಾಪ್ಟರ್ ಮೂಲಕ ಕಡೂರಿಗೆ ಆಗಮಿಸಲಿರುವ ದೇವೇಗೌಡ ಅವರು ಇಡೀ ದಿನ ಕಡೂರಿನಲ್ಲಿ ರಾಜಕೀಯ ತಂತ್ರಗಾರಿಕೆ ರೂಪಿಸಲಿದ್ದಾರೆ. ಈ ವೇಳೆ ಪ್ರಜ್ವಲ್ ರೇವಣ್ಣ ಹಾಗೂ ಇವರ ತಂದೆಯೂ ಆಗಿರುವ ಶಾಸಕ ರೇವಣ್ಣ ಅವರು ಜೊತೆಗಿರಲಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