ಪೊಲೀಸ್ ನೇಮಕಾತಿ ವಯೋಮಿತಿ ಹೆಚ್ಚಿಸಲು ಕೋರಿ ಗೃಹಸಚಿವ ಆರಗ ಜ್ಞಾನೇಂದ್ರ ಕಾಲಿಗೆ ಬಿದ್ದ ಆಕಾಂಕ್ಷಿಗಳು

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Nov 01, 2022 | 2:48 PM

ಗೃಹ ಸಚಿವರ ಎದುರು ತಮ್ಮ ಅಳಲು ತೊಡಿಕೊಳ್ಳಲು ಬಂದ ಪೊಲೀಸ್ ಹುದ್ದೆಯ ಆಕಾಂಕ್ಷಿಯೊಬ್ಬರಿಗೆ ತುಮಕೂರು ಡಿವೈಎಸ್​ಪಿ ಶ್ರೀನಿವಾಸ್ ಪೆಟ್ಟುಕೊಟ್ಟರು

ಪೊಲೀಸ್ ನೇಮಕಾತಿ ವಯೋಮಿತಿ ಹೆಚ್ಚಿಸಲು ಕೋರಿ ಗೃಹಸಚಿವ ಆರಗ ಜ್ಞಾನೇಂದ್ರ ಕಾಲಿಗೆ ಬಿದ್ದ ಆಕಾಂಕ್ಷಿಗಳು
ತುಮಕೂರಿನಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಎದುರು ಕಣ್ಣೀರು ಹಾಕುತ್ತಿರುವ ಪೊಲೀಸ್ ಹುದ್ದೆ ಆಕಾಂಕ್ಷಿಗಳು (ಎಡಚಿತ್ರ). ಗೃಹ ಸಚಿವ ಆರಗ ಜ್ಞಾನೇಂದ್ರ (ಸಂಗ್ರಹ ಚಿತ್ರ)
Follow us on

ತುಮಕೂರು: ಪೊಲೀಸ್ ನೇಮಕಾತಿಯಲ್ಲಿ ವಯೋಮಿತಿ ಹೆಚ್ಚಿಸಬೇಕೆಂದು ಕೋರಿ ಆಕಾಂಕ್ಷಿಗಳು ಗೃಹ ಸಚಿವ ಆರಗ ಜ್ಞಾನೇಂದ್ರ ಕಾಲಿಗೆ ಬಿದ್ದ ಘಟನೆ ನಡೆದಿದೆ. ನಗರದ ಸರ್ಕಾರಿ ಪ್ರೌಢಶಾಲೆ ಮೈದಾನದಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ ವೇಳೆ ಗೃಹ ಸಚಿವರನ್ನು ಭೇಟಿಯಾದ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಪೊಲೀಸ್​ ಹುದ್ದೆ ಆಕಾಂಕ್ಷಿಗಳು ಕಾಲಿಗೆ ಬಿದ್ದರು. ಈ ಕುರಿತು ಕಳೆದ 2 ವರ್ಷಗಳಿಂದ ಶಾಸಕರು, ಮುಖ್ಯಮಂತ್ರಿಗೆ ಮನವಿ ಮಾಡಿದ್ದೇವೆ ಎಂದು ಹೇಳಿದ ಆಕಾಂಕ್ಷಿಗಳು ಈವರೆಗೆ ಪೊಲೀಸ್ ನೇಮಕಾತಿ ವಯೋಮಿತಿ ಹೆಚ್ಚಿಸಿಲ್ಲ. ನಮ್ಮ ಭವಿಷ್ಯ ನಿಮ್ಮ ಕೈಯಲ್ಲಿದೆ ಎಂದು ಕಣ್ಣೀರಿಟ್ಟರು.

