ತುಮಕೂರು, ಫೆಬ್ರವರಿ 10: ಜಿಲ್ಲೆಯಲ್ಲಿ ಮೌಢ್ಯಾಚರಣೆ (Superstition) ಮುಂದುವರೆದಿದೆ. ಶಿರಾ ತಾಲೂಕಿನ ಕುಂಟನಹಟ್ಟಿ ಗೊಲ್ಲರಹಟ್ಟಿ ಗ್ರಾಮದಲ್ಲಿ ಒಂದು ತಿಂಗಳ ಹಸುಗೂಸು ಹಾಗೂ ಬಾಣಂತಿಯನ್ನ ಗ್ರಾಮಸ್ಥರು ಊರಾಚೆ ಇರಿಸಿದ್ದಾರೆ. ಹೆರಿಗೆ ಬಳಿಕ 25 ವರ್ಷದ ಬಾಣಂತಿ ಬಾಲಮ್ಮ ಹಾಗೂ ಒಂದು ತಿಂಗಳ ಮಗುವನ್ನ ಗ್ರಾಮದ ಹೊರಗಿನ ಗುಡಿಸಲಿನಲ್ಲಿರಿಸಿದ್ದಾರೆ. ದೂರನ್ನು ಆಧರಿಸಿ ಗ್ರಾಮಕ್ಕೆ ಭೇಟಿ ನೀಡಿದ ಶಿರಾ ಜೆಎಮ್ಎಫ್ಸಿ ನ್ಯಾಯಾಧೀಶೆ ಗೀತಾಂಜಲಿ ಪರಿಶೀಲನೆ ಮಾಡಿದ್ದಾರೆ. ಗ್ರಾಮದಲ್ಲಿ ಮೌಡ್ಯದ ವಿರುದ್ಧ ಜಾಗೃತಿ ಮೂಡಿಸಿ ಒಂದು ತಿಂಗಳ ಹಸುಗೂಸು ಹಾಗೂ ಬಾಣಂತಿಯನ್ನು ವಾಪಸ್ ಮನೆಗೆ ಸೇರಿಸಿದ್ದಾರೆ. ಮತ್ತೆ ಘಟನೆ ಮರುಕಳಿಸಿದರೇ ಪ್ರಕರಣ ದಾಖಲು ಮಾಡುವುದಾಗಿ ಎಚ್ಚರಿಕೆ ಸಹ ನೀಡಿದ್ದಾರೆ.
ಇತ್ತೀಚೆಗೆ ಇದೇ ಗ್ರಾಮದಲ್ಲಿ ಮೌಢ್ಯಕ್ಕೆ 1 ತಿಂಗಳ ಮಗು ಬಲಿಯಾಗಿತ್ತು. ದೇವರಿಗೆ ಸೂತಕ ಆಗುತ್ತೆ ಎಂದು ಬಾಣಂತಿ, ಮಗುವನ್ನು ಊರಿನ ಹೊರಗೆ ಗುಡಿಸಲಲ್ಲಿಟಲಾಗಿತ್ತು. ಮಗುವಿಗೆ ವಿಪರೀತ ಶೀತವಾಗಿದ್ದು ಮಗುವನ್ನು ತುಮಕೂರು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಮಗು ಮೃತಪಟ್ಟಿತ್ತು. ಕುಟುಂಬಸ್ಥರ ಮೂಢನಂಬಿಕೆಗೆ 1 ತಿಂಗಳ ಕಂದಮ್ಮ ಸಾವನ್ನಪ್ಪಿತ್ತು.
ಇದನ್ನೂ ಓದಿ: ಬಾಣಂತಿ, ಶಿಶುವನ್ನು ಊರಿಂದ ಹೊರಗಿಟ್ಟ ಕಾಡುಗೊಲ್ಲ ಕುಟುಂಬ; ನಮ್ಮ ದೇವರಿಗೆ ಸೂತಕ ಆಗಲ್ಲ, ನಾವು ಬಿಟ್ಟುಕೊಳ್ಳಲ್ಲ ಎಂದ ಹಿರಿಯರು
ಸಂಪ್ರದಾಯದ ಹೆಸರಿನಲ್ಲಿ ತಾಯಿ, ಮಗುವಿನ ಜೀವಕ್ಕೆ ಕುತ್ತು ತರುವಂತ ಮೌಡ್ಯಾಚರಣೆ ಮಾಡಲಾಗಿತ್ತು. ಆದರೆ ಮಗುವಿಗೆ ವಿಪರೀತ ಶಿತವಾಗಿ ಪುಟ್ಟ ಕಂದಮ್ಮ ಪ್ರಾಣ ಕಳೆದುಕೊಂಡಿತ್ತು. ತಾಯಿ ಒಡಲ ಆಕ್ರಂದನ ಮುಗಿಲು ಮುಟ್ಟಿತ್ತು.
ಇತ್ತೀಚೆಗ ಇದೇ ಗ್ರಾಮದಲ್ಲಿ ಮುಟ್ಟಾದ ಸಂದರ್ಭದಲ್ಲಿ ಮಹಿಳೆಯರನ್ನ ಗ್ರಾಮದಿಂದ ಹೊರಗಿಟ್ಟು ಮೌಢ್ಯಾಚರಣೆ ನಡೆಸಿರುವುದು ಬೆಳಕಿಗೆ ಬಂದಿತ್ತು. ಗೊಲ್ಲ ಸಮುದಾಯದಲ್ಲಿ ಮತ್ತೆ ಈ ಮೌಢ್ಯಾಚರಣೆ ಕಂಡುಬಂದಿತ್ತು. ಗ್ರಾಮದ ಅಂಗನವಾಡಿ ಶಿಕ್ಷಕಿ ಸುಜಾತ ಹಾಗೂ ಬಿಸಿಯೂಟದ ಕಾರ್ಯಕರ್ತೆ ಸಾವಿತ್ರಮ್ಮ ಜೊತೆಗೆ ಓರ್ವ ಮಹಿಳೆಯನ್ನು ಗ್ರಾಮದಿಂದ ಹೊರಗಿಡಲಾಗಿತ್ತು.
ಗ್ರಾಮಕ್ಕೆ ತಹಶೀಲ್ದಾರ್ ಆರತಿ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಅಂಗನವಾಡಿ ಸಿಬ್ಬಂದಿಯನ್ನ ತರಾಟೆಗೆ ತೆಗೆದುಕೊಂಡಿದ್ದರು. ಇಷ್ಟಾದರೂ ಮತ್ತೆ ಮೌಢ್ಯ ವಾಡಿಕೆಯಂತೆ ಗೋಮೂತ್ರ ಪ್ರೋಕ್ಷಿಸಿ, ಗ್ರಾಮಸ್ಥರು ಆ ಮಹಿಳೆಯರನ್ನು ಅವರವರ ಮನೆಯೊಳಕ್ಕೆ ಬಿಟ್ಟುಕೊಂಡಿದ್ದರು. ಚಿಕ್ಕನೆಟ್ಟಗುಂಟೆ ಗ್ರಾಮಸ್ಥರು ಋತುಚಕ್ರವಾದ ಮಹಿಳೆಯರನ್ನು ಮೂರು ದಿನಗಳ ಕಾಲ ಊರಿನಿಂದ ಹೊರಗಿಡುವ ಸಂಪ್ರದಾಯ ಪಾಲಿಸಿಕೊಂಡು ಬಂದಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.