AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೇಂದ್ರದ ಅಂತ್ಯೋದಯ’ ಕಲ್ಪನೆಗೆ ಸಿದ್ದಗಂಗಾ ಮಠವೇ ದಾರಿದೀಪ: ಶಿವಕುಮಾರ ಶ್ರೀಗಳನ್ನ ಸ್ಮರಿಸಿದ ಜೋಶಿ

ತ್ರಿವಿಧ ದಾಸೋಹಿ ಶ್ರೀ ಶಿವಕುಮಾರ ಶ್ರೀಗಳ 119ನೇ ಜಯಂತ್ಯುತ್ಸವನ್ನು ಇಂದು (ಏ 01) ಸಿದ್ಧಗಂಗಾ ಮಠದಲ್ಲಿ ಅದ್ಧೂರಿಯಾಗಿ ಆಚರಿಸಲಾಯ್ತು, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸಹ ಕಾರ್ಯಕ್ರಮದಲ್ಲಿ ಭಾಗಿಯಾಗಿ ಸ್ವಾಮೀಜಿಗಳನ್ನು ಸ್ಮರಿಸಿದರು. ಇನ್ನು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮಾತನಾಡಿ ಸಿದ್ಧಗಂಗಾ ಮಠ ಹಾಗೂ ಶಿವಕುಮಾರ ಶ್ರೀಗಳ ಕಾರ್ಯ ವೈಖರಿಯನ್ನು ಬಣ್ಣಿಸಿದ್ದಾರೆ.

ಕೇಂದ್ರದ ಅಂತ್ಯೋದಯ' ಕಲ್ಪನೆಗೆ ಸಿದ್ದಗಂಗಾ ಮಠವೇ ದಾರಿದೀಪ: ಶಿವಕುಮಾರ ಶ್ರೀಗಳನ್ನ ಸ್ಮರಿಸಿದ ಜೋಶಿ
ಶಿವಕುಮಾರ ಶ್ರೀಗಳ 119ನೇ ಜಯಂತ್ಯುತ್ಸವದಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ Image Credit source: Social Media
ರಮೇಶ್ ಬಿ. ಜವಳಗೇರಾ
|

Updated on:Apr 01, 2026 | 10:21 PM

Share

ತುಮಕೂರು, (ಏ 01): “ಅನ್ನ-ಅಕ್ಷರ-ಆಶ್ರಯ’ ನೀಡಿ ತ್ರಿವಿಧ ದಾಸೋಹಿಯಾದ ಸಿದ್ಧಗಂಗಾ ಶ್ರೀಗಳು (siddaganga shree) ಸರ್ಕಾರದ ಅನೇಕ ಯೋಜನೆಗಳಿಗೆ ಮಹಾನ್ ಸ್ಪೂರ್ತಿಯಾಗಿದ್ದಾರೆ” ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ ಜೋಶಿ (pralhad joshi) ಸ್ಮರಿಸಿದರು. ತುಮಕೂರಿನಲ್ಲಿ (Tumakuru) ಇಂದು (ಏ 01) ಶ್ರೀ ಶಿವಕುಮಾರ ಮಹಾಸ್ವಾಮಿಗಳ (Sri Shivakumar Swamiji) 119ನೇ ಜಯಂತ್ಯುತ್ಸವದಲ್ಲಿ ನುಡಿ ನಮನ ಸಲ್ಲಿಸುತ್ತಾ, ಕೇಂದ್ರ ಸರ್ಕಾರದಲ್ಲಿ ನಾವಿಂದು ಅನುಷ್ಠಾನಕ್ಕೆ ತರುತ್ತಿರುವ ಅನೇಕ ಜನಪರ ಯೋಜನೆಗಳಿಗೆ ಈ ಮಠದ ದಾಸೋಹ ತತ್ವವೇ ಸ್ಫೂರ್ತಿಯಾಗಿದೆ ಎಂದು ಬಣ್ಣಿಸಿದರು.

