ತುಮಕೂರು: ಈ ಬಾರಿಯ ಚುನಾವಣೆಯಲ್ಲಿ ದುಡ್ಡು ಕೆಲಸ ಮಾಡುತ್ತಾ ಇಲ್ಲಾ, ಜನ ಬೆಂಬಲ ಕೆಲಸ ಮಾಡುತ್ತಾ ನೋಡೇ ಬಿಡೋಣ ಎಂದು ಪ್ರತಿಸ್ಪರ್ಧಿಗಳಿಗೆ ಮಾಜಿ ಸಚಿವ ಎಸ್. ಆರ್ ಶ್ರೀನಿವಾಸ್ (SR Srinivas) ಸವಾಲು ಎಸೆದಿದ್ದಾರೆ. 2023ರ ವಿಧಾನಸಭಾ ಚುನಾವಣೆಯಲ್ಲಿ ಗುಬ್ಬಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಎಸ್ ಆರ್ ಶ್ರೀನಿವಾಸ್ ಅವರು, ಮನೆ ಮನೆ ಪ್ರಚಾರ ಕಾರ್ಯ ಆರಂಭಿಸಿದ್ದು, ಕ್ಷೇತ್ರದ ಕಾರ್ಯಕರ್ತರು ಮತ್ತು ಮತದಾರರನ್ನು ಉದ್ದೇಶಿಸಿ ಮಾತನಾಡುತ್ತ, ಈ ಬಾರಿಯ ಚುನಾವಣೆಯಲ್ಲಿ ಹಣ ಕೆಲಸ ಮಾಡುತ್ತಾ ಇಲ್ಲಾ, ಜನ ಬೆಂಬಲ ಕೆಲಸ ಮಾಡುತ್ತಾ ನೋಡಿಯೇ ಬಿಡೋಣ ಎಂದು ಪ್ರತಿಸ್ಪರ್ಧಿ ನಾಗರಾಜು ಅವರಿಗೆ ಸವಾಲು ಹಾಕಿದ್ದಾರೆ.
ಗುಬ್ಬಿ ಕ್ಷೇತ್ರದ ಮತದಾರರು ಪ್ರಜ್ಞಾವಂತರು. ಅವರು ಹಣ, ಹೆಂಡ ಇತ್ಯಾದಿ ಆಮೀಷಗಳಿಗೆ ಸೊಪ್ಪು ಹಾಕುವುದಿಲ್ಲ. ನಾನೇನು, ಎಂತಹ ವ್ಯಕ್ತಿ ಎಂಬುದು ಕ್ಷೇತ್ರದ ಜನರಿಗೆ ಗೊತ್ತಿದೆ. ನಾನು ಯಾರಿಗೂ ಹೆದರುವ ಪ್ರಶ್ನೆಯೇ ಇಲ್ಲ. ಏನಿದ್ದರೂ ನನಗೆ ಮತ ನೀಡಿ ಆಶೀರ್ವದಿಸುವ ಜನತೆಗೆ ಹಾಗೂ ಕಾರ್ಯಕರ್ತರಿಗೆ ಮಾತ್ರ ನಾನು ತಲೆ ಬಾಗುವುದು. ಮೇ 13ರಂದು ಹೊರಬೀಳಲಿರುವ ಫಲಿತಾಂಶ, ಮತದಾರರಿಗೆ ಹಣ, ಹೆಂಡದ ಆಮೀಷ ಒಡ್ಡುವ ನನ್ನ ಪ್ರತಿಸ್ಪರ್ಧಿ ನಾಗರಾಜು ಅವರಿಗೆ ತಕ್ಕ ಪಾಠ ಆಗಲಿದೆ ಎಂದು ಅವರು ಟೀಕಿಸಿದರು.
ಈ ವೇಳೆ ಕಾಂಗ್ರೆಸ್ ಪಕ್ಷದ ಸ್ಥಳೀಯ ಮುಖಂಡರು, ಕಾರ್ಯಕರ್ತರು ಹಾಗೂ ಬೆಂಬಲಿಗರು ಮಾಜಿ ಸಚಿವ ಎಸ್ ಆರ್ ಶ್ರೀನಿವಾಸ್ ಜೊತೆಗಿದ್ದರು.
