ತುಮಕೂರು: ರಸ್ತೆ ಅವೈಜ್ಞಾನಿಕ ಕಾಮಗಾರಿಯಿಂದ ಅಯಾತಪ್ಪಿ ಕೆಳಗೆ ಬಿದ್ದ ಯುವಕ ಕೊನೆಯುಸಿರೆಳೆದಿದ್ದಾನೆ. ತುಮಕೂರಿನ ರಾಷ್ಟ್ರೀಯ ಹೆದ್ದಾರಿ 48 ರ ಅಕ್ಕ ತಂಗಿ ಕೆರೆ ಬಳಿ ಬುಧವಾರ ತಡರಾತ್ರಿ ಘಟನೆ ನಡೆದಿತ್ತು. ಸದ್ಯ ಆ ಯುವಕ ತನ್ನ ಎರಡು ಕಣ್ಣುಗಳನ್ನು ದಾನ ಮಾಡಿ ಸಾರ್ಥಕತೆ ಮೆರೆದಿದ್ದಾನೆ. ತಿಲಕ್ ಎಂಬ ಯುವಕ ನಿನ್ನೆ ತಡರಾತ್ರಿ ತುಮಕೂರಿನ ಹನುಮಂತಪುರದಿಂದ ಬಟವಾಡಿಯತ್ತ ತನ್ನ ಬೈಕಿನಲ್ಲಿ ಹೋಗುತ್ತಿದ್ದ. ಆ ವೇಳೆ ಹೆದ್ದಾರಿ ಕಾಮಗಾರಿ ನಡೆಯುತ್ತಿದ್ದರಿಂದ ರಸ್ತೆ ಹಾಳಾಗಿತ್ತು.
ಹಾಳಾದ ರಸ್ತೆಯಲ್ಲಿಯೇ ಯುವಕ ಬೈಕ್ ಸವಾರಿ ಮಾಡುತ್ತಾ ಬಂದು ಸ್ಕಿಡ್ ಆಗಿ ಬಿದ್ದಿದ್ದಾನೆ. ಆ ವೇಳೆ ತಲೆಗೆ ಪೆಟ್ಟಾಗಿದೆ. ತೀವ್ರ ರಕ್ತಸ್ರಾವದೊಂದಿಗೆ ಯುವಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಇದೀಗ ಯುವಕನ ಕಣ್ಣುಗಳನ್ನ ಕುಟುಂಬಸ್ಥರು ದಾನ ಮಾಡಿದ್ದಾರೆ. ಬೆಂಗಳೂರಿನ ಲಯನ್ಸ್ ಇಂಟರ್ನ್ಯಾಷನಲ್ ಐ ಬ್ಯಾಂಕ್ ಗೆ ದಾನ ಮಾಡಿದ್ದು ನಾಲ್ವರಿಗೆ ದೃಷ್ಟಿ ನೀಡಿದಂತಾಗಿದೆ. ರಸ್ತೆಯಲ್ಲಿ ಗುಂಡಿಗಳು ಹೆಚ್ಚಿದ್ದು ಪ್ರತಿದಿನ ಅಪಘಾತಗಳು ನಡೆಯುತ್ತಲೇ ಇರುತ್ತವೆ. ಈ ಬಗ್ಗೆ ಹೆದ್ದಾರಿ ನಿಗಮಕ್ಕೆ ಹಾಗೂ ತುಮಕೂರು ಮಹಾನಗರ ಪಾಲಿಕೆಗೆ ತಿಳಿಸಿದರೂ ಕೂಡ ಯಾವುದೇ ಪ್ರಯೋಜನವಾಗಿಲ್ಲ. ಇನ್ನಾದರೂ ಇದನ್ನ ಸರಿಪಡಿಸಲಿ ಅಂತಾ ಜನರು ಒತ್ತಾಯಿಸಿದ್ದಾರೆ.
ನಾಳೆ ಸಿಎಂ ಬಸವರಾಜ ಬೊಮ್ಮಾಯಿ ತುಮಕೂರಿಗೆ ಭೇಟಿ:
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಾಳೆ ಶುಕ್ರವಾರ ತುಮಕೂರು ಪ್ರವಾಸ ಕೈಗೊಂಡಿದ್ದಾರೆ. ಶ್ರೀ ಸಿದ್ದಗಂಗಾ ಮಠದಲ್ಲಿ ದಾಸೋಹ ದಿನಾಚರಣೆಯಲ್ಲಿ ಭಾಗಿಯಾಗಲಿದ್ದಾರೆ. ಶುಕ್ರವಾರ ಬೆಳಗ್ಗೆ 9 ಗಂಟೆಗೆ ತುಮಕೂರಿಗೆ ತೆರಳಲಿರುವ ಸಿಎಂ ಬೊಮ್ಮಾಯಿ ಬೆಳಗ್ಗೆ 11.30ಕ್ಕೆ ಬೆಂಗಳೂರಿಗೆ ವಾಪಸಾಗಲಿದ್ದಾರೆ.
