ಫಾರಂಗೆ ನುಗ್ಗಿ 200ಕ್ಕೂ ಹೆಚ್ಚು ಕೋಳಿಗಳನ್ನು ಬಲಿ ಪಡೆದ ಚಿರತೆ: ಕಣ್ಣೀರು ಹಾಕಿದ ರೈತ

ಫಾರಂಗೆ ನುಗ್ಗಿ 200 ಕೋಳಿಗಳನ್ನು ಚಿರತೆ ತಿಂದಿರುವಂತಹ ಘಟನೆ ಜಿಲ್ಲೆಯ  ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಯಗಚಿಹಳ್ಳಿ ಗ್ರಾಮದ ತೋಟದಲ್ಲಿ ನಡೆದಿದೆ.

ಫಾರಂಗೆ ನುಗ್ಗಿ 200ಕ್ಕೂ ಹೆಚ್ಚು ಕೋಳಿಗಳನ್ನು ಬಲಿ ಪಡೆದ ಚಿರತೆ: ಕಣ್ಣೀರು ಹಾಕಿದ ರೈತ
ಕೋಳಿ ಫಾರಂಗೆ ದಾಳಿ ಮಾಡಿದ ಚಿರತೆ

Updated on: Mar 22, 2023 | 6:48 PM

ತುಮಕೂರು: ಫಾರಂಗೆ ನುಗ್ಗಿ 200 ಕೋಳಿಗಳನ್ನು ಚಿರತೆ (Leopard) ತಿಂದಿರುವಂತಹ ಘಟನೆ ಜಿಲ್ಲೆಯ  ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಯಗಚಿಹಳ್ಳಿ ಗ್ರಾಮದ ತೋಟದಲ್ಲಿ ನಡೆದಿದೆ. ಮಹಾಲಕ್ಷ್ಮೀ ಗಿರೀಶ್ ಎಂಬುವರಿಗೆ ಸೇರಿದ ಫಾರಂ ಆಗಿದ್ದು, ದನ, ಕುರಿ, ಮೇಕೆಗಳ ಮೇಲೆ ದಾಳಿ ನಡೆಸುತ್ತಿದ್ದ ಚಿರತೆ, ಇದೀಗ ಫಾರಂಗೆ ನುಗ್ಗಿ ಕೋಳಿ ತಿಂದಿದೆ. ಸಾಲ ಮಾಡಿ ಕೋಳಿ ಫಾರಂ ಮಾಡಿದ್ದ ರೈತರು ಕಣ್ಣೀರು ಹಾಕುವಂತಾಗಿದೆ. ಕಾಡು ಪ್ರಾಣಿಗಳ ದಾಳಿಯಿಂದ ಜಾನುವಾರುಗಳು ಸತ್ತರೆ ಅರಣ್ಯ ಇಲಾಖೆ ಪರಿಹಾರ ನೀಡುತ್ತೆ. ಆದರೆ ಪಶು ಇಲಾಖೆ ಮಾತ್ರ ಕೋಳಿಗಳಿಗೆ ಪರಿಹಾರ ನೀಡುತ್ತಿಲ್ಲ. ಹಾಗಾಗಿ ಪರಿಹಾರ ಸಿಗದೆ ರೈತರು ಕಂಗಲಾಗಿದ್ದು, ಚಿರತೆ ಸೆರೆ ಹಿಡಿಯುವಂತೆ ಗ್ರಾಮಸ್ಥರಿಂದ ಒತ್ತಾಯಿಸಿದ್ದಾರೆ. ಮತ್ತೊಂದು ಪ್ರಕರಣದಲ್ಲಿ ಬಳ್ಳಾರಿ ತಾಲೂಕಿನ ಸಂಜೀವರಾಯನಕೋಟೆ ಗ್ರಾಮದಲ್ಲಿ ಚಿರತೆ ದಾಳಿಗೆ 13 ಕುರಿಗಳು ಬಲಿಯಾಗಿವೆ. ರಾತ್ರಿ ಮಾರುತಿ ಎಂಬುವರಿಗೆ ಸೇರಿದ ಕುರಿ‌ಗಳ ಮೇಲೆ ಚಿರತೆ ದಾಳಿ ನಡೆಸಿದೆ. ಸದ್ಯ ಚಿರತೆ ಸೆರೆ ಹಿಡಿಯುವಂತೆ ಸಂಜೀವರಾಯನಕೋಟೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಯಲಹಂಕ ವ್ಯಾಪ್ತಿಯ ದಾಸನಪುರದಲ್ಲಿ ಚಿರತೆ ದಾಳಿಗೆ ಕರು ಬಲಿ