ಗೃಹ ಸಚಿವರ ಎದುರು ತಮ್ಮ ಅಳಲು ತೊಡಿಕೊಳ್ಳಲು ಬಂದ ಪೊಲೀಸ್ ಹುದ್ದೆಯ ಆಕಾಂಕ್ಷಿಯೊಬ್ಬರಿಗೆ ತುಮಕೂರು ಡಿವೈಎಸ್​ಪಿ ಶ್ರೀನಿವಾಸ್ ಪೆಟ್ಟುಕೊಟ್ಟರು. ಮೊಬೈಲ್​ನಲ್ಲಿ ವಿಡಿಯೊ ಮಾಡುತ್ತಿದ್ದುದನ್ನು ಗಮನಿಸಿದ್ದ ಪೊಲೀಸರು ಅದನ್ನು ನಿಲ್ಲಿಸುವಂತೆ ಹೇಳಿ ಹೊಡೆದರು. ಗೃಹ ಸಚಿವ ಅರಗ ಜ್ಞಾನೇಂದ್ರಗೆ ಮನವಿ ಕೊಡಲೆಂದು ಉತ್ತರ ಕರ್ನಾಟಕ‌ ಮೂಲದ ನೂರಾರು ಪೊಲೀಸ್ ಅಕಾಂಕ್ಷಿಗಳು ಆಗಮಿಸಿದ್ದರು. ಗೃಹ ಸಚಿವರಿದ್ದ ವೇದಿಕೆಯ ಬಳಿಯೇ ಪೆಟ್ಟು ಕೊಟ್ಟ ಘಟನೆ ನಡೆಯಿತು. ಪೆಟ್ಟು ತಿಂದ ಆಕಾಂಕ್ಷಿ ನಂತರ ಸದ್ದಿಲ್ಲದೆ ಹಿಂದೆ ಸರಿದರು.

ಸಮಾರಂಭದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಆರಗ ಜ್ಞಾನೇಂದ್ರ, ಕೆ.ಆರ್​.ಪುರಂ ಠಾಣೆಯ ಇನ್​ಸ್ಪೆಕ್ಟರ್ ನಂದೀಶ್ ಸಾವಿನ ಕುರಿತು ಪ್ರತಿಕ್ರಿಯಿಸಿದರು. ‘ನಂದೀಶ್ ಅವರ ಸಾವಿನ ಬಗ್ಗೆ ತನಿಖೆ ನಡೆಯುತ್ತಿದೆ. ಪೋಸ್ಟಿಂಗ್​ಗೆ ಅವರು ಕಮಿಷನ್ ಕೊಟ್ಟಿರುವ ಬಗ್ಗೆ ನನಗೆ ಮಾಹಿತಿ ಇಲ್ಲ. ಪೋಸ್ಟಿಂಗ್​ ವಿಚಾರದಲ್ಲಿ ಯಾವುದೇ ಹಣ ಹಂಚಿಕೆ ಆಗುತ್ತಿಲ್ಲ. ನಾನು ವರ್ಗಾವಣೆ ವಿಚಾರದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ. ಅದನ್ನು ನಿರ್ವಹಿಸಲು ಮಂಡಳಿ ಇದೆ. ನನ್ನ ಸಹಿಯಿಂದ ಯಾರೂ ವರ್ಗಾವಣೆ ಆಗಿಲ್ಲ’ ಎಂದು ಹೇಳಿದರು.

ಸಚಿವ ಎಂಟಿಬಿ ನಾಗರಾಜ್ ಏನು ಹೇಳಿದ್ದಾರೆ? ಯಾವ ಹಿನ್ನೆಲೆಯಲ್ಲಿ ಹೀಗೆ ಮಾತನಾಡಿದ್ದಾರೆ ಎಂಬ ಬಗ್ಗೆ ಚರ್ಚಿಸಬೇಕಿದೆ. ಒದು ವೇಳೆ ಅವ್ಯವಹಾರ ನಡೆದಿದ್ದರೆ, ಕೊಟ್ಟವರು ಯಾರು? ಪಡೆದವರು ಯಾರು ಎಂಬ ಬಗ್ಗೆಯೂ ತನಿಖೆಯ ನಂತರ ಮಾಹಿತಿ ಹೊರಬರಲಿದೆ.

