ಹಿಂದೂ ಧರ್ಮ ಯಾವಾಗ ಹುಟ್ಟಿತು, ಯಾರು ಹುಟ್ಟಿಸಿದರೆಂಬುದೇ ಪ್ರಶ್ನೆ; ಸಚಿವ ಜಿ ಪರಮೇಶ್ವರ್ ವಿವಾದಾತ್ಮಕ ಹೇಳಿಕೆ
ಸನಾತನ ಧರ್ಮದ ಬಗ್ಗೆ ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ನೀಡಿರುವ ಹೇಳಿಕೆ ದೇಶದಾದ್ಯಂತ ತೀವ್ರ ಚರ್ಚೆಗೆ ಹಾಗೂ ವಿವಾದಕ್ಕೆ ಗ್ರಾಸವಾಗಿರುವ ಬೆನ್ನಲ್ಲೇ ಪರಮೇಶ್ವರ್ ಅವರು ಈ ಹೇಳಿಕೆ ನೀಡಿದ್ದಾರೆ. ಉದಯನಿಧಿ ಹೇಳಿಕೆ ಬೆಂಬಲಿಸಿ ಕರ್ನಾಟಕದ ಸಚಿವ ಪ್ರಿಯಾಂಕ್ ಖರ್ಗೆ ನೀಡಿದ್ದ ಹೇಳಿಕೆಗೆ ಹಿಂದೂ ಸಂಘಟನೆಗಳ ಹಾಗೂ ಬಿಜೆಪಿ ನಾಯಕರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು.
ತುಮಕೂರು, ಸೆಪ್ಟೆಂಬರ್ 5: ಹಿಂದೂ ಧರ್ಮ ಯಾವಾಗ ಹುಟ್ಟಿತು, ಯಾರು ಹುಟ್ಟಿಸಿದರೆಂಬುದೇ ಪ್ರಶ್ನೆ ಎಂದು ಗೃಹ ಇಲಾಖೆ ಸಚಿವ ಜಿ ಪರಮೇಶ್ವರ್ (G Parameshwara) ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ತುಮಕೂರು ಜಿಲ್ಲೆಯ ಕೊರಟಗೆರೆಯಲ್ಲಿ ನಡೆದ ಶಿಕ್ಷಕರ ದಿನಾಚರಣೆ (Teachers’ Day) ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರಪಂಚದ ಇತಿಹಾಸದಲ್ಲಿ ಅನೇಕ ಧರ್ಮಗಳು ಹುಟ್ಟಿಕೊಂಡಿವೆ. ಹಿಂದೂ ಧರ್ಮವನ್ನು (Hindu Religion) ಯಾರು ಹುಟ್ಟಿಸಿದರು, ಯಾವಾಗ ಹುಟ್ಟಿತು ಎಂಬುದು ಇನ್ನೂ ಪ್ರಶ್ನಾರ್ಥಕ ಚಿಹ್ನೆಯಾಗಿಯೇ ಇದೆ. ಈ ವಿಚಾರದಲ್ಲಿ ಪ್ರಶ್ನಾರ್ಥಕ ಚಿಹ್ನೆ ತೆಗೆದಿಲ್ಲ ಎಂದು ಹೇಳಿದ್ದಾರೆ.
ಬೌದ್ಧ ಧರ್ಮ ಹಾಗೂ ಜೈನ ಧರ್ಮ ನಮ್ಮ ದೇಶದಲ್ಲಿ ಹುಟ್ಟಿತು. ಹೊರಗಡೆಯಿಂದ ಇಸ್ಲಾಂ ಧರ್ಮ ಹಾಗೂ ಕ್ರೈಸ್ತ ಧರ್ಮ ಬಂದಿವೆ. ಮನುಕುಲಕ್ಕೆ ಒಳ್ಳೆಯದಾಗಬೇಕೆಂಬುದೇ ಎಲ್ಲಾ ಧರ್ಮಗಳ ಸಾರಾಂಶ ಎಂದು ಪರಮೇಶ್ವರ್ ಹೇಳಿದ್ದಾರೆ.
ಸನಾತನ ಧರ್ಮದ ಬಗ್ಗೆ ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ನೀಡಿರುವ ಹೇಳಿಕೆ ದೇಶದಾದ್ಯಂತ ತೀವ್ರ ಚರ್ಚೆಗೆ ಹಾಗೂ ವಿವಾದಕ್ಕೆ ಗ್ರಾಸವಾಗಿರುವ ಬೆನ್ನಲ್ಲೇ ಪರಮೇಶ್ವರ್ ಅವರು ಈ ಹೇಳಿಕೆ ನೀಡಿದ್ದಾರೆ. ಉದಯನಿಧಿ ಹೇಳಿಕೆ ಬೆಂಬಲಿಸಿ ಕರ್ನಾಟಕದ ಸಚಿವ ಪ್ರಿಯಾಂಕ್ ಖರ್ಗೆ ನೀಡಿದ್ದ ಹೇಳಿಕೆಗೆ ಹಿಂದೂ ಸಂಘಟನೆಗಳ ಹಾಗೂ ಬಿಜೆಪಿ ನಾಯಕರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು.
