ತುಮಕೂರು: ಕೊಡಗಿನ ಜನ ನಾಯಿಗೆ ಟಿಪ್ಪು (Tipu Sultan) ಹೆಸರು ನಾಮಕರಣ ಮಾಡುತ್ತಾರೆ ಎಂದು ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ವಿವಾದಾತ್ಮಕ ಹೇಳಿಕೆ ನಿಡಿದ್ದಾರೆ. ಜಿಲ್ಲೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಟಿಪ್ಪುವನ್ನು ಅವಮಾನಿಸಲೆಂದೇ ಮನೆ ಮನೆಯಲ್ಲಿ ನಾಯಿಗಳಿಗೆ ಟಿಪ್ಪು ಹೆಸರು ನಾಮಕರಣ ಮಾಡುತ್ತಾರೆ. ಅಷ್ಟು ಕ್ರೋಧ, ಸಿಟ್ಟು, ಹತಾಶೆ ಕೊಡಗಿನ ಜನರಿಗೆ ಇದೆ. ಇವತ್ತೂ ಕೂಡ ಟಿಪ್ಪು ಎತ್ತಿದ ಅಭ್ಯರ್ಥಿ ಕೊಡಗಿನಲ್ಲಿ ಸೋಲುತ್ತಾನೆ. ನಾನು ಟಿಪ್ಪು ಪರ ಎಂದವರೆಲ್ಲಾ ಸೋತಿದ್ದಾರೆ ಎಂದು ಹೇಳಿದರು.
ಟಿಪ್ಪು ನಿಜ ಕನಸುಗಳು ನಾಟಕ ಇದು ಬಿಜೆಪಿಯ ಕಥಾನಕ ಅಲ್ಲ, ಇದು ಟಿಪ್ಪು ಕಥಾನಕ. ಬಿಜೆಪಿಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ. ಖಳನಾಯಕನನ್ನ ಖಳನಾಯಕನಾಗಿ ತೋರಿಸಬೇಕು. ಟಿಪ್ಪು ನಾಲ್ಕು ದೇವಸ್ಥಾನಗಳಿಗೆ ದತ್ತಿ ಕೊಟ್ಟು, 80 ದೇವಸ್ಥಾನಗಳನ್ನ ಒಡೆದುಹಾಕಿದ. ಹೀಗಾಗಿ 80 ದೇವಸ್ಥಾನಗಳನ್ನ ಒಡೆದಿದ್ದನ್ನು ಹೇಳಬೇಕಾಗುತ್ತೆ. ಸಾವಿರಾರು ಜನರನ್ನು ಕೊಂದಿರುವುದನ್ನು, ಮತಾಂತರ ಮಾಡಿದ್ದನ್ನೂ ಹೇಳಬೇಕಾಗುತ್ತೆ. ಆ ಸಮುದಾಯದ ಕೆಲವರ ಮನಸ್ಥಿತಿಯೇ ಹಾಗಿದೆ. ಅವರು ಶಿಶುನಾಳ ಶರೀಫರನ್ನು ಗೌರವಿಸಲಾರರು. ಅವರು ಮತಾಂಧ ಟಿಪ್ಪುವನ್ನೇ ಗೌರವಿಸ್ತಾರೆ ಎಂದರು.
