ತುಮಕೂರು: ಸರಣಿ ಅಪಘಾತದಲ್ಲಿ (Accident) ಇಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಜಿಲ್ಲೆಯ ಶಿರಾ (Sira) ತಾಲೂಕಿನ ಚಿಕ್ಕನಹಳ್ಳಿ ಬಳಿ ನಡೆದಿದೆ. ಟಾಟಾ ಏಸ್ ವಾಹನ, ಕ್ಯಾಂಟರ್ ಮತ್ತು ಖಾಸಗಿ ಬಸ್ ನಡುವೆ ಅಪಘಾತ ಸಂಭವಿಸಿದೆ. ಟಾಟಾ ಏಸ್ನಲ್ಲಿದ್ದ ಭೀಮಾಬಾಯಿ (70), ನಿವೃತ್ತಿ ಬಿಎಂಟಿಸಿ (BMTC) ಬಸ್ ಚಾಲಕ ಮಹಾಂತಪ್ಪ (50) ಮೃತ ದುರ್ದೈವಿಗಳು. ಮೃತರು ಕಲಬುರಗಿ (Kalaburgi) ಜಿಲ್ಲೆಯ ಅರಳಗುಡಿ ಗ್ರಾಮದ ನಿವಾಸಿಗಳು ಎಂದು ತಿಳಿದುಬಂದಿದೆ.
ಮಹಾಂತಪ್ಪ ಇತ್ತೀಚಿಗಷ್ಟೆ ಬಿಎಂಟಿಸಿ ಚಾಲಕ ವೃತ್ತಿಯಿಂದ ನಿವೃತ್ತರಾಗಿದ್ದರು. ಈ ಹಿನ್ನೆಯಲ್ಲಿ ಸ್ವಗ್ರಾಮಕ್ಕೆ ಮನೆ ಸಾಮಾನುಗಳ ಸಮೇತ ಟಾಟಾ ಏಸ್ನಲ್ಲಿ ಸ್ವಗ್ರಾಮಕ್ಕೆ ಹೋಗುತ್ತಿದ್ದರು. ಚಿಕ್ಕನಹಳ್ಳಿ ಬಳಿ ಮೇಲ್ಸೇತುವೆ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆ ವಾಹನ ದಟ್ಟಣೆ ಇತ್ತು. ಈ ವೇಳೆ ಮುಂದೆ ಹೋಗುತ್ತಿದ್ದ ಕ್ಯಾಂಟರ್ಗೆ ಹಿಂದಿನಿಂದ ಟಾಟಾ ಏಸ್ ಡಿಕ್ಕಿ ಹೊಡೆದಿದೆ. ನಂತರ ಹಿಂಬದಿಯಿಂದ ಬಂದ ಖಾಸಗಿ ವಾಹನ ಟಾಟಾ ಏಸ್ಗೆ ಡಿಕ್ಕಿ ಹೊಡೆದೆ. ಘಟನೆಯಲ್ಲಿ ಇಬ್ಬರು ಸಾವನ್ನಪ್ಪಿದ್ದು, ಹಲವರಿಗೆ ಗಾಯಗಳಾಗಿವೆ. ಗಾಯಾಳುಗಳನ್ನು ಕಳ್ಳಂಬೆಳ್ಳ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಳ್ಳಂಬೆಳ್ಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಪುಡಿರೌಡಿಗಳ ಅಟ್ಟಹಾಸ: ಯುವಕನ ಮೇಲೆ ಮಾರಣಾಂತಿಕ ಹಲ್ಲೆ
ಕೋಲಾರ: ಕಾರು ಹಿಂದಿನಿಂದ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಓರ್ವ ಸಾವನ್ನಪ್ಪಿದ್ದು, ಮೂವರು ಗಾಯಗೊಂಡಿರುವ ಘಟನೆ ಆಂದ್ರ ಪಲಮನೇರು ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ಮೃತರು ಕರ್ನಾಟಕ ರಾಜ್ಯ ಹುಣಸೂರು ಅಬಕಾರಿ ಇಲಾಖೆಯ ಡಿಎಸ್ಪಿ ವಿಜಯ್ ಕುಮಾರ್ ತಂದೆ ಗಿರಿಗೌಡ (80) ಎಂದು ತಿಳಿದುಬಂದಿದೆ.
