ತುಮಕೂರು, ಫೆ.27: ಜಿಲ್ಲೆಯ ಪಾವಗಡ (Pavagada) ತಾಲೂಕು ಆಸ್ಪತ್ರೆಯಲ್ಲಿ ಫೆಬ್ರವರಿ 22 ರಂದು ಸಂತಾನಹರಣ, ಗರ್ಭಕೋಶದ ಚಿಕಿತ್ಸೆ ಹಾಗೂ ಸಿಸರಿಯನ್ಗೆ ಒಳಗಾಗಿದ್ದ ಮೂವರು ಮಹಿಳೆಯರ ಸಾವು ಪ್ರಕರಣ ಸಂಬಂಧ ಆಸ್ಪತ್ರೆಯ ಗುತ್ತಿಗೆ ವೈದ್ಯೆ ಸೇರಿದಂತೆ ಮೂವರನ್ನು ಸೇವೆಯಿಂದ ವಜಾಗೊಳಿಸಲಾಗಿದೆ. ಶಸ್ತ್ರಚಿಕಿತ್ಸೆ ಮಾಡಿದ್ದ ವೈದ್ಯೆ ಡಾ.ಪೂಜಾ, OT ಟೆಕ್ನಿಷಿಯನ್ ಕಿರಣ್ ಹಾಗೂ ಸ್ಟಾಫ್ ನರ್ಸ್ ಪದ್ಮಾವತಿ ಅವರನ್ನು ಸೇವೆಯಿಂದ ವಜಾಗೊಳಿಸಿ ತುಮಕೂರು (Tumkur) ಡಿಹೆಚ್ಓ ಆದೇಶಿಸಿದ್ದಾರೆ.
ರಾಷ್ಟ್ರೀಯ ಆರೋಗ್ಯ ಮಿಷನ್ (NHM) ಯೋಜನೆಯಡಿ ಗುತ್ತಿಗೆ ಆಧಾರದಲ್ಲಿ ಸೇವೆ ಸಲ್ಲಿಸುತ್ತಿದ್ದ ಡಾ.ಪೂಜಾ ಅವರನ್ನು ಕರ್ತವ್ಯ ಲೋಪ, ನಿರ್ಲಕ್ಷ್ಯ, ಬೇಜವಾಬ್ದಾರಿ ತೋರಿದ ಹಿನ್ನೆಲೆ ಸೇವೆಯಿಂದ ವಜಾ ಗೊಳಿಸಲಾಗಿದೆ. ಇಂದಿನಿಂದಲೇ (ಫೆಬ್ರವರಿ 27) ಅನ್ವಯಗೊಳ್ಳುವಂತೆ ವಜಾಗೊಳಿಸಲಾಗಿದೆ.
ಪಾವಗಡ ಸರ್ಕಾರಿ ಆಸ್ಪತ್ರೆಯಲ್ಲಿ ಫೆ.22 ರಂದು ಒಟ್ಟು ಏಳು ಮಹಿಳೆಯರು ವಿವಿಧ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಈ ಪೈಕಿ ಸಂತಾನಹರಣ, ಗರ್ಭಕೋಶದ ಚಿಕಿತ್ಸೆ ಹಾಗೂ ಸಿಸರಿಯನ್ ಮಾಡಿಸಿದ್ದ ಮೂವರು ಮಹಿಳೆಯರು ಸಾವನ್ನಪ್ಪಿದ್ದರು. ಸಂತಾನ ಹರಣ ಚಿಕಿತ್ಸೆಗೆ ಒಳಗಾಗಿದ್ದ ವೀರ್ಲಗೊಂದಿ ಗ್ರಾಮದ 30 ವರ್ಷದ ಅನಿತಾ, ಚಿಕಿತ್ಸೆ ನಡೆದ ದಿನವೇ ಸಾವನ್ನಪ್ಪಿದ್ದರು.
ಇದನ್ನೂ ಓದಿ; Viral Post: ಹಲ್ಲಿನ ಚಿಕಿತ್ಸೆಗೆಂದು ಬಂದ ಮಹಿಳೆಯ ತುಟಿಯನ್ನೇ ಕತ್ತರಿಸಿದ ವೈದ್ಯ
ರಾಜವಂತಿ ಮೂಲದ ಅಂಜಲಿಗೆ ಸಿಸರಿಯನ್ ಮೂಲಕ ಹೆರಿಗೆ ಮಾಡಿಸಲಾಗಿತ್ತು. ಹೆರಿಗೆ ಬಳಿಕ ಅಂಜಲಿ ಸ್ಥಿತಿ ಗಂಭೀರವಾಗಿತ್ತು. ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿತ್ತು. ಆದರೆ ಚಿಲಿತ್ಸೆ ಫಲಕಾರಿಯಾಗದೆ ಫೆಬ್ರವರಿ 24 ರಂದು ಮೃತಪಟ್ಟಿದ್ದರು. ಬ್ಯಾಡನೂರು ಗ್ರಾಮದ 40 ವರ್ಷದ ನರಸಮ್ಮಗೆ ಗರ್ಭಕೋಶದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಶಸ್ತ್ರಚಿಕಿತ್ಸೆ ಬಳಿಕ ಆರೋಗ್ಯ ಸಂಪೂರ್ಣ ಹದಗೆಟ್ಟ ಹಿನ್ನೆಲೆ ಬೆಂಗಳೂರಿನ ವಾಣಿ ವಿಲಾಸ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಫೆ. 25ರಂದು ಅವರು ಕೊನೆಯುಸಿರೆಳೆದಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