ಮೋದಿ ಸ್ವಾಗತಕ್ಕೆ ತುಮಕೂರಿನಲ್ಲಿ ಅದ್ದೂರಿ ಸಿದ್ಧತೆ: ಬೀದಿ ಬೀದಿಯಲ್ಲೂ ಬಿಜೆಪಿ ಬಾವುಟ, ಚುನಾವಣೆಗೆ ಭರ್ಜರಿ ಶಕ್ತಿಪ್ರದರ್ಶನ

| Updated By: ಆಯೇಷಾ ಬಾನು

Updated on: Feb 06, 2023 | 7:49 AM

ಹೆಚ್ಎಎಲ್ ಲೋಕಾರ್ಪಣೆ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ ತುಮಕೂರು ಜಿಲ್ಲೆಗೆ ಆಗಮಿಸುತ್ತಿದ್ದು, ಅವರ ಸ್ವಾಗತಕ್ಕೆ ಜಿಲ್ಲಾ ಬಿಜೆಪಿ ಮುಖಂಡರು, ಕಾರ್ಯಕರ್ತರು ಸಜ್ಜಾಗಿದ್ದಾರೆ.

ಮೋದಿ ಸ್ವಾಗತಕ್ಕೆ ತುಮಕೂರಿನಲ್ಲಿ ಅದ್ದೂರಿ ಸಿದ್ಧತೆ: ಬೀದಿ ಬೀದಿಯಲ್ಲೂ ಬಿಜೆಪಿ ಬಾವುಟ, ಚುನಾವಣೆಗೆ ಭರ್ಜರಿ ಶಕ್ತಿಪ್ರದರ್ಶನ
ಮೋದಿ ಸ್ವಾಗತಕ್ಕೆ ತುಮಕೂರಿನಲ್ಲಿ ಅದ್ದೂರಿ ಸಿದ್ಧತೆ
Follow us on

ತುಮಕೂರು: ಪ್ರಧಾನಿ ನರೇಂದ್ರ ಮೋದಿ(Narendra Modi) ಮೇನಿಯಾಗೆ ಇಡೀ ಕಲ್ಪತರು ನಾಡು ತುಮಕೂರು ಜಿಲ್ಲೆ ಸಜ್ಜಾಗಿದೆ. ಗುಬ್ಬಿ ತಾಲೂಕಿನ ಬಿದರೆಹಳ್ಳ ಕಾವಲ್‌ ಬಳಿ ನಿರ್ಮಾಣಗೊಂಡಿರುವ ಹೆಚ್‌ಎಎಲ್ ಹೆಲಿಕಾಪ್ಟರ್ ಘಟಕ ಇಂದು ಲೋಕಾರ್ಪಣೆಗೊಳ್ಳುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಉದ್ಘಾಟನೆ ಮಾಡಲಿದ್ದಾರೆ. ಚುನಾವಣೆ ಹೊಸ್ತಿಲಲ್ಲಿ, ಹೆಚ್ಎಎಲ್ ಲೋಕಾರ್ಪಣೆ ನಡೆಯುತ್ತಿದ್ದು, ಇದೇ ನೆಪದಲ್ಲಿ ಸಾಕಷ್ಟು ರಾಜಕೀಯ ತಂತ್ರಕ್ಕೆ ಬಿಜೆಪಿ ಮುಂದಾಗಿದೆ.

ಹೆಚ್ಎಎಲ್ ಲೋಕಾರ್ಪಣೆ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ ತುಮಕೂರು ಜಿಲ್ಲೆಗೆ ಆಗಮಿಸುತ್ತಿದ್ದು, ಅವರ ಸ್ವಾಗತಕ್ಕೆ ಜಿಲ್ಲಾ ಬಿಜೆಪಿ ಮುಖಂಡರು, ಕಾರ್ಯಕರ್ತರು ಸಜ್ಜಾಗಿದ್ದಾರೆ. ಸೋಮವಾರ ಮಧ್ಯಾಹ್ನ 3.30 ಗಂಟೆಗೆ ಪ್ರಧಾನಿ ಬರಲಿದ್ದು, ಒಂದು ಗಂಟೆಯಲ್ಲಿ ಸಮಾರಂಭ ಮುಗಿಯಲಿದೆ. ಈ ವೇಳೆ ಹೆಚ್‌ಎಎಲ್ ಘಟಕವನ್ನು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. ಇದಕ್ಕೆ ಮೋದಿ ಶಂಕುಸ್ಥಾಪನೆ ನೆರವೇರಿಸಿದ್ದು, ಈಗ ಅವರೇ ಉದ್ಘಾಟನೆಯನ್ನೂ ಮಾಡುತ್ತಿದ್ದಾರೆ. ಈ ಕಾರ್ಯಕ್ರಮದಲ್ಲಿ 1 ಲಕ್ಷಕ್ಕೂ ಹೆಚ್ಚಿನ ಬಿಜೆಪಿ ಕಾರ್ಯಕರ್ತರು ಭಾಗವಹಿಸಲಿದ್ದು, ವಿಧಾನಸಭಾ ಚುನಾವಣೆಯ ಹೊಸ್ತಿಲಲ್ಲಿ ಬಿಜೆಪಿ ಶಕ್ತಿ ಪ್ರದರ್ಶನಕ್ಕೂ ಮುಂದಾಗಿರುವಂತಿದೆ. ಈಗಾಗಲೇ ತುಮಕೂರು ನಗರ ಸೇರಿದಂತೆ ಗುಬ್ಬಿಯ ಬಿದರೆ ಕಾವಲ್ ಬಳಿಯ ಹೆಚ್ಎಎಲ್ ವರೆಗೂ ಬಿಜೆಪಿಯ ಬಾವುಟಗಳು, ಫ್ಲೆಕ್ಸ್ ಗಳು ರಾರಾಜಿಸುತ್ತಿದೆ.