ಅಬಕಾರಿ ಇಲಾಖೆಯ ಡಿಎಸ್ಪಿ ವಿಜಯ್ ಕುಮಾರ್ ಮತ್ತು ಕುಟುಂಬ ತಿರುಪತಿ ತಿರುಮಲದಿಂದ ಹಿಂತಿರುಗುತ್ತಿದ್ದಾಗ ಘಟನೆ ಸಂಭವಿಸಿದೆ. ಡಿಎಸ್ಪಿ ವಿಜಯ್ ಕುಮಾರ್ ಎರಡು ಕಾಲುಗಳಿಗೆ ಗಾಯಗಳಾಗಿದ್ದು, ಕೋಲಾರದ ಜಾಲಪ್ಪ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದಲ್ಲಿ ಅಬಕಾರಿ ಇನ್ಸ್‌ಪೆಕ್ಟರ್ ಲೋಕೇಶ್ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಡಿಎಸ್ಪಿ ವಿಜಯ್ ಕುಮಾರ್ ಅವರ ತಾಯಿ ಅವರ ತಲೆಗೆ ತೀವ್ರ ಪೆಟ್ಟಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಆಂದ್ರದ ಪಲಮನೇರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಮೈಸೂರು: ಜಿಲ್ಲೆಯ ಸರಗೂರು ತಾಲೂಕಿನ ಕುಂದೂರು ಗ್ರಾಮದ ಬಳಿ ರೈತನ ಮೇಲೆ ಕಾಡಾನೆ ದಾಳಿ ಮಾಡಿದೆ. ಇದರಿಂದ ರೈತ ಸಿದ್ದರಾಜನಾಯ್ಕ (35) ಗಂಭೀರ ಗಾಯಗೊಂಡಿದ್ದಾರೆ. ಸದ್ಯ ಸಿದ್ದರಾಜನಾಯ್ಕ ಅವರನ್ನು ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.
ಜಮೀನಿನಲ್ಲಿ ಹತ್ತಿ ಬಿಡಿಸುತ್ತಿದ್ದ ಕೂಲಿ ಕಾರ್ಮಿಕ ಮಹಿಳೆ ಮೇಲೆ ಕಾಡು ಹಂದಿ ದಾಳಿ ಮಾಡಿರುವ ಘಟನೆ ಹೆಚ್.ಡಿ.ಕೋಟೆ ತಾಲ್ಲೂಕು ಕೆ.ಆರ್.ಪುರ ಗ್ರಾಮದ ಹೊರವಲಯದಲ್ಲಿ ನಡೆದಿದೆ. ಹಂದಿ ದಾಳಿಗೆ ಕಾರ್ಮಿಕ ಚಿಕ್ಕಮ್ಮ (55) ಅವರ ಭುಜದ ಮೂಳೆ ಮುರಿದಿದೆ. ಕೂಲಿ ಕೆಲಸ ಮಾಡಿ ವಿಶ್ರಾಂತಿ ಪಡೆಯುತ್ತಿದ್ದಾಗ ಹಠಾತ್ ಆಗಿ ಕಾಡು ಹಂದಿ ದಾಳಿ ನಡೆಸಿದೆ.
ಹತ್ತಿ ಬಿಡಿಸುತ್ತಿದ್ದ ಇತರ ಕೂಲಿ ಕಾರ್ಮಿಕರು ಅಪಾಯದಿಂದ ಪಾರಾಗಿದ್ದಾರೆ. ಗಾಯಾಳು ಚಿಕ್ಕಮ್ಮ (55) ಅವರನ್ನು ಹೆಚ್.ಡಿ.ಕೋಟೆ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಹೆಚ್.ಡಿ.ಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:41 am, Sat, 2 September 23