ನಮ್ಮ ಸರ್ಕಾರದ ‘ಅಂತ್ಯೋದಯ’ ಕಲ್ಪನೆಗೆ ಸಿದ್ದಗಂಗಾ ಮಠವೇ ದಾರಿದೀಪವಾಗಿದೆ. ಹಸಿದವರಿಗೆ ಅನ್ನ ನೀಡುವ ‘ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆ” ಇರಲಿ, ಬಡ ಮಕ್ಕಳಿಗೆ ಶಿಕ್ಷಣದ ಹಕ್ಕು ನೀಡುವ ನೀತಿಗಳಿರಲಿ, ಸರ್ವರಿಗೂ ಸಮಾನ ಅವಕಾಶ ನೀಡುವ ನಮ್ಮ ಧೈಯವಿರಲಿ ಎಲ್ಲದೂ ಸಿದ್ಧಗಂಗಾ ಶ್ರೀಗಳು ಹಾಕಿಕೊಟ್ಟ ದಾಸೋಹದ ಬುನಾದಿಯಾಗಿದೆ ಎಂದು ಹೇಳಿದರು.

ಇದನ್ನೂ ಓದಿ: ಶಿವಕುಮಾರ ಸ್ವಾಮೀಜಿ ಜನ್ಮದಿನೋತ್ಸವ: ಸಿದ್ಧಗಂಗಾ ಮಠದ ಗುಣಗಾನ ಮಾಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು

ಸಾಮಾಜಿಕ ನ್ಯಾಯದ ಪ್ರತಿರೂಪ

ಹಸಿದವರಿಗೆ ಅನ್ನ, ನಿರಾಶ್ರಿತರಿಗೆ ಆಶ್ರಯ, ಅಜ್ಞಾನಿಗಳಿಗೆ ಶಿಕ್ಷಣ ಒದಗಿಸುತ್ತಾ ಸಹಸ್ರಾರು ಕುಟುಂಬಗಳನ್ನು ಬೆಳಗಿದ ಸಿದ್ಧಗಂಗಾ ಶಿವಕುಮಾರ ಶ್ರೀಗಳು ಸಾಮಾಜಿಕ ನ್ಯಾಯದ ಪ್ರತಿರೂಪವೇ ಆಗಿದ್ದರು . ತುಮಕೂರು ಸಿದ್ದಗಂಗಾ ಮಠ ಕೇವಲ ಮಠವಲ್ಲ, ಇದು ಆಧುನಿಕ ಭಾರತದ ಸಂಸ್ಕಾರದ ಕೇಂದ್ರ. ಇಲ್ಲಿ ಪ್ರತಿ ದಿನವೂ ನಡೆಯುವ ‘ಅನ್ನ ದಾಸೋಹ’, ‘ಅಕ್ಷರ ದಾಸೋಹ” ವಿಶ್ವದ ಯಾವುದೇ ದೊಡ್ಡ ವಿಶ್ವವಿದ್ಯಾಲಯಕ್ಕೆ ಮತ್ತು ಸರ್ಕಾರಕ್ಕೆ ಮಾದರಿ ಎಂದು ಜೋಶಿ ಹೇಳಿದರು

ಡಾ.ಶ್ರೀ ಶಿವಕುಮಾರ ಸ್ವಾಮೀಜಿಗಳು ಮಹಾನ್ ಸಂತರಷ್ಟೇ ಅಲ್ಲ ಅವರೊಂದು ದಿವ್ಯಶಕ್ತಿ. ಅವರು ಪ್ರಾರಂಭಿಸಿದ “ಅನ್ನದಾಸೋಹ” ಕೇವಲ ಊಟವಲ್ಲ. ಸಮಾನತೆಯ ಸಂದೇಶ. ಜಾತಿ-ಧರ್ಮ-ಬಡತನವೆಂಬ ಬೇಧ ತೊಡೆದು ಹಾಕಿ ಜಗತ್ತಿಗೆ ಮಾನವೀಯ ಮಂತ್ರವನ್ನು ಸಾರಿದ ದೈವಪುರುಷರು ಎಂದು ಸ್ಮರಿಸಿದರು.