ಸಿಲಿಕಾನ್ ಸಿಟಿಯಲ್ಲೊಬ್ಬ ವಿಚಿತ್ರ ಕಳ್ಳ-ಕಳ್ಳತನ
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲೊಂದು ವಿಚಿತ್ರ ಕಳ್ಳತನ ಪ್ರಕರಣ ನಡೆದಿದೆ. ಬೆಳ್ಳಿ, ಬಂಗಾರ, ವಜ್ರ ವೈಢೂರ್ಯ ಕದಿಯೋದು ಬಿಟ್ಟು ಇಲ್ಲೊಬ್ಬ ಶನಿ ವಿಗ್ರಹವನ್ನೇ ಕಳ್ಳತನ ಮಾಡಿದ್ದಾನೆ ಭೂಪ. ನವ ಗ್ರಹ ಕಟ್ಟೆಯಲ್ಲಿ ಶನಿ ಮಹಾತ್ಮ ವಿಗ್ರಹವನ್ನೇ ಕಳವು ಮಾಡಿದ್ದಾನೆ. ಎಲ್ಲ ವಿಗ್ರಹಗಳನ್ನು ಬಿಟ್ಟ ಭೂಪ ಶನಿ ವಿಗ್ರಹವನ್ನೇ ಹೊತ್ತೊಯ್ದಿರುವುದು ಕುತೂಹಲಕಾರಿಯಾಗಿದೆ. ಶನಿ ವಿಗ್ರಹ ಹೊತ್ತೊಯ್ದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಯಡಿಯೂರು ಕೆರೆ ಮುಂಭಾಗದ ಅಶ್ವತ್ಥ ಕಟ್ಟೆಯಲ್ಲಿ ರಾತ್ರಿ ವೇಳೆ ಈ ಘಟನೆ ನಡೆದಿದೆ. ಬೆಳಗ್ಗೆ ಪೂಜೆಗೆ ಬಂದ ಭಕ್ತರಿಗೆ ಶನಿ ವಿಗ್ರಹ ಕಾಣದಿದ್ದಾಗ ಪ್ರಕರಣ ಬೆಳಕಿಗೆ ಬಂದಿದೆ! ಕಳ್ಳತನ ಮಾಡಿದ ಗಣೇಶನ ವಿಗ್ರಹ ಪೂಜೆ ಮಾಡಿದರೆ ಒಳಿತು ಎಂಬ ಪ್ರತೀತಿ ಇದೆ ಎಂಬುದು ಇಲ್ಲಿ ಗಮನಾರ್ಹ.
ಆದಾಗ್ಯೂ ಶನಿ ವಿಗ್ರಹವನ್ನೇ ಕದ್ದಿದ್ದಕ್ಕೆ ಕಾರಣವೇನು ಎಂಬುದು ಗೊತ್ತಾಗಿಲ್ಲ. ಎಲ್ಲ ಬಿಟ್ಟು ಶನಿ ವಿಗ್ರಹವನ್ನೇ ಯಾಕೆ ಹೊತ್ತೊಯ್ದ ಎಂಬುದು ನಿಜಕ್ಕೂ ನಿಗೂಢವಾಗಿದೆ. ಈ ಕುರಿತು ಸ್ಥಳೀಯರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಶನಿ ವಿಗ್ರಹ ಹೊತ್ತೊಯ್ಯುವಾಗ ಪಾದದ ಸ್ವಲ್ಪ ಭಾಗವು ಕಟ್ಟೆ ಭಾಗದಲ್ಲಿಯೇ ಉಳಿದಿದೆ. ಸಂಪೂರ್ಣ ವಿಗ್ರಹ ಕಳವು ಮಾಡಲು ಬಂದು ಮುಕ್ಕಾದ ಶನಿ ವಿಗ್ರಹವನ್ನು ಹೊತ್ತೊಯ್ದಿದ್ದಾನೆ ಎಂಬುದು ಸ್ಪಷ್ಟವಾಗಿದೆ. ಶನಿ ದೇವನ ವಿಗ್ರಹದ ಪಾದದ ಭಾಗ ಕಟ್ಟೆಯಲ್ಲಿಯೇ ಉಳಿದುಕೊಂಡಿದೆ.
ಸಿಸಿಟಿವಿ ಕಂಡಂತೆ.. ಹೇಗಾಯ್ತು ಈ ವಿಗ್ರಹದ ವಿಚಿತ್ರ ಕಳ್ಳತನ?
ಮೊನ್ನೆ ಸೋಮವಾರ ರಾತ್ರಿ 10 ಗಂಟೆಗೆ ಆಟೋದಲ್ಲಿ ಓರ್ವ ವ್ಯಕ್ತಿ ಆಗಮನವಾಗುತ್ತದೆ. ಆಟೋದಿಂದ ಇಳಿಯುವ ಮುನ್ನ ಸುತ್ತಮುತ್ತಲೂ ಪರಿಶೀಲನೆ ನಡೆಸುತ್ತಾನೆ. ಮುಂದೆ.. ಅಶ್ವತ್ಥ ಕಟ್ಟೆ ದೇಗುಲದ ಒಳಗಿರುವ ನವಗ್ರಹ ಕಟ್ಟೆಯತ್ತ ಸಾಗುತ್ತಾನೆ. ಅಲ್ಲಿ ಮತ್ತೊಮ್ಮೆ ಸುತ್ತಮುತ್ತ ಒಮ್ಮೆ ಕಣ್ಣಾಡಿಸಿ, ಕಳ್ಳತನಕ್ಕೆ ಇಳಿಯುತ್ತಾನೆ. ನೇರವಾಗಿ ಶನಿ ವಿಗ್ರಹ ಮಾತ್ರ ಕಿತ್ತುಕೊಳ್ಳುತ್ತಾನೆ. ಅಲ್ಲಿಂದ ಶನಿ ವಿಗ್ರಹವನ್ನು ತಂದು ಆಟೋದಲ್ಲಿಟ್ಟುಕೊಂಡು ಮುಂದೆ ಸಾಗುತ್ತಾನೆ ಈ ವಿಚಿತ್ರ ಆಸಾಮಿ!
Published On - 1:16 pm, Thu, 20 January 22