ತುಮಕೂರಿನಲ್ಲಿ ಒಂದೆರಡು ವರ್ಷಗಳಲ್ಲಿ ಒಂದೂವರೆ ಸಾವಿರದಷ್ಟು ಡಿವೋರ್ಸ್ ಕೇಸ್, ವಿಚ್ಛೇದನಕ್ಕೆ ಕಾರಣವೇನು?

| Updated By: ಆಯೇಷಾ ಬಾನು

Updated on: Sep 05, 2023 | 1:30 PM

Divorce: ತುಮಕೂರು ಜಿಲ್ಲೆಯಲ್ಲಿ ಒಂದೆರಡು ವರ್ಷಗಳಲ್ಲಿ ಒಂದೂವರೆ ಸಾವಿರದಷ್ಟು ಡಿವೋರ್ಸ್ ಕೇಸ್ ದಾಖಲಾಗಿದೆ. ಒಂದೂವರೆ ವರ್ಷದಲ್ಲಿ 1500ಕ್ಕೂ ಹೆಚ್ಚು ಪ್ರಕರಣಗಳು ವಿಚ್ಚೇದನಕ್ಕಾಗಿ ಕೋರ್ಟ್ ಮೊರೆ ಹೋಗಿರುವುದು ಬೆಳಕಿಗೆ ಬಂದಿದೆ.

ತುಮಕೂರಿನಲ್ಲಿ ಒಂದೆರಡು ವರ್ಷಗಳಲ್ಲಿ ಒಂದೂವರೆ ಸಾವಿರದಷ್ಟು ಡಿವೋರ್ಸ್ ಕೇಸ್, ವಿಚ್ಛೇದನಕ್ಕೆ ಕಾರಣವೇನು?
ಸಾಂದರ್ಭಿಕ ಚಿತ್ರ
Follow us on

ತುಮಕೂರು, ಸೆ.05: ಮದುವೆ, ಸಂಬಂಧಗಳನ್ನು ನಿಭಾಯಿಸುವುದರಲ್ಲಿ ಕರ್ನಾಟಕ ಹೆಸರುವಾಸಿಯಾಗಿದೆ. ಆದರೆ ಕಳೆದ ಕೆಲವು ವರ್ಷಗಳಿಂದ ವಿಚ್ಛೇದನ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದ್ದು ಅಂದಾಜು 50% ರಿಂದ 60% ರಷ್ಟು ಏರಿಕೆ ಕಂಡಿದೆ ಎಂದು ಕೆಲವರು ಅಂದಾಜಿಸಿದ್ದಾರೆ. ತುಮಕೂರು ಜಿಲ್ಲೆಯಲ್ಲಿ ಒಂದೆರಡು ವರ್ಷಗಳಲ್ಲಿ ಒಂದೂವರೆ ಸಾವಿರದಷ್ಟು ಡಿವೋರ್ಸ್ ಕೇಸ್(Divorce) ದಾಖಲಾಗಿದೆ. ಒಂದೂವರೆ ವರ್ಷದಲ್ಲಿ 1500ಕ್ಕೂ ಹೆಚ್ಚು ಪ್ರಕರಣಗಳು ವಿಚ್ಚೇದನಕ್ಕಾಗಿ ಕೋರ್ಟ್ ಮೊರೆ ಹೋಗಿರುವುದು ಬೆಳಕಿಗೆ ಬಂದಿದೆ. ಗಂಡ-ಹೆಂಡತಿ ನಡುವೆ ಸರಿ ಹೋಗದಿರುವುದು, ಅತ್ತೆ-ಸೊಸೆ ಜಗಳ ಹೀಗೆ ಅನೇಕ ಕಾರಣಗಳಿಂದಾಗಿ ದಂಪತಿ ಡಿವೋರ್ಸ್ ಪಡೆಯಲು ಕೋರ್ಟ್ ಮೊರೆ ಹೋಗುತ್ತಿದ್ದಾರೆ. ಮದುವೆಯಾಗಿ ಕೆಲವೇ ದಿನಗಳಾಗಿದ್ರೂ ಡಿವೋರ್ಸ್ ತೆಗೆದುಕೊಳ್ಳುವವರ ಸಂಖ್ಯೆ ಹೆಚ್ಚಾಗಿದೆ.

ವಿಚ್ಛೇದನಕ್ಕೆ ಕಾರಣಗಳೇನು?

