ತುಮಕೂರು: ಪ್ರಧಾನಿ ಮೋದಿ ಆಗಮನ ಹಿನ್ನಲೆ ಕಾರ್ಯಕ್ರಮದ ಸ್ಥಳ ಪರಿಶೀಲಿಸಿದ ಗೃಹಸಚಿವ ಆರಗ ಜ್ಞಾನೇಂದ್ರ
ತುಮಕೂರಿನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಭಾಗಿಯಾಗುತ್ತಿರುವ ಹಿನ್ನಲೆ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಸ್ಥಳಕ್ಕೆ ಭೇಟಿ ನೀಡಿ ಭದ್ರತೆ ಹಾಗೂ ಸಿದ್ಧತೆಗಳ ಬಗ್ಗೆ ಪರಿಶೀಲನೆ ನಡೆಸಿದರು. ನಂತರ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.
ತುಮಕೂರು: ಹೆಚ್ಎಎಲ್ನ ಬೃಹತ್ ಹೆಲಿಕಾಪ್ಟರ್ ತಯಾರಕಾ ಘಟಕವೊಂದನ್ನು (HAL Helicopter Factory) ಪ್ರಧಾನಿ ನರೇಂದ್ರ ಮೋದಿ ಸೋಮವಾರ (ಫೆ. 6) ಉದ್ಘಾಟನೆ ಮಾಡಲಿದ್ದಾರೆ. ಈ ಹಿನ್ನಲೆ ಜಿಲ್ಲೆಯ ಗುಬ್ಬಿ ತಾಲೂಕಿನ ಬಿದರೆಹಳ್ಳ ಕಾವಲ್ನಲ್ಲಿ ಆಯೋಜಿಸಿರುವ ಕಾರ್ಯಕ್ರಮದ ಸ್ಥಳಕ್ಕೆ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಭೇಟಿ ನೀಡಿ ಸಿದ್ಧತೆಗಳನ್ನು ಪರಿಶೀಲನೆ ನಡೆಸಿದರು. ನಂತರ ಭದ್ರತೆ ಕುರಿತು ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ಸಭೆ ನಡೆಸಿದರು. ಸಭೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್, ಐಜಿಪಿ ರವಿಕಾಂತೇಗೌಡ, ತುಮಕೂರು ಎಸ್‌ಪಿ ರಾಹುಲ್ ಕುಮಾರ್, ತುಮಕೂರು ಎಎಸ್‌ಪಿ ಮರಿಯಪ್ಪ ಹಾಗೂ ಡಿವೈಎಸ್‌ಪಿಗಳು ಇದ್ದರು.
ಗುಬ್ಬಿ ತಾಲೂಕಿನ ಬಿದರೆಹಳ್ಳ ಕಾವಲ್ ಎಂಬಲ್ಲಿ 615 ಎಕರೆ ಜಾಗದಲ್ಲಿ ಈ ಹೆಲಿಕಾಪ್ಟರ್ ಘಟಕ ನಿರ್ಮಾಣವಾಗಿದೆ. ಹೆಲಿಪ್ಯಾಡ್, ಫ್ಲೈಟ್ ಹ್ಯಾಂಗಾರ್, ಅಡ್ಮಿನ್ ಕಟ್ಟಡ ಸೇರಿ ಕೆಲವಾರು ಸೌಲಭ್ಯಗಳನ್ನು ಈಗ ನಿರ್ಮಿಸಲಾಗಿದೆ. 2016ರಲ್ಲಿ ಪ್ರಧಾನಿಯವರೇ (PM Narendra Modi) ಈ ಘಟಕ ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡಿದ್ದರು. ಹೆಚ್ಎಎಲ್ ಬಳಿ ಭಾರತೀಯ ಮಿಲಟರಿಗೆ ಯುದ್ಧ ಹೆಲಿಕಾಪ್ಟರ್ ನಿರ್ಮಿಸುವ ಬಹಳಷ್ಟು ಯೋಜನೆಗಳಿವೆ. ಬೆಂಗಳೂರಿನಲ್ಲಿರುವ ಹೆಚ್ಎಲ್ನ ಮುಖ್ಯ ತಯಾರಕಾ ಸಂಕೀರ್ಣ ಸಾಕಾಗದೇ ಇರುವುದರಿಂದ ತುಮಕೂರಿನಲ್ಲಿ ಹೊಸದಾದ ಬೃಹತ್ ಘಟಕ ನಿರ್ಮಿಸಲಾಗಿದೆ.