ಪೊಲೀಸ್​ ನೇಮಕಾತಿ ವಯೋಮಿತಿ ಹೆಚ್ಚಳದ ಬಗ್ಗೆ ಚಿಂತನೆ ನಡೆದಿದೆ. ವಯೋಮಿತಿ ಹಚ್ಚಳ ಮಾಡಬೇಕೆಂದು ಬಹಳ ದಿನಗಳಿಂದ ಒತ್ತಡವಿದೆ. ಈ ಬಗ್ಗೆ ಕಾನೂನು ತಜ್ಞರ ಜೊತೆಗೆ ಚರ್ಚಿಸಿ ನಿರ್ಧಾರ ಮಾಡುತ್ತೇವೆ ಎಂದು ಭರವಸೆ ನೀಡಿದರು. ಹೊಸ ನೇಮಕಾತಿ ಪ್ರಕ್ರಿಯೆಗೆ ಸಂಬಂಧಿಸಿದ ಅಧಿಸೂಚನೆಯನ್ನು ಮುಂದೂಡಲಾಗಿದೆ. ಪೊಲೀಸ್ ಇಲಾಖೆಗೆ ಸಣ್ಣ ವಯಸ್ಸಿನವರ ನೇಮಕಾತಿ ಆಗಬೇಕು. ಅದು ಇಲಾಖೆಯ ಒಟ್ಟಾರೆ ಕಾರ್ಯನಿರ್ವಹಣೆಗೆ ಒಳ್ಳೆಯದು ಎಂಬ ಚಿಂತನೆಯಿದೆ ಎಂದರು.

ಕನ್ನಡ ಶಾಲೆಗಳನ್ನ ಕಡೆಗಣನೆ ಮಾಡಲಾಗುತ್ತಿದೆ ಎಂಬ ಆರೋಪಗಳ ಕುರಿತು ಪ್ರತಿಕ್ರಿಯಿಸಿದ ಅವರು, ಕನ್ನಡ ಶಾಲೆಗಳ ಅಭಿವೃದ್ಧಿಗೆ ಸಾಕಷ್ಟು ಕೊಡುಗೆ ಕೊಟ್ಟಿದ್ದೇವೆ. ಸ್ವಾತಂತ್ರ್ಯ ಬಂದ 75 ವರ್ಷಗಳಲ್ಲಿ ಮೊದಲ ಬಾರಿಗೆ ಒಂದೇ ವರ್ಷ 8 ಸಾವಿರ ಕೊಠಡಿಗಳನ್ನು ಮಂಜೂರು ಮಾಡಲಾಗಿದೆ. ಇದೊಂದು ದೊಡ್ಡ ದಾಖಲೆ ಎಂದು ವಿವರಿಸಿದರು.

ಕರ್ನಾಟಕ ಸರ್ಕಾರವು ಪಂಚಾಯ್ತಿಗೆ ಒಂದು‌‌ ಪಬ್ಲಿಕ್ ಶಾಲೆಯನ್ನು ರೂಪಿಸಲು ನಿರ್ಧರಿಸಿದೆ. ಎಲ್ಲಾ ವಿಷಯಗಳಿಗೆ ಶಿಕ್ಷಕರನ್ನು ನೇಮಿಸಲು ಸರ್ಕಾರವು ಮುಂದಾಗಿದೆ. ಪ್ರತಿ ಶಾಲೆಯ ಸರ್ವಾಂಗೀಣ ಉನ್ನತಿಗೆ ಸರ್ಕಾರವು ಶ್ರಮಿಸುತ್ತಿದೆ. ಹೆಚ್ಚು ಮಕ್ಕಳು ಒಂದೇ ಕಡೆ ಓದಬೇಕು. ಸರ್ಕಾರ ಈಗಾಗಲೇ ಹೋಬಳಿಗೊಂದು ಶಾಲೆ ರೂಪಿಸಿದೆ. ಮುಂದಿನ ದಿನಗಳಲ್ಲಿ ಪ್ರತಿ ಪಂಚಾಯಿತಿಯಲ್ಲಿಯೂ ಉತ್ತಮ ಶಾಲೆಗಳನ್ನು ಹುಟ್ಟುಹಾಕುವ ಗುರಿ ಹೊಂದಿದ್ದೇವೆ ಎಂದರು.