  • ಇತ್ತೀಚಿನ ದಿನಗಳಲ್ಲಿ ತಮ್ಮ ಮಕ್ಕಳಿಗೆ ಯಾವುದೇ ಕಷ್ಟ ತೋರಿಸದೇ ಬೆಳೆಸುತ್ತಿರುವುದರಿಂದ ಮದುವೆಯಾದ ಮೇಲೆ ಎದುರಾಗುವ ಕಷ್ಟಗಳಿಂದ ಮದುವೆ ಮುರಿದು ಬೀಳುತ್ತಿದೆ.
  • ಒಬ್ಬಳೇ ಮಗಳು, ಒಬ್ಬನೇ ಮಗ ಎಂದು ಪ್ರೀತಿಯಿಂದ ಬೆಳೆಸುತ್ತಿರುವುದು.
  • ಜೊತೆಗೆ ಅವಶ್ಯಕತೆಗೆ ತಕ್ಕಾಗೆ ಏನು ಬೇಕೋ ಅದು ನೀಡಿ ಮಕ್ಕಳನ್ನ ಬೆಳೆಸುತ್ತಿರುವುದು. ಗಂಡನ ಮನೆಗೆ ಹೋದ ಸಂದರ್ಭದಲ್ಲಿ ಆ ಮನೆಗೆ ಹೊಂದಿಕೊಳ್ಳದೇ ಇರುವುದು.
  • ಶಿಕ್ಷಣದ ಜೊತೆಗೆ ತಾವು ಸ್ವಾವಲಂಬಿ ಜೀವನ ನಡೆಸಲು ಅನುಕೂಲ ಮಾಡಿಕೊಡುತ್ತಿರುವುದು ಕೂಡ ವಿಚ್ಛೇದನಕ್ಕೆ ಪ್ರಮುಖ ಕಾರಣ ಎನ್ನಲಾಗಿದೆ.
  • ಪತಿ ಮೇಲೆ ಪತ್ನಿ ಅವಲಂಬಿಯಾಗಿರದೇ ಇರುವುದು, ಪತ್ನಿ ಮೇಲೆ ಪತಿ ಅವಲಂಬಿಸದೇ ಇರುವುದು ಕೂಡ ವಿಚ್ಛೇದನಕ್ಕೆ ಕಾರಣ.
  • ಈ ಹಿಂದೆ ಪತಿಗೆ ಪತ್ನಿ ಆಸರೆ, ಪತ್ನಿಗೆ ಪತಿ ಆಸರೆಯಾಗಿ ನಿಲ್ಲುತ್ತಿದ್ದರು. ಆದರೆ ಇದು ಇತ್ತೀಚೆಗೆ ಕಣ್ಮರೆಯಾಗಿದೆ.
  • ಈ ಹಿಂದೆ ತಂದೆ ತಾಯಿ ಪೋಷಕರು ಮರ್ಯಾದೆಗೆ ಅಂಜಿ ಜೀವನ ಮಾಡಲು ಬುದ್ದಿವಾದ ಹೇಳುತ್ತಿದ್ದರು, ಮರ್ಯಾದೆಗೆ ಅಂಜಿ ಹೋದ ಮನೆಯಲ್ಲಿ ಅನುಸರಿಸಿಕೊಂಡು ಜೀವನ‌ ಮಾಡುತ್ತಿದ್ದರು. ಆದರೆ ಈಗ ಯಾರು ಪಾಲಿಸುತ್ತಿಲ್ಲ, ಯಾರು ಮರ್ಯಾದೆಗೆ ಹೆದರುತ್ತಿಲ್ಲ.
  • ತಂದೆ ತಾಯಿಗಳು ಕೂಡ ಹೋದ ಮನೆಯಲ್ಲಿ ಹೇಗೆ ಇರಬೇಕು ಎಂದು ತಮ್ಮ ಮಕ್ಕಳಿಗೆ ಹೇಳಿಕೊಡುತ್ತಿಲ್ಲ ಇದು ಕೂಡ ವಿಚ್ಛೇದನಕ್ಕೆ ಕಾರಣವಾಗಿದೆ.
  • ಇನ್ನೂ ಪ್ರಮುಖವಾಗಿ ಈಗೋ ಎನ್ನುವುದು ವಿಚ್ಛೇದನಕ್ಕೆ ಪ್ರಮುಖ ಕಾರಣವಾಗಿದೆ. ಪರಸ್ಪರ ಪತಿ ಪತ್ನಿಗೆ ಈಗೋ ಹರ್ಟ್ ಆಗಿ ತ್ವರಿತಗತಿಯಲ್ಲಿ ವಿಚ್ಛೇದನಕ್ಕೆ ಅರ್ಜಿ ಹಾಕುತ್ತಿದ್ದಾರೆ.
