ಕರ್ನಾಟಕದಲ್ಲಿ ನಿರಂತರ ಮಳೆಗೆ ಗಗನಕ್ಕೇರಿದ ಟೊಮೆಟೊ ಬೆಲೆ!
ಮಾರುಕಟ್ಟೆಗೆ ದಿನಕ್ಕೆ ಐದಾರು ಲಾರಿಯಲ್ಲಿ ಟೊಮೆಟೊ ಬರುತ್ತಿತ್ತು. ಆದರೆ ಸದ್ಯ ಒಂದು ಲಾರಿಯಲ್ಲಿ ಮಾತ್ರ ಬರುತ್ತಿದೆ. ಟೊಮೆಟೊ ದರ ಏರಿಕೆಯಾಗಿರುವ ಕಾರಣ ಖರೀದಿಸಲು ಜನರು ಹಿಂದೇಟು ಹಾಕುತ್ತಿದ್ದಾರೆ.
ತುಮಕೂರು: ರಾಜ್ಯದಲ್ಲಿ ಸತತವಾಗಿ ಮಳೆಯಾಗುತ್ತಿದ್ದು, ರೈತರು (Farmers) ಬೆಳೆದ ಬೆಳೆ ನಾಶವಾಗುತ್ತಿದೆ. ಅದರಲ್ಲೂ ಟೊಮೆಟೊ (Tomato) ಬೆಳೆ ಹೊಲದಲ್ಲೇ ಕೊಳೆಯುತ್ತಿದೆ. ಹೀಗಾಗಿ ಟೊಮೆಟೊ ದರ ಗಗನಕ್ಕೇರಿದೆ. ದಿಢೀರನೇ ಒಂದು ಕೆಜಿ ಟೊಮೆಟೊಗೆ 90 ರಿಂದ 100 ರೂಪಾಯಿ ಬೆಲೆ ಏರಿಕೆಯಾಗಿದೆ. ಕಳೆದ ಎರಡು ವಾರದಿಂದ ನಿರಂತರವಾಗಿ ಮಳೆ ಸುರಿಯುತ್ತಿರುವ ಹಿನ್ನೆಲೆ ಟೊಮೆಟೊ ಮಾರುಕಟ್ಟೆಗೆ ಬರುತ್ತಿಲ್ಲ. ಜಿಲ್ಲೆಯ ಎಪಿಎಂಸಿ ಮಾರುಕಟ್ಟೆಗೆ ಹೆಬ್ಬೂರು, ಗುಬ್ಬಿ, ಹೊನ್ನುಡಿಕೆ, ಉರ್ಡಿಗೆರೆ, ಕೊರಟಗೆರೆ, ತಿಪಟೂರು ಕಡೆಯಿಂದ ಅತಿಹೆಚ್ಚು ಮಾರುಕಟ್ಟೆಗೆ ಟೊಮೆಟೊ ಬರುತ್ತಿತ್ತು.
ಮಾರುಕಟ್ಟೆಗೆ ದಿನಕ್ಕೆ ಐದಾರು ಲಾರಿಯಲ್ಲಿ ಟೊಮೆಟೊ ಬರುತ್ತಿತ್ತು. ಆದರೆ ಸದ್ಯ ಒಂದು ಲಾರಿಯಲ್ಲಿ ಮಾತ್ರ ಬರುತ್ತಿದೆ. ಟೊಮೆಟೊ ದರ ಏರಿಕೆಯಾಗಿರುವ ಕಾರಣ ಖರೀದಿಸಲು ಜನರು ಹಿಂದೇಟು ಹಾಕುತ್ತಿದ್ದಾರೆ. ಇನ್ನು ರಾಜ್ಯದಲ್ಲಿ ಇದೇ ರೀತಿ ಮಳೆ ಮುಂದುವರೆದರೆ, ಮತ್ತೆ ಟೊಮೆಟೊ ದರ ಏರಿಕೆಯಾಗುವ ಸಾಧ್ಯತೆಯಿದೆ.