ಇದನ್ನೂ ಓದಿ: ತುಮಕೂರಿನಲ್ಲಿ ಮೋದಿ ಕಾರ್ಯಕ್ರಮ: ಕುಡಿಯಲು ನೀರು, ಊಟವಿಲ್ಲದೆ ಪರದಾಡಿದ ಪೊಲೀಸ್ ಸಿಬ್ಬಂದಿ
ತುಮಕೂರಿನ ಈ ಹೆಲಿಕಾಪ್ಟರ್ ಫ್ಯಾಕ್ಟರಿಯಲ್ಲಿ ಮೊದಲಿಗೆ ಲೈಟ್ ಯುಟಿಲಿಟಿ ಹೆಲಿಕಾಪ್ಟರುಗಳನ್ನು (LUH Copters) ತಯಾರಿಸಲಾಗುತ್ತದೆ. ನಂತರ ಲೈಟ್ ಕಾಂಬ್ಯಾಟ್ ಹೆಲಿಕಾಪ್ಟರುಗಳು (LCH) ಮತ್ತು ಮಲ್ಟಿರೋಲ್ ಹೆಲಿಕಾಪ್ಟರುಗಳನ್ನು (IMRH) ತಯಾರಿಸುವ ಯೋಜನೆ ಇದೆ. ಮುಂದಿನ 20 ವರ್ಷದ ಕಾಲಾವಧಿಯಲ್ಲಿ 3-15 ಟನ್ ಶ್ರೇಣಿಯ ಒಂದು ಸಾವಿರಕ್ಕೂ ಹೆಚ್ಚು ಹೆಲಿಕಾಪ್ಟರುಗಳನ್ನು ಎಚ್ಎಎಲ್ ತಯಾರಿಸಲಿದೆ. ಇದರ ಒಟ್ಟು ಮೌಲ್ಯ 4 ಲಕ್ಷ ಕೋಟಿ ರೂಗೂ ಹೆಚ್ಚು ಎನ್ನಲಾಗಿದೆ.
ಈಗಾಗಲೇ ಒಂದು ಎಲ್ಯುಎಚ್ ಹೆಲಿಕಾಪ್ಟರ್ ತಯಾರಿಸಲಾಗಿದ್ದು ಅದರ ಪರೀಕ್ಷೆಯೂ ಯಶಸ್ವಿಯಾಗಿ ಉದ್ಘಾಟನೆಗೆ ಅಣಿಯಾಗಿದೆ. ತುಮಕೂರಿನ ಈ ಹೊಸ ಫ್ಯಾಕ್ಟರಿಯಲ್ಲಿ ಆರಂಭದಲ್ಲಿ ವರ್ಷಕ್ಕೆ 30 ಹೆಲಿಕಾಪ್ಟರ್ಗಳನ್ನು ತಯಾರಿಸುವ ಉದ್ದೇಶ ಇದೆ. ನಂತರ ಹಂತ ಹಂತವಾಗಿ ಈ ಸಂಖ್ಯೆಯನ್ನು 90ಕ್ಕೆ ಹೆಚ್ಚಿಸುವ ಗುರಿ ಹೊಂದಲಾಗಿದೆ ಎಂದು ರಕ್ಷಣಾ ಇಲಾಖೆ ಹೇಳಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:04 pm, Sun, 5 February 23