  • ಇನ್ನೂ ಈ ಹಿಂದೆ ಒಂದು ಗಂಡಿಗೆ ಒಂದು ಹೆಣ್ಣು, ಒಂದು ಹೆಣ್ಣಿಗೆ ಒಂದು ಗಂಡು ಅಂತಾ‌ ಮದುವೆ ನಿಶ್ವಯ ಮೂಲಕ ಸಂಬಂದ ಗಟ್ಟಿಗೊಳಿಸಲಾಗುತ್ತಿತ್ತು. ಆದರೆ ಈಗ ಮದುವೆಯಾಗಿದ್ದೇ ತಡ ಇಷ್ಟಬಂದಂತೆ ಬದಲಾಗುವ ಸನ್ನಿವೇಶ ಸೃಷ್ಟಿಯಾಗಿದೆ.
  • ತಮಗೆ ಇಷ್ಟ ಬಂದ ಹುಡುಗನ ಜೊತೆಗೆ ಅಥವಾ ಹುಡುಗಿ ಜೊತೆ ಸಂಬಂಧ ಬೆಳೆಸುವ ಇಷ್ಟಾನುಸಾರ ಇರಲು ವಾತಾವರಣ ಇರುವುದು ಕೂಡ ಅತಿಹೆಚ್ಚು ವಿಚ್ಛೇದನಕ್ಕೆ ಕಾರಣವಾಗಿದೆ.
  • ಪುರುಷ ಹಾಗೂ ಮಹಿಳೆಯರು ಮದುವೆಯಾದ ಬಳಿಕ ಪತಿ ಇಲ್ಲಾಂದ್ರೂ ಅಥವಾ ಪತ್ನಿ ಇಲ್ಲಾಂದ್ರು ಜೀವನ ನಡೆಸುವ ಸನ್ನಿವೇಶ ಸೃಷ್ಟಿಯಾಗಿರುವುದು ಕೂಡ ವಿಚ್ಛೇದನಕ್ಕೆ ಪ್ರಮುಖ ಕಾರಣ ಎನ್ನಬಹುದು.
  • ಇನ್ನೂ ಪತ್ನಿ ಮನೆಗೆ ಬಂದಾಗ ಪತಿಗೆ ಸರಿಯಾಗಿ ಸ್ಪಂದಿಸದೇ ಇರುವುದು ತಂದೆ ತಾಯಿಗೆ ಬೆಲೆ ಕೋಡದೇ ಇರುವುದು,  ಅಡುಗೆ ಸರಿಯಾಗಿ ಮಾಡದೇ ಇರುವುದು, ಬೆಳಿಗ್ಗೆ ಎದ್ದು ಪೂಜೆ ಪುನಸ್ಕಾರ ಮಾಡದೆ ಇರುವುದು ಕೂಡ ವಿಚ್ಛೇದನಕ್ಕೆ ಕಾರಣವಾಗುತ್ತಿದೆ.
  • ಈ ಹಿಂದೆ ತಂದೆ ತಾಯಿ ತನ್ನ ಮಗಳನ್ನ ಮುಂಜಾನೆಯೇ ಎಬ್ಬಿಸಿ ಮನೆ ಕೆಲಸಗಳನ್ನು ಕಲಿಸಿ ಕೆಲಸ ಮಾಡಿಸುತ್ತಿದ್ದರು. ಆದರೆ ತನ್ನ‌ ಮಗಳು ಸುಖವಾಗಿ ಇರಲಿ ಎಂದು ಬೆಳಿಗ್ಗೆ 9 ಗಂಟೆವರೆಗೂ ನಿದ್ದೆ ಮಾಡಲು ಅವಕಾಶ ನೀಡುವುದು, ಇದು ಯಥಾವತ್ತಾಗಿ ಗಂಡನ ಮನೆಯಲ್ಲಿ ಮುಂದುವರೆಯುವುದರಿಂದಲೂ ವಿಚ್ಛೇದನವಾಗುತ್ತಿದೆ .
  • ಐಷಾರಾಮಿ ಜೀವನ, ವೈಭೋಗದ ಜೀವನ ಸದ್ಯ ಪರಸ್ಪರ ಅರ್ಥಮಾಡಿಕೊಂಡು ಸಂಗಾತಿಯಾಗಿ ಬಾಳಲು ಆಗದೇ ಹೆಚ್ಚು ವಿಚ್ಛೇದನಗಳು ಆಗ್ತಿವೆ.
  • ಇನ್ನೂ ಗಂಡನಿಗೆ ಅಥವಾ ಪತ್ನಿಗೆ ಅವರ ಮನಸ್ಸಿನ ಭಾವನೆಗಳಿಗೆ ಸ್ಪಂದಿಸದೇ ಇರುವುದು ಕೂಡ ವಿಚ್ಛೇದನಕ್ಕೆ ಕಾರಣ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ನೂರುನ್ನಿಸಾ ಅವರು ತಿಳಿಸಿದ್ದಾರೆ.

    ತುಮಕೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