ಇದನ್ನೂ ಓದಿ: ಸಿದ್ದರಾಮಯ್ಯ ಹೊಗಳಿ ನನಗೆ ಏನೂ ಆಗಬೇಕಾಗಿಲ್ಲ: ಬಸವರಾಜ ರಾಯರೆಡ್ಡಿ
ಈ ಮಧ್ಯೆ, ಸನಾತನ ಧರ್ಮದ ಬಗ್ಗೆ ಉದಯನಿಧಿ ಸ್ಟಾಲಿನ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಬಿಜೆಪಿ ನಾಯಕ ಕೆಎಸ್ ಈಶ್ವರಪ್ಪ, ಇವನೊಬ್ಬ (ಉದಯನಿಧಿ) ರಾಕ್ಷಸ ವಂಶದವನು ಎಂಬುದು ಈಗ ಗೊತ್ತಾಗಿದೆ ಎಂದು ಹೇಳಿದ್ದಾರೆ. ತುಮಕೂರಿನಲ್ಲಿ ವಾಗ್ದಾಳಿ ನಡೆಸಿದ ಅವರು, ಕರ್ನಾಟಕದ ಸಿಎಂ ಹಾಗೂ ಡಿಸಿಎಂ ಬಹಳ ದೈವಭಕ್ತರಾಗಿದ್ದಾರೆ. ಅವರು ಉದಯನಿಧಿ ಹೇಳಿಕೆ ವಿಚಾರದಲ್ಲಿ ಅಭಿಪ್ರಾಯ ತಿಳಿಸಬೇಕು. ಉದಯನಿಧಿ ಅಲ್ಲ ಅವರಪ್ಪನಿಂದಲೂ ಸನಾತನ ಧರ್ಮ ನಾಶವಾಗಲ್ಲ. ತಮಿಳುನಾಡು ಸಚಿವ ಉದಯನಿಧಿ ಹೇಳಿಕೆಗೆ ಬೆಂಬಲ ಕೊಡುತ್ತೀರೋ, ಸನಾತನ ಧರ್ಮಕ್ಕೆ ಬೆಂಬಲ ಕೊಡ್ತಿರೋ ಸಿಎಂ, ಡಿಸಿಎಂ ಸ್ಪಷ್ಟಪಡಿಸಲಿ ಎಂದು ಅವರು ಆಗ್ರಹಿಸಿದ್ದಾರೆ.
ಛಲವಾದಿ ನಾರಾಯಣಸ್ವಾಮಿ ಆಕ್ಷೇಪ
ಹಿಂದೂ ಧರ್ಮದ ಬಗ್ಗೆ ಪರಮೇಶ್ವರ್ ವಿವಾದಾತ್ಮಕ ಹೇಳಿಕೆ ವಿಚಾರವಾಗಿ ಛಲವಾದಿ ನಾರಾಯಣಸ್ವಾಮಿ ಬೆಂಗಳೂರಿನಲ್ಲಿ ‘ಟಿವಿ9’ಗೆ ಪ್ರತಿಕ್ರಿಯಿಸಿದ್ದು, ಹಿಂದೂ ಧರ್ಮ ಹೀಯಾಳಿಸುವ ಚಾಳಿ ಏಕೆ ಬಂದಿದೆ ಅರ್ಥವಾಗುತ್ತಿಲ್ಲ. ಪರಮೇಶ್ವರ್ ವಿದ್ಯಾವಂತರು, ಬುದ್ಧಿವಂತರು ಅಂತಾ ತಿಳಿದುಕೊಂಡಿದ್ದೇವೆ. ಅವರು ಮಾನವ, ಮಾನವೀಯತೆಯನ್ನೇ ಪ್ರಶ್ನೆ ಮಾಡಿದಂತಿದೆ ಎಂದು ಹೇಳಿದ್ದಾರೆ.
ಮಾನವ ಧರ್ಮ ಅಂದರೇನೇ ಹಿಂದೂ ಧರ್ಮ. ಕಾಂಗ್ರೆಸ್ಸಿಗರು ವೋಟ್ಬ್ಯಾಂಕ್ಗಾಗಿ ಧರ್ಮವನ್ನು ನಿಂದಿಸುವುದು ಸರಿಯಲ್ಲ. ಕಾಂಗ್ರೆಸ್ ಮೂಲಕ ಏನೋ ಒಂದು ಕುತಂತ್ರ ದೇಶದಲ್ಲಿ ನಡೆದಿದೆ. ಹಿಂದುತ್ವದ ವಿರುದ್ಧ ಒಂದು ಅಲೆ ಎಬ್ಬಿಸಬೇಕೆಂಬುದು ಕಾಂಗ್ರೆಸ್ ಗುರಿ ಎಂದು ನಾರಾಯಣಸ್ವಾಮಿ ಟೀಕಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:35 pm, Tue, 5 September 23