ಮತ್ತೆ ಮತ್ತೆ ಟಿಪ್ಪು ಗದ್ದಲ! ಕಿತ್ತೂರು ಸಂಸ್ಥಾನಕ್ಕೆ ಸಂಬಂಧವಿಲ್ಲದ ಟಿಪ್ಪು ಸನ್ನಿವೇಶವನ್ನು ರಂಗಾಯಣ ನಾಟಕದಿಂದ ತೆಗೆಯಿರಿ- ಹಿಂದೂ ಸಂಘಟನೆಗಳ ಒತ್ತಾಯ

Kittur Chennamma: ಎಲ್ಲೋ ಒಂದು ಕಡೆ ಯಾರೋ ಟಿಪ್ಪು ಸುಲ್ತಾನ್ ಕಿತ್ತೂರು ಸಂಸ್ಥಾನಕ್ಕೆ ಬಂದಿದ್ದ ಎಂಬುದನ್ನು ಮುಂದಿಟ್ಟುಕೊಂಡು ಚನ್ನಮ್ಮನ ಇತಿಹಾಸ ತಿಳಿಸುವ ನಾಟಕದಲ್ಲಿ ಆ ಪಾತ್ರ ಹಾಕುವ ಅಗತ್ಯ ಏನಿತ್ತು? ಎಂದು ಹಿಂದೂ ಸಂಘಟನೆಗಳು ಪ್ರಶ್ನೆ ಮಾಡುತ್ತಿವೆ.

ಮತ್ತೆ ಮತ್ತೆ ಟಿಪ್ಪು ಗದ್ದಲ! ಕಿತ್ತೂರು ಸಂಸ್ಥಾನಕ್ಕೆ ಸಂಬಂಧವಿಲ್ಲದ ಟಿಪ್ಪು ಸನ್ನಿವೇಶವನ್ನು ರಂಗಾಯಣ ನಾಟಕದಿಂದ ತೆಗೆಯಿರಿ- ಹಿಂದೂ ಸಂಘಟನೆಗಳ ಒತ್ತಾಯ
ಕಿತ್ತೂರು ಸಂಸ್ಥಾನಕ್ಕೆ ಸಂಬಂಧವಿಲ್ಲದ ಟಿಪ್ಪು ಸನ್ನಿವೇಶವನ್ನು ರಂಗಾಯಣ ನಾಟಕದಿಂದ ತೆಗೆಯಿರಿ
Follow us
TV9 Web
| Updated By: ಸಾಧು ಶ್ರೀನಾಥ್​

Updated on: Dec 16, 2022 | 4:08 PM

ಇತ್ತೀಚೆಗೆ ಟಿಪ್ಪು ಸುಲ್ತಾನ್ ಇತಿಹಾಸ ಒಂದಿಲ್ಲೊಂದು ವಿವಾದ ಆಗುತ್ತಲೇ ಇದೆ. ಟಿಪ್ಪು ಹೋರಾಟಗಾರನೇ ಅಲ್ಲ, ಧರ್ಮಾಂಧ ಅನ್ನೋದು ಹೆಚ್ಚು ಪ್ರತಿಬಿಂಬಿತ ಆಗುತ್ತಿದೆ. ಇದೇ ಕಾರಣಕ್ಕೆ ಮೈಸೂರು ರಂಗಾಯಣ ಟಿಪ್ಪು (Tippu) ನಿಜ ಕನಸುಗಳು ಅನ್ನೋ ನಾಟಕವನ್ನೇ ಮಾಡಿ ಹೊಸ ಚರ್ಚೆಗೆ ಕಾರಣವಾಗಿತ್ತು‌. ಇದರ ಬೆನ್ನಲ್ಲಿಯೇ ಈಗ ಧಾರವಾಡ ರಂಗಾಯಣವು (Dharwad Rangayana) ಸ್ವಾತಂತ್ರ್ಯ ಹೋರಾಟಗಾರ್ತಿ ಕಿತ್ತೂರು ರಾಣಿ ಚೆನ್ನಮ್ಮ ನಾಟಕ (Kittur Chennamma stage drama) ಮಾಡುತ್ತಿದೆ. ಆದರೆ ಈ ನಾಟಕದಲ್ಲಿ ಟಿಪ್ಪು ಇತಿಹಾಸ ಹಾಕಲು ಮುಂದಾಗಿದ್ದು, ಹಿಂದೂ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ.