1930ರಲ್ಲಿ ಮಠದ ಜವಾಬ್ದಾರಿ ವಹಿಸಿಕೊಂಡು ದೀನ ದಲಿತರು, ನಿರ್ಗತಿಕರಿಗಾಗಿ ಶ್ರೀಗಳು ಪಟ್ಟ ಶ್ರಮ ಕಣ್ಣ ಮುಂದಿದೆ. ಬಸವಣ್ಣನವರ “ಕಾಯಕವೇ ಕೈಲಾಸ” ತತ್ವವನ್ನು ಅಕ್ಷರಶಃ ಪಾಲಿಸಿದವರು ಶ್ರೀಗಳು. ಜೀವನದ 111 ವರ್ಷಗಳಲ್ಲಿ ಅವರು ಒಂದು ದಿನವೂ ವಿಶ್ರಮಿಸಲಿಲ್ಲ. ಅವರ ಹಣೆಯಲ್ಲಿ ವಿಭೂತಿ ಮಾತ್ರವಲ್ಲ ಸದಾ ಸಮಾಜದ ಹಿತಚಿಂತನೆ ಇರುತ್ತಿತ್ತು. ಅವರದ್ದು ಅನ್ನ-ಅರಿವು ಮತ್ತು ಆಧ್ಯಾತ್ಮದ “ತ್ರಿವಿಧ ದಾಸೋಹ”ವಾಗಿತ್ತು ಎಂದು ಹೇಳಿದರು.

ಸಿದ್ಧಗಂಗಾ ಮಠದಲ್ಲಿ ಪ್ರತಿದಿನ 10,000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮತ್ತು ಯಾತ್ರಿಕರಿಗೆ ಉಚಿತವಾಗಿ ಆಹಾರ, ವಸತಿ ಕಲ್ಪಿಸಲಾಗುತ್ತಿದೆ. ನರ್ಸರಿಯಿಂದ ತಾಂತ್ರಿಕ (SIT), ಪಾಲಿಟೆಕ್ನಿಕ್, ಬಿ.ಎಡ್, ಮತ್ತು ಸಂಸ್ಕೃತ ಪಾಠಶಾಲೆಗಳವರೆಗೆ 124ಕ್ಕೂ ಹೆಚ್ಚು ಶೈಕ್ಷಣಿಕ ಸಂಸ್ಥೆಗಳನ್ನು ನಡೆಸುತ್ತಿದೆ ಎಂದು ಶ್ಲಾಘಿಸಿದರು.

ಅನ್ನದಾಸೋಹದ ಒಲೆ ನಿರಂತರ

ಶ್ರೀಮಠ ಗ್ರಾಮೀಣ, ಬಡ ವಿದ್ಯಾರ್ಥಿಗಳಿಗೆ ಉಚಿತ ಆಶ್ರಯ ನೀಡಿ, ಸ್ವಾವಲಂಬಿಗಳಾಗಲು ನೆರವಾಗಿದೆ. ಸಹಾಯ ಮಾಡಿದೆ. ಅಂಧ ಮಕ್ಕಳಿಗಾಗಿ ವಿಶೇಷ ಶಾಲೆಗಳನ್ನು ನಡೆಸಿ ಪುನರ್ವಸತಿ ಕಲ್ಪಿಸಿದೆ. ಶ್ರೀಮಠದ ವಿಶೇಷತೆ ಅಂದರೆ, 90 ವರ್ಷ ಮೊದಲು ಹಚ್ಚಿದ ಅಡುಗೆ ಮನೆಯ ಒಲೆ ಇನ್ನೂ ಉರಿಯುತ್ತಲೇ ಇದ್ದು, ಇದು ನಿರಂತರವಾಗಿರುತ್ತದೆ ಎಂದು ಸಚಿವ ಜೋಶಿ ಆಶಿಸಿದರು.