ಇದನ್ನೂ ಓದಿ: ಕಾಂಗ್ರೆಸ್ ಅಭ್ಯರ್ಥಿ ಆನಂದ್ ಸಭೆ ವಿಫಲ; ಪಕ್ಷೇತರ ಅಭ್ಯರ್ಥಿಯಾಗುವ ಸುಳಿವು ನೀಡಿದ ವೈಎಸ್‌ವಿ ದತ್ತಾ
ಜೆಡಿಎಸ್ ಶಾಸಕ ಎಸ್.ಆರ್.ಶ್ರೀನಿವಾಸ್ ಅವರು ಇತ್ತೀಚೆಗೆ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ವಿಧಾನಸೌಧದ ಸ್ಪೀಕರ್ ಕಚೇರಿಗೆ ತೆರಳಿ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ರಾಜೀನಾಮೆ ಸಲ್ಲಿಕೆ ಮಾಡಿದ್ದು, ಕೆಲವೇ ದಿನಗಳಲ್ಲಿ ಕಾಂಗ್ರೆಸ್ ಪಕ್ಷ ಸೇರಲು ಸಜ್ಜಾಗಿದ್ದರು. ರಾಜೀನಾಮೆ ನೀಡಿದ ನಂತರ ಮಾತನಾಡಿದ ಶ್ರೀನಿವಾಸ್, ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ.
ಇದನ್ನೂ ಓದಿ: ಶಾಸಕ ಸ್ಥಾನಕ್ಕೆ ಎಸ್.ಆರ್.ಶ್ರೀನಿವಾಸ್ ರಾಜೀನಾಮೆ; ಕಾಂಗ್ರೆಸ್ ಸೇರಲು ಸಜ್ಜು
ಮಾರ್ಚ್ 31ಕ್ಕೆ ನಾನು ಅಧೀಕೃತವಾಗಿ ಕಾಂಗ್ರೆಸ್ ಸೇರುತ್ತೇನೆ. ಶಿವಲಿಂಗೇಗೌಡ, ಎಟಿ ರಾಮಸ್ವಾಮಿ ಕೂಡ ಕಾಂಗ್ರೆಸ್ ಪಕ್ಷ ಸೇರುತ್ತಾರೆ. ಗುಬ್ಬಿಯಲ್ಲಿ ಎಲ್ಲ ಕಾಂಗ್ರೆಸ್ ನಾಯಕರು ಒಟ್ಟಾಗಿ ಇದ್ದಾರೆ. ಅವರ ಬೆಂಬಲದೊಂದಿಗೆ ಕಾಂಗ್ರೆಸ್ನಿಂದ ಕಣಕ್ಕಿಳಿದು ಕ್ಷೇತ್ರದಲ್ಲಿ ಮತ್ತೆ ಗೆಲ್ಲುವ ವಿಶ್ವಾಸ ಇದೆ ಎಂದು ಹೇಳಿದ್ದರು.
ರಾಜೀನಾಮೆಗೂ ಮುನ್ನ ಮಾತನಾಡಿದ್ದ ಶ್ರೀನಿವಾಸ್, ತುಂಬಾ ದುಃಖದಿಂದ ಜೆಡಿಎಸ್ ಪಕ್ಷವನ್ನು ಬಿಡುತ್ತಿದ್ದೇನೆ. ದೇವೆಗೌಡರು ಮಗನಂತೆ ನೋಡಿಕೊಂಡಿದ್ದರು. ಕುಮಾರಸ್ವಾಮಿ ಮತ್ತು ನನ್ನ ಒಡನಾಟ ಸಾಕಷ್ಟು ಆತ್ಮೀಯವಾಗಿತ್ತು. ಅದರೆ ಕಳೆದ ಒಂದೂವರೆ ವರ್ಷದ ಹಿಂದೆ ಯಾರು ಏನು ಹೇಳಿದರೋ ಗೊತ್ತಿಲ್ಲ, ಹೊಸ ಅಭ್ಯರ್ಥಿ ಘೋಷಣೆ ಮಾಡಿದ್ದರು. ಅದರ ಉದ್ದೇಶ ನನಗೆ ಗೊತ್ತಗಲಿಲ್ಲ. ಅವರು ಅಭ್ಯರ್ಥಿ ಘೋಷಣೆ ಮಾಡಿದ ಮೇಲೆ ನಾನು ನನಗೆ ಗೌರವ ಇಲ್ಲದ ಸ್ಥಳದಿಂದ ಹೊರ ಬಂದಿದ್ದೆನೆ ಎಂದಿದ್ದರು.
ಕರ್ನಾಟಕ ವಿಧಾನಸಭೆ ಚುನಾವಣೆ ಸಂಬಂಧಿತ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
Published On - 10:45 pm, Fri, 7 April 23