ಬ್ರಿಟೀಷರ ವಿರುದ್ಧ ಇಡೀ ದೇಶದಲ್ಲೇ ಮೊಟ್ಟ ಮೊದಲು ಸ್ವಾತಂತ್ರ್ಯ ಸಂಗ್ರಾಮ ಆರಂಭಿಸಿ, ಬ್ರಿಟಿಷರಿಗೆ ಮೊದಲ ಬಾರಿಗೆ ಸೋಲಿನ ರುಚಿ ತೋರಿಸಿದ್ದು ನಮ್ಮದೇ ನಾಡಿನ ಕಿತ್ತೂರ ಸಂಸ್ಥಾನ. ಈ ಸಂಸ್ಥಾನದ ವೀರರಾಣಿ ಕಿತ್ತೂರು ಚನ್ನಮ್ಮನ ಜೀವನವನ್ನೇ ಆಧರಿಸಿ ಧಾರವಾಡದ ರಂಗಾಯಣ ಮೆಗಾ ನಾಟಕವೊಂದನ್ನು ತಯಾರಿಸಿದ್ದು, ಡಿಸೆಂಬರ್​ 24 ರಂದು (ಶನಿವಾರ) ಧಾರವಾಡದ ಕೆಸಿಡಿ ಮೈದಾನದಲ್ಲಿ ಮೊದಲ ಪ್ರದರ್ಶನ ಏರ್ಪಡಿಸಲಾಗಿದೆ. ಇದಕ್ಕೆ ಸಿಎಂ ಬಸವರಾಜ್ ಬೊಮ್ಮಾಯಿ ಚಾಲನೆ ನೀಡಲಿದ್ದಾರೆ.

ಏಕಕಾಲಕ್ಕೆ 15 ಸಾವಿರ ಜನ ನೋಡಲಿರೋ ಈ ನಾಟಕ ಬೃಹತ್ ವೇದಿಕೆಯಲ್ಲಿ ನಡೆಯಲಿದೆ‌. ಅದರಲ್ಲಿಯೂ 250 ಕಲಾವಿದರು ಇದರಲ್ಲಿದ್ದು ಜೀವಂತ ಆನೆ, ಕುದುರೆ, ಒಂಟೆಗಳನ್ನು ಬಳಸಿ ಯುದ್ದದ ಸನ್ನಿವೇಶಗಳನ್ನೂ ಪ್ರಸ್ತುತಪಡಿಸಲಾಗುತ್ತಿದೆ. ಕರ್ನಾಟಕದ ರಂಗಭೂಮಿ ಇತಿಹಾಸದಲ್ಲಿಯೇ ಮೊದಲು ಎನ್ನಲಾಗುವ ಈ ಚನ್ನಮ್ಮಾಜಿ ನಾಟಕದಲ್ಲಿ ಟಿಪ್ಪು ಇತಿಹಾಸವೂ ನುಸುಳಲಿದೆಯಂತೆ.

ಕಿತ್ತೂರು ಸಂಸ್ಥಾನಕ್ಕೂ ಟಿಪ್ಪುವಿಗೂ ಸಂಬಂಧವೇ ಇಲ್ಲ. ಆದರೂ ಅದನ್ನು ನಾಟಕದಲ್ಲಿ ತೋರಿಸುವ ಅಗತ್ಯ ಯಾಕೆ? ಎನ್ನುವ ಪ್ರಶ್ನೆ ಉದ್ಭವಿಸಿದೆ. ಆದರೆ ನೈಜ ಇತಿಹಾಸ ಏನಿದೆಯೋ ಅದನ್ನು ನಾವು ತೋರಿಸೋಕೆ ಹೊರಟಿದ್ದೇವೆ. ಟಿಪ್ಪು ಸುಲ್ತಾನ್ ಪಾತ್ರ ನಾಟಕದಲ್ಲಿ ಇರುತ್ತೆ. ಆದರೆ ಅದು ಯಾವ ಸಮುದಾಯಕ್ಕೂ ಧಕ್ಕೆ ಬರದಂತೆ ಇರಲಿದೆ ಅಂತಾ ರಂಗಾಯಣ ನಿರ್ದೇಶಕ ರಮೇಶ ಪರವಿನಾಯ್ಕರ್ ಹೇಳಿದ್ದಾರೆ.