ಶ್ರೀ ಸಿದ್ದಗಂಗಾ ಮಠದ ಕೊಡುಗೆಯಿಂದಲೇ ಕರುನಾಡು ಇಂದು ದಾಸೋಹದ ನಾಡಾಗಿದೆ ಎಂದರೆ ತಪ್ಪಾಗಲಾರದು. ಲಕ್ಷಾಂತರ ಜನರು ಉತ್ತಮ ಹುದ್ದೆ, ಉನ್ನತ ಸ್ಥಾನಕ್ಕೇರಿದ್ದಾರೆ, ಅತ್ಯುತ್ತಮ ಸಾಧನೆ ತೋರಿದ್ದಾರೆ ಎಂದರೆ ಅದಕ್ಕೆ ಕಾರಣ ಶ್ರೀಗಳ ತ್ರಿವಿಧ ದಾಸೋಹವೆಂದು ಬಣ್ಣಿಸಿದರು.

ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನಿ ಆಗಿದ್ದಾಗ ಸಿದ್ದಗಂಗಾ ಮಠಕ್ಕೆ ಬಂದು, ಸ್ವಾಮೀಜಿಗಳ ಪದಸ್ಪರ್ಶಿಸಿ ಆಶೀರ್ವಾದ ಪಡೆದ ಕ್ಷಣ ಸಂಸ್ಕೃತಿಯ ನಮನದ ಸಂಕೇತ. ‘ಶಿವಕುಮಾರ ಸ್ವಾಮಿಗಳು ನಡೆಯುವ ದೇವರು’ ಎಂದಿದ್ದರು ಮತ್ತು ಉತ್ತರದಲ್ಲಿ ಗಂಗಾ ನದಿ ಹರಿಯುತ್ತಿದ್ದರೆ, ದಕ್ಷಿಣದಲ್ಲಿ ಈ ಸಿದ್ದಗಂಗೆ ಹರಿಯುತ್ತಿದೆ ಎಂದ ಮಾತು ನಿಜಕ್ಕೂ ಸತ್ಯದ ದಾರಿದೀಪವಾಗಿದೆ ಎಂದರು.

ದಾಸೋಹ ದಿನ ಘೋಷಣೆ ಪಾಲಿಸಲಿ ರಾಜ್ಯ ಸರ್ಕಾರ: ರಾಜ್ಯದಲ್ಲಿ ಈ ಹಿಂದೆ ಬಸವರಾಜ ಬೊಮ್ಮಯಿ ಅವರು ಮುಖ್ಯಮಂತ್ರಿ ಆಗಿದ್ದಾಗ ಬಿಜೆಪಿ ಸರ್ಕಾರ ‘ಜನವರಿ 21’ ಅನ್ನು “ದಾಸೋಹ ದಿನ”ವಾಗಿ ಘೋಷಿಸಿದ್ದು, ಇಂದಿನ ರಾಜ್ಯ ಸರ್ಕಾರ ಅದನ್ನು ಪಾಲಿಸುವ ಮೂಲಕ ಶ್ರೀಗಳಿಗೆ ಗೌರವ ಸೂಚಿಸಬೇಕು ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಇದೇ ವೇಳೆ ಆಗ್ರಹಿಸಿದರು.

ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಸಿದ್ಧಗಂಗಾ ಮಠದ ಅಧ್ಯಕ್ಷರಾದ ಶ್ರೀ ಸಿದ್ಧಲಿಂಗ ಮಹಾಸ್ವಾಮಿಜಿ, ಸಿದ್ಧಗಂಗಾ ಮಠದ ಕಿರಿಯ ಶ್ರೀಗಳಾದ ಶ್ರೀ ಶಿವಸಿದ್ಧೇಶ್ವರ ಸ್ವಾಮಿಜಿ, ಕೇಂದ್ರ ರಾಜ್ಯ ಖಾತೆ ಸಚಿವ ವಿ. ಸೋಮಣ್ಣ‌, ರಾಜ್ಯ ಸರ್ಕಾರದ ಸಚಿವರು ಉಪಸ್ಥಿತರಿದ್ದರು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:52 pm, Wed, 1 April 26

Follow Us