ಬೆಂಗಳೂರು: ನಗರದಲ್ಲಿ ಕಳೆದು ನಾಲ್ಕೈದು ತಿಂಗಳಿಂದ ನಗರದ ಒಂದಲ್ಲ, ಒಂದು ಭಾಗದಲ್ಲಿ ಚಿರತೆ ಪ್ರತ್ಯಕ್ಷವಾಗುತ್ತಿದೆ. ಜ್ಞಾನಭಾರತಿ, ಯಶವಂತಪುರ, ಯಲಹಂಕ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಚಿರತೆ ಕಾಣಿಸಿಕೊಂಡು ಜನರಲ್ಲಿ ಆತಂಕ ಮೂಡಿಸಿತ್ತು. ಇದೀಗ, ಮತ್ತೆ ಯಲಹಂಕ ವಿಧಾನಸಭಾ ಕ್ಷೇತ್ರದ ದಾಸನಪುರ ಪಂಚಾಯಿತಿ ವ್ಯಾಪ್ತಿಯಲ್ಲಿ ಚಿರತೆ, ಕರು ಒಂದನ್ನು ತಿಂದಿರುವ ಘಟನೆ ಫೆ. 19ರ ರಾತ್ರಿ ನಡೆದಿತ್ತು. ಐದು ದಿನಗಳ ಹಿಂದಷ್ಟೇ ಇದೇ ಊರಿನ ಪಕ್ಕದ ರಾಮಾಂಜನೇಯ ಲೇಔಟ್​ನಲ್ಲಿ ಎರಡು ಚಿರತೆಗಳು ಕಾಣಿಸಿಕೊಂಡಿದ್ದವು. ಇದಾದ ನಂತರ ಈಗ ಚಿರತೆ ಕರು ಒಂದನ್ನು ಅರ್ಧ ತಿಂದಿದೆ. ಇದು ಸ್ಥಳೀಯರಲ್ಲಿ ಮತ್ತಷ್ಟು ಆತಂಕ ಹೆಚ್ಚಿಸಿದ್ದು, ಹೊರಗಡೆ ಓಡಾಡಲು ಭಯ ಪಡುತ್ತಿದ್ದಾರೆ. ಸದ್ಯ ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನ್ ಇಟ್ಟಿದ್ದು, ಬೋನ್ ಒಳಗೆ ಮೇಕೆ ಮರಿ ಇಟ್ಟು ವ್ಯವಸ್ಥೆ ಮಾಡಲಾಗಿತ್ತು.

ಇದನ್ನೂ ಓದಿ: ಮಂಡ್ಯ: ಮಹಿಳೆ ಮೇಲೆ ಚಿರತೆ ದಾಳಿ; ಸ್ವಲ್ಪದರಲ್ಲೇ ತಪ್ಪಿದ ಅನಾಹುತ

ಕೂಲಿ ಕಾರ್ಮಿಕನ ಮೇಲೆ ಚಿರತೆ ದಾಳಿ

ಮಂಡ್ಯ: ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ರಾಯಸಮುದ್ರ ಗ್ರಾಮದ ಬಳಿ ಕಬ್ಬು ಕಟಾವು ಮಾಡುತ್ತಿದ್ದ ಭದ್ರಾವತಿ ಮೂಲದ ಜಯರಾಮ್​ ಎಂಬುವವರ ಮೇಲೆ ಚಿರತೆ ದಾಳಿ ಮಾಡಿತ್ತು. ಗಂಭೀರವಾಗಿ ಗಾಯಗೊಂಡ ಜಯರಾಮ್​ನನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಇನ್ನು ಚಿರತೆ ದಾಳಿಯಿಂದ ರಾಯಸಮುದ್ರ ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿತ್ತು.

ಇದನ್ನೂ ಓದಿ: ಬೆಂಗಳೂರಿನಲ್ಲಿ ಮತ್ತೆ ಚಿರತೆ ಪ್ರತ್ಯಕ್ಷ: ಗೊಂಗಡಿಪುರ ಗ್ರಾಮಕ್ಕೆ ನುಗ್ಗಿ ನಾಯಿ ಕೊಂದು ತಿಂದ ಚಿರತೆ, ಗ್ರಾಮಸ್ಥರಲ್ಲಿ ಆತಂಕ

ರಾಮತುಂಗಾ ಗ್ರಾಮದಲ್ಲಿ ಬೋನ್​ಗೆ ಬಿದ್ದ 2 ವರ್ಷದ ಗಂಡು ಚಿರತೆ

ಮೈಸೂರು: ಹಲವು ದಿನಗಳಿಂದ ಸಾಕು ಪ್ರಾಣಿಗಳ ಮೇಲೆ ದಾಳಿ ಮಾಡುತ್ತಿದ್ದ ಚಿರತೆ ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ರಾಮತುಂಗಾ ಗ್ರಾಮದಲ್ಲಿ ಇಟ್ಟಿದ್ದ ಬೋನಿಗೆ ಬಿದ್ದಿದೆ. ರೈತ ನಾಗೇಶ್​ಗೆ ಸೇರಿದ 2 ಮೇಕೆಗಳನ್ನು ಈ ಚಿರತೆ ಕೊಂದು ತಿಂದಿತ್ತು. ಈ ಕಾರಣಕ್ಕೆ ಚಿರತೆ ದಾಳಿ ಮಾಡಿದ್ದ ಸ್ಥಳದಲ್ಲಿ ಅರಣ್ಯ ಸಿಬ್ಬಂದಿಯು ಬೋನ್ ಇರಿಸಿದ್ದು, ಇದೀಗ 2 ವರ್ಷದ ಗಂಡು ಚಿರತೆ ಬೋನ್​ಗೆ ಬಿದ್ದಿದೆ. ಸೆರೆ ಸಿಕ್ಕ ಗಂಡು ಚಿರತೆಗೆ ಪ್ರಾಥಮಿಕ ಚಿಕಿತ್ಸೆ ನೀಡಿ, ಚಿಪ್ ಅಳವಡಿಕೆ ಮಾಡಲಾಗಿದೆ. ನಂತರ ದೇವಮಾಚಿ ಅರಣ್ಯಕ್ಕೆ ಚಿರತೆಯನ್ನ ಬಿಡಲಾಗಿತ್ತು.

ರಾಜದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 6:47 pm, Wed, 22 March 23