ಇದನ್ನೂ ಓದಿ: Bengaluru Rain: ಬೆಂಗಳೂರಿನಲ್ಲಿ ಮಳೆಯೋ ಮಳೆ: ರಸ್ತೆ ಮೇಲೆ ನೀರು, ತೇಲಿದ ಕಾರು, ಉರುಳಿದ ಮರ, ಜನಜೀವನ ಅಸ್ತವ್ಯಸ್ತ
ತರಕಾರಿ, ಹೂ ಬೆಳೆಗಳು ಹಾನಿ: ರಾತ್ರಿಯಿಡಿ ಚಿಕ್ಕಬಳ್ಳಾಫುರ ಜಿಲ್ಲೆಯಾದ್ಯಂತ ಧಾರಾಕರ ಮಳೆ ಸುರಿದಿದೆ. ಮಳೆ ಪರಿಣಾ, ಜಿಲ್ಲೆಯ ವಿವಿಧೆಡೆ ಹಣ್ಣು, ತರಕಾರಿ, ಹೂ ಬೆಳೆಗಳಿಗೆ ಹಾನಿಯಾಗಿದೆ. ಫಸಲು ಹೊತ್ತು ನಿಂತಿರುವ ದ್ರಾಕ್ಷಿ ಚಪ್ಪರಗಳು ಕುಸಿದು ಬೀಳುವ ಆತಂಕದಲ್ಲಿದೆ.
ಇನ್ನೂ 3 ದಿನ ಭಾರೀ ಮಳೆ ಸಾಧ್ಯತೆ: ಕರ್ನಾಟಕದಲ್ಲಿ ಇಂದಿನಿಂದ 3 ದಿನ ಭಾರೀ ಮಳೆ ಮುಂದುವರೆಯಲಿದೆ. ಕರ್ನಾಟಕ ಮಾತ್ರವಲ್ಲದೆ ಒಡಿಶಾ, ಬಿಹಾರ, ಜಮ್ಮು ಕಾಶ್ಮೀರ, ತಮಿಳುನಾಡು, ಕೇರಳ, ಆಂಧ್ರಪ್ರದೇಶ, ಅಸ್ಸಾಂನಲ್ಲೂ ಮಳೆಯ ಅಬ್ಬರವಾಗುತ್ತಿದೆ. ಇಂದಿನಿಂದ 3 ದಿನ ಕರ್ನಾಟಕ, ತಮಿಳುನಾಡು, ಕೇರಳದಲ್ಲಿ ಕೂಡ ವ್ಯಾಪಕ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಇಂದು (ಮೇ 18) ಕರ್ನಾಟಕದ ಮಲೆನಾಡು, ಕರಾವಳಿ ಪ್ರದೇಶದಲ್ಲಿ ಭಾರೀ ಮಳೆಯಾಗಲಿರುವ ಹಿನ್ನೆಲೆಯಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ನೈಋತ್ಯ ಅರೇಬಿನ್ ಸಮುದ್ರದಲ್ಲಿ ಚಂಡಮಾರುತ ಎದ್ದಿರುವ ಹಿನ್ನೆಲೆಯಲ್ಲಿ ಮುಂದಿನ 24 ಗಂಟೆಗಳಲ್ಲಿ ಕರ್ನಾಟಕದಲ್ಲಿ ಗುಡುಗು, ಮಿಂಚು ಸಹಿತ ಮಳೆಯಾಗಲಿದೆ ಎಂದು ಹವಾಮಾನ ತಜ್ಞ, ಧಾರವಾಡ ಕೃಷಿ ವಿವಿ ಹವಾಮಾನ ವಿಭಾಗ ಮುಖ್ಯಸ್ಥ ಡಾ. ಆರ್.ಎಚ್. ಪಾಟೀಲ ಮಾಹಿತಿ ನೀಡಿದ್ದಾರೆ.
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:02 am, Wed, 18 May 22