ಇದನ್ನೂ  ಓದಿ:

ಯಾವುದೇ ಕಾರಣಕ್ಕೂ ಮೈಸೂರಲ್ಲಿ ಟಿಪ್ಪು ಪ್ರತಿಮೆ ನಿರ್ಮಿಸಲು ಬಿಡಲ್ಲ: ತನ್ವೀರ್ ವಿರುದ್ಧ ಮುತಾಲಿಕ್ ಆಕ್ರೋಶ

ಆದರೆ ಎಲ್ಲೋ ಒಂದು ಕಡೆ ಯಾರೋ ಟಿಪ್ಪು ಸುಲ್ತಾನ್ ಕಿತ್ತೂರು ಸಂಸ್ಥಾನಕ್ಕೆ ಬಂದಿದ್ದ ಎಂಬುದನ್ನು ಮುಂದಿಟ್ಟುಕೊಂಡು ಚನ್ನಮ್ಮನ ಇತಿಹಾಸ ತಿಳಿಸುವ ನಾಟಕದಲ್ಲಿ ಆ ಪಾತ್ರ ಹಾಕುವ ಅಗತ್ಯ ಏನಿತ್ತು? ಎಂದು ಹಿಂದೂ ಸಂಘಟನೆಗಳು ಪ್ರಶ್ನೆ ಮಾಡುತ್ತಿವೆ. ಅದರಲ್ಲಿಯೂ ಚನ್ನಮ್ಮ ಇತಿಹಾಸ ತಿಳಿಸುವ ಈ ನಾಟಕ ಐದು ಗಂಟೆಯಷ್ಟು ಅವಧಿಯನ್ನು ಹೊಂದಿತ್ತು.

ಅದು ಬಹಳ ಆಗುತ್ತೆ ಅಂತಾ ಈಗ ಕೆಲವು ಸನ್ನಿವೇಶಗಳನ್ನು ಕುಗ್ಗಿಸಿ ಮೂರೂವರೆ ಗಂಟೆಗೆ ಇಳಿಸಲಾಗಿದೆ. ಆದರೂ ಟಿಪ್ಪು ಪಾತ್ರವನ್ನು ಇಟ್ಟುಕೊಂಡು ಯಾಕೆ ಸಮಯ ವ್ಯರ್ಥ ಮಾಡಬೇಕಿತ್ತು ಎಂಬ ಪ್ರಶ್ನೆ ಉದ್ಭವಿಸಿದೆ. ಟಿಪ್ಪು ಪಾತ್ರದ ಸನ್ನಿವೇಶವನ್ನು ತೆಗೆಯಬೇಕು. ಇಲ್ಲವಾದಲ್ಲಿ ನಾವು ನಾಟಕ ನಡೆಯೋದಕ್ಕೆ ಬಿಡೋದೇ ಇಲ್ಲ ಅಂತಾರೆ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್.

ಒಟ್ಟಾರೆಯಾಗಿ ಇಡೀ ಕರ್ನಾಟಕದ ರಂಗಭೂಮಿ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಇಂತಹದೊಂದು ಮೆಗಾ ನಾಟಕದ ಸಾಹಸಕ್ಕೆ ಕೈ ಹಾಕಿರೋ ರಂಗಾಯಣವು ಈಗ ಟಿಪ್ಪು ಪಾತ್ರದ ಕಾರಣಕ್ಕಾಗಿ ವಿರೋಧ ಕಟ್ಟಿಕೊಳ್ಳೋ‌ ಸ್ಥಿತಿಗೆ ಬಂದಿದ್ದು, ಇದು ಮುಂದೆ ಎಲ್ಲಿಗೆ ಬಂದು ನಿಲ್ಲುತ್ತೋ‌ ಕಾದು ನೋಡಬೇಕಿದೆ.

ವರದಿ: ನರಸಿಂಹಮೂರ್ತಿ ಪ್ಯಾಟಿ, ಟಿವಿ 9, ಧಾರವಾಡ

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.