ತುಮಕೂರು, ಜುಲೈ 27: ಜಿಲ್ಲೆಯ ಕುಣಿಗಲ್ ಕಾಂಗ್ರೆಸ್ ಶಾಸಕ ಡಾ ರಂಗನಾಥ್(Dr Ranganath), ಮಾನವೀಯತೆ ಮೆರೆದು ಮತ್ತೊಮ್ಮೆ ಉತ್ತಮರೆನಿಸಿಕೊಂಡಿದ್ದಾರೆ. ಈ ಹಿಂದೆ ಜೂನ್ 27 ರಂದು ಆಶಾ ಎಂಬ ಬಡ ಮಹಿಳೆಗೆ ಸ್ವತಃ ತಾವೇ ಶಸ್ತ್ರ ಚಿಕಿತ್ಸೆ ಮಾಡಿ ಮಾನವೀಯತೆ ಮೆರೆದಿದ್ದರು. ಈಗ ಮತ್ತೆ ಎರಡನೇ ಬಾರಿಗೆ ಬಡ ವ್ಯಕ್ತಿಗೆ ಉಚಿತ ಆಪರೇಷನ್ ಮಾಡಿದ್ದಾರೆ.
ಚಿಕಿತ್ಸೆಗೆ ಹಣವಿಲ್ಲದೇ ಪರದಾಡುತ್ತಿದ್ದ ವ್ಯಕ್ತಿಗೆ ಉಚಿತ ಆಪರೇಷನ್ ಮಾಡಿ ಎರಡನೇ ಬಾರಿಗೆ ಕಾಂಗ್ರೆಸ್ ಶಾಸಕ ಡಾ ರಂಗನಾಥ್ ಅವರು ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಯಡವಾಣಿ ಗ್ರಾಮದ ಶಿವನಂಜಯ್ಯ ಮಂಡಿ ನೋವಿನಿಂದ ಬಳಲುತ್ತಿದ್ದರು. ಚಿಕಿತ್ಸೆಗೆ ಹಣವಿಲ್ಲದೆ ಶಾಸಕ ಡಾ ರಂಗನಾಥ್ ಬಳಿ ಬಂದಾಗ ತಾವೇ ಮತ್ತೊಮ್ಮೆ ಬೆಂಗಳೂರಿನ ಬೋರಿಂಗ್ ಆಸ್ಪತ್ರೆಯಲ್ಲಿ ಉಚಿತ ಶಸ್ತ್ರ ಚಿಕಿತ್ಸೆ ಮಾಡಿ ಸೈ ಎನಿಸಿಕೊಂಡಿದ್ದಾರೆ. ಶಾಸಕರ ಈ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ. ಡಾ ರಂಗನಾಥ್ ರ ಕಾರ್ಯಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಗೃಹ ಸಚಿವ ಡಾ ಜಿ ಪರಮೇಶ್ವರ್ ಕೂಡ ಕೆಡಿಪಿ ಸಭೆಯಲ್ಲಿ ಶ್ಲಾಘಿಸಿದ್ದರು.
ಇದನ್ನೂ ಓದಿ: ಸರ್ಕಾರಿ ಕಾಲೇಜಿನಲ್ಲಿ ಭಯದಲ್ಲೇ ಕೆರೆ ಹಾವು ಮುಟ್ಟಿ ಸಂಭ್ರಮಿಸಿದ ಕಾಂಗ್ರೆಸ್ ಶಾಸಕ ಡಾ. ರಂಗನಾಥ್
ಕುಣಿಗಲ್ ತಾಲೂಕಿನ ಕುಂದೂರು ಗ್ರಾಮದ ಆಶಾ ಎಂಬ ಮಹಿಳೆಯ ಕೀಲು ಡಿಸ್ ಲೋಕೆಟ್ ಆಗಿತ್ತು. ಈ ಚಿಕಿತ್ಸೆಗಾಗಿ ಶಸ್ತ್ರ ಚಿಕಿತ್ಸೆ ಮಾಡಲು 4-5 ಲಕ್ಷ ರೂ ಬೇಕಿತ್ತು. ಆಶಾ ಹತ್ತು ವರ್ಷಗಳ ಹಿಂದೆ ಯಶಸ್ವಿನಿ ಯೋಜನೆಯಲ್ಲಿ ಕೀಲು ಆಪರೇಶನ್ ಮಾಡಿಸಿಕೊಂಡಿದ್ದರು. ಹತ್ತು ವರ್ಷಗಳ ಬಳಿಕ ಮತ್ತೆ ನೋವು ಕಾಣಿಸಿಕೊಂಡಿತ್ತು. ಇದರ ಸಲುವಾಗಿ ಯಶಸ್ವಿನಿ ಯೋಜನೆಯಲ್ಲಿ ಎರಡನೇ ಬಾರಿಗೆ ಅವಕಾಶ ಇರಲಿಲ್ಲ. ಹೀಗಾಗಿ ಶಾಸಕರಿಗೆ ಮನವಿ ಮಾಡಿದ ಹಿನ್ನೆಲೆಯಲ್ಲಿ ಜೂನ್ 27 ರಂದು ಆಶಾಳನ್ನ ಬೆಂಗಳೂರಿನ ಬೋರಿಂಗ್ ಆಸ್ಪತ್ರೆಗೆ ದಾಖಲಿಸಿ ಉಚಿತವಾಗಿ ತಾವೇ ಆಪರೇಷನ್ ಮಾಡಿದ್ದರು. ಮೂಲತಃ ಆರ್ಥೊಪೆಡಿಕ್ ವೈದ್ಯರಾಗಿರುವ ಡಾ ರಂಗನಾಥ್ ಮಹಿಳೆಗೆ ಆಪರೇಷನ್ ಮಾಡಿ ಮಾನವೀಯತೆ ಮೆರೆದಿದ್ದರು.
ತುಮಕೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