ಹೆಚ್‌ಎಎಲ್ ಹೆಲಿಕಾಫ್ಟರ್ ಘಟಕವು ಸಾಕಷ್ಟು ತಾಂತ್ರಿಕ ವಿಚಾರಗಳನ್ನು ಒಳಗೊಂಡಿದ್ದು, ಪ್ರಧಾನಿ ಹಾಗೂ ಇತರ ಗಣ್ಯರು ಇದೇ ವಿಚಾರವಾಗಿ ಮಾತನಾಡಲಿದ್ದಾರೆ. ಜಿಲ್ಲೆಯ ಎಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳು ಭಾಗವಹಿಸುವಂತೆ ಮನವಿ ಮಾಡಲಾಗಿದೆ. ರಾಜ್ಯಪಾಲರು, ಸಿಎಂ, ಕೇಂದ್ರ ಸಚಿವರುಗಳು, ರಾಜ್ಯ ಸಚಿವರುಗಳು, ಉದ್ಯಮಿಗಳು, ವರ್ತಕರು, ವಾಣಿಜ್ಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡವರು ಸೇರಿ ನೂರಾರು ಗಣ್ಯರು ಇಂದಿನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಬಿಜೆಪಿ ಸರ್ಕಾರದ ಹಾದಿ, ಅಭಿವೃದ್ದಿಯ ಯೋಜನೆಗಳ ಕುರಿತಾಗಿಯೂ ಮೋದಿ ಭಾಷಣ ಮಾಡೋ ಸಾಧ್ಯತೆ ಇದೆ ಎನ್ನಲಾಗಿದೆ.

ಇದನ್ನೂ ಓದಿ: PM Modi Karnataka Visit: ಇಂದು ಪ್ರಧಾನಿ ಮೋದಿ ಬೆಂಗಳೂರು, ತುಮಕೂರು ಭೇಟಿ; 6 ಪ್ರಮುಖ ಯೋಜನೆಗಳಿಗೆ ಚಾಲನೆ

ಸದ್ಯ ತುಮಕೂರು ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳ ಪೈಕಿ 5 ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರಿದ್ದು, ಈ ಬಾರಿ ಜಿಲ್ಲೆಯಲ್ಲಿ ಕನಿಷ್ಠ 8-9 ಕ್ಷೇತ್ರಗಳಲ್ಲಿ ಕಮಲ ಅರಳಿಸೋ ಪ್ಲಾನ್ ಮಾಡಕೊಂಡಿದ್ದಾರೆ ಎನ್ನಲಾಗಿದೆ. ಇಂದಿನ ಕಾರ್ಯಕ್ರಮ ಗುಬ್ಬಿ ತಾಲೂಕು ವ್ಯಾಪ್ತಿಯಲ್ಲಿ ನಡೆಯುತ್ತಿದ್ದು, ಸುತ್ತಲಿನ ಚಿಕ್ಕನಾಯಕನಹಳ್ಳಿ, ತಿಪಟೂರು, ತುರುವೇಕೆರೆ, ಶಿರಾ, ತುಮಕೂರು ಭಾಗದಲ್ಲಿ ಪಕ್ಷವನ್ನ ಮತ್ತಷ್ಟು ಸದೃಡಗೊಳಿಸಲು ಬಿಜೆಪಿ ಅಣಿಯಾದಂತಿದೆ. ಹೆಚ್ಎಎಲ್ ನ ಕಾರ್ಯಕ್ರಮ ಸರ್ಕಾರದ ಕಾರ್ಯಕ್ರಮವಾದರೂ ಸಾವಿರಾರು ಬಿಜೆಪಿ ಕಾರ್ಯಕರ್ತರು ಹಾಜರಾಗಲಿದ್ದಾರೆ. ಎಲ್ಲಾ ಕಾರ್ಯಕರ್ತರನ್ನ ಕರೆತರೋಕೆ ಜಿಲ್ಲೆಯ ಬಿಜೆಪಿ ನಾಯಕರು ನೂರಾರು ಬಸ್ ಗಳ ವ್ಯವಸ್ಥೆಯನ್ನ ಮಾಡಿದ್ದಾರೆ. ಜಿಲ್ಲೆ ಸೇರಿ ಪಕ್ಕದ ಜಿಲ್ಲೆಗಳ ಬಿಜೆಪಿ ಕಾರ್ಯಕರ್ತರು ಸಹ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದು, ಪ್ರಧಾನಿ ಮೋದಿ ಅವರ ಭಾಷಣವನ್ನ ಕಣ್ತುಂಬಿಕೊಳ್ಳಲಿದ್ದಾರೆ.

ಇನ್ನು ಮೋದಿ ಮೇನಿಯಾಗೆ ಅಣಿಯಾಗಿರೋ ತುಮಕೂರು ಭರ್ಜರಿ ಶಕ್ತಿಪ್ರದರ್ಶನಕ್ಕೆ ವೇದಿಕೆಯಾಗಲಿದೆ. ಜಿಲ್ಲೆಯ ಮತ್ತಷ್ಟು ಕ್ಷೇತ್ರಗಳಲ್ಲಿ ಕಮಲ ಅರಳಿಸಲು ಪಕ್ಕಾ ಪ್ಲಾನ್ ಮಾಡಿಕೊಂಡಿರೋ ಬಿಜೆಪಿಗೆ ಮೋದಿ ಆಗಮನ, ಅವರ ಭಾಷಣ ಬೂಸ್ಟ್ ಅಪ್ ಆಗಲಿದೆ.

ಮಾಹಿತಿ: ಮಹೇಶ್, ಟಿವಿ9 ತುಮಕೂರು

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 7:49 am, Mon, 6 February 23