ಇದನ್ನೂ ಓದಿ: ಟಿಪ್ಪು ನಿಜ ಕನಸುಗಳು: ಈ ನಾಟಕ ಪ್ರದರ್ಶನದಿಂದ ಬಿಜೆಪಿಗೆ ಲಾಭವೂ ಇಲ್ಲ, ಕಾಂಗ್ರೆಸ್ಗೆ ನಷ್ಟವೂ ಇಲ್ಲ: ಅಡ್ಡಂಡ ಕಾರ್ಯಪ್ಪ
ಟಿಪ್ಪು ನಿಜ ಕನಸುಗಳು ನಾಟಕ ಪ್ರದರ್ಶನಕ್ಕೆ ತಡೆ ಕೋರಿ ಅರ್ಜಿ ಹಾಕಿದವರು ಸೂಕ್ತ ದಾಖಲೆ ಒದಗಿಸಲಾಗಿದೆ ಪಲಾಯನ ಮಾಡಿದರು. ಹಿಂದಿನ ಸರ್ಕಾರಗಳು ಟಿಪ್ಪುವನ್ನು ಹೀರೋ ಎಂದು ಬಿಂಬಿಸಿವೆ. ಟಿಪ್ಪು ನಿಜವಾದ ಖಳನಾಯಕ. ಆತನ ನಿಜ ಕನಸುಗಳನ್ನು ನಾಟಕದಲ್ಲಿ ಅನಾವರಣ ಮಾಡಲಾಗಿದೆ. ಸತ್ಯದ ಅನಾವರಣವೇ ಈ ನಾಟಕದ ಉದ್ದೇಶವಾಗಿದೆ. ಪೊಲೀಸರ ಸಲಹೆಯಂತೆ ಒಳಾಂಗಣ ವೇದಿಕೆಯಲ್ಲಿ ಪ್ರದರ್ಶನ ಮಾಡಲಾಗುತ್ತಿದೆ.
ನಾನು ಶಾಂತಿ ಪ್ರಿಯ. ಶಾಂತಿಯುತವಾಗಿ ಪ್ರದರ್ಶನ ಆಗಲಿ ಎನ್ನುವುದು ನನ್ನ ಆಶಯ. ಇದರಿಂದ ಬಿಜೆಪಿಗೆ ಲಾಭ ಆಗುತ್ತದೆ, ಕಾಂಗ್ರೆಸ್ಗೆ ನಷ್ಟ ಆಗುತ್ತದೆ ಎಂದು ಲೆಕ್ಕ ಹಾಕಿ ಕೂರುವ ವ್ಯಾಪಾರಿ ನಾನಲ್ಲ. ನಾನೊಬ್ಬ ರಂಗಭೂಮಿ ಕಲಾವಿದ. ನಾಟಕ ಮಾಡೋದಷ್ಟೇ ನನ್ನ ಕೆಲಸ ಎಂದು ಹೇಳಿದರು.
ಇದನ್ನೂ ಓದಿ: ಮೈಸೂರು ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪಗೆ ಜೀವಬೆದರಿಕೆ; ಪೊಲೀಸ್ ಠಾಣೆಗೆ ದೂರು
ತುಮಕೂರು ನಗರದ ಗುಬ್ಬಿ ವೀರಣ್ಣ ಕಲಾಮಂದಿರದಲ್ಲಿ ಮಾರ್ಚ್ 2ರಂದು ಸಂಜೆ 6 ಗಂಟೆಗೆ ಟಿಪ್ಪು ನಿಜ ಕನಸುಗಳು ನಾಟಕ ನಾಟಕ ಪ್ರದರ್ಶನವಾಗುತ್ತಿದೆ. ಪ್ರತಿ ಟಿಕೆಟ್ಗೆ 100ರೂ ನಿಗದಿ ಮಾಡಲಾಗಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಬರುವಂತೆ ಅಡ್ಡಂಡ ಮನವಿ ಮಾಡಿದರು. ಇನ್ನು ಪುಸ್ತಕ ಮಾರಾಟಕ್ಕೆ ಅನುಮತಿ ಸಿಕ್ಕಿದೆ. ಸುಮಾರು 12 ಆವ್ರತ್ತಿಗಳು ಮುದ್ರಣ ಆಗಿದೆ. 40 ಸಾವಿರ ಪ್ರತಿಗಳು ಮಾರಾಟ ಆಗಿವೆ. ಇಷ್ಟು ಕಡಿಮೆ ಅವಧಿಯಲ್ಲಿ ಪ್ರತಿಗಳು ಮಾರಾಟವಾಗಿರುವುದು ಚಾರಿತ್ರಿಕ ದಾಖಲೆ ಎಂದು ತಿಳಿಸಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.